ವಿಕ ಅಭಿಯಾನಕ್ಕೆ ಜಯ

ವಿಕ ಸುದ್ದಿಲೋಕ ಮೈಸೂರು
ಸೋಮವಾರದಿಂದ ಗುಂಡಿ ಮುಚ್ತೀವಿ, ಮಂಗಳವಾರದಿಂದ ರಸ್ತೆ ಡಾಂಬರೀಕರಣ ಮಾಡ್ತೀವಿ, ಮಳೆ ನಿಲ್ಲಲಿ ಎಂದು ಕಾದೆವು. ಇನ್ನು ಮುಂದೆ ಕಾಯಲು ಹೋಗೋಲ್ಲ. ದಸರೆಯನ್ನು ಗಮನದಲ್ಲಿಟ್ಟು ಕೊಂಡು ಕೆಲಸ ಶುರು ಮಾಡ್ತೀವಿ...
ಗುಂಡಿಗಳನ್ನು ಮುಚ್ಚಲು ಕೊನೆಗೂ ಎದ್ದು ಕುಳಿತಿದೆ ಮೈಸೂರು ಮಹಾನಗರ ಪಾಲಿಕೆ. ರಜೆ ದಿನದಲ್ಲೂ ಅಧಿಕಾರಿಗಳ ಸಭೆ ನಡೆಸಿದ ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್ ಅವರ ಸ್ಪಷ್ಟ ನುಡಿ ಇದು.
ವಿಜಯಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ಸ್ವಲ್ಪ ಅಡ್ಜಸ್ಟ್ ಮಾಡಬೇಡಿ ಎನ್ನುವ ಅಂಕಣದ ಗುಂಡಿ ಸರಣಿಯ ಹಿನ್ನೆಲೆಯಲ್ಲಿ ಎಚ್ಚರಗೊಂಡ ಆಯುಕ್ತ ಕೆ.ಎಸ್.ರಾಯ್ಕರ್ ಭಾನುವಾರ ವಾದರೂ ಅಧಿಕಾರಿಗಳ ಸಭೆ ನಡೆಸಿದರು. ಸುಮಾರು ಒಂದೂವರೆ ತಾಸು ನಡೆದ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ರಸ್ತೆ ದುರಸ್ಥಿ ಕಾರ‍್ಯ ಆರಂಭಿಸಿ ಬೇಗನೇ ಮುಗಿಸುವ ಸೂಚನೆಗಳನ್ನು ನೀಡಿದರು.
ದಸರೆ ಇನ್ನೇನು ಹತ್ತಿರದಲ್ಲಿದೆ. ಮಾಧ್ಯಮ ಗಳಲ್ಲೂ ರಸ್ತೆ ಅವ್ಯವಸ್ಥೆಗಳನ್ನು ಬಿಂಬಿಸಲಾಗು ತ್ತಿದೆ. ಅಚ್ಚುಕಟ್ಟಾದ ಕೆಲಸದ ಮೂಲಕ ದಸರಗೆ ಬರುವ ಪ್ರವಾಸಿಗರನ್ನು ಗುಂಡಿಮುಕ್ತ ವಾಗಿ ಸ್ವಾಗತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ೪೭೦ ರಸ್ತೆಗಳಿದ್ದು, ಅದರಲ್ಲಿ ೩೪ ಪ್ರಮುಖ ವಾದವು. ೨೨ ಕೋಟಿ ರೂ.ಗಳನ್ನು ರಸ್ತೆಗಳ ದುರಸ್ತಿಗೆ ವೆಚ್ಚ ಮಾಡಲಾಗುತ್ತಿದೆ.  ಈಗಾಗಲೇ ಕಾರ‍್ಯಾದೇಶಗಳನ್ನು ಗುತ್ತಿಗೆ ದಾರರಿಗೆ ನೀಡಲಾಗಿದೆ ಎಂದು ಪತ್ರಿಕೆ ಪ್ರತಿನಿಧಿಗೆ ತಿಳಿಸಿದರು.
ಈ ಬಾರಿ ರಸ್ತೆ ದುರಸ್ತಿ ಕೆಲಸ ಆರಂಭ ವಾಗದೇ ಇರುವುದಕ್ಕೆ ಮಳೆಯೇ ಪ್ರಮುಖ ಕಾರಣ. ಬಿಡುವು ನೀಡದ ಹಾಗೆ ಮಳೆ ಬರು ತ್ತಿರುವುದರಿಂದ ಕೆಲಸ ಮಾಡಿ ಉಪಯೋಗ ವಾಗದೇ ಹೋಗಬಾರದು ಎನ್ನುವ ಕಾರಣಕ್ಕೆ ಕೆಲಸವನ್ನು ನಿಲ್ಲಿಸಲಾಗಿದೆ. ಮಳೆ ಬರಲಿ ಬಿಡಲಿ, ಸೋಮ ವಾರದಿಂದ ರಸ್ತೆಗಳ ಗುಂಡಿ ಮುಚ್ಚುವ ಕಾರ‍್ಯ ಆರಂಭ ವಾಗಲಿದೆ. ಮಂಗಳವಾರದಿಂದ ರಸ್ತೆಗಳ ಡಾಂಬರೀಕರಣ ಶುರುವಾಗಲಿದೆ. ಮಳೆ ಬಂದರೂ ಅಗತ್ಯ ತಂತ್ರಜ್ಞಾನ ಬಳಸಿ ರಸ್ತೆ ಗಟ್ಟಿಮುಟ್ಟಾಗಿ ದುರಸ್ತಿ ಮಾಡಲಾಗುತ್ತದೆ ಎಂದರು.
ವಿದೇಶ ಪ್ರವಾಸ ಹೊಗಲೇಬೇಕು: ದಸರೆ ವೇಳೆ ಆಯುಕ್ತರಾzವ್ರು ಇಲ್ಲಿ ಇದ್ದುಕೊಂಡು ಕೆಲಸದ ಉಸ್ತುವಾರಿ ನೋಡಿಕೊಳ್ಳಬೇಕು. ನೀವೆ ವಿದೇಶಕ್ಕೆ ಹಾರಿದರೆ ಪಾಲಿಕೆ ಕಥೆ ಏನು ಎನ್ನುವುದು ಪತ್ರಿಕೆ ಪ್ರಶ್ನೆಯಾಗಿತ್ತು.
ಮೈಸೂರಿಗೆ ವರ್ಷದ ಹಿಂದೆಯೇ ಬಸ್ ರ‍್ಯಾಪಿಡ್ ಟ್ರಾನ್ಸಿಸ್ಟ್ ಸಿಸ್ಟಂ(ಬಿಆರ್‌ಟಿಎಸ್) ಯೋಜನೆಯಡಿ ೯೦೦ ಕೋಟಿ ರೂ. ಕೇಂದ್ರದಿಂದ ಲಭಿಸಿತ್ತು. ಆದರೆ ಆಗ ನಮ್ಮವರು ಯೋಜನೆ ಜಾರಿಗೊಳಿಸಲು ಆಗೋದಿಲ್ಲ ಎಂದು ಪತ್ರ ಬರೆದಿದ್ದರಿಂದ ಹಣ ಬಳಸಿಕೊಳ್ಳಲು ಆಗಲಿಲ್ಲ. ಈಗ ಮತ್ತೊಮ್ಮೆ ಅವಕಾಶ ಒದಗಿ ಬಂದಿದೆ. ಇದಕ್ಕಾಗಿಯೇ ಈ ವಿದೇಶ ಪ್ರವಾಸ.
ನಾನೊಬ್ಬನೇ ವಿದೇಶ ಪ್ರವಾಸ ಹೋಗುತ್ತಿಲ್ಲ . ಕೇಂದ್ರ ನಗರಾಭಿವೃದ್ಧಿ ರಾಜ್ಯ ಸಚಿವರ ನೇತೃತ್ವದಲ್ಲಿ ೨೨ ಅಧಿಕಾರಿಗಳ ತಂಡ ಕೊಲಂಬಿಯಾ, ಮೆಕ್ಸಿಕೋ ಹಾಗೂ ಲಂಡನ್‌ಗೆ ತೆರಳಲಿದೆ. ರಾಜ್ಯ ನಗರಾಭಿವೃದ್ಧಿ ಕಾರ‍್ಯದರ್ಶಿ ಶಂಭುದಯಾಳ್ ಮೀನಾ ಕೂಡ ಇರಲಿದ್ದಾರೆ. ವಿದೇಶ ಪ್ರವಾಸದಿಂದ ನಗರಕ್ಕೆ ಭವಿಷ್ಯದಲ್ಲಿ ಒಳ್ಳೆಯದು ಆಗಲಿ ಎಂದು ಹೋಗುತ್ತಿದ್ದೇನೆ ಹೊರತು ಇದರ ಹಿಂದೆ ಬೇರೆ ಉದ್ದೇಶಗಳಿಲ್ಲ ಎನ್ನುವುದು ಅವರ ಸುದೀರ್ಘ ಸ್ಪಷ್ಟನೆ.ನಾನು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ರಸ್ತೆ ಕೆಲಸ ಮುಗಿಸಿ ಹೋಗ್ತೀನಿ, ನಾನು ಇಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಕಾಮಗಾರಿಗಳಿಗೆ ತೊಂದರೆ ಆಗೋಲ್ಲ. ಅದಕ್ಕೆ ಬೇಕಾದ ಸೂಚನೆಗಳನ್ನು ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.
ತಿಕ್ಕಾಟವಿಲ್ಲ: ಮೇಯರ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಾಗಲಿ, ತಿಕ್ಕಾಟವಾಗಲಿ ಇಲ್ಲ. ಬೆಂಗಳೂರಿನಲ್ಲಿಯೇ ಮೂರು ದಿನ ಜತೆಯಲ್ಲಿ ದಸರೆಗೆ ಅತಿಥಿಗಳನ್ನು ಆಹ್ವಾನಿಸಲು ತೆರಳಿದ್ದೆವು ಎಂದು ತಿಳಿಸಿದರು.
ಹಂಗಾಮಿ ಆಯುಕ್ತ ರಾಮು : ಕೆ.ಎಸ್.ರಾಯ್ಕರ್ ಅವರು ವಿದೇಶ ಪ್ರವಾಸ ಹೋದಾಗ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಬಿ.ರಾಮು ಪ್ರಭಾರ ಆಯುಕ್ತರಾಗಿ ಕಾರ‍್ಯನಿರ್ವಹಿಸಲಿದ್ದಾರೆ. ಸರಕಾರವೂ ಈ ಸಂಬಂಧ ಆದೇಶ ಹೊರಡಿಸಿದೆ. ರಾಮು ಅವರು ಆಯುಕ್ತರಾಗಿ ಬರಲು ವರ್ಷದಿಂದ ಪ್ರಯತ್ನಿಸು ತ್ತಲೇ ಇದ್ದಾರೆ. ಅವರಿಗೆ ಈಗ ಹಂಗಾಮಿ ನೆಪದಲ್ಲಿ ಪಾಲಿಕೆ ಆಗುಹೋಗುಗಳ ತರಬೇತಿ ಅವಧಿ !.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ