ಹಸಿವು ಅರ್ಧ ಸತ್ಯ; ಕೊರತೆಯೇ ಪೂರ್ಣ ಸತ್ಯ

ಚೀ. ಜ. ರಾಜೀವ  ಮೈಸೂರು
ಈ ಕಾಲದಲ್ಲೂ ಹಸಿವು ತಾಳಲಾರದೆ ಕಾಡಿನಿಂದಾಚೆ ಇರುವ ಹಾಡಿಯ ಗಿರಿಜನರು ಸಾಯುತ್ತಾರೆ ಎಂದರೆ ನಂಬಲು ಸಾಧ್ಯವೇ !?’ 
ಬಲ್ಲೇನಹಳ್ಳಿ ಹಾಡಿಯ ಜೇನು ಕುರುಬ ಕೋಮಿನ  ಚಿಕ್ಕಸಿದ್ದಯ್ಯರ ಸಾವಿನ  ಸುದ್ದಿಗೆ, ನಾಗರಿಕ  ಸಮಾಜದ ಮಂದಿಗೆ ಹಾಗೆ ಅನಿಸ ಬಹುದು. ಚುನಾಯಿತ ಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳಂತೂ ಹಾಡಿಗೆ  ಭೇಟಿ ನೀಡಿ, ಎಲ್ಲವನ್ನೂ ಪರಿಶೀಲಿಸುವ ಮುನ್ನವೇ ‘ಹಸಿವಿ ನಿಂದ ಸಾವು’ ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ಪಷ್ಟವಾಗುವ ಸತ್ಯವೆಂದರೆ, ಹಸಿವೇ ಸಾವಿಗೆ ಕಾರಣವಲ್ಲ, ಆದರೆ ಹಸಿವೂ ಸಾವಿಗೆ ಕಾರಣ.
ವರ್ಷಕ್ಕೆ ೧೦೦ ದಿನ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮಾ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಕೌಟುಂಬಿಕ ಹಾಗೂ ಸಮುದಾಯ ಭದ್ರತೆ ನೀಡುವ ಅರಣ್ಯ ಹಕ್ಕು ಕಾಯ್ದೆ, ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಮೇಲೆ ನಿಗಾ ಇಡುವ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಸೇರಿದಂತೆ ಹತ್ತಾರು ಸರಕಾರಿ ಯೋಜನೆಗಳು ಜಾರಿಯಲ್ಲಿವೆ. ಆದರೂ  ಗಂಜಿಗೂ ಗತಿ ಇಲ್ಲದೇ ಜನ ಬದುಕುತ್ತಿದ್ದಾರೆ ಎಂದು ಹೇಳಿದರೆ ನಂಬಬೇಕು. ಚಿಕ್ಕಸಿದ್ದಯ್ಯನ ಸಾವಿಗೆ ಕಾರಣ ಏನು ?- ಇಂಥ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಬಲ್ಲೇನಹಳ್ಳಿ ಹಾಡಿಗೆ ಭೇಟಿ ನೀಡಿ ದರೆ ನಮ್ಮನ್ನು ಖಚಿತಪಡಿಸುವ ಸಂಗತಿಯೆಂದರೆ ಹಸಿವೆಂಬ ಸಂಕಟ ಅವನನ್ನು ಕೊಂದಿ ರಲೂಬಹುದು. ಹಾಗಾಗಿ ಹಸಿವಿನಿಂದ ಸಾವು ಎಂಬ ಮಾತಿನಲ್ಲಿ ಅರ್ಧ ಸತ್ಯವಿದೆ.
ಬಡತನ, ಅಪೌಷ್ಟಿಕತೆ, ಅನಕ್ಷರತೆ, ಅಜ್ಞಾನ, ನಿರುದ್ಯೋಗ, ಮೂಲ ಸೌಲಭ್ಯಗಳ  ಅಪೂರ್ಣತೆ, ಸರಕಾರಿ ಯೋಜನೆಗಳ ಅಲಭ್ಯತೆ, ಕುಡಿಯುವ ನೀರಿನ ಸಮಸ್ಯೆ, ಹಾಡಿಯ ಜನರನ್ನು ಕಾಡುತ್ತಿರುವ ಕಾಯಿಲೆ, ಸರಕಾರಿ ನೌಕರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ... ಸಾಲು-ಸಾಲು ಸಂಕಷ್ಟಗಳಿಂದ  ಭಾರವಾಗಿರುವ ಈ ಹಾಡಿಯಲ್ಲಿ  ಜೇನುಕುರುಬ ಪಂಗಡಕ್ಕೆ ಸೇರಿದ ೭೦ ಕುಟುಂಬಗಳಿವೆ.
ತಾಲೂಕು ಕೇಂದ್ರ  ಹುಣಸೂರಿನಿಂದ ಸುಮಾರು  ೧೫ ಕಿ. ಮೀ. ದೂರದಲ್ಲಿರುವ  ಈ  ಹಾಡಿಯ ಬಹುತೇಕ ಜನರಿಗೆ ಕಾಡಿಗಿಂತ, ನೆರೆಯ ಕೊಡಗು  ಜಿಲ್ಲೆ ಹೆಚ್ಚು ಪರಿಚಯ. ಹಾಡಿಯೊಂದಿಗಿನ ಗ್ರಾಮಕ್ಕೆ  ಒಳ್ಳೆಯ ರಸ್ತೆ ಸಂಪರ್ಕವೂ ಇದೆ. ಹಿಂದೊಮ್ಮೆ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸು  ಈ ಊರಲ್ಲಿ ವಾಸ್ತವ್ಯ ಹೂಡಿದ್ದರು. ಜೇನು ಕುರುಬರಲ್ಲದೆ, ೨೦ ಮುಸ್ಲಿಂ, ೫೦ ದಲಿತ ಹಾಗೂ ಒಂದೆರಡು ಬಡಗಿ ಕುಟುಂಬಗಳು ಈ ಹಾಡಿಯ ಆಜುಬಾಜಿನಲ್ಲಿವೆ. ಗಿರಿಜನರಿಗೆ ಹೋಲಿಸಿದರೆ ಉಳಿದ ಜಾತಿಯ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಪರವಾಗಿಲ್ಲ. ಇಷ್ಟೊಂದು ಸುಧಾರಿತ ಗ್ರಾಮದ ಹಾಡಿಯ ವ್ಯಕ್ತಿ ಹಸಿವಿನಿಂದ ಮೃತಪಟ್ಟರೇ ಎಂಬ  ಅನುಮಾನ ತೀರಾ ಸಹಜ. ಆದರೆ, ಹಾಡಿಯಲ್ಲಿ ಈ ಅನುಮಾನಗಳಿಗೆ ಉತ್ತರವಿದೆ.
ದಾಳಿ ಇಟ್ಟ ರೋಗ: ಪತ್ನಿ ಸಣ್ಣಮ್ಮ, ಎರಡನೇ ಮಗಳು ಕಮಲ, ಚಿಕ್ಕಮ್ಮನ ಮಗ, ಮಗಳು ಸೇರಿದಂತೆ ಒಟ್ಟು  ಐದು ಮಂದಿಯ ಕುಟುಂಬಕ್ಕೆ ಈ ಚಿಕ್ಕಸಿದ್ದಯ್ಯನೇ ಯಜಮಾನ. ಗ್ರಾಮದ ಕೆಲ ಮನೆಗಳ ದನ ಕಾದದ್ದಕ್ಕೆ ಸಿಗುವ ಆಹಾರ ಮತ್ತು ಆದಾಯವೇ ಆಧಾರ. ಕುಟುಂಬದ ಇತರರು ಕೂಲಿ-ನಾಲಿ ಮಾಡಿ ಬದುಕುತ್ತಿದ್ದರು. ಮೂರ‍್ನಾಲ್ಕು ತಿಂಗಳಿನಿಂದೀಚೆಗೆ ಚಿಕ್ಕಸಿದ್ದಯ್ಯ ಏಕಾಏಕಿ ಕಾಯಿಲೆಗೆ ಬಿದ್ದರು. ವಾಂತಿ-ಭೇದಿಯ ಜತೆ ಒಮ್ಮೊಮ್ಮೆ ಮೂಗು-ಬಾಯಿಂದ ರಕ್ತವೂ ಬರುತ್ತಿತ್ತು. ‘ರಂಗನಕೊಪ್ಪಲು, ಹುಣಸೂರಿನ ಸರಕಾರಿ ಆಸ್ಪತ್ರೆಗೆ ತೋರ‍್ಸಿದ್ವಿ ಸ್ವಾಮಿ. ಏನೂ ಅಂತ ಗೊತ್ತಾಗಲಿಲ್ಲ. ಹಿಂದೊಮ್ಮೆ ಎಕ್ಸರೇನೋ, ಅದೇನೋ  ತೆಗ್ಸ್‌ಬೇಕು ಅಂದಿದ್ರು. ದುಡ್ಡು ಇರಲಿಲ್ಲ. ವಾರದಿಂದೀಚೆಗೆ ದನ ಮೇಯ್ಕಿಸ್ಕೊಂಡು ಬಂದು ಬಯಲಿಗೆ ಹೋಯಿತು(ಹೋದ). ಅಲ್ಲಿಂದ ಬಂದು ಹಾಸಿಗೆ ಹಿಡ್ದೋನೋ, ಅಂಗೇ ಹೋಗಿಬಿಟ್ಟ’ ಎನ್ನುತ್ತಾರೆ ಪತ್ನಿ ಸಣ್ಣಮ್ಮ. ವಿಪರ್ಯಾಸವೆಂದರೆ  ಆರೋಗ್ಯ ಅಭಿಯಾನ ಯೋಜನೆ ಈ ಚಿಕ್ಕಸಿದ್ದಯ್ಯನ ಕಾಯಿಲೆಯನ್ನು ಪತ್ತೆ ಹಚ್ಚಲು ನೆರವಾಗಲಿಲ್ಲ !
ಮೂರು ದಿನದಿಂದ ಊಟ ಇರಲಿಲ್ಲ : ಕುಟುಂಬದವರು ಹೇಳುವ ಪ್ರಕಾರ  ಹಾಸಿಗೆ ಹಿಡಿದಿದ್ದ  ಚಿಕ್ಕಸಿದ್ದಯ್ಯ ಮೂರು ದಿನಗಳಿಂದ ಅನ್ನವನ್ನೇ ತ್ಯಜಿಸಿದ್ದರು. ಊಟ ಸೇರುತ್ತಿರಲಿಲ್ಲ ಎಂದಲ್ಲ, ಮಾಡುತ್ತಿದ್ದ ಗಂಜಿ ಎಲ್ಲರಿಗೂ ಸಾಕಾಗುತ್ತಿರಲಿಲ್ಲ. ‘ಸ್ವಾಮಿ, ಸೊಸೈಟಿಯಲ್ಲಿ ನೀಡಿದ ೨೭ ಕೆಜಿ ಅಕ್ಕಿ, ತೀರಿ ವಾರವಾಯ್ತು. ನಾಲ್ಕೈದು ದಿನದಿಂದ ಗಂಜೀನೇ ಗತಿ. ಅದು ಎಲ್ಲರಿಗೂ ಸಾಕಾಗುತ್ತಿರಲಿಲ್ಲ. ಹಾಗಾಗಿ, ನನ್ನ ಗಂಡ ತಿನ್ನೋದನ್ನೆ ನಿಲ್ಲಿಸಿದ ’ ಎಂದಾಗ ಸಣ್ಣಮ್ಮನಿಗೆ ದುಃಖವಾಯಿತು.
ಅಕ್ಕಿ ಸಾಲುವುದಿಲ್ಲ ಎಂದು  ಇನ್ನೊಂದು ಪಡಿತರ ಚೀಟಿ ಮಾಡಿಸಲು ಚಿಕ್ಕ ಸಿದ್ದಯ್ಯ ಪ್ರಯತ್ನಿಸಿದ್ದರು. ಉಳ್ಳವರ ಮನೆಗೆ ಎರಡೆರಡು ಬಿಪಿಎಲ್ ಕಾರ್ಡ್ ಕೊಡುವ ಆಹಾರ ಇಲಾಖೆ ಅಧಿಕಾರಿಗಳು, ಈ ಬಡವನಿಗೆ ಕುಟುಂಬಕ್ಕೊಂದೇ ಕಾರ್ಡ್ ಎಂದು ನ್ಯಾಯಪರತೆಯ ಪಾಠ ಮಾಡಿದರು. ಪಡಿತರದ ಕೊರತೆಯೂ ಹಸಿವಿನ ಸಂಕಟಕ್ಕೆ ಒತ್ತಾಯವಾಗಿ ದೂಡಿತ್ತು !
ನಿರುದ್ಯೋಗವೇ ಇಲ್ಲಿ ಖಾತ್ರಿ !: ಗ್ರಾಮ ಪಂಚಾಯಿತಿ ನೌಕರರ ನಾಲಗೆಯಲ್ಲಿ ನರೇಗಾ ಎಂದೇ ನಲಿದಾಡುವ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂಬುದೇ  ಈ ಕುಟುಂಬಕ್ಕೆ ಗೊತ್ತಿಲ್ಲ. ಯೋಜನೆ ಜಾರಿಯಾಗಿ ಎರಡು ವರ್ಷ ಕಳೆದರೂ ಅದರ ಫಲ ಹಾಡಿಗೆ ತಲುಪಿಲ್ಲ.‘ವಯಸ್ಸಾಯಿತು ಎಂದು ಯಾರೂ ನಮ್ಮನ್ನು ಕೂಲಿ ಕೆಲಸಕ್ಕೆ ಕರೆಯೋದಿಲ್ಲ. ಕೂಲಿ ಸಿಕ್ಕಿದ್ರೆ, ನನ್ನ ಗಂಡ ಬದುಕುತ್ತಿದ್ದನೇನೋ’ ಎಂಬುದು ಸಣ್ಣಮ್ಮನ ಕೊರಗಾದರೆ, ಅಧಿಕಾರಿಗಳು ಇದಕ್ಕೆ ನೀಡುವ ಕಾರಣವೇ ಭಿನ್ನ. ‘ನಾವು ಯಾವಾಗ ಬಂದ್ರೂ, ಈ ಹಾಡೀಲಿ ಜನವೇ ಇರೋದಿಲ್ಲ ಸರ್. ಬೆಳ್ಳಂಬೆಳಗ್ಗೆ ಕೊಡಗಿಗೆ ಕೂಲಿ ಹೋಗ್ತಾರೆ.  ಅಲ್ಲಿ ಕೂಲಿ ಜಾಸ್ತಿ, ಹಾಗಾಗಿ, ಯಾರೂ ಬರೋದಿಲ್ಲ...!’ ಎನ್ನುತ್ತಾರೆ  ಸ್ಥಳೀಯ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಣ್ಣೇಗೌಡ. 
ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸಿದ್ದರು: ಮೂಲ ನಿವಾಸಿ ಗಿರಿಜನರಿಗೆ ಕಾಡಿನಲ್ಲೇ ಅರಣ್ಯ ಭೂಮಿ ಅನುಭವ ಹಕ್ಕು ನೀಡಲೆಂದೇ ಕೇಂದ್ರ ಸರಕಾರ ಪರಿಶಿಷ್ಟ ವರ್ಗ ಹಾಗೂ ಇತರ ಪರಂಪರಾಗತ ಅರಣ್ಯವಾಸಿಗಳ(ಅರಣ್ಯ ಹಕ್ಕು ಮಾನ್ಯತೆ) ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿದೆ. ಎರಡು ವರ್ಷ ಕಳೆದರೂ ಅದು ಜಿಲ್ಲೆಯಲ್ಲಿ ಜಾರಿಯಾಗಿಲ್ಲ. ಸಾಮೂಹಿಕ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ ೯೫ ಹಾಡಿಗಳ ೬ ಸಾವಿರ ಗಿರಿಜನರ ಪೈಕಿ ಮೃತ ಚಿಕ್ಕಸಿದ್ದಯ್ಯನೂ ಇದ್ದಾನೆ !
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಜನಪ್ರಿಯ ಸಂಧ್ಯಾ ಸುರಕ್ಷಾ ಯೋಜನೆ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಸೇರಿದಂತೆ ಯಾವೊಂದು ಯೋಜನೆಯ ಫಲವೂ ಈ ಕುಟುಂಬದ ಬಾಗಿಲು ತನಕ ಹರಿದು ಬಂದಿಲ್ಲ. ತಿಂಗಳಿಗೆ ೪೦೦ ರೂ. ಬಂದಿದ್ದರೆ ಊಟದ ಸಮಸ್ಯೆ ನೀಗುತ್ತಿತ್ತೇನೋ ?. ಹೀಗೆ  ಹಾಡಿಯ ಚಿಕ್ಕಸಿದ್ದಯ್ಯನಿಗೆ ‘ಆಹಾರ ಭದ್ರತೆ’, ‘ಸಾಮಾಜಿಕ ಭದ್ರತೆ ಒದಗಿಸುವ  ಯಾವ ಯೋಜನೆಯ ಫಲ ಸಿಕ್ಕಿದ್ದರೂ ಪರಿಸ್ಥಿತಿ ಬದಲಾಗುತ್ತಿತ್ತೇನೋ? ಎಂಬ ಪ್ರಶ್ನೆಗಳು ಎದ್ದಿವೆ.
ಅದೊಂದು ಹಕ್ಕು ಎಂದು ಕೇಳುವ ಚೈತನ್ಯ  ಹಾಡಿಯ  ಅನಕ್ಷರಸ್ಥರಿಗೆ  ಇಲ್ಲ. ಚಿಕ್ಕಸಿದ್ದಯ್ಯನಿಗೆ ಹಸಿವು ಅನಿವಾರ್ಯವಾಯಿತೇನೋ? ಹಸಿವಿನಿಂದ ಸಾವು ಎಂಬುದು ರಾಷ್ಟ್ರೀಯ ಅಪಮಾನ. ಮಂತ್ರಿ ಮಹೋದಯರು, ಜಿಲ್ಲಾಡಳಿತದ ಅಧಿಕಾರಿಗಳು ಏನೇ ಹೇಳಬಹುದು-ಸೂಕ್ಷ್ಮವಾಗಿ ನೋಡಿದರೆ ಈ ಸಾವಿಗೆ ಹಸಿವೂ ಕಾರಣವಾಗಿದೆ. ಮೈಸೂರು ಜಿಲ್ಲೆಗೇ ಅವಮಾನವಾಗಬೇಕು !
ಇದು ಮೊದಲೇನಲ್ಲ !
ಜಿಲ್ಲೆಯ ಗಿರಿಜನರು ಹಸಿವಿನಿಂದ ಸಾಯುತ್ತಿರುವುದು ಇದೇ ಮೊದಲೇನಲ್ಲ.  ಬಂಡೀಪುರ ಅರಣ್ಯ ವ್ಯಾಪ್ತಿಗೆ ಬರುವ ಎಚ್. ಡಿ. ಕೋಟೆ ತಾಲೂಕು ದಡದಹಳ್ಳಿ ಹಾಡಿಯಲ್ಲೂ ನಾಲ್ಕು ಜನ ಗಿರಿಜನ ಮಕ್ಕಳು ೧೯೯೨-೯೩ನೇ ಸುಮಾರಿನಲ್ಲಿ  ಊಟವಿಲ್ಲದೇ  ಮೃತಪಟ್ಟಿದ್ದರು. ೨೦೦೨ರಲ್ಲಿ ಕಾಕನಕೋಟೆ ಪ್ರದೇಶದ ಮೂರು ಮಕ್ಕಳು ಕೂಡ ಇದೇ ರೀತಿ ಸಾವಿಗೀಡಾಗಿದ್ದರು ಎಂದು ವರದಿಯಾಗಿತ್ತು. ದಡದಹಳ್ಳಿ ಪ್ರಕರಣವಂತೂ ಸಂಸತ್‌ನಲ್ಲಿ ಸದ್ದು ಮಾಡಿತ್ತು. ಅಂದಿನ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹಾಡಿಗೆ ಭೇಟಿ ನೀಡಿದ್ದರು.
ವಯಸ್ಸು ಸಮಸ್ಯೆ
ಚಿಕ್ಕಸಿದ್ದಯ್ಯನಿಗೆ ವೃದ್ಧಾಪ್ಯ ವೇತನ ದೊರೆಯುತ್ತಿರ ಲಿಲ್ಲ. ಏಕೆಂದರೆ, ಅವರಿಗೆ  ಅಷ್ಟೊಂದು ವಯಸ್ಸಾಗಿರ ಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು ಎಂಬುದು ಹಾಡಿ ಜನರ ದೂರು.  ಭಾರತೀಯ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಪ್ರಕಾರ  ಚಿಕ್ಕಸಿದ್ದಯ್ಯ ಹುಟ್ಟಿದ್ದು  ೧೯೪೯. ಅಂದರೆ ೬೧ ವರ್ಷ.  ಆದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತೀರಾ ಇತ್ತೀಚೆಗೆ ನೀಡಿರುವ  ಪಡಿತರ ಚೀಟಿ ಪ್ರಕಾರ ಅವರ ವಯಸ್ಸು   ೪೮.  ಇದು ಸ್ವಾರಸ್ಯಕರ ಸಂಗತಿಯಲ್ಲ.  ಓರಿಗೆಯಲ್ಲಿ ತಮ್ಮನಾದ ಚಿಕ್ಕಸಿದ್ದಯ್ಯನ ಸಹೋದರ ಸಂಬಂಧಿಗೆ ವೃದ್ಧಾಪ್ಯ ವೇತನ ದೊರೆಯುತ್ತಿದೆ !. ವೃದ್ಧಾಪ್ಯ ವೇತನವೂ ಎರಡು ತಿಂಗಳಿನಿಂದ ಹಾಡಿಯ ವೃದ್ಧರಿಗೆ ಬಂದಿಲ್ಲವಂತೆ !
ಕುಟುಂಬಕ್ಕೆ ಪಡಿತರ ನೀಡಲಾಗಿತ್ತು
ಹನಗೋಡು ನಟರಾಜ್ ಹುಣಸೂರು
ಬಲ್ಲೇನಹಳ್ಳಿ ಹಾಡಿಯ ಮೃತ ಚಿಕ್ಕಸಿದ್ದಯ್ಯನ ಕುಟುಂಬಕ್ಕೆ ಪಡಿತರ ಪೂರೈಕೆ ಮಾಡಲಾಗಿತ್ತು ಎಂದು ಹುಣಸೂರು  ಉಪ ವಿಭಾಗ ಆಡಳಿತ ಹೇಳಿದೆ.
‘ಮೃತ ಚಿಕ್ಕಸಿದ್ದಯ್ಯನಿಗೆ ಸರಕಾರದಿಂದ ಅಂತ್ಯೋದಯ ಪಡಿತರ ಚೀಟಿ ನೀಡ ಲಾಗಿತ್ತು. ಏ. ೨೯ರಂದು ಪಡಿತರ ವಿತರಿಸಲಾಗಿತ್ತು. ಕಳೆದ ತಿಂಗಳು ಹೊಟ್ಟೆನೋವು, ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೆಂದು  ಅವರ  ಕುಟುಂಬದವರು ತಿಳಿಸಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಕೆ. ವಿದ್ಯಾಕುಮಾರಿ ಸ್ಪಷ್ಟನೆ ನೀಡಿದ್ದಾರೆ.
ಸರಿಯಾಗಿ ಪಡಿತರ ನೀಡುತ್ತಿಲ್ಲ: ಉಪ ವಿಭಾಗಾಧಿಕಾರಿ ಕೆ.ವಿದ್ಯಾಕುಮಾರಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು,  ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಶಿವಣ್ಣ ಸೇರಿದಂತೆ  ಅಧಿಕಾರಿಗಳ ತಂಡ ಬುಧವಾರ  ಬೆಳಗ್ಗೆ ಬಲ್ಲೇನಹಳ್ಳಿ ಹಾಡಿಗೆ  ಭೇಟಿ ನೀಡಿದ್ದರು.
ಚಿಕ್ಕಸಿದ್ಧಯ್ಯ ಕುಟುಂಬದವರನ್ನು ಭೇಟಿ ಮಾಡಿದ ಅಧಿಕಾರಿಗಳು  ಹಾಡಿಯ ಸಮಸ್ಯೆ ಕಂಡು ಅವಾಕ್ಕಾದರು. ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ. ಕೆಲವೇ ದಿನ ಕೊಟ್ಟು, ನಂತರ ಮುಗಿದು ಹೋಯಿತೆಂದು ಸಬೂಬು ಹೇಳುತ್ತಾರೆ. ತೂಕದಲ್ಲೂ ವಂಚಿಸುತ್ತಿದ್ದಾರೆ. ಕೇಳಿದರೆ ದಬಾಯಿಸುತ್ತಾರೆ. ಇನ್ನೂ ಹಲವು ಕುಟುಂಬಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಹಾಡಿಯ ಎಲ್ಲಾ ಮನೆಗಳು ಶಿಥಿಲಗೊಂಡಿವೆ.  ಇಂಥ ಅಭದ್ರ ಕಟ್ಟಡಗಳಲ್ಲೆ ೨-೩ ಕುಟುಂಬ ವಾಸಿಸುತ್ತಿದೆ. ಬೀದಿ ದೀಪ ಕೆಟ್ಟು ಆರು ತಿಂಗಳಾಗಿದೆ. ರಸ್ತೆ, ಚರಂಡಿ ಶುಚಿಗೊಳಿಸಿಲ್ಲ. ಕುಡಿಯುವ ನೀರಿಗಾಗಿ ಒಂದೇ ನಲ್ಲಿ, ಬೋರ್‌ವೆಲ್ ಕೆಟ್ಟಿವೆ. ಆರೋಗ್ಯ ಸಂಚಾರಿ ಘಟಕದ ವಾಹನ  ಇದ್ದರೂ, ಪ್ರಯೋಜನವಿಲ್ಲ. ೫೦ಕ್ಕೂ ಹೆಚ್ಚು ಮಕ್ಕಳಿದ್ದರೂ ಪ್ರತ್ಯೇಕ ಅಂಗನವಾಡಿ ಇಲ್ಲ. ನಮ್ಮ ಭೂಮಿಯನ್ನೆ ಇತರರು ಒತ್ತುವರಿ ಮಾಡಿದ್ದಾರೆ. ಹೀಗೆ ಹಾಡಿ ಸಮಸ್ಯೆಗಳ ಪಟ್ಟಿ ಮಾಡಿ ಅಧಿಕಾರಿಗಳಿಗೆ ದರ್ಶನ ಮಾಡಿಸಿದರು.
ತಿಂಗಳು ಪೂರ್ತಿ ಪಡಿತರ ನೀಡಿ:  ಪಡಿತರ ಸಮಸ್ಯೆ ಬಗೆಹರಿಸಬೇಕು; ತಿಂಗಳು ಪೂರ್ತಿ ಪಡಿತರ ವಿತರಿಸಬೇಕು, ಪಡಿತರ ಚೀಟಿ ಸಿಗದಿರುವವರಿಗೆ ತಾತ್ಕಾಲಿಕ ಆಹಾರ ವಿತರಿಸಲು ಕ್ರಮ ವಹಿಸುವುದು, ತಕ್ಷಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಬೇಕು, ದುರಸ್ತಿಗೊಂಡ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ವಿದ್ಯಾಕುಮಾರಿ ಸೂಚಿಸಿದರು.
ತಾ.ಪಂ. ಇಒ ಬಸವರಾಜು ಅವರು, ಹಾಡಿಯ ಉಳಿದ ಎಲ್ಲರಿಗೂ ಇಂದೇ  ಖಾತರಿ ಯೋಜನೆಯ ಜಾಬ್ ಕಾರ್ಡ್ ಮಾಡಿಸಿ ನಾಳೆಯೇ ಉದ್ಯೋಗ ನೀಡಬೇಕು, ರಸ್ತೆ, ಬೀದಿದೀಪ, ನಲ್ಲಿ, ಬೋರ್‌ವೆಲ್ ದುರಸ್ತಿಗೊಳಿಸಿ ಇಂದೇ ವರದಿ ನೀಡ ಬೇಕೆಂದು ಗ್ರಾ.ಪಂ. ಕಾರ್ಯದರ್ಶಿ ಸಣ್ಣೇಗೌಡರಿಗೆ ಸೂಚನೆ ನೀಡಿದರು. ಸಮರ್ಪಕ ಪಡಿತರ ವಿತರಣೆಗೆ ಕ್ರಮಕೈಗೊಳ್ಳಬೇಕು. ಚೀಟಿ ಹೊಂದಿಲ್ಲದವರ ಹಾಗೂ ಫೋಟೋ ತೆಗೆಸದವರ ಪಟ್ಟಿ ಮಾಡಿರಿ. ನ್ಯಾಯಬೆಲೆ ಅಂಗಡಿಯವರು, ಸರಿಯಾಗಿ ವಿತರಿಸದಿದ್ದಲ್ಲಿ ದೂರು ನೀಡಿರೆಂದು ಜಿಲ್ಲಾ ಆಹಾರ ಉಪ ನಿರ್ದೇಶಕ ಶಿವಣ್ಣ ಸೂಚಿಸಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕ ಶಂಕರ್ ಮನೆರಹಿತರ ಹಾಗೂ ದುರಸ್ತಿಗೊಂಡ ಮನೆಗಳ ಪಟ್ಟಿ ಮಾಡಿಕೊಂಡರು. ಇಲಾಖೆಗೆ ಹಾಡಿಗೆ ಅಗತ್ಯವಾಗಿ ಬೇಕಾದ ಸವಲತ್ತುಗಳ ಮಾಹಿತಿ ನೀಡುವುದಾಗಿ ತಿಳಿಸಿದರು. ಆಹಾರ ಶಿರಸ್ತೇದಾರ್ ಗೋವಿಂದರಾಜು, ಮೇಲ್ವಿಚಾರಕ, ಮಂಚೇಗೌಡ, ಗ್ರಾಮಲೆಕ್ಕಿಗ, ವಸಂತಕುಮಾರ್, ಗ್ರಾ.ಪಂ. ಕಾರ್ಯದರ್ಶಿ ಸಣ್ಣೇಗೌಡ, ಗ್ರಾ.ಪಂ. ಮಾಜಿ ಸದಸ್ಯೆ ಸಣ್ಣಮಾದಮ್ಮ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ