ಮೃಗಾಲಯದ ಇಡಿ ಪ್ರಭಾರ ಹುದ್ದೆಗೆ ‘ಪ್ರಭಾವ’

ವಿಕ ಸುದ್ದಿಲೋಕ ಮೈಸೂರು
ವಿಶ್ವ ವಿಖ್ಯಾತ ಮೈಸೂರು ಮೃಗಾಲಯದ ಕಾರ‍್ಯ ನಿರ್ವಾಹಕ ನಿರ್ದೇಶಕ (ಇಡಿ)ಹುದ್ದೆಯ ಪ್ರಭಾರ ಸ್ಥಾನಕ್ಕೀಗ ಪೈಪೋಟಿ.
ಈಗಿರುವ ಇಡಿಯನ್ನೇ ಮುಂದುವರಿಸಿ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ಪತ್ರ ತಲುಪುವ ಹೊತ್ತಿಗೆ ಮತ್ತೊಬ್ಬ ಪ್ರಭಾರ ಅಧಿಕಾರಿಯನ್ನು ಮೃಗಾಲಯಕ್ಕೆ ನೇಮಿಸಿ ಆದೇಶ ಹೊರಡಿಸಲಾಗಿದೆ !
ಪ್ರಾಧಿಕಾರದ ಸದಸ್ಯ ಕಾರ‍್ಯದರ್ಶಿ, ಮುಖ್ಯಮಂತ್ರಿ ಗಳ ಮಾಧ್ಯಮ ಸಲಹೆಗಾರರ ಶಿಫಾರಸಿನ ಮೇರೆಗೆ ಅರಣ್ಯ ಇಲಾಖೆ ಪ್ರಧಾನ ಕಾರ‍್ಯದರ್ಶಿ ಡಿ.ಯತೀಶ್ ಕುಮಾರ್ ಅವರಿಗೆ ಪ್ರಭಾರ ಹುದ್ದೆಯನ್ನು ವಹಿಸಿದ್ದಾರೆ. ಸಾಕಷ್ಟು ಪ್ರಭಾವದ ಫಲವಾಗಿ ಈಗಿರುವ ಪ್ರಭಾರ ಅಧಿಕಾರಿ ಮತ್ತೊಬ್ಬ ಪ್ರಭಾರ ಅಧಿಕಾರಿಗೆ ನಾಳೆ(ಏ.೫) ಅಧಿಕಾರ ಹಸ್ತಾಂತರಿಸಲಿದ್ದಾರೆ.
ಸಾವಿನ ಮನೆಯಾಯ್ತು: ನೆನಪಿರಬಹುದು, ಐದಾರು ವರ್ಷದ ಹಿಂದೆ ಮೈಸೂರು ಮೃಗಾಲಯ ಎಂದರೆ ಪ್ರಾಣಿಗಳನ್ನು ದಯನೀಯವಾಗಿ ಕೊಲ್ಲುವ, ಆ ಮೂಲಕ ತಮ್ಮ ಹೇಯ ಸೇಡನ್ನು ತೀರಿಸಿಕೊಳ್ಳುವ ತಾಣ  ಎಂದೇ ಬಿಂಬಿತವಾಗಿತ್ತು. ಇನ್ನು ಕೆಲವರಿಗೆ ಹಣ ಮಾಡುವ ಕೇಂದ್ರವಾಗಿ ಮಾರ್ಪಟ್ಟಿತ್ತು. ಇಂಥ ಕಳಂಕಗಳನ್ನು ತಪ್ಪಿಸಲೆಂದೇ ಕುಮಾರ ಪುಷ್ಕರ್ ಎಂಬ ದಕ್ಷ ಅಧಿಕಾರಿಯನ್ನು ಮೃಗಾಲಯಕ್ಕೆ ನೇಮಿಸಲಾಯಿತು. ಅವರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಮೃಗಾಲಯದ ಆದಾಯ ವೃದ್ಧಿಯಾಯಿತು. ಹಣ ಸೋರಿಕೆಯೂ ತಪ್ಪಿತು. ಇದೇ ಕಾರಣಕ್ಕೆ ಒಂದು ವರ್ಷ ಮೃಗಾಲಯದಲ್ಲಿ ನಡೆದಿದ್ದು ಮಾರಣ ಹೋಮ. ಆನಂತರ ಒಂಬತ್ತು ಮಂದಿ ಪ್ರಾಣಿ ಹಂತಕರು ಜೈಲು ಸೇರಿದ್ದು ಈಗ ಇತಿಹಾಸ. ಆನಂತರ ಮೃಗಾಲಯ ಗಣನೀಯ ಅಭಿವೃದ್ಧಿ ಕಂಡಿದೆ. ಮನೋಜ್‌ಕುಮಾರ್, ರಂಗರಾವ್, ಈಗ ವಿಜಯರಂಜನ್‌ಸಿಂಗ್ ಅವರು ವಿವಿಧ ಯೋಜನೆ ರೂಪಿಸಿದ ಫಲವಾಗಿ ಮೃಗಾಲಯಕ್ಕೆ ಹೊಸ ಪ್ರಾಣಿ ಬಂದಿವೆ. ಮೃಗಾಲಯದ ವಾತಾ ವರಣವೇ ಬದಲಾಗಿದೆ. ಆದಾಯದ ಪ್ರಮಾಣವೂ ಮೂರು ಪಟ್ಟು ಹೆಚ್ಚಾಗಿದೆ. ಮೃಗಾಲಯದ ಆದಾಯ ಆರು ಕೋಟಿ ರೂ. ದಾಟಿದ್ದರೆ, ಇದರಲ್ಲಿ ಲಾಭದ ಪ್ರಮಾಣವೇ ೨ ಕೋಟಿ ರೂ.
ಮೃಗಾಲಯವನ್ನೇ ಮುಚ್ಚಬೇಕು ಎನ್ನುವ ಪರಿಸ್ಥಿತಿಯಿಂದ ಈಗ ಲಾಭದ ಹಂತ ತಲುಪಿರುವಾಗ ಸರಕಾರ ಸೂಕ್ತ ಅಧಿಕಾರಿಯನ್ನೇ ನೇಮಿಸಬೇಕು. ಐಎಫ್‌ಎಸ್ ದರ್ಜೆಯ ಹಿರಿಯ ಅಧಿಕಾರಿಯನ್ನು ನೇಮಿಸಬೇಕೇ ಹೊರತು ಕೆಳ ಹಂತದ ಅದೂ ಮತ್ತೊಬ್ಬ ಪ್ರಭಾರಿ ಅಧಿಕಾರಿಯನ್ನು ನೇಮಿಸುವುದು ಸರಿಯಲ್ಲ. ಅದೂ ಒಳ್ಳೆ ಹೆಸರು ಇಲ್ಲದ ಅಧಿಕಾರಿಯನ್ನು ಮೃಗಾಲಯಕ್ಕೆ ನೇಮಿಸುವುದು ಬೇಡ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಇಲಾಖೆಯ ಪ್ರಧಾನ ಕಾರ‍್ಯದರ್ಶಿಗೆ ಮೌಖಿಕವಾಗಿ ತಿಳಿಸಿದ್ಧಾರೆ.
ಅಧ್ಯಕ್ಷರ ಪತ್ರ: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಂ.ನಂಜುಂಡಸ್ವಾಮಿ ಅವರು ಅರಣ್ಯ ಇಲಾಖೆ ಪ್ರಧಾನ ಕಾರ‍್ಯದರ್ಶಿ ಮೀರಾ ಸಕ್ಸೇನಾ ಅವರಿಗೆ ಪತ್ರ ಬರೆದು, ಈಗಿರುವ ಕಾರ‍್ಯ ನಿರ್ವಾಹಕ ನಿರ್ದೇಶಕ ವಿಜಯರಂಜನ್‌ಸಿಂಗ್ ಅವರನ್ನೇ ಮುಂದುವರಿಸಿ ಎಂದು ಸಹ ಕೋರಿದ್ದಾರೆ.
ಈ ಹಿಂದೆ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರ ಹುದ್ದೆಗೆ ಒಬ್ಬ ನುರಿತ ಹಾಗೂ  ಅನುಭವವುಳ್ಳ ಐಎಫ್‌ಎಸ್ ಅಧಿಕಾರಿಯನ್ನು ಸರಕಾರದಿಂದ ನೇಮಿಸಲು ಕೋರಲಾಗಿತ್ತು.  ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಯಭಾರವನ್ನು ಈಗ ವಿಜಯ್ ರಂಜನ್ ಸಿಂಗ್ ನಿರ್ವಹಿಸುತ್ತಿದ್ದಾರೆ. ಐದು ತಿಂಗಳ ಹಿಂದೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನಕ್ಕೆ ಅವರ ವರ್ಗಾವಣೆಯಾಗಿದ್ದರೂ ಮೃಗಾಲಯದ ಕಾರ್ಯಭಾರವನ್ನು ಹೆಚ್ಚುವರಿ ಯಾಗಿ ವಹಿಸಿಕೊಂಡು ಎರಡೂ ಕಡೆಗಳಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮೃಗಾಲಯಕ್ಕೆ ಅನುಭವವುಳ್ಳ ಐಎಫ್‌ಎಸ್ ಅಧಿಕಾರಿಯನ್ನು ಕಾಯಂ ಆಗಿ ನೇಮಿಸುವುದು ಸೂಕ್ತ. ಕಾರಣ ಇಲ್ಲಿನ ಪ್ರಭಾರವನ್ನು ಹೆಚ್ಚುವರಿಯಾಗಿ ವಹಿಸಿದರೆ ಈಗಾಗಲೇ ಸುಗಮವಾಗಿ ರುವ ಮೃಗಾಲಯ ಆಡಳಿತ ನಿರ್ವಹಣೆಯಲ್ಲಿ ತೊಂದರೆ ಯಾಗಬಹುದು. ಇಡೀ ಹುದ್ದೆಯನ್ನು ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿಗಳ ದರ್ಜೆಗೆ ಏರಿಸಿದ್ದು, ಈಗ ಎಸ್‌ಎಫ್‌ಎಸ್ ಅಧಿಕಾರಿಯನ್ನು ಕೇಡರ್ ಹುದ್ದೆಗೆ ನೇಮಿಸಲು ಉದ್ದೇಶಿಸಿರುವುದು ಸಮಂಜಸವಲ್ಲ. ಮೃಗಾಲಯದಲ್ಲಿ ಈಗಾಗಲೇ ಕೈಗೊಂಡಿರುವ ಕಾರ್ಯಗಳು, ವಿದೇಶದ ನಾಲ್ಕು ಮೃಗಾಲಯಗಳಿಂದ ಪ್ರಾಣಿ ವಿನಿಮಯದ ಹಲವು ಪ್ರಾಣಿಗಳು ಬರುವುದರಿಂದ ಇಲ್ಲಿಗೆ ತುರ್ತಾಗಿ ಸೂಕ್ತ ಹಾಗೂ ಅನುಭವವಿರುವ ಮತ್ತು ಇಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ ಅಧಿಕಾರಿಯನ್ನು ಕಾಯಂ ಆಗಿ ನೇಮಿಸಬೇಕು. ಅಲ್ಲಿಯವರೆಗೆ ಪ್ರಸ್ತುತ ಹೆಚ್ಚುವರಿ ಕಾರ್ಯ ಭಾರದಲ್ಲಿ ಇರುವ ವಿಜಯ್ ರಂಜನ್ ಸಿಂಗ್ ಅವರನ್ನೇ ಮುಂದುವರಿಸಿ ಎಂದು ಕೋರಿದ್ದಾರೆ.
ಇದಕ್ಕೆ ಸರಕಾರ ನೀಡಿದ ಸ್ಪಷ್ಟನೆ ೨೨ ದಿನದ ಮಟ್ಟಿಗೆ ಹೊಸ ಪ್ರಭಾರ ಅಧಿಕಾರಿ. ೨೨ ದಿನದಲ್ಲಿ ಕಾಯಂ ಅಧಿಕಾರಿ ನೇಮಿಸುವುದಾದರೆ ಪ್ರಭಾರ ಬದಲಾವಣೆ ಏಕೆ? ಎನ್ನುವ ಪ್ರಶ್ನೆಗೆ ಸರಕಾರವೇ ಉತ್ತರ ನೀಡಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ