ಅರಮನೆ ನೋಡಲಿಕ್ಕೆ ಸಾಲು ಸಾಲು

ಚೀ ಜ. ರಾಜೀವ ಮೈಸೂರು
ಅರಮನೆಗೆ ಅರಮನೆಯೇ ಸಾಟಿ ! ಮೈಸೂರು ಪ್ಯಾಲೇಸ್ ಎಂದೇ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ  ಅಂಬಾವಿಲಾಸ ಅರಮನೆ  ೨೦೦೯-೨೦೧೦ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೊಸ  ‘ಪ್ರವಾಸಿ ದಾಖಲೆ’ಯನ್ನು ಬರೆದಿದೆ.  ಈ ಸಾಲಿನಲ್ಲಿ  ಮೈಸೂರು ಅರಮನೆಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ೨೭ ಲಕ್ಷ  ದಾಟಿದೆ. (ಇವರೆಲ್ಲರೂ ಟಿಕೆಟ್ ನೀಡಿ ಅರಮನೆಯೊಳಗೆ ಹೋದ ಪ್ರವಾಸಿಗರು. ಹೊರಗೆ ನಿಂತು ನೋಡಿದವರ ಸಂಖ್ಯೆಯೂ ಲಕ್ಷದ ಲೆಕ್ಕದಲ್ಲಿ  ಇರುತ್ತದೆ )
ಇಷ್ಟೊಂದು ಬೃಹತ್ ಸಂಖ್ಯೆಯ ಪ್ರವಾಸಿಗರು ಅರಮನೆಯನ್ನು ಸಂದರ್ಶಿಸಿರುವುದು ಇದೇ ಮೊದಲು. ಎರಡು ವರ್ಷಗಳ ಕೆಳಗೆ, ಅಂದರೆ ೨೦೦೬-೦೭ನೇ ಸಾಲಿನಲ್ಲಿ  ಪ್ರವಾಸಿಗರನ್ನು ಸೆಳೆಯುವ ಆಕರ್ಷಣೆ ಯಲ್ಲಿ  ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್, ಹೊಸದಿಲ್ಲಿಯ ಕುತಾಬ್ ಮಿನಾರ್, ಕೆಂಪುಕೋಟೆ, ಫತೇಪುರ್ ಸಿಕ್ರಿ, ಹಂಪಿಯಂಥ  ಪ್ರವಾಸಿ ಸ್ಮಾರಕಗಳನ್ನು  ಮೈಸೂರು ಅರಮನೆ ಹಿಂದಿಕ್ಕಿತ್ತು.  ಭಾರತೀಯ ಪುರಾತತ್ತ್ವ ಸರ್ವೇಕ್ಷಣಾ(ಎಎಸ್‌ಐ) ಹಾಗೂ ಕೇಂದ್ರ ಪ್ರವಾಸೋದ್ಯಮ ಇಲಾಖೆ ನೀಡಿದ ವರದಿಯನ್ನು ತಾಳೆ ಹಾಕಿ ನೋಡಿದಾಗ, ಮೈಸೂರು ಅರಮನೆ ಸೌಂದರ್ಯವನ್ನು ಸವಿಯಲು ಬರುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿರುವ ಅಂಶ ವ್ಯಕ್ತವಾಗಿತ್ತು. ಆ ವರ್ಷ ಮೈಸೂರು ಅರಮನೆಯನ್ನು  ೨೫,೨೬,೩೬೭ ಪ್ರವಾಸಿಗರು ವೀಕ್ಷಿಸಿದ್ದರೆ, ತಾಜ್‌ಮಹಲ್‌ಗೆ  ೨೫,೩೯,೪೭೧ ಜನ ಭೇಟಿ ನೀಡಿದ್ದರು. ಆನಂತರದ ವರ್ಷಗಳಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಪರಿಣಾಮ, ೨೦೦೭-೦೮, ೨೦೦೮-೨೦೦೯ನೇ ಸಾಲಿನಲ್ಲಿ   ಪ್ರವಾಸಿಗರ ಸಂಖ್ಯೆ ಒಂದಿಷ್ಟು ಕಡಿಮೆಯಾಯಿತು.
ಆದರೆ, ೨೦೦೯-೨೦೧೦ನೇ ಸಾಲಿನಲ್ಲಿ ಆರ್ಥಿಕ ಹಿಂಜರಿತ ಸರಿದು ಹೋದ ಪರಿಣಾಮ ಮತ್ತೆ ಮೈಸೂರು ಅರಮನೆ  ದೇಶ-ವಿದೇಶಗಳ  ಸಹಸ್ರಾರು ಪ್ರವಾಸಿಗರನ್ನು  ಆಕರ್ಷಿಸಲಾರಂಭಿಸಿದೆ. ‘ಮಾರ್ಚ್ ಅಂತ್ಯದ ವೇಳೆಗೆ ಅರಮನೆಗೆ ೨೭,೭೧,೦೦೦ ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಏಪ್ರಿಲ್‌ನಲ್ಲಿ ಇನ್ನೂ ೨ ಲಕ್ಷ ಜನ ಪ್ರವಾಸಿಗರನ್ನು ಸೆಳೆಯಬಹುದು’  ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಪಿ. ವಿ. ಅವರಾದಿ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಅಂಥಾ ಆಕರ್ಷಣೆ ಏನು: ಆಗ್ರಾದ  ತಾಜ್‌ಮಹಲ್‌ನಂಥ ಕೆಲವು ಸ್ಮಾರಕಗಳ  ಸೌಂದರ್ಯ ಮೊದಲ ನೋಟಕ್ಕೆ ಮನಸೆಳೆಯುತ್ತದೆ. ಭವ್ಯವಾದ ಮಹಲ್‌ನ ಮುಂದಿರುವ ನಿಗದಿತ  ಒಂದು ಕೇಂದ್ರದಲ್ಲಿ ನಿಂತು ನೋಡಿದ ಯಾವುದೇ ಪ್ರವಾಸಿಗ-ವಾವ್ ಎಂದು ಅಚ್ಚರಿಯ ಉದ್ಗಾರ ತೆಗೆಯಲೇಬೇಕು. ನಂತರದ ತಾಜ್ ವೀಕ್ಷಣೆ ಇದೇ ಅಚ್ಚರಿಯನ್ನು ಜೀವಂತವಾಗಿಡುವುದಿಲ್ಲ. ಎಲ್ಲ  ಪ್ರಸಿದ್ಧ ಪ್ರವಾಸಿ ಸ್ಮಾರಕಗಳು  ಇಂಥ ವೈಶಿಷ್ಟ್ಯವಾದ ಸೆಳೆತ ಹೊಂದಿವೆ. ಆದರೆ, ಮೈಸೂರು ಪ್ಯಾಲೇಸ್ ಎಲ್ಲ ಪ್ರವಾಸಿ ಕೇಂದ್ರಗಳಿಗಿಂತ ಭಿನ್ನ. ಮೊದಲ ನೋಟಕ್ಕೆ ತಾಜ್‌ನಷ್ಟು ಅಪರಿಮಿತವಾಗಿ ಸೆಳೆಯದೇ ಇರಬಹುದು. ಆದರೆ, ಅರಮನೆಯ ರೂಪ ರಾಶಿಯನ್ನು ಸವಿಯಲು ಒಳ ಹೊಕ್ಕರೆ, ಹೆಜ್ಜೆ-ಹೆಜ್ಜೆಗೂ  ಬೆರಗು ಮೂಡಿಸುತ್ತದೆ.
ಬೂದು ಬಣ್ಣದ ಗ್ರಾನೈಟ್ ಶಿಲೆಯಲ್ಲಿ ಅರಳಿ ನಿಂತಿರುವ ಮೂರು ಮಹಡಿಯ ಮಹಲು, ಅದರ ಮೇಲೆ ಐದು ಅಂತಸ್ತಿನ ಗೋಪುರವನ್ನು ಕಣ್ತುಂಬಿಸಿಕೊಂಡು ಒಳಹೊಕ್ಕರೆ, ಪ್ರತಿ ಹೆಜ್ಜೆಯಲ್ಲೂ ಅರಳಿರುವ ಕಲಾತ್ಮಕತೆ ಪ್ರವಾಸಿಗರನ್ನು ಕೈ ಹಿಡಿಯುತ್ತದೆ. ಸುತ್ತಮುತ್ತ, ಮೇಲೆ ಕೆಳಗೆ- ಯಾವ ಕಡೆ ಕತ್ತು ತಿರುಗಿಸಿದರೂ, ಎಲ್ಲ ಕಡೆಯೂ ಸೌಂದರ್ಯ. ಹಾಸುನೆಲ, ಭವ್ಯವಾದ ಕಟಾಂಜನ, ಮೆಟ್ಟಿಲುಗಳು, ಮೂಲೆಕಟ್ಟು,  ಕಂಭಗಳು,ತೊಲೆ, ಪರದೆ, ಜಾಲಾಂದ್ರಗಳು, ಬಾಗಿಲು-ಕಿಟಕಿಗಳ ಅಲಂಕಾರ, ದಂತ ಮತ್ತು ಮರದಿಂದ ಮಾಡಿರುವ  ಕಲಾಕೃತಿಗಳು, ಗೋಡೆಯ ಮೇಲಿರುವ ಪೇಯಿಂಟ್.. ಹೀಗೆ ಅರಮನೆಯೊಳಗೆ ಎಲ್ಲವೂ ನಯನ ಮನೋಹರ. ದರ್ಬಾರ್ ಹಾಲ್, ಸುವರ್ಣ ಸಿಂಹಾಸನ,  ರಾಜಮಹಾರಾಜರು ಬಳಸುತ್ತಿದ್ದ ಪೀಠೋಪಕರಣಗಳು ಅರಮನೆಯ ಸೌಂದರ್ಯವನ್ನು ಪೂರ್ಣಗೊಳಿ ಸಿವೆ ಎನ್ನುತ್ತಾರೆ  ಲೇಖಕ  ಪ್ರೊ. ಪಿ. ವಿ. ನಂಜುಂಡರಾಜೇ ಅರಸ್. ವಿದ್ಯುತ್ ದೀಪಾಲಂಕಾರದಲ್ಲಿ  ಕಂಗೊಳಿಸುವ ಅರಮನೆ,  ಬೆಳದಿಂಗಳಲ್ಲಿ ಕಾಣುವ ತಾಜ್ ಸೌಂದರ್ಯಕ್ಕೆ ಸರಿಸಾಟಿಯಾಗಿ ನಿಲ್ಲುತ್ತದೆ.
ಆಡಿಯೋ ಕಿಟ್ ಸೌಲಭ್ಯ: ದೇಶ-ವಿದೇಶದ ಪ್ರವಾಸಿಗರನ್ನು ಗಮನದಲ್ಲಿ ಇಟ್ಟುಕೊಂಡು ಅರಮನೆ ಮಂಡಳಿ ಕೆಲವೊಂದು ಸೌಕರ್ಯಗಳನ್ನು ಕಲ್ಪಿಸಿದೆ. ವಿದೇಶಿ ಪ್ರವಾಸಿಗರಿಗಾಗಿ  ಬಹುಭಾಷಾ ಶ್ರವ್ಯ ಸಲಕರಣೆಗಳು( ಆಡಿಯೋ ಕಿಟ್)  ಶ್ರವ್ಯ  ಮಾರ್ಗದರ್ಶಿ(ಆಡಿಯೋ ಗೈಡ್) ಸೌಲಭ್ಯ ನೀಡುತ್ತಿವೆ,  ಸುಮಾರು ಒಂದು ಗಂಟೆಗಳ ಅವಧಿಯಲ್ಲಿ ಅಂಬಾವಿಲಾಸ ಅರಮನೆಯ ಸಂಪೂರ್ಣ ಇತಿಹಾಸವನ್ನು ಆಡಿಯೋ ಗೈಡ್‌ಗಳು  ಪ್ರವಾಸಿಗರಿಗೆ  ಮನಮುಟ್ಟುವಂತೆ ವಿವರಿಸುತ್ತವೆ.  ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಸ್ಪ್ಯಾನಿಶ್ ಮತ್ತು ಜಪಾನೀಸ್  ಸೇರಿ  ಎಂಟು ಭಾಷೆಯಲ್ಲಿ  ಈ ಸೇವೆ ಲಭ್ಯವಿದೆ. ರಷ್ಯಾದಲ್ಲಿ ಈ ಸೇವೆ ನೀಡಿ ಎಂಬ ಬೇಡಿಕೆ ಇದೆ ಎಂದು ಅವರಾದಿ ವಿವರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ