ರಾಜ್ಯ ಮುಕ್ತ ವಿವಿ ವೆಬ್‌ಸೈಟ್ ಕಳ್ಳರಿಗೆ ‘ಮುಕ್ತ’

ವಿಕ ವಿಶೇಷ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದರೂ ವಿವಿಯ ಐಟಿ ನಿರ್ವಹಣಾ ವಿಭಾಗ ಮಾತ್ರ ತಣ್ಣಗೆ ಮಲಗಿದೆ.
ಅಧಿಕೃತ ವೆಬ್‌ಸೈಟ್‌ಗಳಿಗೆ ವೈರಸ್‌ಗಳನ್ನು ಬಿಟ್ಟು ಈಗಾಗಲೇ ಕಳ್ಳಕಿಂಡಿಗಳನ್ನು ಕೊರೆಯಲಾಗಿದೆ. ಅಷ್ಟೇ ಅಲ್ಲದೇ ಅಲ್ಲಿನ ಮಾಹಿತಿಗಳನ್ನೆಲ್ಲಾ ಜಾಲಾಡಿ ಮೂಲಕ್ಕೆ ಧಕ್ಕೆ ತರುವ ಕೆಲಸ ಸಾಫ್ಟ್‌ವೇರ್ ಕಳ್ಳರಿಂದ ನಡೆಯುತ್ತಿದೆ.
ಅಂಕಪಟ್ಟಿ ಸೇರಿದಂತೆ ಪ್ರಮುಖ ದಾಖಲೆಗಳನ್ನೇ ತಿದ್ದುವಲ್ಲಿ ಸಾಫ್ಟ್‌ವೇರ್ ಕಳ್ಳರು ಕೈ ಚಳಕ ತೋರಿದರೆ ಎನ್ನುವ ಭಯ ಸದ್ಯಕ್ಕೆ ಕಾಡುತ್ತಿದೆ. ಮುಕ್ತ ವಿವಿ ವೆಬ್‌ಸೈಟ್‌ನಿಂದ ಮಾಹಿತಿ ಪಡೆಯಲು ಮುಂದಾ ಗುವ ಕಂಪ್ಯೂಟರ್‌ಗೂ ವೈರಸ್ ತಗಲುತ್ತಿದೆ. ಹ್ಯಾಕರ್‌ಗಳ ಹಾವಳಿಯ ಬಗ್ಗೆ ವಿವಿ ಆಡಳಿತಕ್ಕೆ ತಿಳಿದಿದ್ದರೂ ನಿರ್ಲಕ್ಷ್ಯ ತಳೆದಿರುವುದು ವಿದ್ಯಾರ್ಥಿ ವಲಯದಲ್ಲಿ ಹೊಸ ಆತಂಕ ಸೃಷ್ಟಿಸಿದೆ.
ಎಚ್ಚರಿಸಿದ ಗೂಗಲ್: ಮುಕ್ತ ವಿವಿಯಲ್ಲಿ ಹೀಗೆ ವೆಬ್‌ಸೈಟ್ ಅನ್ನು ಕೊರೆದಿರುವ ಮಾಹಿತಿಯನ್ನು ಗೂಗಲ್ ಸಂಸ್ಥೆ ಈಗಾಗಲೇ ನೀಡಿದೆ. ಅದರಲ್ಲೂ ಆಗಸ್ಟ್ ೨೭ರಿಂದ ಸೆಪ್ಟೆಂಬರ್ ೬ರವರೆಗೆ ನಡೆಸಿದ ತಪಾಸಣೆಯಲ್ಲಿ ಸುಮಾರು ೨೪ ಕಿಂಡಿಗಳನ್ನು(ಎಕ್ಸ್ ಪ್ಲಾಯಿಟ್)ಮಾಡಲಾಗಿದೆ. ಕೂಡಲೇ ಈ ಬಗ್ಗೆ ಎಚ್ಚರ ವಹಿಸಿ ಎಂದು ಸೂಚಿಸಿದೆ. ಚೀನಾದ ಕೆಲ ಹ್ಯಾಕರ್‌ಗಳೇ ಕರಾಮತ್ತು ಪ್ರದರ್ಶಿಸುತ್ತಿದ್ದಾರೆ ಎಂದೂ ಹೇಳಲಾಗಿದೆ. ಜತೆಗೆ ಯಾವ್ಯಾವ ಹ್ಯಾಕರ್‌ಗಳು ಒಳ ಪ್ರವೇಶಿಸಿದ್ದರೆಂಬ ಮಾಹಿತಿಯನ್ನೂ ರವಾನಿಸಿದೆ. ಈ ಹಿಂದೆಯೂ ವೆಬ್‌ಸೈಟ್ ಕಳ್ಳತನದ ಬಗ್ಗೆ ವಿಧಾನಪರಿಷತ್ ಸದಸ್ಯ ಹಾಗೂ ಆಡಳಿತ ಮಂಡಳಿ ಸದಸ್ಯ ಮರಿತಿಬ್ಬೇಗೌಡ ವಿವಿ ಗಮನಕ್ಕೆ ತಂದಿದ್ದಾರೆ. ಕಳ್ಳ ಕಿಂಡಿಗಳನ್ನು ಬಿಗಿಯಾಗಿ ಮುಚ್ಚಲು ಸೂಚಿಸಿದ್ದರೂ ಯಾರೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಮಲಗಿದ ಐಟಿ ವಿಭಾಗ: ಮುಕ್ತ ವಿವಿ ಈಗ ರಾಜ್ಯ,ದೇಶವಲ್ಲದೇ ಹೊರ ದೇಶಗಳಲ್ಲೂ ಹಲವು ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಇಂಥ ಸಂದರ್ಭದಲ್ಲಿ ಶೈಕ್ಷಣಿಕ ಕಾರ‍್ಯಕ್ರಮ, ಮಾನವ ಸಂಪನ್ಮೂಲ ನಿರ್ವಹಣೆ, ಆರ್ಥಿಕ ಲೆಕ್ಕಾಚಾರಕ್ಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಪಾತ್ರ ಬಹಳ ಪ್ರಮುಖ. ವಿ.ವಿ.ಯಲ್ಲಿ ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ವಿಭಾಗವಿದೆ. ಹಿರಿಯ ಅಧಿಕಾರಿ, ಕೆಳ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಿರ್ವಹಣೆಯ ಹೊಣೆ. ಆದರೆ ಈ ವಿಭಾಗ ಮಲಗಿದೆ. ಒಂದೂವರೆ ವರ್ಷದ ಹಿಂದೆಯೇ ವೆಬ್‌ಸೈಟ್‌ಗೆ ಕನ್ನ ಹಾಕು ತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕರೂ ಐಟಿ ವಿಭಾಗ ತಲೆ ಕೆಡಿಸಿಕೊಳ್ಳಲಿಲ್ಲ. ಕೊಳ್ಳೆ ಹೊಡೆಯುವವರು ಹೊಡೆದುಕೊಳ್ಳಲಿ ಎಂದು ತಣ್ಣಗಿತ್ತು.
ಆನ್‌ಲೈನ್‌ಗೆ ನೀತಿ ಇಲ್ಲ: ಮುಕ್ತ ವಿಶ್ವವಿದ್ಯಾನಿಲಯ ಆರಂಭವಾಗಿ ಒಂದೂವರೆ ದಶಕ ಕಳೆದಿದೆ. ಆನ್‌ಲೈನ್ ಶಿಕ್ಷಣವೂ ಆರಂಭವಾಗಿ ೩-೪ ವರ್ಷವಾಗಿದೆ. ಆದರೂ ತಾಂತ್ರಿಕ ಭದ್ರತೆ ಕಲ್ಪಿಸಿಲ್ಲ. ತಂತ್ರಜ್ಞಾನ ನಿರ್ವಹಣೆಗೆ ಪ್ರತಿ ಸಂಸ್ಥೆ ತನ್ನದೇ ಆದ ನೀತಿಯನ್ನು ರೂಪಿಸಿಕೊಳ್ಳುತ್ತದೆ. ಒಂದುವೇಳೆ ಆನಾಹುತ ಘಟಿಸಿದರೂ ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳ ಲಾಗುತ್ತದೆ. ಆದರೆ ಮುಕ್ತ ವಿವಿ ಮಾತ್ರ ಸುಮ್ಮನಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುವಂಥ ಘಟನೆ ನಡೆದರೂ ನಿರ್ಲಕ್ಷ್ಯ ವಹಿಸುವುದು ಸರಿಯೇ ಎಂಬ ಪ್ರಶ್ನೆಗೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಜತೆಗೆ ಪರೀಕ್ಷೆ ನಡೆಸುವ ವಿವಿ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸಿದ ನಾರ್ಟನ್ ಸಿಮೆಟ್ರಿ ಕಂಪನಿ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು.
ಬೇರೆ ವಿವಿ, ಸಂಸ್ಥೆಗೂ ಬೇಕು ಎಚ್ಚರ: ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳು, ಸರಕಾರಿ ಇಲಾಖೆಗಳು, ಸಂಸ್ಥೆಗಳ ವೆಬ್‌ಸೈಟ್‌ಗಳು ಹೀಗೆ ಕಳ್ಳರ ಪಾಲಾಗಿರುವ ಸಾಧ್ಯತೆಯೇ ಹೆಚ್ಚು. ಅದರಲ್ಲೂ ಪ್ರಮುಖ ಇಲಾಖೆಗಳ ಮೂಲಕ್ಕೆ ಸಾಫ್ಟ್‌ವೇರ್ ಕಳ್ಳರು ಕೈ ಹಾಕಿದರೆ ಆಗುವ ಅನಾಹುತ ಅಪಾರ. ಇದನ್ನು ತಪ್ಪಿಸಲು ಆಗಾಗ ಭದ್ರತೆಯನ್ನು ಪರಿಶೀಲಿಸುವುದು ಸೂಕ್ತ ಎಂಬುದು ತಂತ್ರಜ್ಞರ ಸಲಹೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ