ಸಂಶೋಧಕ ಮಾತ್ರವಲ್ಲ ಉತ್ತಮ ಕಥೆಗಾರ

ಶ್ರೀನಿವಾಸ  ಹಾವನೂರ ಅವರು ಕನ್ನಡದ ಅಪ್ರತಿಮ ಸಂಶೋಧಕ. ಸಂಶೋಧನೆಯ ಮೂಲಕವೇ ಖ್ಯಾತರಾಗಿದ್ದರೂ ಸಣ್ಣ ಕತೆಗಳು, ಕಾದಂಬರಿ, ಕಥನ, ಸಾಮಾಜಿಕ ವಿಷಯಗಳು, ಲಲಿತ ಪ್ರಬಂಧಗಳು, ಪತ್ರಿಕೋದ್ಯಮ,ಗಣ್ಯ ವ್ಯಕ್ತಿಗಳು, ಗ್ರಂಥ ಸಂಪಾದನೆ, ಧಾರ್ಮಿಕ ಹಾಗೂ ದಾಸ ಸಾಹಿತ್ಯ, ಕ್ರೈಸ್ತ ಸಾಹಿತ್ಯ, ಪುಸ್ತಕೋದ್ಯಮ ಕುರಿತ ಕನ್ನಡ ಸಾಹಿತ್ಯ ಕೃಷಿ ಕೈಗೊಂಡವರು. ಆಂಗ್ಲ ಭಾಷೆಯಲ್ಲೂ ಕೃತಿ ರಚಿಸಿರುವ  ಹಾವನೂರ ಅವರು ಮುಂಬಯಿಯ ವಿಜ್ಞಾನ ಸಂಶೋಧನ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿದ್ದಾಗ ಸಂಶೋಧನಾಸಕ್ತಿಯನ್ನು ರೂಢಿಸಿಕೊಂಡವರು.
ಸಂಶೋಧಕ ಎಂದು ಗುರುತಿಸಿಕೊಂಡಿದ್ದರೂ ಅವರು ಉತ್ತಮ ಕಥೆಗಾರರು. ನುಡಿ ಕೃಷಿ ಅವರ ಕರಗಳಲ್ಲಿ ಒಡಮೂಡಿದ್ದೇ ಕಥೆ ಬರೆಯುವುದರಿಂದ. ೧೯೩೯ರಲ್ಲಿ  ತಮ್ಮ ೧೩ನೇ ವಯಸ್ಸಿನಲ್ಲಿ ಬರೆದ ‘ಹೋಟಲಿನ ಪ್ರಭಾವ’ ಸಣ್ಣ ಕತೆ ಮೊದಲು ಪ್ರಕಟಿತ ಬರಹ. “ದೇವುಡು ಅವರ ನಂತರ ಸಹೇತುಕವಾಗಿ ಅಂತರಂಗದ ತೆರೆತೆರೆಗಳನ್ನು ಪರೆಪರೆಯಾಗಿ ಬಿಡಿಸಿ ಅರಳಿಸಿ ತೋರಿಸಲು ಹೊರಟ ಕತೆಗಾರರು’ ಎಂದು ಗೌರೀಶ ಕಾಯ್ಕಿಣಿಯವರಂತಹ ಪ್ರಸಿದ್ಧ ಸಾಹಿತಿ, ವಿಮರ್ಶಕರು ಉದ್ಗರಿಸುವಷ್ಟು ಎತ್ತರದ ಮಟ್ಟವನ್ನು ಮುಟ್ಟಿದವು ಇವು.
‘ಗಂಧ ಮತ್ತು ಕಲ್ಲು’  ಹಾವನೂರ ಅವರ ಬಹುಚರ್ಚಿತ ಸಣ್ಣ ಕತೆ. ಪ್ರಸಿದ್ಧ ನಾಟಕಕಾರ ಹೆನ್ರಿ ಇಬ್ಸೆನ್ನನ ‘ಈಟ್ಝ್ಝo ಏಟ್ಠoಛಿ’ ನಾಟಕದ ಪ್ರೇರಣೆಯಿಂದ ರಚಿತವಾದ ಕಥೆ ಇದು.
ಮಂಗಳೂರು ಸಮಾಚಾರದ ಹುಡುಕಾಟ: ಕನ್ನಡದ ಪ್ರಥಮ ಪತ್ರಿಕೆ ‘ಮಂಗಳೂರು ಸಮಾಚಾರ’ವನ್ನು ಪತ್ತೆ ಹಚ್ಚಿರುವುದು ಹುಡುಕುವ ಕಾಯಕದ ಶ್ರದ್ಧೆಯ ಕೈಗನ್ನಡಿ.
ಲೇಖನದಲ್ಲಿ ಅವರೇ ಹೇಳಿದಂತೆ ‘೧೮೪೩-೪೪ರ ಸುಮಾರಿಗೆ ಪ್ರಕಟವಾಗಿದ್ದ ‘ಕಂನಡ’ ಅಥವಾ ‘ಮಂಗಳೂರ ಸಮಾಚಾರ’ವೆಂಬುದೆ ಕನ್ನಡದ ಮೊತ್ತ ಮೊದಲಿನ ಪತ್ರಿಕೆಯಾಗಿರಬೇಕೆಂಬ ಬಗ್ಗೆ ಅಲ್ಲಿ ಎಲ್ಲಿ ಉಲ್ಲೇಖಗಳು ದೊರೆಯುತ್ತಿದ್ದವು. ಅದರ ವಿಷಯವೇನು, ಲೇಖಕ/ಸಂಪಾದಕರು ಯಾರು, ಅದರ ಪ್ರಸಾರ ಹೇಗೆ ಆಗುತ್ತಿದ್ದಿತು ಇವೇ ಮುಂತಾದ ಕುತೂಹಲಜನಕ ಅಂಶಗಳು ಏನೊಂದು ತಿಳಿದಿರಲಿಲ್ಲ.... ಈ ಪತ್ರಿಕೆಯ ಪ್ರತಿಯು ಭಾರತದ ಎಲ್ಲೆಯೂ ಸಿಗುವಂತಿರಲಿಲ್ಲ. ಅದರ ಅವತರಣಿಕೆಯು ಯಾವ ಕನ್ನಡ ಗ್ರಂಥ/ಪತ್ರಿಕಾ ಲೇಖನ ಗಳಲ್ಲಿಯೂ ತೋರಿ ಬಂದಿಲ್ಲ. ಆ ಪತ್ರಿಕೆಯ ಲಭ್ಯತೆಯ ಬಗ್ಗೆ ಯುರೋಪಿನ ಪ್ರಾಚ್ಯ ಪುಸ್ತಕಾಲಯಗಳಲ್ಲಿ ವಿಚಾರಿ ಸುತ್ತಿದ್ದಾಗ, ಕೊನೆಗೊಮ್ಮೆ ದೊರಕಿತು. ಆ ಪತ್ರಿಕೆಯ ಸಂಪೂರ್ಣ ಸಂಪುಟದ ಮೈಕ್ರೋಫಿಲ್ಮ್‌ನ್ನು ಇಂಗ್ಲೆಂಡಿನಿಂದ ತರಿಸಿಕೊಂಡು ಪರಿಚಯ ಮಾಡಲಾಯಿತು.
ಅದರ ಮೊದಲ ಸಂಚಿಕೆಯಲ್ಲಿ ಹೀಗಿದೆ: ‘ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿ ಯಂತರ ಹೊರಗಿನ ಸಮಾಚಾರ ಮಾರ್ಗ ಮಾರ್ಯಾದೆ ಗಳು ತಿಳಿಯದೇ ಕಿಟಕಿಯಿಲ್ಲದ ಬಿಡಾರದಲ್ಲಿ ವುಳ್ಳಕೊಳ್ಳು ವವರ ಹಾಗೆಯಿರುತ್ತಾ ಬಂದರು. ಅದರ ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀಳುವ ಹಾಗೆಯೂ ನಾಲ್ಕು ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆ ವೊಂದು ಸಾರಿ ಶಿದ್ಧಮಾಡಿ ಅದನ್ನು ಓದಬೇಕೆಂದಿರು ವೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮಾಡಿದ ಹಾಗಾಗಿರು ವುದು. ಈ ಕಾಗದವನ್ನು ಬರೆಯುವವರೆಗೂ ಓದುವವ ರಿಗೂ ದೇವರು ಬುದ್ಧಿಯನ್ನು ಕೊಡಲಿ’
ಉತ್ತರ ಕನ್ನಡ ಜಿಲ್ಲೆ ಹುಟ್ಟಿದ್ದು: ೧೭೯೯ರವರೆಗೂ ಕೆನರಾ ಆಗಿದ್ದ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳು ವಿಭಜನೆಯಾದದ್ದು ಇಂಗ್ಲೆಂಡಿಗೆ ಹತ್ತಿ ಪೂರೈಸುವ ಕಾರಣದಿಂದಾಗಿ ಎಂಬುದರ ಹಿಂದಿನ ಘಟನೆಗಳನ್ನು ಬಿಡಿಸಿಟ್ಟವರು ಶ್ರೀನಿವಾಸ  ಹಾವನೂರ. ಅಮೆರಿಕದಿಂದ ಹತ್ತಿ ಇಂಗ್ಲೆಂಡ್‌ಗೆ ಸರಬರಾಜಾಗುತ್ತಿತ್ತು. ಅಮೆರಿಕದಲ್ಲಿ ಸಿವಿಲ್ ಯುದ್ಧಕಾರಣದಿಂದಾಗಿ ರಫ್ತು ನಿಂತಾಗ ಬ್ರಿಟಿಷರು ಉತ್ತರ ಕರ್ನಾಟಕದಲ್ಲಿ ಬೆಳೆಯುತ್ತಿದ್ದ ಹತ್ತಿಯತ್ತ ಕಣ್ಣು ನೆಟ್ಟರು. ಕಾರವಾರದ ಸದಾಶಿವ ಗಡ ಬಂದರು ಉತ್ತಮ ನೈಸರ್ಗಿಕ ಹಾಗೂ ಎಲ್ಲ ಕಾಲದಲ್ಲೂ ಬಳಕೆಯಾಗುವ ಬಂದರು ಎಂಬುದನ್ನು ಕಂಡುಕೊಂಡ ಬ್ರಿಟಿಷರು ಕೆನರಾವನ್ನು ವಿಭಜಿಸಿ ಉತ್ತರ ಕನ್ನಡವನ್ನು ಹುಟ್ಟು ಹಾಕಿ ಭಟ್ಕಳತನಕದ ಪ್ರದೇಶವನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಿದರು. ಕಾರವಾರವು ಮುಂಬಯಿಯಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂಬ ಆಸೆಯಿಂದ ಆಗ ದೇಶದ ನಾನಾ ಸಿರಿವಂತರು ಇಲ್ಲಿ ಸ್ಥಳ ಖರೀದಿಸಿದರು. ಆಮೇಲೆ ಸಿವಿಲ್ ಯುದ್ಧ ನಿಂತು ಅಮೆರಿಕದಿಂದಲೇ ಹತ್ತಿ ರಫ್ತು ಆರಂಭವಾದಾಗ ಇಲ್ಲಿಂದ ಹತ್ತಿ ಹೋಗುವುದು ನಿಂತದ್ದು ಇಂಥವನೆಲ್ಲ ಹುಡುಕಾಡಿ ಒದಗಿಸಿದ್ದಾರೆ.
ಕನ್ನಡ ಸಾಹಿತ್ಯ ಸಂಬಂಧ ವಿಷಯಗಳಲ್ಲಿ ಪಿಎಚ್‌ಡಿಗೆ ಸೇರುವವರನ್ನು ಮಾರ್ಗದರ್ಶಕರು ಎಷ್ಟೋ ವೇಳೆಡಾ.  ಹಾವನೂರ ಅವರನ್ನು ಸಂಪರ್ಕಿಸಿ ಎಂದು ಕಳುಹಿ ಸುತ್ತಿದ್ದುದು ಸಾಮಾನ್ಯ ವಿಚಾರ. ಅನೇಕ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿಯೇ ಉಳಿಸಿಕೊಂಡು ತಾವೇ ಅಡುಗೆ ಮಾಡಿ ಊಟ ಹಾಕುತ್ತಿದ್ದರು. ದಿನದಿನವೂ ಹೊಸ ಹೊಸ ಬಗೆಯ ತಿಂಡಿತಿನಿಸುಗಳಿರುತ್ತಿದ್ದವು.
 ಹಾವನೂರ ಮನೆಯೇ ಬೃಹತ್ ಗ್ರಂಥಾಲಯ ವಾಗಿತ್ತು. ಅವೆಲ್ಲವನ್ನು ಕೆಲವರ್ಷಗಳ ಹಿಂದೆ ಮಂಗಳೂರಿನ ಬಾಶೆಲ್ ಮಿಷನ್ ಸಂಸ್ಥೆಗೆ ದಾನವಾಗಿ ನೀಡಿದರು. ೧೯೭೩ರಲ್ಲಿಯೇ ಕಂಪ್ಯೂಟರ್‌ನ್ನು ಕನ್ನಡದ ಕಾಯಕಕ್ಕೆ ಬಳಸಿದ ಶ್ರೇಯಸ್ಸು ಅವರದು. ಹಾವನೂರ ಅವರಿಗೆ ೮೦ ವರ್ಷ ತುಂಬಿದಾಗ ಬೆಂಗಳೂರಿನಲ್ಲಿ ಶ್ರೀನಿವಾಸ ಹಾವನೂರ ಅಭಿನಂದನ ಸಮಿತಿ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಅವರ ಆಯ್ದ ಬರಹಗಳ ಸಂಕಲನ ‘ಸಂ-ಕಥನ’ ಅರ್ಪಿಸಲಾಯಿತು.
- ‘ಸಂ-ಕಥನ’ದಿಂದ ಆಯ್ದದ್ದು

ಕನ್ನಡ ಸಾಹಿತ್ಯದ ವಿಚಕ್ಷಣ ವಿದ್ವಾಂಸ
ಈಚನೂರು ಕುಮಾರ್ ಮೈಸೂರು
ಡಾ. ಶ್ರೀನಿವಾಸ ಹಾವನೂರ ಅವರು ಕನ್ನಡ ಪ್ರೇಮ,  ಮುದ್ರಣ, ಪತ್ರಿಕೋದ್ಯಮ ಹಾಗೂ ಆಧುನಿಕ ಸಾಹಿತಿಗಳ ಬಗ್ಗೆ ಕನ್ನಡಿಗರಿಗೆ ‘ಅರುಣೋ ದಯ’ ಕಲ್ಪಿಸಿಕೊಟ್ಟ ವಿಚಕ್ಷಣ ವಿದ್ವಾಂಸರು.
ಮೈಸೂರಿನಲ್ಲಿಯೇ ೭೦ರ ದಶಕದಲ್ಲಿದ್ದು ‘ಹೊಸ ಗನ್ನಡದ ಅರುಣೋದಯ’ವನ್ನು ಕನ್ನಡಿಗರ ಕೈಗೆ ಕೊಟ್ಟು ಕನ್ನಡದ ಆಚಾರ್ಯ ಪೂಜ್ಯ ಕಿಟ್ಟೆಲ್ ಅವರ ಬರಹವನ್ನು ನಖಶಿಖಾಂತ ಪರಿಚಯಿಸಿ ದುಲ್ಲದೆ ಸುಮಾರು ೧೫೦ ವರ್ಷಗಳ ಸಾಹಿತ್ಯವನ್ನು ನಿಖರವಾಗಿ ದಾಖಲೆ ಸಮೇತ ನೀಡಿದವರು.
ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ದಿಂದ ಪ್ರಕಟಗೊಂಡ ಹೊಸ ಗನ್ನಡದ ಅರುಣೋ ದಯ ಅಪೂರ್ವ ಪರಾಮರ್ಶನ ಕೃತಿಯೂ ಆಗಿದೆ. ಈ ಗ್ರಂಥದ ಹಸ್ತಪ್ರತಿಯನ್ನು ನೋಡುವ, ತಿದ್ದೋಲೆ (ಪ್ರೂಫ್ ರೀಡಿಂಗ್) ಮಾಡುವ ಸುವರ್ಣಾವಕಾಶ ನನಗಾಗ ಸಿಕ್ಕಿದುದು ಮರೆಯಲಾಗದ ಘಟನೆ.
ಶ್ರೀನಿವಾಸ ಹಾವನೂರ ಅವರ ಹಸ್ತಪ್ರತಿ ಅತ್ಯಂತ ನೀಟಾಗಿ ಬಿಳಿಯ ಹಾಳೆಯಲ್ಲಿ ಒಂದು ಪೂರ್ಣ ವಿರಾಮ, ಒಂದು ಅಲ್ಪ ವಿರಾಮಗಳೂ ವ್ಯತ್ಯಾಸವಾಗ ದಂತೆ ಬರೆದಿದ್ದ ಶಿಸ್ತು ಆದರ್ಶಮಯ. ಅವರ ಸರಳತೆ, ವಿಚಾರ ದೃಷ್ಟಿಕೋನ, ಬ್ರಿಟಿಷ್ ಇಂಡಿಯಾದಲ್ಲಿದ್ದ ಎಲ್ಲ ಕನ್ನಡ ಕವಿಗಳ, ಕಾದಂಬರಿಕಾರರ, ಮುದ್ರಣ ಶಾಲೆಗಳ, ವಿಶೇಷ ಲೇಖನಗಳ ಸಂಶೋಧನೆ ಕಾರ್ಯ ಇವತ್ತಿಗೂ ಉಲ್ಲೇಖನೀಯವಾಗಿವೆ.
ಆ ಸಂಬಂಧ ಬ್ರಿಟಿಷ್ ಲೈಬ್ರರಿಯಲ್ಲಾಗಲಿ, ಇಂಡಿಯಾ ಆಫೀಸ್ ಲೈಬ್ರರಿಯಲ್ಲಾಗಲಿ ಇರಲಿ ಅದನ್ನು ಕಣ್ಣಾರೆ ನೋಡುವವರೆಗೂ ವಿರಾಮವಿಲ್ಲದ ದಣಿವಿಲ್ಲದ ಕನ್ನಡ ಕಾಯಕ ಅವರದಾಗಿತ್ತು.
ಮೈಸೂರಿನ ಚಂದ್ರಗುಪ್ತ ರಸ್ತೆಯಲ್ಲಿದ್ದಉಷಾ ಸಾಹಿತ್ಯ ಮಾಲೆಯ ಉಷಾ ಪ್ರೆಸ್‌ನಲ್ಲಿ ಮಾಲೀಕ ಆರ್.ಎನ್. ಹಬ್ಬು ಅವರ ಸ್ನೇಹ, ಆತಿಥ್ಯದಲ್ಲಿ ‘ಅರುಣೋದಯ’ ಆಟೊಮ್ಯಾಟಿಕ್ ಸಿಲಿಂಡರ್ ಮುದ್ರಣ ಯಂತ್ರದಲ್ಲಿ ಅಚ್ಚಾಯಿತು.ಆ ಅವಧಿಯಲ್ಲಿ ಒಂದು ತಿಂಗಳ ಶಿಸ್ತುಅಚ್ಚುಕಟ್ಟು ಬರಹ ಮರೆಯಲಾಗದಂಥದದು. ಮೈಸೂರು ವಿವಿ ಪ್ರಸಾರಾಂಗ ಪ್ರಕಟಿಸಿದುದೂ ವಿವಿಗೇ ಒಂದು ಹೆಮ್ಮೆಯ ಸಂಗತಿ ಎನ್ನಬಹುದು.
ಪತ್ರಿಕಾಲೋಕದಲ್ಲಿ ಅನೇಕ ಪತ್ರಿಕೆಗಳ ದಾಖಲೆಯೇ ಬಿಟ್ಟು ಹೋಗಿರುವುದನ್ನು ಗಮನ ಸೆಳೆದ ಹಾವನೂರರು ಈ ಬಗ್ಗೆ ವ್ಯವಸ್ಥಿತವಾದ ಕೆಲಸ ನಡೆಯ ಬೇಕೆಂದು ಮೂರು ವರ್ಷಗಳ ಹಿಂದೆ ಕನ್ನಡ ಪತ್ರಿಕಾ ಅಭಿಸರಣ ಸಂಸ್ಥೆಯನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಕೇಳಿಕೊಂಡುದು ಅತ್ಯಂತ ಶ್ಲಾಘನೀಯ.
ಈ ಸಂಬಂಧ ಅಕ್ಷರಾನುಕ್ರಮಣಿಕೆಯಲ್ಲಿ ಪತ್ರಿಕೋ ದ್ಯಮದ ವಿಚಾರಗಳನ್ನು ತಿಳಿಸುವ ಹೆಬ್ಬೊತ್ತಗೆಯನ್ನು ತಂದುದು ಐತಿಹಾಸಿಕ ವಾದುದಾಗಿದೆ.
ಈ ಕಾರ್ಯವನ್ನು ಇನ್ನೂ ಮುಂದುವರಿಸ ಬೇಕೆಂದು ತಲ್ಲೀನರಾಗಿ ದುಡಿಯುತ್ತಿದ್ದರು. ಇಂಥ ವಿಚಕ್ಷಣ ವಿದ್ವಾಂಸರು ಅರುಣೋದಯವಾಗಿ ‘ಅಸ್ತಂಗತ’ ವಾದುದು ಸಾಹಿತ್ಯ-ಪತ್ರಿಕಾಲೋಕಕ್ಕೆ ಅಕ್ಷರಶಃ ತುಂಬಲಾಗದ ನಷ್ಟ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ