ಸಂಚಾರಿ ಪೊಲೀಸರಿಗೆ ‘ವ್ಹೀಲ್ ಲಾಕ್’ ತಂದ ಫಜೀತಿ

ವಿಕ ಸುದ್ದಿಲೋಕ ಮೈಸೂರು
ಪೊಲೀಸರು ಚಾಪೆ ಕೆಳಗೆ ನುಸುಳಿದರೆ, ವಾಹನ ಚಾಲಕರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ.
ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರಿಗೆ ಪಾಠ ಕಲಿಸಲು ಮುಂದಾಗಿರುವ ಪೊಲೀಸರಿಗೆ ಈಗ ಹೊಸ ತಲೆನೋವು ಶುರುವಾಗಿದೆ.
ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಚಕ್ರಕ್ಕೆ ಹಾಕುತ್ತಿರುವ ‘ಲಾಕ್’ ವ್ಯವಸ್ಥೆಯನ್ನೇ ಭೇದಿಸುತ್ತಿರುವ ಚಾಲಕರು, ಲಾಕ್ ಸಮೇತ ಪರಾರಿಯಾಗುತ್ತಿದ್ದಾರೆ.
ಇಂಥ ಪ್ರಕರಣ ದಿನೇದಿನೆ ಹೆಚ್ಚುತ್ತಿದ್ದು, ಒಂದು ತಿಂಗಳ ಅಂತರದಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಹಾಕಿದ್ದ ನಾಲ್ಕು ‘ವೀಲ್‌ಲಾಕ್’ ನಾಪತ್ತೆಯಾಗಿವೆ.
ಹೀಗಾಗಿ ಕಳುವಾಗಿರುವ ತಮ್ಮ ಲಾಕ್ ಪತ್ತೆ ಮಾಡಿಕೊಡಿ ಎಂದು ಪೊಲೀಸರೇ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನೀತಿಪಾಠ ಹೇಳಲು ಮುಂದಾಗುವ ಸಂಚಾರಿ ಪೊಲೀಸರು, ಕಾರಿಗೆ ತಾವು ಹಾಕಿದ ಲಾಕ್ ಕಳುವಾಗದಂತೆ ‘ಡ್ಯೂಟಿ’ ಮಾಡಬೇಕಿದೆ.
ನಡೆಯುವುದಿಷ್ಟು: ಮೈಸೂರಿನಲ್ಲಿ ಹೆಚ್ಚುತ್ತಿರುವ ನಾಲ್ಕು ಚಕ್ರ ವಾಹನ ಸವಾರರ ಆಟಾಟೋಪಕ್ಕೆ ಬ್ರೇಕ್ ಹಾಕಲು ನಗರ ಪೊಲೀಸರು ವಿನೂತನ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ಬೇಕಾಬಿಟ್ಟಿಯಾಗಿ ನಿಲ್ಲುತ್ತಿದ್ದ ದ್ವಿಚಕ್ರ ವಾಹನಗಳನ್ನು ಎತ್ತುಕೊಂಡು ಹೋಗಲು ‘ಟೈಗರ್’ ವಾಹನ ಇದೆ. ನಾಲ್ಕು ಚಕ್ರ ವಾಹನಗಳ ನಿಯಂತ್ರಣಕ್ಕೆ ಇದೇ ಟೈಗರ್ ಬಳಸಿಕೊಂಡಾಗ, ವಾಹನಗಳು ಹಾನಿಗೊಂಡಿವೆ ಎಂಬ ನೆಪದಲ್ಲಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ‘ವೀಲ್ ಲಾಕ್’ ವ್ಯವಸ್ಥೆಗೆ ಮೊರೆ ಹೋದರು.
ನಗರದ ಯಾವುದೇ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲುವ ನಾಲ್ಕು ಮತ್ತು ಮೂರು ಚಕ್ರ ವಾಹನಕ್ಕೆ, ಸಂಚಾರ ಪೊಲೀಸರು ಲಾಕ್ ಹಾಕುತ್ತಿದ್ದರು. ಜತೆಗೆ ವಾಹನದ ಮೇಲೆ  ‘ಸಂಚಾರ ನಿಯಮ ಉಲ್ಲಂಘನೆಗಾಗಿ ವೀಲ್ ಲಾಕ್ ಮಾಡುತ್ತಿದ್ದರು. ೨೦೦ ರೂ. ದಂಡ ಪಾವತಿಸಿದರೆ ಇದನ್ನು ತೆಗೆಯಲಾಗುವುದು ಎಂಬ ವಾಹನದ ಬಳಿ ಚೀಟಿ ಅಂಟಿಸಿ ಸಂಪರ್ಕಿಸಬೇಕಾದ ಪೊಲೀಸ್ ಠಾಣೆ ವಿಳಾಸ, ನಂಬರ್ ನಮೂದಿಸುತ್ತಿದ್ದರು. ಇಂಥ ವ್ಯಕ್ತಿಗಳು ಸಂಬಂಧ ಪಟ್ಟ ಠಾಣೆಗೆ ತೆರಳಿ ದಂಡ ತೆತ್ತರೆ, ಬಳಿಕ ವಾಹನ ಬಿಡುಗಡೆ ಮಾಡುವುದು ವಾಡಿಕೆ.
ಆದರೆ ಸಂಚಾರ ನಿಯಮ ಉಲ್ಲಂಘಿಸಿದ ನಾಲ್ಕು ಚಕ್ರ ಅಥವಾ ಮೂರು ಚಕ್ರ ವಾಹನ ಚಾಲಕರು, ಪೊಲೀಸರನ್ನು ಸಂಪರ್ಕಿಸುವ ಗೋಜಿಗೆ ಹೋಗದೆ ಲಾಕ್ ಹಾಕಿರುವ ಚಕ್ರವನ್ನು ಬಿಚ್ಚಿ ಬೇರೊಂದು ಚಕ್ರ (ಸ್ಟೆಪ್ನಿ) ಅಳವಡಿಸಿಕೊಂಡು ಹೋಗುತ್ತಿರುವುದು ನಡೆಯುತ್ತಿದೆ.
ಬೀಟ್ ಮುಗಿಸಿ ಬರುವ ಪೊಲೀಸರು ತಾವು ಲಾಕ್ ಮಾಡಿದ್ದ ವಾಹನವೂ ಇಲ್ಲ, ಜತೆಗೆ ಅದಕ್ಕೆ ಹಾಕಿದ್ದ ಲಾಕ್ ಕೂಡ ಇಲ್ಲದಿರುವುದನ್ನು ಕಂಡು ಆಶ್ಚರ್ಯಗೊಳ್ಳುತ್ತಿದ್ದಾರೆ. ತಮಗೆ ನೀಡಿದ್ದ ೨ ಸಾವಿರ ರೂ. ಬೆಲೆ ಬಾಳುವ ಲಾಕ್ ನಾಪತ್ತೆ ಯಾಗುವ  ಜತೆಗೆ ಮೇಲಿನ ಆಧಿಕಾರಿಗಳಿಂದ ಬೈಗುಳ ತಿನ್ನಬೇಕಾದ ಪರಿಸ್ಥಿತಿ ಸಂಚಾರಿ ಪೊಲೀಸರದ್ದು.
ಲಾಕ್ ನಾಪತ್ತೆಯಾದ ಪ್ರಕರಣಗಳು: ಆಶೋಕ ರಸ್ತೆಯ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬಳಿ ಆಟೋರಿಕ್ಷಾ (ಕೆಎಲ್ ೧೦-೮೦೧೨) ಸಂಚಾರಿ ನಿಯಮ ಉಲ್ಲಂಘಿಸಿ ನಿಲ್ಲಿಸಲಾಗಿತ್ತು. ಕರ್ತವ್ಯ ದಲ್ಲಿದ್ದ ಎಎಸ್‌ಐ ಮಹಾದೇವಯ್ಯ ಅವರು ಆಟೋರಿಕ್ಷಾಕ್ಕೆ ವೀಲ್‌ಲಾಕ್ ಮಾಡಿ, ತೆರಳಿದರು. ಆದರೆ, ಮರಳಿ ಬರುವ ವೇಳೆಗೆ ಚಾಲಕ, ಲಾಕ್ ಮಾಡಿದ್ದ ಚಕ್ರ ಬಿಚ್ಚಿ, ಸ್ಟೆಪ್ನಿ ಹಾಕಿಕೊಂಡು ಪರಾರಿಯಾಗಿದ್ದ. ನಗರ ಪೊಲೀಸರು ನೀಡಿರುವ ಸಂಖ್ಯೆ ನರಸಿಂಹ ವಿಭಾಗ ೩೩೮೫ ಇದ್ದು, ಪ್ರಕರಣ ದಾಖಲಿಸಿಕೊಂಡಿರುವ ಲಷ್ಕರ್ ಪೊಲೀಸರು ಆಟೋ ಹುಡುಕಾಟದಲ್ಲಿದ್ದಾರೆ.
ಇದೇ ರೀತಿ ಕೆ.ಟಿ.ಸ್ಟ್ರೀಟ್‌ನಲ್ಲಿ ಲಾಕ್ ಹಾಕಿದ್ದ ಆಟೋರಿಕ್ಷಾ ನಾಪತ್ತೆಯಾಗಿತ್ತು. ಮೊದಲೇ ಬರೆದಿಟ್ಟುಕೊಂಡಿದ್ದ ನಂಬರ್ ಸಹಾಯದಿಂದ ಪತ್ತೆ ನಡೆಸಿದಾಗ ಅದು ಮೇಲುಕೋಟೆ ಚಲುವರಾಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ್ದೆಂದು ತಿಳಿಯಿತು. ವಿನೋಬಾ ರಸ್ತೆಯ ಶಾಂತಲಾ ಬಾರ್ ಬಳಿ ನಿಯಮ ಉಲ್ಲಂಘಿಸಿದ್ದ ಕಾರ್ ಚಾಲಕ, ಚಕ್ರ ಬದಲಿಸಿ ಪರಾರಿಯಾಗಿದ್ದ. ತನಿಖೆ ನಡೆಸಿದಾಗ ಆತ ಬೆಂಗಳೂರಿನ ಬನ್ನೇರುಘಟ್ಟದ ಬಳಿ ಸಿಕ್ಕಿ ಬಿದ್ದಿದ್ದ.
ಈಗ ಇವರು ಸರಕಾರಿ ಆಸ್ತಿ ಕಳವು ಆರೋಪದ ಮೇಲೆ ಪ್ರಕರಣ ಎದುರಿಸುತ್ತಿದ್ದು, ನ್ಯಾಯಾಲಯಕ್ಕೆ ಅಲೆಯುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ