ಸರಕಾರಿ ಶಾಲೆಗಳಿಗೆ ಬೇಕು ‘ಸಮುದಾಯ’ ಮೇಷ್ಟ್ರು !

ಚೀ. ಜ. ರಾಜೀವ ಮೈಸೂರು
ನಿಮ್ಮೂರಿನ ಇಲ್ಲವೇ  ನಿಮ್ಮ ಭಾಗದ  ಸರಕಾರಿ ಶಾಲೆಯಲ್ಲಿ  ಯಾವುದಾದರೊಂದು ‘ಪರಿಣತ’ ವಿಷಯವನ್ನು ಬೋಧಿಸಲು ನೀವು ಆಸಕ್ತರಾಗಿರುವಿರಾ ?, ನೈಜ ಕಾಳಜಿ ಮತ್ತು ಸಾಮರ್ಥ್ಯ  ಇದ್ದರೆ,   ನಿಮ್ಮ ಬಯಕೆ ಈ ವರ್ಷದಿಂದಲೇ ಸಾಕಾರಗೊಳ್ಳಲಿದೆ.  ಸಾರ್ವಜನಿಕ ಶಿಕ್ಷಣ  ಇಲಾಖೆಯೇ ಇಂಥದ್ದೊಂದು  ಬಯಕೆಗೆ ವೇದಿಕೆ ಕಲ್ಪಿಸಿಕೊಡುತ್ತಿದೆ.
ಸಮುದಾಯದ ಸಂಪನ್ಮೂಲ ವ್ಯಕ್ತಿಗಳ ಸೇವೆಯನ್ನು ಶಾಲಾ ಮಕ್ಕಳ ಪರಿಪೂರ್ಣ ವಿಕಸನಕ್ಕೆ ಬಳಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ೨೦೧೦-೧೧ನೇ ಸಾಲಿನಿಂದ ‘ಸಮುದಾಯ ದೀಪ ’ ಯೋಜನೆ ಜಾರಿಗೊಳಿಸುತ್ತಿದೆ.
‘ಮೈಸೂರು ಜಿಲ್ಲೆಯಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆಸಕ್ತ ಸಂಪನ್ಮೂಲ ವ್ಯಕ್ತಿಗಳು ಸ್ಥಳೀಯ ಮುಖ್ಯೋಪಾಧ್ಯಾಯರ ಮೂಲಕ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಬಹುದು’ ಎಂದು ಯೋಜನೆ ಜಾರಿಯ ಉಸ್ತುವಾರಿ ಹೊತ್ತಿರುವ  ಜಿಲ್ಲಾ  ಡಯಟ್ ಪ್ರಾಂಶುಪಾಲ ಕೆಂಪರಾಜೇಗೌಡ  ವಿಜಯ ಕರ್ನಾಟಕಕ್ಕೆ ತಿಳಿಸಿದರು.
ಏನಿದು ಯೋಜನೆ: ಮಕ್ಕಳಿಗೆ  ಪಠ್ಯ ಬೋಧಿಸುವ ಜತೆಗೆ  ಪಠ್ಯೇತರ ವಿಷಯಗಳನ್ನು ಬೋಧಿಸಬೇಕೆಂಬುದು ಅನೇಕ  ಶಿಕ್ಷಣ ತಜ್ಞರ ಅಭಿಮತ. ಇದಕ್ಕಾಗಿ  ಆಯಾ ಕ್ಷೇತ್ರದಲ್ಲಿ ಪರಿಣತಿ ಪಡೆದವರೇ ಇದ್ದರೆ ಹೆಚ್ಚು ಸೂಕ್ತ ಎಂಬುದು  ಇಲಾಖೆಯ ಚಿಂತನೆ.  ಸಾಮಾಜಿಕ ಮೌಲ್ಯ, ರೀತಿ-ನೀತಿ, ನಾಯಕತ್ವ ಗುಣ, ಪ್ರಾಮಾಣಿಕತೆ. ಸ್ಪರ್ಧಾ ಮನೋಭಾವ, ರಚನಾತ್ಮಕ ಕೌಶಲ್ಯ, ಬಿಡುವಿನ ವೇಳೆಯ ಸದ್ಬಳಕೆ, ದೈಹಿಕ ಸದೃಢತೆ, ಸೌಂದರ್ಯ ಪ್ರಜ್ಞೆ, ಸಾಂಸ್ಕೃತಿಕ ಮೌಲ್ಯಗಳನ್ನು ಸಹಪಠ್ಯ ಚಟುವಟಿಕೆಗಳ ಮೂಲಕ ಬೋಧಿಸಿದರೆ - ಅದು ಸಮಗ್ರ ಶಿಕ್ಷಣವಾಗಬಲ್ಲದು.  ಈ ಎಲ್ಲ ವಿಷಯಗಳನ್ನು ಇಲಾಖೆಯ ಶಿಕ್ಷಕರು ಬೋಧಿಸಲು ಶಕ್ತರಾದರೂ,  ಪರಿಣತರ ಮೂಲಕ ಹೇಳಿಸಿದರೆ ಹೆಚ್ಚು ಅರ್ಥಪೂರ್ಣ. ಹಾಗಾಗಿ ಸಮುದಾಯದ ವ್ಯಕ್ತಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
‘ಸ್ಥಳೀಯ ಸಮಸ್ಯೆಗಳು, ಅಲ್ಲಿನ ನಂಬಿಕೆ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯಗಳ ಸ್ಪಷ್ಟವಾದ ಪರಿಕಲ್ಪನೆ ಮೂಡಿಸುವ ಸಲುವಾಗಿಯೂ ಯೋಜನೆಯನ್ನು ದುಡಿಸಿಕೊಳ್ಳಲಾಗುವುದು’  ಎಂದು  ಕೆಂಪರಾಜೇಗೌಡ ತಿಳಿಸಿದರು.
ಯಾವ ವಿಷಯ ಬೋಧಿಸಬಹುದು
ಜಿಲ್ಲೆಯ ಎಲ್ಲ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲೂ ಈ ಯೋಜನೆ ಜಾರಿಗೆ ಬರಲಿದೆ. ೧೮ ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾವಂತ ಯುವಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಬಹುದು. ಪ್ರತಿ  ತರಗತಿಗೆ ವಾರದಲ್ಲಿ  ೨ ಅವಧಿಯನ್ನು ನೀಡಲಾಗುವುದು. ಸಮುದಾಯದ ಸಂಪನ್ಮೂಲ ವ್ಯಕ್ತಿ ಆಯ್ದ ಶಾಲೆಯಲ್ಲಿ  ಶೈಕ್ಷಣಿಕ  ವರ್ಷದ ಕನಿಷ್ಠ  ಒಂದು ಸೆಮಿಸ್ಟರ್ ಅವಧಿಗೆ ಬೋಧಿಸಬೇಕು. ಆಯ್ಕೆಯಾದವರೊಂದಿಗೆ ಬಿಇಒ ಒಡಂಬಡಿಕೆ ಮಾಡಿಕೊಳ್ಳಬೇಕು ಎಂಬುದು ಇಲಾಖೆ ರೂಪಿಸಿರುವ ನೀತಿ.
ಕಲೆ ಹಾಗೂ ಕೌಶಲ, ವ್ಯಕ್ತಿತ್ವ ವಿಕಸನ, ಜನಪದ ಸೇರಿದಂತೆ ಎಲ್ಲ ರೀತಿಯ  ಸಂಗೀತ ಮತ್ತು ನಾಟಕ,  ಇಂಗ್ಲಿಷ್ ಸಂವಹನ ಕಲೆ, ಕಂಪ್ಯೂಟರ್ ಜ್ಞಾನ, ಕರಾಟೆ ಹಾಗೂ ಇತರೆ ಪ್ರಯೋಗ, ಯೋಗ ಮತ್ತು ಧ್ಯಾನ, ಕ್ರೀಡಾ ತರಬೇತಿ, ಭಾಷಣ, ಕಥೆ ಹೇಳುವುದು, ಜನಪದ ಗೀತೆ- ನೃತ್ಯ ವಿಷಯಗಳನ್ನು ಸಂಪನ್ಮೂಲ ವಿದ್ಯಾರ್ಥಿಗಳು ಬೋಧಿಸಬಹುದು.
ಈ ಯೋಜನೆಯಲ್ಲಿ ಭಾಗವಹಿಸುವ ಸಂಪನ್ಮೂಲ ವ್ಯಕ್ತಿಗಳಿಗೆ  ಇಲಾಖೆ ಯಾವುದೇ ರೀತಿಯ ಭತ್ಯೆ ಇಲ್ಲವೇ ಆರ್ಥಿಕ ಸೌಲಭ್ಯ ನೀಡುವುದಿಲ್ಲ. ಬದಲಿಗೆ ಅಭ್ಯರ್ಥಿಯ ತೃಪ್ತಿಕರ ಸೇವೆಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಡಯಟ್ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪರಿಶೋಧನಾ ಸಮಿತಿ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು. ಡಯಟ್ ಉಪ ಪ್ರಾಂಶುಪಾಲರು, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ತಾಲೂಕು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ