ಕೊನೆಗೂ ಹೊಸಬರು ಬಂದರು ರಾಮ ರಾಮ!

ಜನತೆ ಪಾಲಿಗಷ್ಟೇ ಅಲ್ಲದೆ ಸ್ವಪಕ್ಷ ಬಿಜೆಪಿಗೂ ಹೊರಲಾಗದ ಹೊರೆ ಎನಿಸಿದ್ದ  ‘ಉತ್ಸವಮೂರ್ತಿ’ ರಾಮಚಂದ್ರಗೌಡ ಅವರಿಂದ ಮಂಡ್ಯಕ್ಕೆ ಕಡೆಗೂ ಮುಕ್ತಿ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಎರಡು ವರ್ಷ ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಕ್ಕಾಡೆ ಮಲಗಿಸಿ, ಮೊಳಕೆ ಹೊಡೆಯುತ್ತಿದ್ದ ಬಿಜೆಪಿಯನ್ನೇ ಚಿವುಟುತ್ತಾ ಕಾಲ ದೂಡಿದ ರಾಮಚಂದ್ರಗೌಡ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಕ್ ನೀಡಿದ್ದಾರೆ.
ಆಗೊಮ್ಮೆ ಹೀಗೊಮ್ಮೆ ಮಂಡ್ಯಕ್ಕೆ ಬಂದು ಮನಸೋಇಚ್ಛೆ ಮಾಡಿದ ಹರಿಕಥೆಯೇ ದೊಡ್ಡ ಸಾಧನೆ ಎಂದು ಬೀಗುತ್ತಿದ್ದ ರಾಮಚಂದ್ರಗೌಡ ಅವರು ಹೊತ್ತಿದ್ದ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಹೊಣೆಯ ನೊಗ ಇದೀಗ ಯುವ ನೇತಾರ, ಸಾರಿಗೆ ಸಚಿವ ಆರ್. ಅಶೋಕ್ ಹೆಗಲಿಗೆ ಬಿದ್ದಿದೆ.  ಎಲ್ಲಾ ಹಂತದಲ್ಲೂ ವೈಫಲ್ಯ ಅನುಭವಿಸಿರುವ ರಾಮಚಂದ್ರಗೌಡ ಅವರನ್ನೇ ಮುಂದುವರಿಸಿ ದಲ್ಲಿ ಮುಂಬರುವ ಗ್ರಾ.ಪಂ. ಚುನಾವಣೆ ಯಲ್ಲೂ ಬಿಜೆಪಿಗೆ ನೆಲೆ ಸಿಗಲಾರದು ಎನ್ನುವ ಉದ್ದೇಶದಿಂದ ಉಸ್ತುವಾರಿ ಸಚಿವರ ಬದಲಾವಣೆ ಆಗಿದೆ.
ಬಿಬಿಎಂಪಿ ಚುನಾವಣೆ ಸಮರದಲ್ಲಿ ಜಯಗಳಿಸಲು ಕಾರಣರಲ್ಲಿ ಒಬ್ಬರಾದ ಕ್ರಿಯಾಶೀಲ ನಾಯಕ ಅಶೋಕ್ ಅವರನ್ನು ‘ಗೌಡ್ರ ಗದ್ಲ’ದಲ್ಲಿ ಬಿಟ್ಟು, ಬಿಜೆಪಿಯ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಯಡಿಯೂರಪ್ಪ ಹೊಸ ದಾಳ ಹೂಡಿದ್ದಾರೆ.
ರಾಮಚಂದ್ರಗೌಡ ಅವರು ಮಾಡಿಟ್ಟು ಹೋಗಿರುವ ಅವಾಂತರ ಮತ್ತು ಅಧ್ವಾನಗಳನ್ನೆಲ್ಲಾ ಸರಿಪಡಿಸಿ, ಜಿಲ್ಲಾಡಳಿತವನ್ನು ಸರಿದಾರಿಗೆ ತರುವ ಜತೆಗೆ ಬಿಜೆಪಿಯನ್ನು ಬಲಪಡಿಸುವುದು ಅಶೋಕ್ ಅವರಿಗೆ ಸುಲಭದ ಕೆಲಸವೇನಲ್ಲ.
ವೈಫಲ್ಯಗಳೇ ಹೆಚ್ಚು: ಒಕ್ಕಲಿಗರ ಪ್ರಾಬಲ್ಯದ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ದುರ್ಬಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಿಡಿತ ಸಾಧಿಸಿರುವ ಜಿಲ್ಲೆಗೆ ಒಕ್ಕಲಿಗ ಎನ್ನುವ ಕಾರಣಕ್ಕೆ ರಾಮಚಂದ್ರಗೌಡ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದ ತಂತ್ರ ಫಲಿಸಲಿಲ್ಲ.
ಜಿಲ್ಲೆ ಪಾಲಿಗೆ ಗೆಸ್ಟ್ ಪ್ರೊಫೆಸರ್ ಆಗಿದ್ದ ರಾಮಚಂದ್ರಗೌಡ ಅವರು ಅಭಿವೃದ್ಧಿ ಮತ್ತು ಪಕ್ಷ ಸಂಘಟನೆ ವಿಷಯದಲ್ಲಿ ಒತ್ತು ನೀಡಲಿಲ್ಲ. ರಾಷ್ಟ್ರೀಯ, ನಾಡ ಹಬ್ಬಗಳು ಮತ್ತು ಪ್ರಗತಿ ಪರಿಶೀಲನಾ ಸಭೆ, ಒಂದಿಷ್ಟು ಕಾರ್ಯಕ್ರಮಗಳ ಹೊರತಾಗಿ ಬೇರೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.
ಕಡೇ ಪಕ್ಷ ತಮ್ಮದೇ ಖಾತೆಗೆ ಸೇರಿದ ಮಂಡ್ಯ ವೈದ್ಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಉದ್ಧಾರಕ್ಕೂ ಕಾಳಜಿ ತೋರಲಿಲ್ಲ. ಸತತ ನಾಲ್ಕನೇ ವರ್ಷವೂ ಸಂಸ್ಥೆಗೆ ಪ್ರವೇಶ ತಡೆ ಹಿಡಿಯುವಂತಾಗಲು ರಾಮಚಂದ್ರಗೌಡ ಅವರ ಬೇಜವಾಬ್ದಾರಿಯೇ ಕಾರಣ.
ಮಳವಳ್ಳಿ-ಮಂಡ್ಯ ಜಿಲ್ಲಾ ಹೆದ್ದಾರಿಯ ಗೌಡಯ್ಯನದೊಡ್ಡಿ ಗೇಟ್ ಸೇತುವೆ ಕೆಲಸ ಒಂದೂವರೆ ವರ್ಷವಾದರೂ ಮುಗಿದಿಲ್ಲ. ಕಳೆದ ವರ್ಷದಿಂದಲೂ ಕಬ್ಬು ದರ ನಿಗದಿಪಡಿಸಿಲ್ಲ. ಮೈಷುಗರ್ ಮತ್ತು ಪಿಎಸ್‌ಎಸ್‌ಕೆ ಉದ್ಧಾರ ಕನಸಾಗಿಯೇ ಉಳಿದಿದೆ.
ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುವ ಮಾತು ಹಾಗಿರಲಿ. ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ‍್ಯಕ್ರಮದಲ್ಲೂ ಪಾಲ್ಗೊಳ್ಳಲಿಲ್ಲ. ಚುನಾವಣೆ ಹೇಗೆ ನಡೆಯುತ್ತಿದೆ ಎನ್ನುವುದನ್ನು ತಿಳಿಯುವ ಗೋಜಿಗೆ ಹೋಗಲೇ ಇಲ್ಲ.
ವರ್ಷದಲ್ಲಿ ನಾಲ್ವರು ಜಿಲ್ಲಾಧಿಕಾರಿಗಳ ಎತ್ತಂಗಡಿ, ೨ ವರ್ಷ ದಲ್ಲಿ ಮಿಮ್ಸ್‌ಗೆ ೩ ಮಂದಿ ನಿರ್ದೇಶಕರ ನೇಮಕ, ಮೈಷುಗರ‍್ಸ್ ವ್ಯವಸ್ಥಾಪಕ ನಿರ್ದೇಶಕರನ್ನು ಪದೇ ಪದೆ ಬದಲಿಸಿದಷ್ಟೇ ಸಾಧನೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಸ್ತುವಾರಿ ಸಚಿವರ ಕೊಠಡಿಯಲ್ಲಿ ಒಂದೇ ಒಂದು ದಿನ ಕುಳಿತು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿರಲಿಲ್ಲ.
ರೇಣುಕಗೆ ‘ತಣ್ಣ’ಗಿರುವ ಯೋಗ: ಕೊಡಗು ಜಿಲ್ಲೆಯ ‘ಉಸ್ತುವಾರಿ ಹೊರೆ’ಯನ್ನು  ಸಚಿವ ಜೆ. ಕೃಷ್ಣಪಾಲೇಮಾರ್ ಅವರಿಂದ ಇಳಿಸಿ ಅಬಕಾರಿ ಸಚಿವ ರೇಣುಕಾಚಾರ್ಯ ಅವರ  ಹೆಗಲಮೇಲೆ  ಹೊರಿಸಲಾಗಿದೆ. 
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣ ಎಡವಿದ ಜೆ.ಕೃಷ್ಣ ಪಾಲೇಮಾರ್ ‘ದಮ್ಮಯ್ಯ, ಕೊಡಗು ಉಸ್ತುವಾರಿಯಿಂದ ಮುಕ್ತಗೊಳಿಸಿ. ತನಗೆ ಎರಡು ಜಿಲ್ಲೆಗಳ ಉಸ್ತುವಾರಿಯ ಜವಾಬ್ದಾರಿ ‘ಹೊರೆ’ಯಾಗಿದೆ’ ಎಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಕೊಡಗು ಜಿಲ್ಲೆಯ ಉಸ್ತುವಾರಿ ನಿಭಾಯಿಸುತ್ತಿದ್ದರು.
ಪಾಲೇಮಾರ್ ಮಾತಿಗೆ ಮುಖ್ಯಮಂತ್ರಿ ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದ ಕಾರಣ ಒಂದು ವರ್ಷ ಹೇಗೋ ಕಾಲ ತಳ್ಳಲಾಯಿತು. ಜಿಲ್ಲೆಯನ್ನು ಉಸ್ತುವಾರಿ ಸಚಿವರು ಸಂಪೂರ್ಣ ಮರೆತಿ ದ್ದಾರೆಂಬ ಆರೋಪ ಹೆಚ್ಚಾಗಿ ಕೇಳಿ ಬರುತ್ತಿದ್ದ  ಸಂದರ್ಭ ಸಚಿವರು ಇತ್ತ ಮುಖ ಮಾಡುತ್ತಿದ್ದರು. ಕೊಡಗು ಉಸ್ತುವಾರಿಯಿಂದ  ಮುಖ್ಯಮಂತ್ರಿ ತನ್ನನ್ನು  ಮುಕ್ತಿಗೊಳಿಸುವವರೆಗೆ ತಾನು ಮುಂದುವರಿಯುತ್ತೇನೆ. ಜಿಲ್ಲೆಯ ಅಭಿವೃದ್ಧಿ  ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆಂದು ಪಾಲೇಮಾರ್ ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಹೇಳುತ್ತಿದ್ದರು ಅಷ್ಟೇ.
ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕಡೆಗೆ ಗಮನ ಹರಿಸಲು  ಅವರಿಂದ ಸಾಧ್ಯವಾಗಲೇ ಇಲ್ಲ. ಆಗೊಮ್ಮೆ  ಈಗೊಮ್ಮೆ ಭೇಟಿ ನೀಡುತ್ತಿದ್ದ ಪಾಲೇಮಾರ್‌ಗೆ ಕೊಡಗಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೇ ಇರುತ್ತಿರಲಿಲ್ಲ.  ಮಡಿಕೇರಿ ದಸರಾ ಉತ್ಸವಕ್ಕೆ ಸರಕಾರದಿಂದ ಗರಿಷ್ಠ ಅನುದಾನ ಬಿಡುಗಡೆ ಮಾಡಿಸಿರುವುದು ಹೊರತುಪಡಿಸಿದಂತೆ ಕೊಡ ಗಿನ ಜನ ನೆನಪಿನಲ್ಲಿಟ್ಟುಕೊಳ್ಳುವಂಥ ಕೆಲಸ ೧೮ ತಿಂಗಳ  ಅವಧಿಯಲ್ಲಿ ಮಾಡಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಕೋಟ್ಯಂತರ ರೂ.ಮೊತ್ತದ ಮಹತ್ವ ಪೂರ್ಣವಾದ ಯೋಜನೆಗಳನ್ನು ಕೊಡಗು ಜಿಲ್ಲೆಗೆ ಘೋಷಣೆ ಮಾಡಿದ್ದಾರೆ. ಸಣ್ಣಪುಟ್ಟ ಅಡ್ಡಿಗಳಿಂದ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ಇದೀಗ ಹೊಸಬರು ಯಾವ ರೀತಿ ಕಾರ‍್ಯ ನಿರ್ವಹಿಸುವರೋ ಕಾದು ನೋಡಬೇಕಿದೆ.
ಹಳೇ ಗಂಡನೇ ಗತಿ! ನೆರೆಯ ಜಿಲ್ಲೆಗಳಾದ ಮೈಸೂರು, ಮಂಡ್ಯಕ್ಕೆ ಹೊಸ ಉಸ್ತುವಾರಿ ಸಚಿವರ ನೇಮಕ ವಾಗಿರುವ ಬೆನ್ನಲ್ಲೇ ಚಾ.ನಗರದ ಉಸ್ತುವಾರಿ ಸಚಿವರೂ ಬದಲಾಗಬಹುದೇ ಎಂಬ ಕುತೂಹಲ ಜಿಲ್ಲೆಯ ಜನತೆಯಲ್ಲಿ ಮನೆ ಮಾಡಿದೆ.  
ಅದಕ್ಕೆ ಕಾರಣವೂ ಇದೆ.  ಹೇಗೆ ರಾಮಚಂದ್ರಗೌಡರು ಮಂಡ್ಯದ ಬಗ್ಗೆ ನಿಷ್ಕಾಳಜಿ ಹೊಂದಿದ್ದರೋ ಅದೇ ಕೇಸು ಹಾಲಪ್ಪ ಅವರದ್ದು.  ಜಿಲ್ಲಾ ಉಸ್ತುವಾರಿ ಸಚಿವ  ಹಾಲಪ್ಪ  ಅವರಿಗೆ  ಜಿಲ್ಲೆಯ ಅಭಿವೃದ್ಧಿ ಬಗ್ಗೆ ಇರಲಿ, ಇತ್ತ  ಮುಖ ಮಾಡಲು ಮನಸಿಲ್ಲ.
ಮುಖ್ಯ ಸಮಾರಂಭಗಳಿರುವಾಗ ಅನಿವಾರ್ಯವೆಂಬಂತೆ ಜಿಲ್ಲೆಗೆ ಆಗಮಿಸುತ್ತಾರೆಯೇ ಹೊರತು, ಅವರಿಗೆ ಜಿಲ್ಲೆಯ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ ಎಂಬುದು ಅವರ ಧೋರಣೆ ಯಿಂದಲೇ ಅರ್ಥವಾಗುತ್ತದೆ. ಉಸ್ತುವಾರಿ ಸಚಿವರಾಗಿ ಅವರು ಜಿಲ್ಲೆಗೆಂದು ಮಾಡಿದ ಸಾಧನೆ ಏನೂ ಇಲ್ಲ. ದೂರದ ಜಿಲ್ಲೆ ಶಿವಮೊಗ್ಗದ ಹಾಲಪ್ಪ ಅವರಿಗೆ ಉಸ್ತುವಾರಿ ನೀಡಿರುವುದು ಮೊದಲಿನಿಂದಲೂ ಟೀಕೆಗೆ ಗುರಿಯಾಗಿದೆ. ಹೀಗಿದ್ದರೂ ಸರಕಾರ ಅವರನ್ನು ಬದಲಾಯಿಸಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ  ಹಾಲಪ್ಪ  ನಿಷ್ಠರು. ಹೀಗಾಗಿ ಜಿಲ್ಲೆಯ ಉಸ್ತುವಾರಿ ಸ್ಥಾನ ಹಾಲಪ್ಪಗೆ ಇರಲಿ ಎಂಬ ಮೃದು ಧೋರಣೆ. ಈ ಕಾರಣದಿಂದಲೇ ರೈತರ ಲಾಠಿ ಚಾರ್ಜ್ ಪ್ರಕರಣ ಸೇರಿದಂತೆ  ಜಿಲ್ಲೆಯತ್ತ ಹೆಚ್ಚಾಗಿ ತಲೆ ಹಾಕಲ್ಲ. ಸ್ಥಾನದ ಹೊಣೆ ಹೊತ್ತ ನಂತರ ಇತ್ತ ಹೆಚ್ಚೆಂದರೆ ಈವರೆಗೆ ೨೦ ಬಾರಿ ಬಂದಿರಬಹುದು. ಅದೂ ಬಂದ ಪುಟ್ಟ, ಹೋದ ಪುಟ್ಟ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿರುವುದು ೩ ಬಾರಿ ಮಾತ್ರ.  ಜಿಲ್ಲಾ ಉಸ್ತುವಾರಿ ಸಚಿವನಾಗಿ ಇಲ್ಲಿ ದುಡಿದರೆ ನನಗೆ ದಕ್ಕುವುದಾದರೂ ಏನು? ಅದು ಮತವಾಗಿ ಪರಿವರ್ತನೆ ಆಗತ್ತಾ ? ಇನ್ನು ಇಲ್ಲಿನ ಕಾರ್ಯಕರ್ತರು ಹಾಗೂ ಮುಖಂಡರನ್ನು ಬೆಳೆಸಿದರೆ ನನಗೇನು ಪ್ರಯೋಜನ  ಎಂಬುದು ಅವರ ಧೋರಣೆ ಎಂಬುದು ಕೇಳಿಬರುತ್ತಿರುವ ಟೀಕೆ.
ಉಸ್ತುವಾರಿ ಸ್ಥಾನಕ್ಕೆ ಕೊನೆಗೂ ಮುಕ್ತಿ: ಬಹು ದಿನದಿಂದ ಖಾಲಿ ಇದ್ದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಕೊನೆಗೂ ಮುಕ್ತಿ ದೊರೆತಿದೆ.
ಶೋಭಾ ಕರಂದ್ಲಾಜೆ ಬಳಿಕ ಖಾಲಿ ಇದ್ದ ಸ್ಥಾನಕ್ಕೆ ಈಗ ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಅವರೇ ನೇಮಕವಾಗಿದ್ದಾರೆ.
ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆ ಹಾಗೂ ಗಣಿ ಧಣಿಗಳ ಒತ್ತಡಕ್ಕೆ ಮಣಿದ ಯಡಿಯೂರಪ್ಪ  ಅವರು, ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಚಿವ ಸಂಪುಟದಿಂದಲೇ ಕೈ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ತಮ್ಮ ಉಸ್ತುವಾರಿಯಲ್ಲಿ ಎರಡು ದಸರಾ ನಡೆಸಿದ್ದ ಶೋಭಾ ಅವರು ಪಂಚಲಿಂಗದರ್ಶನ ಮಹೋತ್ಸವದ ಸಿದ್ಧತೆ ನಡೆಸುತ್ತಿರುವಾಗಲೇ ಸ್ಥಾನ ತೆರವುಗೊಳಿಸಿದರು.
ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದ ಶೋಭಾರ ಬಳಿಕ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬ ದವರು ಹಿಡಿತ ಸಾಧಿಸಿದ್ದಾರೆ. ಜಿಲ್ಲಾಧಿಕಾರಿ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿಗಳೇ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಜತೆಗೆ ಮುಖ್ಯಮಂತ್ರಿಗಳ ಪುತ್ರ ರಾಘವೇಂದ್ರ ಸಹ ಜಿಲ್ಲೆಯ ಕಾರ‍್ಯಗಳತ್ತ ಗಮನ ಹರಿಸಿದ್ದು ರಹಸ್ಯವಲ್ಲ.
ಕೇಂದ್ರದಿಂದ ಮಂಜೂರಾಗಿದ್ದರೂ ನರ್ಮ್ ಅನುದಾನ ಬಳಕೆ ಮಾಡಿಕೊಳ್ಳದೆ ತಣ್ಣಗಿದ್ದ ಜಿಲ್ಲಾಡಳಿತಕ್ಕೆ ಶೋಭಾ ಆರಂಭದಲ್ಲೇ ಚುರುಕು ಮುಟ್ಟಿಸಿದರು. ಜತೆಗೆ ಆಗಾಗ ನಗರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾರ‍್ಯಗಳನ್ನು ಪರಾಮರ್ಶಿಸುತ್ತಿದ್ದರಿಂದ ಕಾಮಗಾರಿಗಳು ಚುರುಕುಗೊಂಡಿದ್ದವು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನೂರು ಕೋಟಿ ರೂ. ತಂದಿದ್ದರು. ಆದರೆ ಶೋಭಾ ಅವರು ಉಸ್ತುವಾರಿ ಸಚಿವ ಸ್ಥಾನದಿಂದ ಇಳಿಯುತ್ತಿದ್ದಂತೆಯೇ ‘ಪ್ರತಿ ವರ್ಷ ನೂರು ಕೋಟಿ ರೂ. ನೀಡುವುದಾಗಿ’ ನೀಡಿದ್ದ ವಾಗ್ದಾನ ಮರೆತಂತಿದೆ.
‘ಮುಖ್ಯಮಂತ್ರಿಗಳಿಗೆ ಆಪ್ತರೆಂಬ ಕಾರಣಕ್ಕೆ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎನ್ನುವ ಮುನಿಸು ಸ್ಥಳೀಯ ಬಿಜೆಪಿ ಮುಖಂಡರಲ್ಲಿದ್ದು, ಇದು ಹಲವು ಬಾರಿ ಬಹಿರಂಗಗೊಂಡಿತ್ತು. ಸಂಸದೀಯ ಕಾರ‍್ಯದರ್ಶಿಯಾಗಿ ನೇಮಕಗೊಂಡಿದ್ದ ಎಸ್.ಎ.ರಾಮದಾಸ್ ಅವರು ಯಡಿಯೂರಪ್ಪ ಅವರ ಬಳಿಯೇ  ತಮ್ಮ ಅಸಮಧಾನ ತೋಡಿಕೊಂಡಿದ್ದರು. ಜತೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ‍್ಯದರ್ಶಿ ಗಾಗಿ ನೀಡಿದ್ದ ಸವಲತ್ತನ್ನು ಸರಕಾರಕ್ಕೆ ಹಿಂದಿರುಗಿಸಿ, ಪ್ರತಿಭಟನೆ ವ್ಯಕ್ತಪಡಿಸಿದ್ದರೆ, ಶಂಕರಲಿಂಗೇಗೌಡ ಸೇರಿದಂತೆ ಇತರೆ ಮುಖಂಡರು ತಮ್ಮದೇ ಶೈಲಿಯಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ಜತೆಗೆ ನಗರದ ಅಭಿವೃದ್ಧಿಗೆ ಕೊಟ್ಟ ಒತ್ತನ್ನು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಗೆ ಕೊಟ್ಟಿಲ್ಲ ಎನ್ನುವ ಅಪವಾದವಿದೆ. ಜಿಲ್ಲೆಯಲ್ಲಿ ಹೊಸ ಹೊಣೆ ವಹಿಸಿರುವ ಸುರೇಶ್‌ಕುಮಾರ್ ಅವರು ಈ ಅಸತೋಲನವನ್ನು ಸರಿ ಪಡಿಸಲಿ ಎನ್ನುವುದು ಚಿಂತಕರ ಅಭಿಲಾಶೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ