೨೦ ತಿಂಗಳಲ್ಲಿ ವಂಚನೆ ೫೯ ಪ್ರಕರಣ, ಪತ್ತೆಯಾಗಿದ್ದು ಒಂದೇ !

ಕುಂದೂರು ಉಮೇಶಭಟ್ಟ ಮೈಸೂರು
ಪೊಲೀಸರ ಹೆಸರಿನಲ್ಲಿ ಚಿನ್ನಾಭರಣ ದೋಚುತ್ತಿರುವ ಯುವಪಡಿಛಿ ಮೈಸೂರಿ ನಲ್ಲೀಗ ಸಕ್ರಿಯ, ೨೦ರ ಆಸು ಪಾಸಿನ ಯುವಕರ ಗ್ಯಾಂಗ್‌ಗೆ ೬೦ರಿಂದ ೭೦ ವರ್ಷದೊಳಗಿನ ವೃದ್ಧೆ ಯರೇ ಟಾರ್ಗೆಟ್...
ನಾವು ಪೊಲೀಸರೆಂದು ಹೇಳಿಕೊಂಡು ಬರುವ ಕಳ್ಳರು ಮಹಿಳೆಯರನ್ನು ಚಿನ್ನಾಭರಣ ದೋಚಿ ವಂಚಿಸುತ್ತಿರುವ ಪ್ರಕರಣ ಮೈಸೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಕಳೆದ ಒಂದೂವರೆ ವರ್ಷದಲ್ಲಿ ನಿವೃತ್ತಿಗರ ಸ್ವರ್ಗದಲ್ಲಿ ದಾಖಲಾದ ಇಂಥ ಪ್ರಕರಣಗಳ ಸಂಖ್ಯೆ ೫೯. ಇಷ್ಟಾದರೂ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣ ಕೇವಲ ೧. ಒಂದು ಕಡೆ ಸರಗಳ್ಳತನ ತಲೆನೋವು ಇದ್ದೇ ಇದೆ. ಈಗ ಹೊಸ ರೀತಿಯಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿರುವುದು ಮೈಸೂರು ಪೊಲೀಸರಿಗೆ ಇಂಥ ವಂಚನೆ ದೊಡ್ಡ ತಲೆನೋವು.
ಚಾಣಾಕ್ಷ ಕಳ್ಳರು: ಮೈಸೂರಿನಲ್ಲಿ ಸರಗಳ್ಳತನಕ್ಕೆ ಎರಡು ದಶಕದ ಇತಿಹಾಸ. ಮೈಸೂರಿನಲ್ಲಿ ಸರಗಳ್ಳತನದ ಪ್ರಕರಣಗಳ ಸಂಖ್ಯೆ ಸಾವಿರ ದಾಟಿ ಹೋಗಿದೆ. ಸರಗಳ್ಳತನ ಆಗಾಗ ನಡೆಯುತ್ತಲೇ ಇರುತ್ತದೆ.
ಸರಗಳ್ಳತನಕ್ಕೆ ಇಳಿದರೆ ಎಚ್ಚರಿಕೆ ಮುಖ್ಯ, ಅದರಿಂದ ಸಿಗುವ ಚಿನ್ನಾಭರಣದ ಪ್ರಮಾಣವೂ ಕಡಿಮೆ. ಇದಕ್ಕಾಗಿ ೨೦ರಿಂದ ೨೫ ವರ್ಷಗೊಳಗಿನ ವೃತ್ತಿಪರ ಗ್ಯಾಂಗ್ ಆರಿಸಿಕೊಂಡ ದಾರಿ ಮಹಿಳೆಯರ ವಂಚನೆ. ರಸ್ತೆಯಲ್ಲಿ ನಡೆದು ಹೋಗುವ ವೃದ್ಧೆಯರ ಗಮನ ಬೇರೆಡೆ ಸೆಳೆದು ಭಯ ಹುಟ್ಟುವ ಮೂಲಕ ಚಿನ್ನಾಭರಣ ದೋಚುವುದು. ಪೇಪರ್ ಇಲ್ಲವೇ ಬಟ್ಟೆಯಲ್ಲಿ ಚಿನ್ನಾಭರಣ  ಹಾಕಿಸಿಕೊಂಡು ಬಳಿಕ ಅದರಲ್ಲಿ ಕಲ್ಲು ಇಲ್ಲವೇ ರೋಲ್ಡ್‌ಗೋಲ್ಡ್ ಹಾಕಿಕೊಡುವ ವಂಚನೆಯಿದು. ಕನಿಷ್ಟ ೨೦ ಗ್ರಾಮ್‌ನಿಂದ ೧೫೦ ಗ್ರಾಮ್‌ವರೆಗಿನ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ೨೦೧೦ರ ಎಂಟು ತಿಂಗಳಲ್ಲೇ ಈ ಪ್ರಕರಣಗಳ ಸಂಖ್ಯೆ ೩೫. ತಿಂಗಳಿಗೆ  ಸರಾಸರಿ ೪. ಚಾಣಾಕ್ಷತದಿಂದಲೇ ಈ ಮಾರ್ಗವನ್ನು ಕಳ್ಳರು ಕಂಡುಕೊಂಡಿದ್ದಾರೆ. ಅದೂ ಒಂದೇ ದಿನ ಎರಡು ಇಲ್ಲವೇ ಮೂರು ಕಡೆ ಚಿನ್ನಾಭರಣ ದೋಚಿ ಆತಂಕವನ್ನು ಹುಟ್ಟಿಸಿದ್ದಾರೆ.
ಪೊಲೀಸರಲ್ಲಿ ಇಲ್ಲ: ಪೊಲೀಸರ ಹೆಸರು ಬಳಸಿಕೊಂಡು ಕಳ್ಳತನದ ಮಾರ್ಗವನ್ನು ಕಳ್ಳರು ಕಂಡುಕೊಂಡರೂ ಪೊಲೀಸ ರಿಗೆ ಮಾತ್ರ ಅವರನ್ನು ಹಿಡಿಯುವ ಚಾಣಾಕ್ಷತೆ ಕಾಣುತ್ತಿಲ್ಲ.
ಒಮ್ಮೆ ಯಾವ ಗ್ಯಾಂಗ್ ಇಂಥ ಕೃತ್ಯ ಮಾಡುತ್ತಿರಬಹುದು ಎಂದು ಕಳ್ಳರ ಜಾಡು ಹಿಡಿಯುವ ಹೊತ್ತಿಗೆ ಮತ್ತೊಂದು ಮಾರ್ಗವನ್ನು ಅವರು ಕಂಡುಕೊಳ್ಳುತ್ತಿದ್ದಾರೆ. ಪೊಲೀಸರೂ ಗಂಭೀರವಾಗಿ ಸ್ವೀಕರಿಸದೇ ಇರುವುದರಿಂದ ಮಹಿಳೆಯರು ಮಾತ್ರ ವಂಚನೆಗೆ ಒಳಗಾಗುತ್ತಲೇ ಇದ್ದಾರೆ.
ಪೊಲೀಸರು ನಾವು ಎಂದು ಹೇಳಿಕೊಳ್ಳುವವರು ಯಾವಾಗಲೂ ಚಿನ್ನಾಭರಣ ಬಿಚ್ಚಿಕೊಡಿ ಎಂದು ಹೇಳುವುದಿಲ್ಲ. ಹಾಗೆ ಹೇಳಿದರೆ ಅವರು ಪೊಲೀಸರೇ ಅಲ್ಲ. ಮಹಿಳೆಯರೇ ಎಚ್ಚರ ವಹಿಸಬೇಕಷ್ಠೆ ಎನ್ನುವ ಜಾಗೃತಿ ಮೂಡಿಸುವುದರಲ್ಲಿ ಪೊಲೀಸರು ನಿರತರಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ