ಪ್ರವಾಸಿ ತಾಣಗಳಲ್ಲಿ ಮೈಸೂರಿಗಿಂತ ಮಂಡ್ಯ ಜಿಲ್ಲೆ ಕಮ್ಮಿಯೇನಲ್ಲ

ಮತ್ತೀಕೆರೆ ಜಯರಾಮ್ ಮಂಡ್ಯ
ಸಮೃದ್ಧ ನೀರಾವರಿಯಿಂದ ಕೂಡಿದ ‘ಶ್ರೀಮಂತ’ ಮಂಡ್ಯ ಜಿಲ್ಲೆಗೆ ತನ್ನದೇ ಆದ ಇತಿಹಾಸವಿದೆ. ಬಯಲುನಾಡಿನ ಈ ಪ್ರದೇಶ ಸಾಂಸ್ಕೃತಿಕ ಪರಂಪರೆಯ ವೈವಿಧ್ಯತೆ ಮೆರೆದಿದೆ. ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿದ ಈ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ.
ಕಾವೇರಿ ಮಡಿಲಲ್ಲಿರುವ ಈ ಜಿಲ್ಲೆಯಲ್ಲಿ ರಾಜ ಮಹಾರಾಜರ ಆಳ್ವಿಕೆಯ ಕುರುಹುಗಳಾಗಿರುವ ಕೋಟೆ-ಕೊತ್ತಲಗಳು, ರಮಣೀಯ ಸ್ಥಳಗಳು, ಕಣ್ಮನ ಕೋರೈಸುವ ಪ್ರವಾಸಿ ತಾಣಗಳು, ಐತಿಹ್ಯ ಸಾರುವ ಸ್ಮಾರಕಗಳು, ಭಕ್ತರ ಸಾಗರವನ್ನು ಕಾಣುವಂತಹ ಯಾತ್ರಾ ಸ್ಥಳಗಳು ಇಲ್ಲಿ ಸಾಕಷ್ಟಿವೆ. 
ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೆರೆಯ ಮೈಸೂರಿಗಿಂತ ಮಂಡ್ಯ ಜಿಲ್ಲೆ ಕಮ್ಮಿಯೇನಲ್ಲ. ಆದರೆ, ಮೈಸೂರಿಗೆ ದೊರೆತಷ್ಟು ಮನ್ನಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಹರಿದು ಬಂದ ಅನುದಾನ  ಮಂಡ್ಯ ಜಿಲ್ಲೆ ಪಾಲಿಗಿಲ್ಲ. ಜಿಲ್ಲೆಯ ಪ್ರವಾಸೋದ್ಯಮ ಸರಕಾರದಿಂದ ಉಪೇಕ್ಷಿಸಲ್ಪಟ್ಟಿರುವುದು ವಿಪರ್ಯಾಸ. 
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳನ್ನೆಲ್ಲಾ ನೋಡಲು ಒಂದೆರಡು ದಿನ ಸಾಲುವುದೇ ಇಲ್ಲ. ಅಷ್ಟೊಂದು ತಾಣಗಳು ಇಲ್ಲಿವೆ. ಕೆಲ ರಮಣೀಯ ಸ್ಥಳಗಳು ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿರುವ ಪ್ರವಾಸಿ ಮಾರ್ಗದರ್ಶಿಯ ಪಟ್ಟಿಯಲ್ಲಿ ಮಾಯವಾಗಿವೆ. ಪ್ರವಾಸೋದ್ಯಮ ಇಲಾಖೆಯ  ನಿರ್ಲಕ್ಷ್ಯದಿಂದ ಅವೆಷ್ಟೋ ತಾಣಗಳು ಮರೆಯಾಗಿವೆ.
ಕೆಆರ್‌ಎಸ್, ಬೃಂದಾವನ ಮತ್ತು ರಂಗನತಿಟ್ಟು ಪಕ್ಷಿಧಾಮದಂತಹ ಮಹತ್ವ ಪಡೆದ ಸ್ಥಳಗಳು ಮಂಡ್ಯ ಜಿಲ್ಲೆಯಲ್ಲೇ ಇವೆ. ಒಂದಿಷ್ಟು ಅಭಿವೃದ್ಧಿ ಕಂಡಿರುವ ಆ ತಾಣಗಳು ಮೈಸೂರಿಗೆ ಸೇರಿದ್ದೆನ್ನುವಂತೆ ಬಿಂಬಿಸುವ ಮೂಲಕ ಮಂಡ್ಯದ ಮಹತ್ವವನ್ನು ಕಡಿಮೆ ಮಾಡುವ ಕೆಲಸ ಪ್ರವಾಸೋದ್ಯಮ ಇಲಾಖೆಯಿಂದಲೇ ಆಗಿದೆ.

1 ಕಾಮೆಂಟ್‌: