ಮನರಂಜನಾ ದಸರೆಯಲ್ಲಿ ಅದದೇ ಕಲಾವಿದರು...

ವಿಕ ಸುದ್ದಿಲೋಕ ಮೈಸೂರು
‘ಅಳಿಯ ಅಲ್ಲ ಮಗಳ ಗಂಡ’ ಎಂಬುದೊಂದು ಗಾದೆ ಮಾತು. ದಸರೆಗೆ ಸಂಬಂಧಿಸಿದ ಕೆಲವು ವಿದ್ಯಮಾನ ಈ ಮಾತಿಗೆ ಅನ್ವರ್ಥ.ಯುವ ದಸರೆಯ ಹೇಷಾರವದ ಪೊರೆ ಕಳಚಿ,ಹೊಸ ವೇಷ ತೊಟ್ಟಿರುವ  ‘ಮನರಂಜನಾ ದಸರೆ’ಯ ವಿಷಯದಲ್ಲಂತೂ ಈ ಮಾತು ಹೆಚ್ಚು ಅನ್ವಯ.
ನಾಲ್ಕೈದು ವರ್ಷದಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವಕರನ್ನು,ಗಣ್ಯಾತಿಗಣ್ಯ ಪಡ್ಡೆಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದ ಯುವ ದಸರೆ ಮತ್ತು ಆ ಬಾಬ್ತಿನಲ್ಲಿ ನಡೆಯುತ್ತಿದ್ದ ದೊಡ್ಡ ಮ್ತೊತದ ಖರ್ಚು ವೆಚ್ಚಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ದಸರೆಯ ಸಂಸ್ಕೃತಿ,ಪರಂಪರೆಗೆ ತದ್ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿರುವ  ಯುವೋತ್ಸವಕ್ಕೆ ಕಡಿವಾಣ ಹಾಕಿ ಎಂಬ ಒತ್ತಾಯ ವ್ಯಾಪಕವಾಗಿ ಕೇಳಿಬಂದಿತ್ತು.
ಆರಂಭದಲ್ಲಿ ದಸರೆಯ ಉಸ್ತುವಾರಿ ವಹಿಸಿದ್ದ  ಸಚಿವ ಸುರೇಶ್ ಕುಮಾರ್ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ  ಈ ಅಹವಾಲಿಗೆ ಸ್ಪಂದಿಸಿದ್ದು ಸುಳ್ಳಲ್ಲ. ಯುವ ದಸರೆಯನ್ನು ಮಾನಸ ಗಂಗೋತ್ರಿಯ ಬಯಲು ರಂಗಮಂದಿರಕ್ಕೆ ಸೀಮಿತಗೊಳಿಸಲಾಗುವುದು,ಅಂತರ ವಿವಿ ಮಟ್ಟದ ಸ್ಪರ್ಧೆಗಳಲ್ಲಿ ಯುವಕರ ಸಂಭ್ರಮ ವ್ಯಕ್ತವಾಗುವಂತೆ ವೇದಿಕೆ ರೂಪಿಸಲಾಗುವುದು ಎಂದು ಭರವಸೆಯನ್ನೂ ನೀಡಿದ್ದರು.
ಗಡಿಪಾರಾದರೂ: ಆದರೆ,‘ಯುವ ದಸರೆ’ಯ ಹೆಸರಿನಲ್ಲಿ ನಡೆಯುತ್ತಿದ್ದ ‘ಸಾಂಸ್ಕೃತಿಕ ದಂಧೆ ’ ದಸರೆಯಲ್ಲಿ ಯಾವ ಮಟ್ಟಿಗೆ ಹಾಸು ಹೊಕ್ಕಾ ಗಿತ್ತೆಂದರೆ, ಯುವ ದಸರೆಯ ಹೆಸರು ಗಂಗೋತ್ರಿ ಪರಿಸರಕ್ಕೆ ‘ಗಡಿ’ ಪಾರಾದರೂ, ಮನರಂಜನೆಯ ಹೆಸರಿನಲ್ಲಿ ಹಿಂದಿನ ‘ವರಸೆ’ಯಲ್ಲೇ ವಕ್ಕರಿಸುತ್ತಿದೆ. ‘ಮನರಂಜನಾ ದಸರೆ ’ಯ ಉಸ್ತುವಾರಿ ವಹಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ನಡೆಸಿರುವ ಸಿದ್ಧತೆಗಳನ್ನು ಅವಲೋಕಿಸಿದರೆ ‘ಅಳಿಯ ಅಲ್ಲ ಮಗಳ ಗಂಡ’ ಎನ್ನುವಂತೆ ಯುವ ದಸರೆ ‘ಹೊಸ ವೇಷ’ ದಲ್ಲಿ ಅನಾವರಣಗೊಳ್ಳುವ  ಸೂಚನೆಗಳು ವ್ಯಕ್ತವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ