‘ವಿಶ್ವೇಶ್ವರಯ್ಯ’ ಭವನದಲ್ಲಿ ಎಷ್ಟೊಂದು ನೀರು ವ್ಯರ್ಥ !

ವಿಕ ವಿಶೇಷ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೃಹತ್ ಕಟ್ಟಡಗಳಿ ಗೊಂದು ವಿಶಿಷ್ಟ ಸ್ಥಾನ. ಆದರೆ ಇಂಥದ್ದೊಂದು ಗರಿಮೆಗೆ ಸಾಕ್ಷಿಯಾದ ಕಟ್ಟಡವೊಂದರ ನೆಲ ಮಾಳಿಗೆ ನೀರಿನಿಂದ ಶಿಥಿಲವಾಗುತ್ತಿದ್ದರೂ ಜನಪ್ರತಿನಿಧಿಗಳದ್ದು ಮಾತ್ರ ‘ಗಡದ್ದು ನಿದ್ದೆ’ !
ಇದು ಮೈಸೂರಿನ ಹೃದಯ ಭಾಗದ ಕ.ಆರ್.ವೃತ್ತದ ‘ವಿಶ್ವೇಶ್ವರಯ್ಯ ಭವನ’ ಕಟ್ಟಡದ ಸ್ಥಿತಿ. ೧೯೬೪ರಲ್ಲಿ ಕೆ.ಪುಟ್ಟಸ್ವಾಮಿ ಅವರಿಂದ ಉದ್ಘಾಟನೆಗೊಂಡ ಈ ಪಾಲಿಕೆ ಕಟ್ಟಡ ಕೆ.ಆರ್. ವೃತ್ತಕ್ಕೊಂದು ಅಂದ ಹೆಚ್ಚಿಸಿದೆ. ಆದರೆ ಈ ಭವ್ಯ ಕಟ್ಟಡದ ಸಮಸ್ಯೆಯನ್ನು ಇಂದು ಕೇಳುವವರೇ ಇಲ್ಲ.
ಇದು ಮಳೆ ನೀರಲ್ಲ: ಮೂರ‍್ನಾಲ್ಕು ತಿಂಗಳಿಂದ ಇಲ್ಲಿ ನೀರು ಶೇಖರಣೆಯಾಗುತ್ತಲೇ ಇದೆ. ಆದರೆ ಅದು ಮಳೆ ನೀರಲ್ಲ, ಶುದ್ಧ ಜಲ. ಅದನ್ನು ಹೊರದಬ್ಬುವ ಕಾರ‍್ಯವನ್ನು ಇಲ್ಲಿನ ಅಂಗಡಿಗಳ ಮಾಲೀಕರು ಮಾಡು ತ್ತಲೇ ಬಂದಿದ್ದಾರೆ. ನಿತ್ಯ ನೀರು ಶೇಖರಣೆಯಾಗು ವುದರಿಂದ ಕೆಳಭಾಗದಲ್ಲಿ ಕಲ್ಲಿನ ಹಾಸುಗಳಿದ್ದು ‘ಶುದ್ಧ ನೀರು’ ಅಲ್ಲೇ ನಿಂತು ಈಗಾಗಲೇ ಗೋಡೆಗಳೆಲ್ಲಾ ಒದ್ದೆಯಾಗಿದೆ. ಹಲವೆಡೆ ಗಾರೆ ಉದುರುತ್ತಿದೆ. ರಾತ್ರಿಯೆಲ್ಲಾ ‘ಹನಿ ಹನಿಗೂಡಿ’ ಇಲ್ಲಿನ ಹಳ್ಳ ತುಂಬುವುದರಿಂದ ಬೆಳಗ್ಗೆ ಬಂದೊಡನೆ ಮೋಟಾರ್ ಹಾಕಿ ನೀರನ್ನು ಹೊರದಬ್ಬುವುದೇ ಇಲ್ಲಿ ಇವರಿಗೆ ಮೊದಲ ಕೆಲಸ. ದಿನಕ್ಕೆ ಮೂರ‍್ನಾಲ್ಕು ಬಾರಿ ಮೋಟಾರ್‌ನಿಂದ ನೀರು ಹೊರ ಹಾಕಬೇಕಾದ ಸ್ಥಿತಿ. ಹೊರ ಹಾಕುತ್ತಿದ್ದರೂ ಮತ್ತೆ ಮತ್ತೆ ಇಲ್ಲಿ ನೀರು ತುಂಬುತ್ತಿದೆ.
ಫುಟ್‌ಪಾತ್, ರಸ್ತೆಗೆ ನೀರು: ಕಟ್ಟಡದ ಒಳಗೆ ಶೇಖರಣೆಯಾಗುವ ನೀರನ್ನು ಬೇರೆ ‘ದಾರಿ ಕಾಣದೆ’ ಮೋಟಾರ್ ಮೂಲಕ ಹೊರ ಹಾಕಲಾಗುತ್ತಿದೆ. ಅದು ಸದಾ ಜನಸಂದಣಿಯಿಂದ ಕೂಡಿರುವ ಕೆ.ಆರ್. ವೃತ್ತದ ಮುಂದಿನ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಟೌನ್‌ಹಾಲ್ ಕಡೆಗೆ ಹರಿಯುತ್ತಿದೆ. ದಿನಕ್ಕೆ ೫ರಿಂದ  ೬ ಸಾವಿರ ಲೀಟರ್‌ನಷ್ಟು ಹರಿದು ಹೋಗುತ್ತಿದೆ. ಕಟ್ಟಡದ ಒಳಗಿಳಿದರೆ ಮಾತ್ರ ಎದುರಾಗುವ ಈ ಸಮಸ್ಯೆ ಹೊರಗಿನಿಂದ ಕಾಣದಿದ್ದರಿಂದ ಯಾರೂ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಂತಿಲ್ಲ !.
ಚಿದಂಬರ ರಹಸ್ಯ !: ನೆಲದಿಂದ ನೀರು ಉಕ್ಕುತ್ತಿ ದ್ದೆಯೋ, ಗೋಡೆಗಳಿಂದ ಜಿನುಗುತ್ತಿದೆಯೋ, ಪೈಪ್ ಏನಾದರೂ ಒಡೆದು ಇತ್ತ ಕಡೆ ಹರಿದು ಬರುತ್ತಿ ದೆಯೋ ಎಂಬುದೇ ಇಲ್ಲಿ ತಿಳಿಯುತ್ತಿಲ್ಲ. ಇಲ್ಲೊಂದು ಕೊಳವಿತ್ತು. ಹಾಗಾಗಿ ‘ಜಲ’ ಉಕ್ಕುತ್ತಿದ್ದರೂ ಆಶ್ಚರ್ಯ ವಿಲ್ಲ ಎನ್ನುತ್ತಾರೆ ಹಿರಿಯರು.
ಬಂದರು - ಹೋದರು: ಮೇಯರ್, ಉಪ ಮೇಯರ್, ಆಯುಕ್ತರು, ಜಿಲ್ಲಾಧಿಕಾರಿ ಇಲ್ಲಿಗೆ ಬಂದು ಸಮಸ್ಯೆಯನ್ನು ಕಣ್ಣಾರೆ ‘ಕಂಡು’ ಹೋಗಿದ್ದಾರೆ. ಆದರೆ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
ದಸರಾ ಹಬ್ಬ ಹತ್ತಿರ ಬರುತ್ತಿದೆ. ‘ಮೈಸೂರಿನ ಸೌಂದರ್ಯ‘ ವನ್ನು ಕಣ್ಣಿಗೆ ತುಂಬಿಕೊಳ್ಳಲು ದೇಶ- ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ನಗರದ ಮಧ್ಯಭಾಗದಲ್ಲಿ ರುವ ಕೆ.ಆರ್.ವೃತ್ತದಲ್ಲೇ ಇಂಥದ್ದೊಂದು ಸಮಸ್ಯೆ ಕಂಡು ಜನ ಬೇಸರಿಸಿಕೊಂಡರೆ ಆಶ್ಚರ್ಯವಿಲ್ಲ. ಹಾಗಾಗಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ