ನಾಗರಹೊಳೆಯಲ್ಲೀಗ ಹುಲಿ v/s ಆನೆ

ಕುಂದೂರು ಉಮೇಶಭಟ್ಟ ಮೈಸೂರು
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲೀಗ ಗಜಪಡೆಯ ಮೇಲೆ ನಡೆದಿದೆ ಕಾಡಿನ ರಾಜನ ದಾಳಿ.
ಎರಡು ತಿಂಗಳ ಅವಧಿಯಲ್ಲಿ ಆನೆ ಮರಿಗಳ ಮೇಲೆ ಹುಲಿ ದಾಳಿ ನಡೆಸಿದ ನಾಲ್ಕು ಪ್ರಕರಣ ಪತ್ತೆಯಾಗಿವೆ. ಅದರಲ್ಲಿ ಒಂದು ಆನೆ ಮರಿಯ ದೇಹದ ಅವಶೇಷ ಪತ್ತೆಯಾದರೆ, ಇನ್ನು ಮೂರು ಕಡೆ ಗಾಯಗೊಂಡ ಆನೆ ಮರಿಗಳಿಗೆ ಚಿಕಿತ್ಸೆ ನೀಡಲಾಗಿದೆ.
ನಾಗರ ಹೊಳೆ ವ್ಯಾಪ್ತಿಯಲ್ಲಿ ಹುಲಿ ಹಾಗೂ ಆನೆಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೇ ಇಂಥ ಘಟನಾವಳಿಗಳು ನಡೆಯುತ್ತಿವೆ ಎನ್ನುವುದು ಅರಣ್ಯ ಇಲಾಖೆ ನೀಡುವ ವಿವರಣೆ.
ಎಲ್ಲೆಲ್ಲಿ ದಾಳಿ: ನಾಗರಹೊಳೆ, ಡಿ.ಬಿ.ಕುಪ್ಪೆ, ಆಂತರಸಂತೆ, ಕಲ್ಲಹಳ್ಳ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.
ನಾಗರಹೊಳೆಯ ಹುಣಸೇಕಟ್ಟೆ ಪ್ರದೇಶದಲ್ಲಿ ಅನೆ ಮರಿಯ ಶವವೊಂದು ಬಿದ್ದಿತ್ತು. ಇದನ್ನು ಗಮನಿಸಿದ ವನಪಾಲಕ ರಾಮಸಿಂಗ್ ಅನೆ ಮರಿ ಮೇಲೆ ಹುಲಿ ದಾಳಿ ನಡೆಸಿದ್ದನ್ನು ಖಚಿತಪಡಿಸಿಕೊಂಡರು. ಆನೆಯ ತೊಡೆ ಹಾಗೂ ತಲೆ ಭಾಗದಲ್ಲಿ ಹುಲಿ ಹೆಜ್ಜೆಯ ಗುರುತು ಕಂಡು ಬಂದಿತು. ಜತೆಗೆ ಆಕ್ಕಪಕ್ಕದಲ್ಲಿ ಹುಲಿ ತ್ಯಾಜ್ಯವೂ ಪತ್ತೆಯಾಗಿತ್ತು.
ಡಿ.ಬಿ.ಕುಪ್ಪೆ ವ್ಯಾಪ್ತಿಯ ಬಳ್ಳೆ ಅರಣ್ಯದಲ್ಲಿ ಅನೆ ಮರಿಯೊಂದು ತಲೆಗೆ ಗಾಯಗೊಂಡ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ತಲೆ ಭಾಗವನ್ನು ಗಮನಿಸಿದಾಗ ಹುಲಿ ದಾಳಿ ಮಾಡಿರುವುದು ಕಂಡು ಬಂದಿತು. ಆನೆ ಮರಿಯ ತಲೆ ಭಾಗದಲ್ಲಿ ಹುಲಿ ಹೆಜ್ಜೆ  ಮೂಡಿರುವುದು ಕಂಡು ಬಂದಿದೆ. ಈ ಆನೆ ಮರಿಗೆ ಆರಣ್ಯ ಇಲಾಖೆಯಿಂದಲೇ ಚಿಕಿತ್ಸೆ ನೀಡಲಾಗಿದೆ.
ಕಲ್ಲಹಳ್ಳ ವ್ಯಾಪ್ತಿಯಲ್ಲೂ ಆನೆ ಮರಿ ಸತ್ತು ಬಿದ್ದಿದ್ದು, ಇದೂ ಹುಲಿ ದಾಳಿಯಿಂದಲೇ ಇರಬೇಕು ಎನ್ನುವುದು ಅಧಿಕಾರಿಗಳ ಅನುಮಾನ.
ಆಡಳಿತಾತ್ಮಕವಾಗಿಯೂ ತಿಕ್ಕಾಟ: ಇನ್ನು ಆಡಳಿತಾತ್ಮಕವಾಗಿಯೂ ನಾಗರಹೊಳೆಯಲ್ಲಿ ಹುಲಿ- ಆನೆ ನಡುವೆ ತಿಕ್ಕಾಟ ಆರಂಭವಾಗಿದೆ.
ಹುಲಿಗಳಿಗೆ ವಿಶೇಷ ಗಮನ ನೀಡುವ ಉದ್ದೇಶದಿಂದಲೇ ವರ್ಷಗಳ ಹಿಂದೆ ಹುಲಿ ಯೋಜನೆ ರೂಪಿಸಿ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಯಿತು. ಅವರಿಗೆ ನಾಗರಹೊಳೆ ಹಾಗೂ ಬಂಡೀಪುರ ವ್ಯಾಪ್ತಿಯ ಉಸ್ತುವಾರಿ ನೀಡಲಾಯಿತು.
ಈಗ ಹುಲಿ ಯೋಜನೆಯಿಂದ ಆನೆಯನ್ನು ಬೇರ್ಪಡಿಸಿ ಅದಕ್ಕೊಬ್ಬ ಪ್ರತ್ಯೇಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಹುಲಿ ಯೋಜನೆ ನಿರ್ದೇಶಕರಾಗಿರುವವರು ಬಿ.ಜೆ.ಹೊಸಮಠ, ಆನೆ ಯೋಜನೆಗೆ ಬಂದಿರುವವರು ಅಜಯ್ ಮಿಶ್ರ. ಈ ಇಬ್ಬರ ನಡುವೆ ಕರ್ನಾಟಕ ಹಾಗೂ ಕರ್ನಾಟಕೇತರ ಎನ್ನುವ ಸಂಘರ್ಷ ಹುಟ್ಟು ಹಾಕಲಾಗಿದೆ. ಹುಲಿ ಹಾಗೂ ಆನೆ ಯೋಜನೆಗೆ ಪ್ರತ್ಯೇಕ ಅಧಿಕಾರಿಗಳು ಬಂದಿರುವುದರಿಂದ ಕೆಳ ಹಂತದ ಅಧಿಕಾರಿಗಳಲ್ಲೂ ಗೊಂದಲ.
ಮರಿಗಳು ಸದಾ ತಾಯಿಯ ಮಧ್ಯೆಯೇ ಇರುತ್ತವೆ. ಅದೂ ಹಿಂಡಿನೊಂದಿಗೆ ಆನೆ ಮರಿಗಳು ಹೆಜ್ಜೆ ಹಾಕುವುದರಿಂದ ಹುಲಿಗಳ ಬಾಯಿಗೆ ಸಿಲುಕುವುದು ಕಷ್ಟವೇ. ಆದರೂ ಹುಲ್ಲು ಹುಡುಕುತ್ತಾ ಬರುವ ಆನೆ ಮರಿಯನ್ನು ಗಮನಿಸಿಯೇ ಹುಲಿ ದಾಳಿ ನಡೆಸುತ್ತಿರಬೇಕು. ಇದನ್ನು ತಡೆಯಲು ಗಮನ ನೀಡಿದ್ದೇವೆ.
- ವಿಜಯರಂಜನ್‌ಸಿಂಗ್, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಉಪ ಸಂರಕ್ಷಣಾಧಿಕಾರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ