ಕನ್ನಡ ಚಿತ್ರರಂಗದ ‘ಹಾಸ್ಯರತ್ನ’ ಮೈಸೂರು ರತ್ನಾಕರ್

ಜೆ.ಶಿವಣ್ಣ  ಮೈಸೂರು
‘ಅಯ್ಯೋ ನಾನು ಬದುಕೋದಿಲ್ಲ ಕಣಪ್ಪ, ಸುಮ್ನೇ ಏಕೆ, ಮತ್ತೊಂದು ಆಸ್ಪತ್ರೆಗೆ ಕರ‍್ಕೊಂಡ್ ಹೋಗಿ, ದುಡ್ಡು  ಕಳೆದುಕೊಳ್ಳುತ್ತೀಯಾ....?’  ಸಾಯುವ ಕಡೆ ಕ್ಷಣದಲ್ಲಿ ತನ್ನೊಂದಿಗಿದ್ದ ಕಡೆ ಮಗ ವಿಜಯಕುಮಾರ್‌ಗೆ ರತ್ನಾಕರ್ ಬುದ್ಧಿಮಾತು ಹೇಳಿದರಂತೆ. ಬಹುಶಃ ರತ್ನಾಕರ್ ಅವರ ಕೊನೆಯ ಮಾತು ಇದೇ ಅನ್ಸುತ್ತೆ.. ಜೀವನದುದ್ದಕ್ಕೂ ಆರ್ಥಿಕ ಮುಗ್ಗಟ್ಟು  ಎದುರಿಸಿದ  ರತ್ನಾಕರ್  ಸಂಧ್ಯಾಕಾಲದಲ್ಲೂ ಆಸ್ಪತ್ರೆ ಚಿಕಿತ್ಸೆಗೆ ವೆಚ್ಚ ಭರಿಸಲು  ಹೆಣಗಾಡಬೇಕಾಯಿತು. ಬರಿಗೈ ದಾಸರಾಗಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು.
ಬೆಳ್ಳಿಲೋಕದ ಜನಪ್ರಿಯತೆ ಹೊಟ್ಟೆ ತುಂಬಿಸುವುದಿಲ್ಲ ಎಂಬುದು ಅನುಭವಸ್ಥರ ಮಾತು. ನೂರಾರು ಚಲನಚಿತ್ರಗಳಲ್ಲಿ ನಟಿಸಿ, ತಮ್ಮ ವಿಶಿಷ್ಟ ದನಿಯ ಮೂಲಕ  ಜನಪ್ರಿಯತೆ ಸಂಪಾದಿಸಿದ್ದ  ರತ್ನಾಕರ್ ಕೊನೆ ದಿನಗಳಲ್ಲಿ ದೀನಸ್ಥಿತಿ ತಲುಪಿದ್ದರು. ಜೀವ ತೊಯ್ದಾಡುತ್ತಿದ್ದರೂ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂದು ಮಗನನ್ನು ಕರೆದು ‘ಆಸ್ಪತ್ರೆಗೆ ಬೇಡ. ನನ್ನ ಆಯುಷ್ಯ ಮುಗಿಯಿತು. ದುಡ್ಡು ವ್ಯರ್ಥ ಮಾಡಬೇಡ. ಮನೆಗೆ ಕರೆದೊಯ್ಯಿ’ ಎಂದು ಹಠಹಿಡಿದಿತ್ತು ಆ ಹಿರಿಜೀವ.
ಸಂಕಷ್ಟಗಳಿಂದಲೇ ಮೇಲೆ ಬಂದು  ಒಂದಷ್ಟು ಕಾಲ ತಕ್ಕಮಟ್ಟಿಗೆ ಎನ್ನುವಂತಿದ್ದರೂ ಕೊನೆ ದಿನಗಳಲ್ಲೂ ಸಂಕಷ್ಟ ಬೆನ್ನು ಬಿಡಲಿಲ್ಲ. ತಮ್ಮ ೭೭-೭೮ ರ ವಯಸ್ಸಿನಲ್ಲೂ ‘ಯಾರಾದರೂ ಕರೆದು ಚಿತ್ರಗಳಲ್ಲಿ ಅವಕಾಶ ನೀಡಬಾರದೇ’ ಎಂದು ಹಂಬಲಿಸುತ್ತಿದ್ದರು. ಆ ಹಂಬಲದಲ್ಲಿ ತುತ್ತಿನ ಚೀಲ ತುಂಬಬೇಕಾದ ದುಗುಡತೆ ಇತ್ತು. ಅವಕಾಶ ಇಲ್ಲದಿರು ವುದಕ್ಕೆ ಕೊರಗುತ್ತಿದ್ದರು. ಯಾರಾದರೂ ಸನ್ಮಾನಕ್ಕೆ ಆಹ್ವಾನಿಸಿದರೆ, ‘ನನಗೆ ಸನ್ಮಾನ ಬೇಡ. ಕೆಲಸ (ನಟನೆ) ಕೊಡಿ’ ಎನ್ನುತ್ತಿದ್ದರು.
ವಿಶೇಷ ಎಂದರೆ ಕಡುಕಷ್ಟದ ಮಧ್ಯೆಯೂ ತಮ್ಮನ್ನು ನಟನಾಗಿ ರೂಪಿಸಿದ ಸೋರಟ್ ಅಶ್ವತ್ಥ್ ಅವರನ್ನು ಸ್ಮರಿಸಿ ಪ್ರತಿ ವರ್ಷ ಹಿರಿಯ ಕಲಾವಿದರನ್ನು ಕರೆತಂದು ಸನ್ಮಾನಿಸುತ್ತಿದ್ದರು. ೧೭ ವರ್ಷಗಳ ಹಿಂದೆ ತಮ್ಮ ಪತ್ನಿಯನ್ನು ಕಳೆದುಕೊಂಡ ರತ್ನಾಕರ್ ಆ ಬಳಿಕ ಆರೋಗ್ಯ ಕೈಕೊಡುವವರೆಗೂ ಅವರೇ ಅಡುಗೆ ಮಾಡುತ್ತಿದ್ದರು.
ಸನ್ಮಾನಿಸಿದರು, ಮರೆತರು: ಮೂರು ವರ್ಷಗಳ ಹಿಂದೆ ದಸರಾ ಚಲನಚಿತ್ರೋತ್ಸವದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಅವರನ್ನು ಕಾರಿನಲ್ಲಿ ಕರೆತಂದ ಆಯೋಜಕರು ಶಾಲುಹೊದಿಸಿ, ಸನ್ಮಾನಿಸಿ ಬಳಿಕ ಮರೆತರು. ಅವರೇ ಮನೆಗೆ ಕರೆದೊಯ್ಯುವರೆಂದು ಜೇಬಿನಲ್ಲಿ ಹಣ ಇಟ್ಟುಕೊಳ್ಳದೇ ಬಂದಿದ್ದರು. ಅವರ  ಈ ಸ್ಥಿತಿಯನ್ನು ಕಂಡ ಪತ್ರಕರ್ತರೊಬ್ಬರು ತಮ್ಮ ದ್ವಿಚಕ್ರವಾಹನದಲ್ಲಿ ಅವರನ್ನು ಮನೆ ಮುಟ್ಟಿಸಿದರು. ಈ ಹೊತ್ತಿನಲ್ಲಿ ರತ್ನಾಕರ್-‘ಈ ಶಾಲು, ಹಾರ ತುರಾಯಿ ನೀಡಿದರೆ ಏನು ಪ್ರಯೋಜನ’ ಎಂದು ತಮ್ಮ ಒಳಬೇಗುದಿ ತೋಡಿಕೊಂಡಿದ್ದರು. 
ಕ್ಯಾಸೆಟ್ ಬಯಕೆ: ವಿಶಿಷ್ಟ ದನಿಯ ಏರಿಳಿತದ ಮೂಲಕವೇ ಜನಮಾನಸದಲ್ಲಿ ಚಿರಪರಿಚಿತರಾಗಿದ್ದ ರತ್ನಾಕರ್ ಕುಳ್ಳಗಿದ್ದರೂ ಜೊಳ್ಳಲ್ಲ. ರಂಗಭೂಮಿ, ಸಿನಿಮಾದಲ್ಲಿ ನಟನೆ, ಸಹನಿರ್ದೇಶನ, ನಿರ್ದೇಶನ, ಗಾಯನ...ಎಲ್ಲಾ ಕ್ಷೇತ್ರಗಳಲ್ಲೂ ದುಡಿದಿದ್ದರು. ಹಬ್ಬ ಹರಿದಿನಗಳು ಕುರಿತಾದ ಹಾಡುಗಳ ಕ್ಯಾಸೆಟ್ ಹೊರತಂದಿದ್ದರು. ಕೊನೆ ದಿನಗಳಲ್ಲಿ ಅಂಬೇಡ್ಕರ್ ಅವರ ಕುರಿತಂತೆ ಗೀತೆ ರಚಿಸಿ ಕ್ಯಾಸೆಟ್ ಮಾಡುವ ಹೆಬ್ಬಯಕೆ ಇತ್ತು. ಆದರೆ ಕೊನೆಯಾಸೆ ಈಡೇರಲೇ ಇಲ್ಲ.
ರಾಮಾನುಜ ರಸ್ತೆಯಲ್ಲಿ ಚಿತ್ರಮಂದಿ: ರಾಮಾನುಜ ರಸ್ತೆ ಚಿತ್ರರಂಗದ ಅನೇಕ ದಿಗ್ಗಜರ ನೆಲೆವೀಡಾಗಿತ್ತು. ರತ್ನಾಕರ್‌ರಲ್ಲದೇ, ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಸಾಕಿ ಸಲುಹಿ ನಟನಾಗಿ ರೂಪಿಸಿದ ಸೋರಟ್ ಅಶ್ವತ್ಥ್ ೧೪ ನೇ ಕ್ರಾಸ್‌ನಲ್ಲಿ ವಾಸವಿದ್ದರು. ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿ, ಎಚ್.ಎಲ್.ಎನ್.ಸಿಂಹ, ಎಂ.ಎನ್.ಆರಾಧ್ಯ, ನಟ ಚೇತನ್‌ರಾಮರಾವ್, ಪದ್ಮನಾಭ್, ರೂಪರಾಜ್, ಫೈಟರ್‌ಶೆಟ್ಟಿ ಮೊದಲಾದವರು ಈ ಭಾಗದಲ್ಲಿ ವಾಸವಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ