ಬೇಕಿತ್ತಾ ಈ ಎರಡು ಕಾರ್ಯಕ್ರಮಗಳು ?

ಚೀ. ಜ. ರಾಜೀವ ಮೈಸೂರು
ದಸರಾ ಆಚರಣೆ ಉಸ್ತುವಾರಿ ಹೊತ್ತ ವೈದ್ಯ ಶಿಕ್ಷಣ ಸಚಿವ ಎಸ್. ಎ. ರಾಮದಾಸ್ ಅವರ ಕನಸಿನ ‘ಮನೆ ಮನೆ ದಸರಾ’ ಹಾಗೂ  ‘ಶಾಲೆಯಲ್ಲೂ ದಸರಾ’ ಕುರಿತು ಸಾರ್ವಜನಿಕ ವಾಗಿ ಎದ್ದಿರುವ  ಪ್ರಶ್ನೆ ಮೇಲಿನದು. ಸಚಿವರಾಗಿ ಹೊಸ ಹುರುಪಿನಲ್ಲಿ ಇವುಗಳನ್ನು ಘೋಷಿಸಿದರು. ಆದರೆ ಅದು ರಂಗೋಲಿ ಸ್ಪರ್ಧೆ ಹಾಗೂ ದಸರಾ ಸ್ಪರ್ಧೆಯೇ ಈ ಕಾರ‍್ಯಕ್ರಮಗಳ ತಿರುಳು ಎಂಬುದು ತಿಳಿಯುತ್ತಿದ್ದಂತೆಯೇ ಇದು ಅಗತ್ಯವಿರಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.
ಬೊಂಬೆ ಪ್ರದರ್ಶನ ಓಕೆ, ರಂಗೋಲಿ ಏಕೆ: ನಗರದ ಎಲ್ಲ ವಾರ್ಡ್‌ಗಳ ಜನತೆ ಹಬ್ಬದ ಸಡಗರ- ಸಂಭ್ರಮದಲ್ಲಿ ಭಾಗವಹಿಸಬೇಕು ಎಂಬುದು ಸಚಿವರ ಕಾಳಜಿ. ಆದರೆ, ಪ್ರತಿ ಬಾರಿಯೂ ನಗರದ ಎಲ್ಲರೂ   ಭಾಗವಹಿಸಿ ಸಂಭ್ರಮಿಸುತ್ತಿದ್ದಾರೆ. ದಸರಾ ಬಹಳ ವರ್ಷಗಳಿಂದ ಮೈಸೂರಿನ ಜನರಿಗೆ ಊರೊಟ್ಟಿನ ಹಬ್ಬ. ಸಹಜವಾಗಿ ಹಬ್ಬಕ್ಕೆ ನೆಂಟರಿಷ್ಟರನ್ನು ಕರೆಸುತ್ತಾರೆ- ಸತ್ಕರಿಸುತ್ತಾರೆ. ವಸ್ತು ಸ್ಥಿತಿ ಹೀಗಿದ್ದರಿಂದಲೇ, ಈ ಹೊಸ ‘ಮನೆ ಮನೆ ದಸರಾ’ ಎಂದ ತಕ್ಷಣ, ಏನಿದು ಆಚರಣೆ ಎಂದೇ ಅಚ್ಚರಿಗೆ ಬಿದ್ದರು !
‘ನಾನು ಏನೋ ವಿಶಿಷ್ಟವಾಗಿರಬಹುದೆಂದಿದ್ದೆ. ಆದರೆ, ಪ್ರತಿ ಮನೆ ಮುಂದೆ ರಂಗೋಲಿ ಬಿಡಿಸೋದು, ಗೊಂಬೆ ಕೂರಿಸೋದು ಎಂದು ಕೇಳಿ ನಿರಾಶೆಗೊಂಡೆ. ಈ ಎರಡನ್ನೂ ನಾವು ಮೊದಲಿಂದಲೂ ಮಾಡುತ್ತಿದ್ದೇವೆ. ಹೊಸತೇನು?’ ಎನ್ನುತ್ತಾರೆ ಕೃಷ್ಣಮೂರ್ತಿ ಪುರಂನ ಗೃಹಿಣಿ ಸರೋಜಮ್ಮ.
‘ಮನೆ ಮುಂದೆ ರಂಗೋಲಿ ಬಿಡಿಸೋದು ಸರಕಾರಿ ನಿರ್ದೇಶಿತ ಆಚರಣೆಯಲ್ಲ. ಸರಕಾರ ಹೇಳಿದರೂ, ಹೇಳದಿದ್ದರೂ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ