ನನೆಗುದಿಯಲ್ಲಿ ಮ.ಬೆಟ್ಟಕ್ಕೆ ಕಾವೇರಿ ನೀರು ಯೋಜನೆ

ವಿಕ ಸುದ್ದಿಲೋಕ ಚಾಮರಾಜನಗರ
ಮಲೈ ಮಹಾದೇಶ್ವರಬೆಟ್ಟಕ್ಕೆ ಕಾವೇರಿ ಕುಡಿಯುವ ನೀರು ಕಲ್ಪಿಸುವ ಯೋಜನೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನು   ಅಧಿಕಾರಿಗಳು ವಿನಾಕಾರಣ ಮುಂದೂ ಡುತ್ತಿದ್ದಾರೆ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರ            ಭದ್ರಸ್ವಾಮಿ ಆಪಾದಿಸಿದ್ದಾರೆ.
ಮಾದಪ್ಪನ ಸನ್ನಿಧಿಯಲ್ಲಿ ಕುಡಿಯುವ  ನೀರಿಗೆ ಬರ ಬಂದಿದೆ. ಇಂಥ ಸ್ಥಿತಿಯಲ್ಲಿ ತುರ್ತಾಗಿ ಕಾವೇರಿ ನೀರು ಪೂರೈಸುವ ಕೆಲಸವಾಗಬೇಕು. ಆದರೆ, ಅಧಿಕಾರಿಗಳಿಗೆ ಈ ಬಗ್ಗೆ ಕಾಳಜಿ ಇಲ್ಲ. ಕಾಮಗಾರಿ ನಡೆಸಲು ಸರಕಾರ ಹಾಗೂ ಕೇಂದ್ರ ಪರಿಸರ ಇಲಾಖೆಯಿಂದಲೂ ಅನುಮತಿ ದೊರೆತ್ತಿದ್ದರೂ ಟೆಂಡರ್ ಪ್ರಕ್ರಿಯೆ ಮುಂದೂಡುವ ಮೂಲಕ ಅಧಿಕಾರಿ ಗಳು ತಾತ್ಸಾರ  ಮಾಡುತ್ತಿದ್ದಾರೆ  ಎಂದು  ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ  ವೇಳೆಯಲ್ಲಿ  ಪಾಲಾರ್ ಸೇತುವೆಯಿಂದ ಸುಮಾರು ೩೦ ಕಿ.ಮೀ. ಅಂತರದಿಂದ ಬೆಟ್ಟಕ್ಕೆ ನೀರೊದಗಿಸುವ ಯೋಜನೆಗೆ  ಚಿಂತಿಸಲಾಯಿತು. ಆದರೆ, ಆಗ ಅದಕ್ಕೆ ಅರಣ್ಯ ಇಲಾಖೆ ತಕರಾರು ಅರ್ಜಿ ಸಲ್ಲಿಸಿತು. ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಪ್ರದೇಶದಲ್ಲಿ ಕೇಂದ್ರ ಪರಿಸರ ಉನ್ನತಾಧಿಕಾರ ಸಮಿತಿಯ ಅನುಮತಿ ಇಲ್ಲದೆ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಯೋಜನೆ ಸ್ಥಗಿತಗೊಳಿಸಲಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.
ಹೋರಾಟದ ಫಲ: ನಂತರ ಈ ಕುರಿತು ಜಿಲ್ಲಾಭಿವೃದ್ಧಿ ಹೋರಾಟ ಸಮಿತಿಯು ಕೇಂದ್ರ ಸರಕಾರದ ಪರಿಸರ ಇಲಾಖೆ, ಅರಣ್ಯ ಇಲಾಖೆಯೊಂದಿಗೆ ಪತ್ರ ವ್ಯವ ಹಾರ ನಡೆಸಿತು. ಬೆಟ್ಟಕ್ಕೆ ನೀರಿನ ಅಗತ್ಯ ವನ್ನು ಮನದಟ್ಟು ಮಾಡಿಕೊಡಲಾಯಿತು. ಅಲ್ಲದೆ,  ಈ ಭಾಗದ ಸಂಸದರು ಕೇಂದ್ರ ಸಚಿವರನ್ನು ಭೇಟಿ ಮಾಡಿ ನೀರಿನ ಯೋಜನೆ ಅನುಷ್ಠಾನದ ಬಗ್ಗೆ ಒತ್ತಡ ಹೇರಿದ್ದರು. ಇದೆಲ್ಲದರ ಫಲವಾಗಿ ರಾಜ್ಯ ಸರಕಾರ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡಬೇಕು ಎಂದು  ಸುಪ್ರೀಂ ಕೋರ್ಟ್ ಮೊರೆ ಹೋಯಿತು.
ಆದರೆ, ಅಂದಿನ ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ಇದಕ್ಕೂ ಕ್ಯಾತೆ ತೆಗೆದಿದ್ದರು. ಕಾವೇರಿ ನ್ಯಾಯಾಧೀಕರಣ ಇರುವಾಗ ನೀರಿನ ಯೋಜನೆ ಸರಿಯಲ್ಲ ಎಂದು ಕೊಕ್ಕೆ ಹಾಕಲು ಯತ್ನಿಸಿದರು. ಇದಕ್ಕೆ ಕೋರ್ಟ್ ಸೊಪ್ಪು ಹಾಕಲಿಲ್ಲ. ೨೦೦೭ರ ಏ. ೫ರಂದು ಕುಡಿಯುವ ನೀರಿಗೆ ಅನುಮತಿ ನೀಡಿತು.  ಇದಾದ ನಂತರ  ಕೇಂದ್ರ ಪರಿಸರ ಸಚಿವಾಲಯವೂ ೦.೩೦ ಹೆಕ್ಟೇರ್ ಭೂ ಪ್ರದೇಶವನ್ನು  ಯೋಜನೆಗಾಗಿ ಬಳಸಿಕೊಳ್ಳಲು ಅನುಮತಿ ನೀಡಿತು ಎಂದರು.
ಪ್ರತಿಭಟನೆ ಎಚ್ಚರಿಕೆ: ವಿನಾಕಾರಣ ಅಧಿಕಾರಿಗಳು ಟೆಂಡರ್ ತೆರೆಯುವುದನ್ನು ಮುಂದೂಡಿದ್ದಾರೆ. ಇದು ಸರಿಯಲ್ಲ. ಈ ನಿರ್ಲಕ್ಷ್ಯ ಧೋರಣೆ ಹೀಗೆ ಮುಂದುವರಿದರೆ  ಸೆ. ೪ರಂದು ಮಲೆ ಮಹಾದೇಶ್ವರಬೆಟ್ಟದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ಜಿಲ್ಲೆಯಲ್ಲಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯನ್ನು  ಅಧಿಕಾರಿ, ಸಿಬ್ಬಂದಿ ಸಮೇತ ಗುಲ್ಬರ್ಗ ಜಿಲ್ಲೆಗೆ ವರ್ಗಾಯಿಸಿರುವುದು ಸರಿಯಲ್ಲ. ಜಿಲ್ಲೆಯ ಕೆಲವು  ಜಮೀನಿನನ್ನು ಸರಕಾರ ಭೂ ಸ್ವಾಧೀನ ಪಡಿಸಿಕೊಂಡಿದ್ದು,  ಪರಿ ಹಾರ ಬಾಕಿ ಉಳಿಸಿಕೊಂಡಿದೆ. ಹೀಗಿರುವಾಗ ಏಕಾಏಕಿ ಕಚೇರಿ ವರ್ಗಾಯಿಸಿದರೆ  ಆ ರೈತರು ಮೈಸೂರು ಕಚೇರಿಗೆ ಅಲೆಯ ಬೇಕಾಗುತ್ತದೆ. ಆದ್ದರಿಂದ ಎಲ್ಲ ಪ್ರಕರಣ ಇತ್ಯರ್ಥ ವಾಗುವವರೆಗೂ ಕಚೇರಿ ಯನ್ನು ಜಿಲ್ಲೆಯಲ್ಲೇ ಮುಂದುವರಿಸ ಬೇಕು ಎಂದು ಆಗ್ರಹಿಸಿದರು.  ಗೋಷ್ಠಿಯಲ್ಲಿ  ಗೋವಿಂದರಾಜು, ಬಿ.ಲಿಂಗಪ್ಪ  ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ