ಹೊಂಡ ಸಿಟಿ: 99 ಕೋಟಿ ರೂ.ವೆಚ್ಚದಲ್ಲಿ ರಸ್ತೆ ದುರಸ್ತಿ

ವಿಕ ಸುದ್ದಿಲೋಕ ಮೈಸೂರು
‘ನಾವೇಕೆ ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು, ಗುಂಡಿ ಬಿದ್ದ ರಸ್ತೆಗಳಲ್ಲಿ  ನಾವೇಕೆ ಸಂಚರಿಸಬೇಕು ?’ ಎಂಬ ಮೈಸೂರಿಗರ  ಸಿಟ್ಟು-ಸೆಡವು, ಕೋಪ-ತಾಪ, ಆಕ್ರೋಶ-ಆತಂಕಕ್ಕೆ ಮಣಿದ ಪಾಲಿಕೆ ಗುಂಡಿ ಮುಚ್ಚಿಸುವ ಕೆಲಸಕ್ಕೆ ಇಳಿದಿದೆ.
೨೨ ಕೋಟಿ ರೂ. ವೆಚ್ಚದಲ್ಲಿ  ರಸ್ತೆ ದುರಸ್ತಿ ಕಾಮಗಾರಿ ಶುರುವಾಗಿದೆ. ಮೇಯರ್ ಸಂದೇಶ್ ಸ್ವಾಮಿ, ಪಾಲಿಕೆ ಆಯುಕ್ತ ಕೆ. ಎಸ್. ರಾಯ್ಕರ್ ಅವರು ಕೊಟ್ಟ ಮಾತನ್ನು  ಉಳಿಸಿ ಕೊಂಡಿದ್ದಾರೆ.
‘ಆದರೆ ....’. ನಾಗರಿಕರು ಅಡ್ಜಸ್ಟ್ ಮಾಡಿ ಕೊಳ್ಳಬಾರದು ಎಂಬ ವಿಜಯ ಕರ್ನಾಟಕ ಪತ್ರಿಕೆಯ ಕಳಕಳಿ ಇಷ್ಟಕ್ಕೆ ನಿಂತಿಲ್ಲ. ೩೨ ರಸ್ತೆ ದುರಸ್ತಿಗೆ ಪಾಲಿಕೆ ಖರ್ಚು ಮಾಡುತ್ತಿರುವ ವೆಚ್ಚ  ಒಂದಲ್ಲ, ಎರಡಲ್ಲ...೨೨ ಕೋಟಿ ರೂ. ಅಂದರೆ ಒಂದು ರಸ್ತೆಗೆ ಸರಾಸರಿ ೭೦ ಲಕ್ಷ ರೂ. ಹಾಗಾಗಿ, ಸ್ಥಳೀಯ ನಾಗರಿಕರು ಇಷ್ಟು ಹಣದಲ್ಲಿ ಗುತ್ತಿಗೆದಾರರು ಯಾವ ರೀತಿ ಕೆಲಸ ಮಾಡುತ್ತಾರೆ, ಈ ಕಾಮಗಾರಿ ನಡೆಯುವ ಸಂದರ್ಭದಲ್ಲಿ  ಸ್ಥಳೀಯ ಪಾಲಿಕೆ ಸದಸ್ಯರು ಮುಂದೆ ನಿಂತು, ಗುಣಮಟ್ಟದ ಕೆಲಸ ಮಾಡಿಸುವರೇ ಇಲ್ಲವೇ ಗುತ್ತಿಗೆದಾರರೊಂದಿಗೆ ಸೇರಿಕೊಂಡು ‘ಗುಂಡಿ’  ಮುಚ್ಚುವರೇ ? - ಇಂಥ ಸಂಗತಿಗಳ ಬಗ್ಗೆಯೂ ಗಮನಹರಿಸ ಬೇಕಿದೆ. ಅನುಮಾನಗಳು ಕಂಡುಬಂದಲ್ಲಿ ಪತ್ರಿಕೆಗೆ ತಿಳಿಸಲೂ ಬಹುದು.
ಇಷ್ಟೆಲ್ಲಾ ಏಕೆ ನಿಗಾ ವಹಿಸಬೇಕು  ಎಂದ್ರೆ, ಕಳೆದ ವರ್ಷ ಜೂನ್‌ನಲ್ಲಿ ಮೈಸೂರು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯನ್ನು ನೆನಪಿಸಿಕೊಳ್ಳಬೇಕಿದೆ.
ಗುಂಡಿ ಲೆಕ್ಕದಲ್ಲಿ ೩ ಕೋಟಿ ನುಂಗಿದ್ದರು: ೨೦೦೯ರ ಜೂನ್‌ನಲ್ಲಿ ಅಂದಿನ ಮೇಯರ್ ಪುರುಷೋತ್ತಮ್ ಅಧ್ಯಕ್ಷತೆಯಲ್ಲಿ ನಡೆಯು ತ್ತಿದ್ದ  ಕೌನ್ಸಿಲ್ ಸಭೆಯಲ್ಲಿ, ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಅವರು ಗುಂಡಿ ರಸ್ತೆಗಳ ವಿಷಯವನ್ನು ಪ್ರಸ್ತಾಪಿಸಿದ್ದರು.
‘೨೦೦೮-೦೯ನೇ ಸಾಲಿನಲ್ಲಿ (ಅಯೂಬ್‌ಖಾನ್ ಅವಧಿ) ೨೬ ವಾರ್ಡ್‌ಗಳ ರಸ್ತೆಗಳ ಗುಂಡಿ ಮುಚ್ಚಲು ೨.೮೯ ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಪಾಲಿಕೆ ಕಾರ್ಯಪಾಲಕ ಎಂಜನಿಯರ್ ನನಗೆ ಲಿಖಿತವಾಗಿ ಮಾಹಿತಿ ಕೊಟ್ಟಿದ್ದಾರೆ. ಅವರ ಹೇಳಿಕೆ ಪ್ರಕಾರ ಶೇ.೮೨ರಷ್ಟು  ಕಾಮಗಾರಿ ಪೂರ್ಣಗೊಂಡಿದೆ. ಆದರೆ, ನಾನಂತೂ ಪಾಲಿಕೆ ಸಿಬ್ಬಂದಿ ಗುಂಡಿ ಮುಚ್ಚಿದ್ದನ್ನು ನೋಡಿಯೇ ಇಲ್ಲ. ಬರೀ ಮಣ್ಣು ಹಾಕಿದ್ದಾರಷ್ಟೆ’ ಎನ್ನುತ್ತಾರೆ ಪಾಲನೇತ್ರ.
ಪಾಲಿಕೆಯ  ಅಂದಿನ ಲೆಕ್ಕಪತ್ರ ಹಾಗೂ ಪರಿಶೋಧನೆ ಸಮಿತಿ ಅಧ್ಯಕ್ಷೆಯೂ ಆಗಿದ್ದ  ಪಾಲನೇತ್ರ ಸಭೆಯ ಮುಂದಿಟ್ಟ ಈ ವಿಷಯ, ಯಾರಿಗೂ ಗೊತ್ತೇ ಇರಲಿಲ್ಲ. ಹಾಗಾಗಿ ಈ ವಿಷಯದ ಕುರಿತು ಸದನದಲ್ಲಿ ಗಂಭೀರ ಚರ್ಚೆ ಶುರುವಾಯಿತು. ‘ಇದು ಹೇಗೆ ಸಾಧ್ಯ, ೩ ಕೋಟಿ ರೂ. ಗಳಲ್ಲಿ  ಗುಂಡಿ ಮುಚ್ಚಿಸಿರು ವುದು ಎಲ್ಲಿ ?’ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಬಹಳಷ್ಟು ಸದಸ್ಯರು ತನಿಖೆಗೆ ಆಗ್ರಹಿಸಿದರು.
ಇದಕ್ಕೆ ಮಣಿದ ಪುರುಷೋತ್ತಮ್- ‘ಎಲ್ಲೆಲ್ಲಿ ಕಾಮಗಾರಿ ನಡೆದಿದೆ, ಇನ್ನೂ ಎಲ್ಲಿ ನಡೆಯುತ್ತಿದೆ ಎನ್ನುವುದನ್ನು ತಿಳಿಯಲು ಸ್ಥಳ ಪರಿಶೀಲನೆ ಮಾಡಿ, ತನಿಖೆ ನಡೆಸೋಣ. ಆನಂತರ ಕ್ರಮ ಕೈಗೊಳ್ಳೋಣ’ ಎಂದು  ಭರವಸೆ ನೀಡಿದ್ದರು.
ಆದರೆ ಅದು ಕೂಡ ಮತದಾರರಿಗೆ ನೀಡುವ ಭರವಸೆಯಾಗಿಯೇ ಉಳಿಯಿತು. ತನಿಖೆಯೂ ನಡೆಯಲಿಲ್ಲ, ಯಾರ ಮೇಲೂ ಕ್ರಮ ಕೈಗೊಳ್ಳಲಿಲ್ಲ. ‘ವ್ಯವಸ್ಥೆಯ ಪಾಲು ದಾರರು’ ಗುಂಡಿ ಮುಚ್ಚಿಸುತ್ತೇವೆಂದು ಹೇಳಿ, ತಮ್ಮ -ತಮ್ಮ ಜೇಬು ಮುಚ್ಚಿಸಿಕೊಂಡರು.  ಜನ ಎಚ್ಚರಿಕೆಯಿಂದ ಇರದಿದ್ದರೆ, ಈಗಿನ ೨೨ ಕೋಟಿ ರೂ.  ಕೂಡ ಯಾರ‍್ಯಾರದ್ದೋ ಜೇಬು ಸೇರಬಹುದು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ