ಬಿಸಿಲು ಬಂದ್ರೆ ಧೂಳ್... ಮಳೆ ಬಂದ್ರೆ ತೇಲ್...!

ವಿಕ ವಿಶೇಷ, ಮೈಸೂರು
ವಿಶ್ವವಿಖ್ಯಾತ ದಸರಾ ಮಹೋತ್ಸವ  ಸಮೀಪಿಸುತ್ತಿದೆ. ‘ಜನೋತ್ಸವಕ್ಕೆ ಇನ್ನಷ್ಟು ಮೆರಗು ತುಂಬಲು ವ್ಯಾಪಕ ಸಿದ್ಧತೆ ಕೈಗೊಳ್ಳಲಾಗುತ್ತಿದೆ ’ಎಂದು ಸಂಘಟಕರು ಹೇಳುತ್ತಿದ್ದಾರಾದರೂ, ನಗರದ ಬೀದಿಗಳಲ್ಲಿ ಅದಿನ್ನೂ ‘ಅಗೋಚರ ’!
ಅಂದರೆ, ಸಾಂಸ್ಕೃತಿಕ ನಗರಿಯ ಜನರಿಗೆ ನಿತ್ಯ ನರಕ ಪ್ರಾಯವಾಗಿರುವ ರಾಜ ಮಾರ್ಗ,ಉಪ ಮಾರ್ಗಗಳಲ್ಲಿನ ಹೊಂಡ, ಗುಂಡಿಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಹಿಂದಿನ ವರ್ಷ ಗಳಂತೆ ಕನಿಷ್ಠ  ‘ತೇಪೆ ’ಹಾಕುವ ಕೈಂಕರ್ಯಕ್ಕೂ ಚಾಲನೆ ದೊರಕಿಲ್ಲ...ಎಂಬಲ್ಲಿಗೆ  ಈ ಬಾರಿ ದಸರೆ ಮಹೋತ್ಸವದ  ಪ್ರವಾಸಿ ಆಕರ್ಷಣೆಗಳ ಪಟ್ಟಿಯಲ್ಲಿ ರಸ್ತೆಗಳ ಹೊಂಡ,ಗುಂಡಿ ರಾರಾಜಿಸುವುದು, ಮಳೆ ಬಂದರೆ ‘ಬೋನಸ್’ ಸ್ವರೂಪದಲ್ಲಿ ಕೆಸರೆರಚಾಟ ಬಹುತೇಕ ಖಚಿತ !
ಭರವಸೆ ಕತೆ ಏನಾಯ್ತು: ಇತ್ತೀಚೆಗೆ ದಸರೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಹಿರಿಯ ಪತ್ರಕರ್ತರು ರಸ್ತೆಗಳ ದುರವಸ್ಥೆ, ತುರ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದ್ದರು. ಸಚಿವರ  ನಿರ್ದೇಶನದ  ಮೇರೆಗೆ ವಿವರಣೆ ನೀಡಿದ ನಗರ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್,ಟೆಂಡರ್ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸುತ್ತೇವೆ. ಸೆ.೩೦ರೊಳಗೆ ಎಲ್ಲಾರಸ್ತೆಗಳ ದುರಸ್ತಿ ಮುಗಿಯಲಿದೆ ಎಂದು ಭರವಸೆ ನೀಡಿದ್ದರು.
ಮಣ್ಣು ಹಾಕಿದರು: ಅದಾಗಿ ಎರಡು ವಾರಗಳಾದರೂ ಯಾವೊಂದು ರಸ್ತೆಗೂ ಚಿಕಿತ್ಸೆ ದೊರಕಿಲ್ಲ. ಪಾಲಿಕೆಯ ಗ್ಯಾಂಗ್‌ಮನ್‌ಗಳು ‘ಶಸ್ತ್ರ ಸಜ್ಜಿತ’ರಾಗಿ ಬಂದು ಕೆಲವು ರಸ್ತೆಗಳ ಭಯಾನಕ ಗುಂಡಿಗಳಿಗೆ ‘ಮಣ್ಣು’ ಹಾಕಿದರಾದರೂ,ಉಪಕಾರ ಕ್ಕಿಂತ ಅಪಕಾರವಾಗಿದ್ದೇ ಹೆಚ್ಚು. ಮುಚ್ಚಿದ ಬೆನ್ನಿಗೇ ಧಾರಾಕಾರ ಮಳೆ ಸುರಿದು, ಆ ಪ್ರದೇಶಗಳೆಲ್ಲ ಕೆಸರು ಗದ್ದೆ ಗಳಾಗಿ ಮಾರ್ಪಾಡಾಗಿ ಸಂಚಾರ ಇನ್ನಷ್ಟು ದುಸ್ತರ ವಾಯಿತು. ಮರುದಿನದ ಬಿಸಿಲಿಗೆ ಎಲ್ಲಾ ಧೂಳ್ ಮಗಾ ಧೂಳ್ !
ಜಸ್ಕೋ ಭೀತಿ: ಇದು ಒಂದೆರೆಡು-ಮೂರು ರಸ್ತೆಯ ಕತೆಯಲ್ಲ. ಹೃದಯಭಾಗ, ಪ್ರಮುಖ ಬಡಾವಣೆಯ ಬಹುತೇಕ ಮುಖ್ಯರಸ್ತೆಗಳದ್ದು ಇಂಥದೇ ದುಸ್ಥಿತಿ. ನಗರದಲ್ಲಿ ನಡೆಯುತ್ತಿರುವ ನರ್ಮ್, ಜಸ್ಕೋ ಕಾಮಗಾರಿಗಳು ಹಲವು ಉತ್ತಮ ರಸ್ತೆಗಳನ್ನು ಹದಗೆಡಿಸಿದ್ದು ಸುಳ್ಳಲ್ಲ. ಸರಸ್ವತಿಪುರಂ ಮತ್ತಿತರ ವಾರ್ಡ್‌ಗಳಲ್ಲಿ ಕೆಲ ತಿಂಗಳ ಹಿಂದೆ ಎಲ್ಲಾ ರಸ್ತೆ ಗಳನ್ನು ದುರಸ್ತಿ ಮಾಡಲಾಗಿತ್ತು. ಅದಾಗಿ ತಿಂಗಳಲ್ಲೇ  ಜಸ್ಕೋ  ಪ್ರಾಯೋಗಿಕವಾಗಿ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭಿಸಿ, ಎಲ್ಲಾ ರಸ್ತೆಗಳನ್ನು ‘ನುಂಗಿ’ ನೀರು ಕುಡಿಯಿತು.
ಈ ಹಿನ್ನೆಲೆಯನ್ನು ಗಮನಿಸಿದರೆ, ‘ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಮಾಡಿ’ ಎಂದು ಆಗ್ರಹಿಸುವುದು ಅಧಿಕಾರಿ, ಜನಪ್ರತಿನಿಧಿ ಮತ್ತು ಗುತ್ತಿಗೆದಾರರ ಪಾಲಿಗೆ ‘ಹಬ್ಬದೂಟ’ ವಾಗಿ ಪರಿಣಮಿಸುವ  ಅಪಾಯವೂ ಇದೆ. ಹಾಗಂತ, ‘ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು’ ಎದುರಿರುವ ನಾಡಹಬ್ಬವನ್ನು ಹೊಂಡ,ಗುಂಡಿಗಳ  ಜತೆಗೇ ಮಾಡಿ ಮುಗಿಸುವುದೂ ನ್ಯಾಯವಲ್ಲ.ಕನಿಷ್ಠ ಗುಂಡಿಗಳಿಗೆ ಮಣ್ಣಿನ ಬದಲು ಡಾಂಬರು ತೇಪೆಯನ್ನಾದರೂ ಹಾಕುವ ಕೆಲಸ  ಜರೂರು ಆಗಬೇಕು.ಈ ವಿಷಯದಲ್ಲಿ ಜನ ಸಹಿಸಬಾರದು. ಈ ಹಿನ್ನೆಲೆಯಲ್ಲಿ ಅಧಿಕಾರಸ್ಥರ ಕಣ್ಣು ತೆರೆಸುವ  ಸಚಿತ್ರ ‘ಹೊಂಡಾಸಿಟಿ’ ಸರಣಿ ಇಂದಿನಿಂದ ಆರಂಭ. ನಿತ್ಯ ಒಂದೊಂದು ರಸ್ತೆಗಳ ‘ನರಕ ದರ್ಶನ’ ಅನಾವರಣವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ