ಮುಚ್ಚಿ ಹೋಗುತ್ತಿರುವ ಕೆಮ್ಮಣ್ಣು ನಾಲೆ ರಕ್ಷಿಪರಾರು !

ಶಿವನಂಜಯ್ಯ ಮದ್ದೂರು
ಹದಿಮೂರು ಹಳ್ಳಿಗಳ ವ್ಯಾಪ್ತಿಯ ೩೬೦೦ ಎಕರೆ ಪ್ರದೇಶಕ್ಕೆ ನೀರೊದಗಿಸುವ ಕೆಮ್ಮಣ್ಣು ನಾಲೆಯು ಪಟ್ಟಣ ಹಾಗೂ ಹೊರವಲಯ ವ್ಯಾಪ್ತಿಯಲ್ಲಿ ಚರಂಡಿಯಂತಾಗಿದೆ. ಜತೆಗೆ, ತ್ಯಾಜ್ಯ ನೀರಿನಿಂದ ಕಲುಷಿತಗೊಂಡು ರೋಗಗಳಿಗೆ ಆಹ್ವಾನ ನೀಡುತ್ತಿದೆ.
ರೋಗಗ್ರಸ್ಥವಾಗಿರುವ ಕೆಮ್ಮಣ್ಣು ನಾಲೆಗೆ ಈಗ ಚಿಕಿತ್ಸೆ ನೀಡುವುದು ಅನಿವಾರ‍್ಯವಾಗಿದೆ. ಮದ್ದೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಗೆ ೧೩ ಹಳ್ಳಿ ಗಳು ಒಳಪಡಲಿವೆ. ಈ ಗ್ರಾಮಗಳ ಜನಜಾನು ವಾರುಗಳು ಹಾಗೂ ಕೃಷಿ ಜಮೀನಿಗೆ ಮದ್ದೂರು ಕೆರೆಯಿಂದಲೇ ನೀರುಣಿಸಲಾಗುತ್ತಿದೆ.
ನೂರಾರು ವರ್ಷಗಳ ಇತಿಹಾಸವಿರುವ ಕೆಮ್ಮಣ್ಣು ನಾಲೆಯು ೨೩ ಕಿ.ಮೀ. ಉದ್ದವನ್ನು ಹೊಂದಿದೆ. ಈ ನಾಲೆ ಮೂಲಕವೇ ಮದ್ದೂರು ಕೆರೆಯಿಂದ ಜಮೀನುಗಳಿಗೆ ನೀರು ಪೂರೈಸಲಾಗುತ್ತದೆ. ಈ ನಾಲೆ ನೀರಿನಿಂದ ಇತರ ಸಣ್ಣಪುಟ್ಟ ಕೆರೆಕಟ್ಟೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ.
ಮದ್ದೂರು ಪಟ್ಟಣ ಸೇರಿದಂತೆ ಚನ್ನೇಗೌಡನ ದೊಡ್ಡಿ, ವೈದ್ಯನಾಥಪುರ, ಚನ್ನಸಂದ್ರ, ನಗರಕೆರೆ, ಸೋಂಪುರ, ಗೊರವನಹಳ್ಳಿ, ಮಾಲಗಾರನಹಳ್ಳಿ, ಉಪಾರದೊಡ್ಡಿ, ಅಜ್ಜಹಳ್ಳಿ, ತೊರೆಚಾಕನಹಳ್ಳಿ ಗ್ರಾಮಸ್ಥರು ಅವಲಂಬಿಸಿರುವ ಈ ನಾಲೆಯು ಒಂದು ರೀತಿಯಲ್ಲಿ ನೀರಿನ ಸೆಲೆಯೇ ಆಗಿದೆ.
ಇಷ್ಟೊಂದು ಮಹತ್ವವಿರುವ ಈ ನಾಲೆಯು ಇಂದು ತೀರಾ ದುಸ್ಥಿತಿಯಲ್ಲಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಹಾಗೂ ಹೊರವಲಯದ ೧ ಕಿ.ಮೀ. ದೂರದವರೆಗೆ ತ್ಯಾಜ್ಯ ವಸ್ತುಗಳು, ಚರಂಡಿ ನೀರಿನಿಂದ ಕಲುಷಿತಗೊಂಡಿದೆ.
ಬಹುತೇಕ ಮುಚ್ಚಿಹೋದ ಸ್ಥಿತಿಯಲ್ಲಿರುವ ಈ ನಾಲೆಯು ಇದೆಯೇ ಇಲ್ಲವೋ ಎಂಬ ಅನುಮಾನವನ್ನು ಮೂಡಿಸುತ್ತದೆ. ತ್ಯಾಜ್ಯ ವಸ್ತುಗಳು, ಬದಿ, ಹೂಳು ತುಂಬಿಕೊಂಡಿದೆ. ಆಳೆತ್ತರದ ಗಿಡಗಂಟಿಗಳು ಬೆಳೆದುಕೊಂಡು ನಾಲೆಯನ್ನೇ ಮುಚ್ಚು ಹಾಕಿವೆ.
ಸಿದ್ಧ್ದಾರ್ಥನಗರ, ರಾಮ್‌ರಹೀಮ್ ನಗರ, ಚನ್ನೇಗೌಡ ಬಡಾವಣೆ, ತಮಿಳು ಕಾಲೋನಿ, ದೊಡ್ಡಿಬೀದಿ ಸೇರಿದಂತೆ ಪಟ್ಟಣ ವ್ಯಾಪ್ತಿಯ ವಿವಿಧ ಬಡಾವಣೆಗಳ ಚರಂಡಿ ನೀರು ಕೆಮ್ಮಣ್ಣು ನಾಲೆ ಸೇರುತ್ತಿದೆ. ವ್ಯಾಪಾರಸ್ಥರು ತಮ್ಮ ಅಂಗಡಿಗಳ ತ್ಯಾಜ್ಯ ವಸ್ತುಗಳನ್ನು ನಾಲೆಯಲ್ಲಿ ಬಿಸಾಡುತ್ತಿದ್ದಾರೆ.
೧೦ ವರ್ಷಗಳಿಂದೀಚೆಗೆ ನಾಗಾಲೋಟದಲ್ಲಿ ಬೆಳೆಯುತ್ತಿರುವ ಪಟ್ಟಣದ ತ್ಯಾಜ್ಯ, ಶೌಚಾಲಯ ನೀರನ್ನು ಕೆಮ್ಮಣ್ಣು ನಾಲೆ ಯಾವುದೇ ಪ್ರತಿರೋಧ ವ್ಯಕ್ತಪಡಿಸಿದೆ ಮೌನವಾಗಿ ತನ್ನೊಡಲಿಗೆ ಸೇರಿಸಿಕೊಳ್ಳುತ್ತಿದೆ.
ಇದು ನಾಲೆಯ ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಪರಿಣಾಮ ನಾಲೆ ವ್ಯಾಪ್ತಿಯ ಬಡಾವಣೆಯಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತಿವೆ. ಚರ್ಮ ಕಾಯಿಲೆಗಳು ಹಾಗೂ ಇತರ ವ್ಯಾಧಿಗಳು ಕಂಡು ಬಂದಿದೆ.
ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಮೂಲ ಕಾರಣ ವಾಗಿದೆ. ಪುರಸಭೆ ಹಾಗೂ ಕಾವೇರಿ ನೀರಾವರಿ ನಿಗಮ ತುಂಬಿರುವ ಹೂಳನ್ನು ತೆಗೆಸಿ, ನಾಲೆಯನ್ನು ಶುಚಿಗೊಳಿಸುವ ಗೋಚಿಗೂ ಹೋಗಿಲ್ಲ.
ಪ್ರಯೋಜನವಿಲ್ಲ .
ನಾಲೆಯನ್ನು ರಕ್ಷಿಸುವಂತೆ ರೈತರು ಹಾಗೂ ಸಾರ್ವಜನಿಕರು ಪುರಸಭೆ ಕಚೇರಿ, ಕಾವೇರಿ ನೀರಾವರಿ ನಿಗಮದ ಕಚೇರಿಗೆ ಹಲವು ಬಾರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ನಾಲೆ ರಕ್ಷಣೆ ಮತ್ತು ದುರಸ್ತಿ ಕಾಮಗಾರಿಗೆ ಮುಂದಾಗುವರೆ ಕಾದು ನೋಡಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ