ಬೈರಾಪುರ ಪಂಚಾಯಿತಿಯಲ್ಲಿ ಕೆಲಸ ಮಾಡದವರಿಗೂ ಕೂಲಿ

ಆರ್.ಕೃಷ್ಣ ಮೈಸೂರು
ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕರ್ಮಕಾಂಡ ಇನ್ನೂ ನಿಂತಿಲ್ಲ.
ಯೋಜನೆಯಲ್ಲಿ ಅವ್ಯವಹಾರ ಸಾಬೀತಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂಬ ಸರಕಾರದ ಎಚ್ಚರಿಕೆಗೂ ಯಾರೂ ಮಣಿದಿಲ್ಲ. ಮಾಡದ ಕೆಲಸಕ್ಕೆ ಬಿಲ್ ಪಡೆಯುವುದು ಒಂದೆಡೆ ಯಾದರೆ, ನಕಲಿ ಕಾರ್ಮಿಕರನ್ನು ಸೃಷ್ಟಿಸಿ ಸಹಿ ಹಾಕಿಕೊಂಡು ಹಣವನ್ನು ಜೇಬಿಗಿಳಿಸುವ ದಂಧೆ ನಡೆದೇ ಇದೆ.
ಈಗ ತಿ.ನರಸೀಪುರ ತಾಲೂಕು ಬೈರಾಪುರ ಗ್ರಾಮ ಪಂಚಾಯಿತಿಯ ಸರದಿ. ಯೋಜನೆಯಡಿ ನಡೆದ ಅವ್ಯವಹಾರ ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಸಾಬೀತಾಗಿದೆ. ಕಾಮಗಾರಿ ನಡೆದಿದೆ ಎಂದು ಕಾರ‍್ಯ ನಿರ್ವಹಣ ಏಜೆನ್ಸಿಯವರು ನೀಡಿದ ಮಸ್ಟರ್ ರೋಲ್‌ನ ಹಾಳೆಯಲ್ಲಿ ಒಂದೇ ಹೋಲಿಕೆ ಇರುವ ಹಲವು ಹೆಬ್ಬೆಟ್ಟಿನ ಗುರುತು ಹಾಗೂ ಸಹಿಗಳಿವೆ. ಜತೆಗೆ ಒಂದು ಹಾಳೆಯಲ್ಲಿ ಹೆಬ್ಬೆಟ್ಟಿನ ಗುರುತಿದ್ದರೆ, ಮತ್ತೊಂದು ಹಾಳೆಯಲ್ಲಿ ಅವರದ್ದೇ ಸಹಿಗಳಿವೆ.
ಇದರಲ್ಲಿ ‘ಗೆಜೆಟ್ ಅಧಿಕಾರಿ’ಗೆ ಕಡಿಮೆ ಇಲ್ಲದಂತೆ ಉದ್ಯೋಗ ಯೋಜನೆಯಡಿ ಕೂಲಿಗೆ ಬಂದವ ‘ಕೂಲಿ ಕಾರ್ಮಿಕ’ನ ಹೆಸರಿನಲ್ಲಿ ಆಂಗ್ಲ ಭಾಷೆಯಲ್ಲಿ ‘ಚೆಂದ’ವಾಗಿ ಸಹಿ ಮಾಡಿದ್ದಾರೆ. (ಅಕುಶಲ ಕೂಲಿ ಪಾವತಿಗಾಗಿನ ಮಸ್ಟರ್‌ರೋಲ್, ಎಂ. ಆರ್. ಸಂಖ್ಯೆ ೦೫೬೧೪, ಕ್ರಮ ಸಂಖ್ಯೆ ೫೧, ನೊಂದಣಿ ಸಂಖ್ಯೆ ೫೧೯). ಇಂಥ ನಿದರ್ಶನಗಳು ಒಂದೇ ಗ್ರಾಮ ಪಂಚಾಯಿತಿಯಲ್ಲಿ ಬಹಳಷ್ಟಿವೆ.
ಇನ್ನೂ ಅಚ್ಚರಿಯೆಂದರೆ ಶಾಲೆ-ಕಾಲೇಜಿನಲ್ಲಿ ಕಲಿಯುತ್ತಿರುವ ಜನಪ್ರತಿನಿಧಿಗಳ ಮಕ್ಕಳು, ಯೋಜನೆಯಡಿ ೧೦ ದಿನ ‘ಕೂಲಿ ಕೆಲಸ’ ಮಾಡಿ ಹಣ ಪಡೆದಿದ್ದಾರೆ. ಇದಕ್ಕೆ ಗ್ರಾಮ ಪಂಚಾಯಿತಿ ಕಾರ‍್ಯದರ್ಶಿ ಆರ್.ಮಹಾದೇವ (ಈಗ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ) ಲೆಕ್ಕ ಪರಿಶೋಧನೆ ಮಾಡಿ ಸಹಿ ಮಾಡಿದ್ದು, ತಾಲೂಕು ಪಂಚಾಯಿತಿ ಕಾರ‍್ಯ ನಿರ್ವಾಹಕ ಅಧಿಕಾರಿ ಅನುಮೋದಿಸಿದ್ದಾರೆ.
ಒಂದು ದಿನವೂ ದೊರೆಯದ ಕೂಲಿ: ಉದ್ಯೋಗ ಖಾತರಿ ಯೋಜನೆಯಡಿ ವರ್ಷದಲ್ಲಿ ಕಡ್ಡಾಯವಾಗಿ ನೂರು ದಿನದ ಉದ್ಯೋಗ ನೀಡಬೇಕು ಎಂಬ ನಿಯಮ ಇದ್ದರೂ ಪಾಲಿಸಿಲ್ಲ. ತಿ.ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡ ಬೈರಾಪುರ ಗ್ರಾಮದಲ್ಲಿ ಸುಮಾರು ೩೫೦ ಕುಟುಂಬಗಳಿದ್ದು, ಬಹುತೇಕ ಕುಟುಂಬಗಳಿಗೆ ಕೂಲಿಯೇ ಆಧಾರ. ಹೀಗಾಗಿ ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಮಂದಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಎರಡು ವರ್ಷ ಕಳೆಯುತ್ತಿದ್ದರೂ ಬಹುತೇಕರಿಗೆ ಒಂದು ದಿನವೂ ಕೂಲಿ ದೊರೆತಿಲ್ಲ. ಆದರೆ ಮತ್ತೊಂದು ಚಮತ್ಕಾರ ಎಂದರೆ ಒಂದು ದಿನವೂ ಕೂಲಿ ಮಾಡದವರ ಹೆಸರಿನಲ್ಲಿ ‘ಕೆಲಸ ಮಾಡಿದ್ದಾರೆ’ ಎಂದು  ನೀಡುವ  ‘ಮಸ್ಟರ್ ರೋಲ್’ನಲ್ಲಿ ನಮೂದಿಸಲಾಗಿದೆ. ಕೆಲಸ ನೀಡಿ ಎಂದು ಕಾರ್ಡ್ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಗೆ ಹೋದರೆ, ನೀವಾಗಲೇ ಕೆಲಸ ಮಾಡಿದ್ದೀರಿ. ಬೇರೆಯವರಿಗೆ ಅವಕಾಶ ನೀಡಬೇಕಿರುವುದರಿಂದ ಮತ್ತೆ ಕೆಲಸ ನೀಡಲಾಗದು ಎನ್ನುವ ಉತ್ತರ ಗ್ರಾಮ ಪಂಚಾಯಿತಿ ಕಾರ‍್ಯದರ್ಶಿಯದ್ದು.
ಕೆಲ ಗುತ್ತಿಗೆದಾರರು ತಮಗೆ ಪರಿಚಯಸ್ಥ, ಸಂಬಂಧಿಕರಿಗೆ ಪುಕ್ಕಟ್ಟೆ  ನೂರು ರೂ. ನೀಡಿ ಒಂದು ವಾರ ಕೆಲಸ ಮಾಡಿರುವುದಾಗಿ ಸೃಷ್ಟಿಸಿಕೊಂಡ ದಾಖಲೆಗೆ ಸಹಿ ಪಡೆದುಕೊಳ್ಳುವುದೂ ಚಾಲ್ತಿ ಯಲ್ಲಿದೆ. ನೂರು ರೂ. ಆಸೆಗೆ ಸಹಿ ಮಾಡಿದವರು ಇದ್ಯಾವುದನ್ನೂ ಗಮನಿಸದಿರುವುದರಿಂದ ಅವ್ಯವಹಾರ ನಿಂತಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ