ಕೃಷ್ಣರಾಜನಗರ: ಪಾಳು ಬಿದ್ದಿದೆ ವೈದ್ಯಾಧಿಕಾರಿ ವಸತಿಗೃಹ

ವಿಕ ಸುದ್ದಿಲೋಕ ಕೃಷ್ಣರಾಜನಗರ
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸರಕಾರಿ ಆಸ್ತಿ ಹಾಳಾಗುತ್ತಿದ್ದರೂ ಜನಪ್ರತಿನಿಧಿಗಳೂ ಗಮನಹರಿಸದೆ ವೈದ್ಯಾಧಿಕಾರಿಗಳ ವಸತಿಗೃಹ  ಪಾಳುಬಿದ್ದಿದೆ.
ಪಟ್ಟಣ ನಿರ್ಮಾಣಗೊಂಡ ಸಂದರ್ಭದಲ್ಲಿ ನಿರ್ಮಾಣವಾದ ಈ ವಸತಿ ಗೃಹದಲ್ಲಿ  ಸಂಬಂಧಪಟ್ಟ ವೈದ್ಯಾಧಿಕಾರಿಗಳು ವಾಸವಿಲ್ಲದ ಕಾರಣ, ಹಲವು ವರ್ಷಗಳಿಂದ ಪಾಳು ಬಿದ್ದಿದ್ದು,  ಗಿಡಗಂಟಿಗಳು ಬೆಳೆದು ಅನೈತಿಕ ಚಟುವಟಿಕೆಗಳ ತಾಣವಾಗಿತ್ತು.
ಕೆಲವು ಸಮಯ ಪುರಸಭೆಯವರು  ಬಳಕೆ ಮಾಡಿಕೊಂಡು ನಂತರ ಹಾಗೇ ಬಿಟ್ಟ ಕಾರಣ ಸಾರ್ವಜನಿಕ ಶೌಚಾಲಯಕ್ಕೆ ಉಪಯೋಗವಾಯಿತು. ಇಷ್ಟೆಲ್ಲಾ ಆದರೂ ಯಾರೊಬ್ಬರೂ ಲಕ್ಷ್ಯ ವಹಿಸದ ಕಾರಣ ವಸತಿ ಗೃಹದ ಕಿಟಕಿ-ಬಾಗಿಲು, ಗೇಟು ಮತ್ತಿತರ ಒಂದೊಂದೇ ಪರಿಕರಗಳು ಕಾಣೆಯಾದವು. ನಂತರ ಈ ಕಟ್ಟಡದ ಆವರಣ  ಬೆಳಗ್ಗೆ ಹೊತ್ತು ಆಟೋ ನಿಲ್ದಾಣವಾಗಿ ಪರಿವರ್ತನೆಗೊಂಡಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಪಟ್ಟಣದ ಹೃದಯ ಭಾಗದಲ್ಲಿರುವ ಕಟ್ಟಡದ ಗತಿಯೇ ಈ ರೀತಿ ಯಾದರೆ, ಇನ್ನು ಬೇರೆ ಕಟ್ಟಡಗಳ ಸ್ಥಿತಿ ಏನು ಎಂಬುದು ನಾಗರಿಕರ ಪ್ರಶ್ನೆ. ಕಟ್ಟಡ ಪಾಳು  ಬಿದ್ದಿದ್ದರೂ, ಆವರಣ ಆಟೋಗಳಿಗಾದರೂ ಆಶ್ರಯ ನೀಡಿದೆಯಲ್ಲಾ ಎಂಬುದು ಸಮಾಧಾನದ ಸಂಗತಿ.
ಈ ಕಟ್ಟಡವನ್ನು  ಹೀಗೇ ಬಿಟ್ಟರೆ ಮುದೊಂದು ದಿನ ಇದು  ಖಾಸಗಿ ವ್ಯಕ್ತಿಗಳೋ ಇಲ್ಲ ಯಾವುದಾದರೂ ರಾಜಕೀಯ ಪಕ್ಷದವರ ಪಾಲಾದರೂ ಆಶ್ಚರ್ಯ ಪಡಬೇಕಿಲ್ಲ ಎಂಬುದು ವಿಚಾರವಂತರ ಆತಂಕವಾಗಿದೆ.
ವೈದ್ಯಾಧಿಕಾರಿಗಳ ವಸತಿ ಗೃಹ ಅನೈತಿಕ ಚಟುವಟಿಕೆಗಳ ತಾಣ ವಾಯಿತು. ನಂತರ ಆಟೋ ನಿಲ್ದಾಣವಾಗಿದ್ದು, ಜನತೆಯ ಆರೋಗ್ಯ ಕಾಪಾಡುವ ವೈದ್ಯರ ವಸತಿ ಗೃಹ ಪರಿಸರದ ಆರೋಗ್ಯದ ಜತೆಗೆ ಜನತೆಯ ಆರೋಗ್ಯವನ್ನೂ ಹದಗೆಡುವಂತೆ ಮಾಡಿದ್ದು, ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
ವಸತಿ ಗೃಹ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಪಡಿಸಲು ಸಾಧ್ಯವಿಲ್ಲ.  ಅದನ್ನು  ಕೆಡವಿ ನೂತನ ಕಟ್ಟಡ ನಿರ್ಮಿಸುವಂತೆ ನಮ್ಮ ಮನವಿಯ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕರ್ನಾಟಕ ಆರೋಗ್ಯ ವ್ಯವಸ್ಥೆಗಳ ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.  ಕೂಡಲೇ ಕಟ್ಟಡ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗುವುದು.
-ಡಾ. ರಾಜೇಶ್, ವೈದ್ಯಾಧಿಕಾರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ