ಮಿಮ್ಸ್‌ನ ನೇಮಕ, ಬಡ್ತಿಯಲ್ಲೂ ಅಕ್ರಮ

ವಿಕ ಸುದ್ದಿಲೋಕ ಮಂಡ್ಯ
ಹಾಸನ ಮತ್ತು ಮೈಸೂರು ವೈದ್ಯ ಕಾಲೇಜುಗಳ ಅಕ್ರಮ ನೇಮಕ ಬಯಲಾಗಿ ಬೋಧಕೇತರ ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಅದರ ಬೆನ್ನಲ್ಲೇ ಮಂಡ್ಯದ ಮಿಮ್ಸ್ ಕೂಡಾ ಅಕ್ರಮ ನೇಮಕಗಳ ಆಗರದ ಆರೋಪಕ್ಕೆ ಗುರಿಯಾಗಿದೆ.
ಇವೆರಡು ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿ ನೇಮಕ ವಷ್ಟೇ ಅಕ್ರಮ. ಆದರೆ, ಇಲ್ಲಿ ನಿರ್ದೇಶಕರ ಸಹಿತ ಬೋಧಕ, ಬೋಧಕೇತರ ಸಿಬ್ಬಂದಿಯ ನೇಮಕ, ಬಡ್ತಿ ಎಲ್ಲದರಲ್ಲೂ ಗೋಲ್‌ಮಾಲ್ ಆಗಿದೆ ಎನ್ನಲಾಗಿದೆ. ಸ್ವತಃ ವೈದ್ಯ ಶಿಕ್ಷಣ ಸಚಿವ ಹಾಗೂ ಗೌರ‍್ನಿಂಗ್ ಕೌನ್ಸಿಲ್ ಅಧ್ಯಕ್ಷ ರಾಮಚಂದ್ರಗೌಡರೇ ಎರಡು ವರ್ಷ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಹಾಗಾಗಿ ಅಕ್ರಮಗಳು ಅವರ ಮೂಗಿನಡಿಯೇ ನಡೆದಿದೆ ಎನ್ನಲಾಗಿದೆ. ಮಿತಿ ಮೀರಿದ ಗುಂಪು ಗಾರಿಕೆ, ಜಾತಿ ಸಂಘರ್ಷ ಮತ್ತು ಅವ್ಯವಸ್ಥೆಗಳಿಂದ ನಲುಗಿದ್ದ ಮಿಮ್ಸ್‌ನಲ್ಲಿ ಅಕ್ರಮ ನೇಮಕದ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆದಿದೆ. ಆ ವರದಿ ಮೇಲಿನ್ನೂ ಯಾವುದೇ ಕ್ರಮ ಜಾರಿ ಗೊಳಿಸದೆ ತಪ್ಪಿತಸ್ಥರನ್ನು ರಕ್ಷಿಸುವ ಸಂಚು ನಡೆದಿದೆ.
ಕಾಯಂ ನಿರ್ದೇಶಕರಿಲ್ಲ: ಮಿಮ್ಸ್‌ಗೆ ಈಗ ಐದು ವರ್ಷ. ಭಾರತೀಯ ವೈದ್ಯ ಮಂಡಳಿಯಿಂದ ೩ ಬಾರಿ ಕಾಡಿಬೇಡಿ ಅನುಮತಿ ಪಡೆದ ಮಿಮ್ಸ್‌ನಲ್ಲಿ ಈ ವರೆಗೆ ಐವರು ನಿರ್ದೇಶಕರು ಬದಲಾಗಿದ್ದಾರೆ. ೨೦೦೫-೦೬ರಲ್ಲಿ ಬಂದ ಮೊದಲ ನಿರ್ದೇಶಕ ಡಾ.ಚಂದ್ರಶೇಖರ್ ಕಾಲೇಜು ಪ್ರಾರಂಭಕ್ಕೆ ಮುನ್ನವೇ ಜಾಗ ಖಾಲಿ ಮಾಡಿದರು. ಬಳಿಕ ಡಾ.ಚಿದಾನಂದ ಮತ್ತು ಡಾ.ಶಿವಕುಮಾರ್ ವೀರಯ್ಯ ಒಂದಷ್ಟು ನೇಮಕ ನಡೆಸಿ, ಎತ್ತಂಗಡಿಯಾದರು. ನಾಲ್ಕನೆಯವರಾಗಿ ಬಂದ ಡಾ.ರಾಜೀವ್‌ಶೆಟ್ಟಿ ರಜೆ ಹಾಕುತ್ತಲೇ ಕಾಲ ಕಳೆದರು. ಇವರ ನಿರ್ಗಮನ ಬೆನ್ನಲ್ಲೇ ಡಾ.ಪುಷ್ಪಾ ಸರ್ಕಾರ್ ಪ್ರಭಾರಿಯಾಗಿ ನಿರ್ದೇಶಕರಾದರು.
ವೈದ್ಯ ಕಾಲೇಜು ನಿರ್ದೇಶಕ ಹುದ್ದೆಗೆ ೧೦ ವರ್ಷ ಆಡಳಿತಾತ್ಮಕ ಅನುಭವ, ೫ ವರ್ಷ ಪ್ರಾಧ್ಯಾಪಕರಾಗಿ ಸೇವೆ ಕಡ್ಡಾಯ. ಆ ಅರ್ಹತೆ ಪುಷ್ಪಾ ಸರ್ಕಾರ್‌ಗೆ ಇಲ್ಲ. ನಿರ್ದೇಶಕರ ನೇಮಕಕ್ಕೆ ಇನ್ನೂ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಹುದ್ದೆ ಖಾಲಿ ಇದೆ ಎನ್ನುವ ಕಾರಣಕ್ಕೆ ಅರ್ಹತೆ ಪರಿಗಣಿಸದೇ ಪುಷ್ಪಾ ಸರ್ಕಾರ್‌ಗೆ ಹುದ್ದೆ ನೀಡಲಾಗಿದೆ ಎನ್ನುವ ಅಂಶವನ್ನು ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯೇ ಮಾಹಿತಿ ಹಕ್ಕು ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಷ್ಟಕ್ಕೇ ಮುಖ್ಯ ಆಡಳಿತಾಧಿಕಾರಿ ಎತ್ತಂಗಡಿಯಾದರು.
ಡಾ.ಪುಷ್ಪಾ ಸರ್ಕಾರ್ ಅವರಿಗೆ ನಿಗದಿಪಡಿಸಿದ ಅನುಭವ, ಅರ್ಹತೆ ಇಲ್ಲದ ಕಾರಣವನ್ನು ಎಂಸಿಐ ತನ್ನ ವರದಿಯಲ್ಲಿ ನಮೂದಿಸಿ ಸಂಸ್ಥೆಗೆ ಈ ಅನುಮತಿ ನಿರಾಕರಿಸಿತ್ತು. ಪೂರ್ಣಾವಧಿ ನಿರ್ದೇಶಕರನ್ನು ನೇಮಿಸುವುದಾಗಿ ಎಂಸಿಐಗೆ ಅಫಿಡವಿಟ್ ಸಲ್ಲಿಸಿದ್ದ ಸರಕಾರವು ಈವರೆಗೆ ನೇಮಕಕ್ಕೆ ಮುಂದಾಗಿಲ್ಲ.
ಅಕ್ರಮಗಳು:  ಕೆಲ ವೈದ್ಯರು ಮತ್ತು ಸಿಬ್ಬಂದಿಯ ನೇಮಕ, ಬಡ್ತಿ ತೀರ್ಮಾನಗಳು ಬೇಕಾಬಿಟ್ಟಿಯಾಗಿ ನಡೆದಿವೆ. ಬೋಗಸ್ ದಾಖಲೆ ಸಲ್ಲಿಸಿ ಕೆಲಸಕ್ಕೆ ಸೇರಿದ್ದ ವೈದ್ಯ ದಂಪತಿಯ ಬಣ್ಣ ಬಯಲಾ ಗಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಲು ಲೋಕಾಯುಕ್ತ ಸೂಚಿಸಿದೆ. ಈ ಮಧ್ಯೆ ಆ ದಂಪತಿ ವೃತ್ತಿಗೆ ಟಾಟಾ ಹೇಳಿ ರಾಜಕೀಯಕ್ಕೆ ಧುಮುಕಿದ್ದಾರೆ. ಈ ರಾಜೀನಾಮೆ ವಿಷಯದಲ್ಲಿ ಗೌರ‍್ನಿಂಗ್ ಕೌನ್ಸಿಲ್ ತೀರ್ಮಾನ ಏನೂ ಇಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ.
ವೈಯಕ್ತಿಕ ಕಾರಣದ ನೆಪವೊಡ್ಡಿ ಸಹಾಯಕ ಪ್ರಾಧ್ಯಾಪಕರೊ ಬ್ಬರು ಬೆಳಗ್ಗೆ ರಾಜೀನಾಮೆ ನೀಡಿದ್ದರು. ಮಧ್ಯಾಹ್ನ ಅಂಗೀಕರಿಸಿ, ಸಂಜೆ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಮರು ದಿನ ಅವರನ್ನು ಸಹ ಪ್ರಾಧ್ಯಾಪಕರಾಗಿ ನೇಮಿಸಲಾಗಿದೆ.
ನಿಯಮಾವಳಿಯಂತೆ ರಾಜೀನಾಮೆ ಅಂಗೀಕಾರಕ್ಕೆ ೩೦ ದಿನ ಕಾಲಾವಕಾಶ ನೀಡಬೇಕು. ಅಂಗೀಕಾರ ಮತ್ತು ಬಿಡುಗಡೆ ತೀರ್ಮಾನ ಗೌರ‍್ನಿಂಗ್ ಕೌನ್ಸಿಲ್‌ನಲ್ಲೇ ಆಗಬೇಕು. ಆದರೆ, ಈ ಪ್ರಕರಣದಲ್ಲಿ ಎಲ್ಲಾ ತೀರ್ಮಾನಗಳು ನಿರ್ದೇಶಕರ ಹಂತದಲ್ಲೇ ನಡೆದಿವೆ.
ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತುಪಡಿಸಿ ೭ ತಿಂಗಳು ಕಳೆದಿದೆ. ಅವರಿಗೆ ಮಾಸಿಕ ಶೇಕಡ ೭೫ರಷ್ಟು ವೇತನವನ್ನು ಪಾವತಿಸ ಲಾಗುತ್ತಿದೆ. ವಿಚಾರಣೆ ನಡೆಸಿ, ಪ್ರಕರಣ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಇನ್ನೂ ಕ್ರಮ ಜರುಗಿಸಿಲ್ಲ.
ನೇಮಕ ಅಕ್ರಮ: ರಾಷ್ಟ್ರಪತಿ ಆಳ್ವಿಕೆಯಿದ್ದಾಗ ೨೦೦೮ರಲ್ಲಿ ೧೦೦ ಶುಶ್ರೂಷಕಿಯರನ್ನು ನೇಮಿಸಿಕೊಳ್ಳಲಾಗಿತ್ತು. ಅದರಲ್ಲಿ ಭಾರಿ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ನೇಮಕ ಪ್ರಕ್ರಿಯೆ ಯಲ್ಲಿ ಅರ್ಜಿ ನಮೂನೆಗಳ ವಿತರಣೆ ಮತ್ತು ಸಲ್ಲಿಸುವಿಕೆಯಿಂದಲೇ ಲಂಚಾವತಾರ ಕಾಲೂರಿತ್ತು. ಮೌಖಿಕ ಸಂದರ್ಶನ ದಲ್ಲಿ ಗೋಲ್‌ಮಾಲ್ ನಡೆದಿದೆ. ಈ ನೇಮಕಕ್ಕೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅನುಮೋದನೆ ಸಿಕ್ಕಿರುವುದು ಮತ್ತೊಂದು ವಿಶೇಷ.
ಸಚಿವರ ಕರಾಮತ್ತು: ಎರಡು ತಿಂಗಳ ಹಿಂದಷ್ಟೇ ಪ್ರಭಾರ ನಿರ್ದೇಶಕರು ಜಿಲ್ಲಾಸ್ಪತ್ರೆಯ  ೮ ಮಂದಿ ವೈದ್ಯರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದರು. ಆಗ ಅವರೆಲ್ಲರೂ ಕೆಎಟಿ ಮೊರೆ ಹೋಗಿದ್ದರು. ಮಿಮ್ಸ್‌ನಿಂದ ಬಿಡುಗಡೆಗೊಂಡು ಮಾತೃ ಇಲಾಖೆಗೆ ತೆರಳುವಂತೆ ಕೆಎಟಿ ಸೂಚಿಸಿತ್ತು. ೮ ವೈದ್ಯರ ಪೈಕಿ ಒಂದಿಬ್ಬರು ಪ್ರಭಾವಿಗಳಿದ್ದರು. ಅವರ ಬೆನ್ನಿಗೆ ಜಿಲ್ಲೆಯ ಬಹುತೇಕ ಶಾಸಕರು, ಸಂಸದರು ನಿಂತರು. ಶಿಫಾರಸಿಗೆ ಮಣಿದ ವೈದ್ಯ ಶಿಕ್ಷಣ ಸಚಿವರು ಸಾರಾಸಗಟು ಎಂಟೂ ಮಂದಿಯನ್ನೂ ವಾಪಸ್ ಮಿಮ್ಸ್‌ಗೆ ಮರಳುವಂತೆ ಕರಾಮತ್ತು ಪ್ರದರ್ಶಿಸಿದ್ದಾರೆ.
ಒಂದು ದಿನದ ವೈದ್ಯರು: ಮಿಮ್ಸ್ ಮತ್ತು ಜಿಲ್ಲಾಸ್ಪತ್ರೆಯಲ್ಲಿ ರೇಡಿಯಾಲಜಿ ವಿಭಾಗದ ವೈದ್ಯರೇ ಇಲ್ಲ. ಹಾಗಾಗಿ ಸಿಟಿ ಸ್ಕ್ಯಾನಿಂಗ್ ಸಹಿತ ಇತರೆ ಸೌಲಭ್ಯ ಅಲಭ್ಯ. ಮಂಡ್ಯಕ್ಕೆ ಬರಲು ಬೆಂಗಳೂರು ವೈದ್ಯ ಕಾಲೇಜಿನ ರೇಡಿಯಾಲಜಿ ವಿಭಾಗದ ಮುಖ್ಯಸ್ಥರೊಬ್ಬರು ಕೋರಿಕೆ ಸಲ್ಲಿಸಿದ್ದರೂ ಗೌರ‍್ನಿಂಗ್ ಕೌನ್ಸಿಲ್ ಪರಿಗಣಿಸಿಲ್ಲ. ಎಂಸಿಐ ತಂಡ ಪರಿಶೀಲನೆಗೆಂದು ಬಂದಾಗ ಖಾಲಿ ಇರುವ ಹುದ್ದೆಗಳಿಗೆ ಹೊರಗಿನ ಅರ್ಹ ವೈದ್ಯರನ್ನು ಒಂದು-ಎರಡು ದಿನದ ಮಟ್ಟಿಗಷ್ಟೇ ಸಂಭಾವನೆ ಕೊಟ್ಟು ಕರೆಸಿಕೊಳ್ಳಲಾಗುತ್ತದೆ. ಸಮಿತಿ ನಿರ್ಗಮಿಸಿದ ಮರು ಕ್ಷಣವೇ ಅವರೆಲ್ಲಾ ಮಂಡ್ಯವನ್ನು ಖಾಲಿ ಮಾಡುತ್ತಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ