ಮತ್ತದೇ ಭರವಸೆ, ಅದದೇ ಬೇಸರ !

ಬುಧವಾರ ನಗರದಲ್ಲಿ ದಸರಾ ಸಿದ್ದತೆ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ‘ಕಾಮಗಾರಿಗಳು ನಡೆಯುತ್ತಿಲ್ಲ. ರಸ್ತೆ ಗುಂಡಿ ಮುಚ್ಚಿಲ್ಲ’ ಎಂಬ ಪತ್ರಿಕಾ ವರದಿ,ಸಾರ್ವಜನಿಕರ ದೂರುಗಳ ಬಗ್ಗೆಯೂ ಮೇಯರ್ ಸಂದೇಶ್ ಸ್ವಾಮಿ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಧಿಕಾರಿಗಳು ಎರಡು ವಾರದ ಹಿಂದೆ ನೀಡಿದ್ದ ‘ತಕ್ಷಣ ಕ್ರಮ’ ಎಂಬ ಅದೇ ಭರವಸೆಯನ್ನು ಚಾಚೂ ತಪ್ಪದೆ ಪುನರುಚ್ಚರಿಸಿದರು.ನಂತರ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಅಷ್ಟೇ ‘ನಂಬಿಕೆ ’ಯಿಂದ ಮಾಸಾಂತ್ಯದೊಳಗೆ  ರಸ್ತೆಗಳು ‘ನೈಸ್’ ಆಗುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮಳೆ ಕಾರಣ: ಮೇಯರ್ ಸಂದೇಶ್ ಸ್ವಾಮಿ ‘೨೨ಕೋಟಿ ರೂ.ವೆಚ್ಚದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅದಕ್ಕಿಂತ ಮೊದಲು ಕರೆದ ಟೆಂಡರ್ ಪ್ರಕ್ರಿಯೆ ಮುಗಿದು  ಗುತ್ತಿಗೆದಾರರಿಗೆ ಕಾರ‍್ಯಾದೇಶ ನೀಡಲಾಗಿದೆ. ಜಲ್ಲಿ, ಡಾಂಬರು ಎಲ್ಲಾ ರೆಡಿ ಇಟ್ಟುಕೊಂಡು ಕಾಯ್ತಿದ್ದೇವೆ. ಆದ್ರೇನು ಮಾಡೋದು, ಮಳೆ ಬಿಡುವು ಕೊಡ್ತಿಲ್ಲ. ನಿರಂತರವಾಗಿ ಮೂರು ದಿನ ಮಳೆ ನಿಂತರೆ ತಕ್ಷಣ ರಸ್ತೆಗಳ ದುರಸ್ತಿ ಮಾಡಲಾಗುವುದು’ ಎಂದು  ಅಭಯ ನೀಡಿದರು.
ಅವರ ಪುಣ್ಯ, ‘ಈ ಮಧ್ಯೆ ಹಲವು ದಿನ ಮಳೆಯೇ ಬರಲಿಲ್ಲ. ಆಗ ಏನು ಮಾಡ್ತಿದ್ರಿ’ ಎಂದು ಯಾರೂ ಕೇಳಲಿಲ್ಲ. ದಸರೆಯವರೆಗೂ ಮಳೆ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದರೆ  ಗುಂಡಿಗಳು ಹಾಗೇ ಉಳಿಯುತ್ತವಾ ಎಂಬ ಪ್ರಶ್ನೆಗೆ ‘ಹಾಗೇನಿಲ್ಲ. ತಿಂಗಳಾಂತ್ಯದೊಳಗೆ ಗುಂಡಿ ಮುಚ್ಚುತ್ತೇವೆ’ ಎಂದು ಭರವಸೆ          ನೀಡಿದರು.
ಮಣ್ಣೆರೆಚುವ ಕೆಲಸ: ಈ ಮಧ್ಯೆ,ನಗರದ ಹಲವು ರಸ್ತೆಗಳ ಗುಂಡಿಗೆ ಮಣ್ಣು, ಕಟ್ಟಡ ತ್ಯಾಜ್ಯ ಸುರಿದು ತುಂಬುವ ‘ಘನಾಂದಾರಿ’ ಕೆಲಸವನ್ನು ಅಧಿಕಾರಿ,ಸಿಬ್ಬಂದಿ ಮುಂದುವರಿಸಿದ್ದಾರೆ. ಮೇಯರ್ ಹೇಳಿಕೆ ಪ್ರಕಾರ ಅದಕ್ಕೂ ‘ತಾಂತ್ರಿಕ’ ಕಾರಣ ಇದೆ.ಮಣ್ಣು ಹಾಕಿದರೆ ಗುಂಡಿಗಳು ಇನ್ನಷ್ಟು ವಿಸ್ತರಿಸುವುದಿಲ್ಲ ಎನ್ನುವುದು ತಜ್ಞ ಎಂಜಿನಿಯರ್‌ಗಳು ಕಂಡುಕೊಂಡ ಸತ್ಯವಂತೆ.
ಓಡಾಡುವ  ಜನರು ಧೂಳನ್ನಾದರೂ ಕುಡಿಯಲಿ, ಕೆಸರನ್ನಾದರೂ ಎರಚಿಸಿಕೊಳ್ಳಲಿ, ಸ್ಕಿಡ್ ಆಗಿ ಬಿದ್ದು ಸಾಯಲಿ... ಇವರಿಗೇನು ಕಷ್ಟ -ನಷ್ಟ  ಇಲ್ಲತಾನೆ ?!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ