ಆಹಾರ ಇಲಾಖೆ ಆದೇಶ ತಂದ ತಾಪತ್ರಯ

ಪಿ.ಓಂಕಾರ್ ಮೈಸೂರು
ಬಿಪಿಎಲ್ ಕಾರ್ಡ್ ಹೊಂದಿದ ಹಲವು ಪಡಿತರ ಫಲಾನುಭವಿಗಳಿಗೆ ಹಬ್ಬಕ್ಕೆ ಮುನ್ನ ‘ವಿದ್ಯುತ್ ಬಿಲ್’ ಶಾಕ್. ಗೌರಿ-ಗಣೇಶನ ಹಬ್ಬಕ್ಕೆ ಅಕ್ಕಿ,ಸಕ್ಕರೆ,ಸೀಮೆ ಎಣ್ಣೆ ಸಿಕ್ಕುತ್ತದೆಯೊ, ಇಲ್ಲವೊ ಎನ್ನುವ ಆತಂಕ.
ಪಡಿತರಕ್ಕೂ ವಿದ್ಯುತ್‌ಗೂ ಎತ್ತಣಿಂದೆತ್ತ ಸಂಬಂಧ ಎಂಬ ಪ್ರಶ್ನೆಯೇ.ಅದು ಸಹಜವೆ. ಆದರೆ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಗಸ್ಟ್ ಮಾಸಾಂತ್ಯದಲ್ಲಿ ಹೊರಡಿಸಿರುವ ಆದೇಶ ಹಲವು ಪಡಿತರದಾರರಿಗೆ ಅಕ್ಷರಶಃ ‘ಶಾಕ್’ಹೊಡೆಸುತ್ತಿದೆ.
ಏನಿದು ಆದೇಶ: ‘ನಗರ ಪಾಲಿಕೆ,ಪುರಸಭೆ,ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂತ್ಯೋದಯ, ಅಕ್ಷಯ ಹಾಗೂ ಎಪಿಎಲ್ ಕಾರ್ಡುದಾರರು ಸೆಪ್ಟೆಂಬರ್‌ನ ಪಡಿತರ ಪಡೆಯುವಾಗ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಚಿಲ್ಲರೆ ಸೀಮೆ ಎಣ್ಣೆ ವಿತರಕರಿಗೆ ಹಿಂದಿನ ಯಾವುದಾದರೂ ೧ ತಿಂಗಳ ವಿದ್ಯುತ್ ಬಿಲ್ ಅಥವಾ ಬಿಲ್‌ನ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು’ ಎಂದು ಇಲಾಖೆ ಆಯುಕ್ತರು ಆ.೩೧ರಂದು ಹೊರಡಿಸಿದ್ದಾರೆ.
ಸಮಸ್ಯೆ ಏನು: ವಿದ್ಯುತ್ ಸಂಪರ್ಕ ಹೊಂದಿದವರಿಗೆ ಆದೇಶದಿಂದ ಸಮಸ್ಯೆಯೇನಿಲ್ಲ. ಬಿಲ್ ಪ್ರತಿಯನ್ನು ನೀಡಿ ಪಡಿತರ ಖರೀದಿಸುತ್ತಿದ್ದಾರೆ. ಆದರೆ, ವಿದ್ಯುತ್ ಸಂಪರ್ಕ ಇಲ್ಲದ, ಇದ್ದರೂ ತಮ್ಮ ಹೆಸರಿನಲ್ಲಿ ವಿದ್ಯುತ್ ಮೀಟರ್ ಹೊಂದಿರದ ಬಡವರು,ಅತಿ ಬಡವರು  ಆತಂಕಕ್ಕೊಳಗಾಗಿದ್ದಾರೆ.
‘ನಮ್ಮನೆಯಲ್ಲಿ ಕರೆಂಟೇ ಇಲ್ಲ, ಬಿಲ್ ಕಟ್ಟೋದು ಎಲ್ಲಿಂದ? ಬಿಲ್ ಕೊಡದೆ ಅಕ್ಕಿ,ಸಕ್ಕರೆ ಕೊಡಲ್ಲ ಅಂತಾರೆ. ವೋಟಿನ ಗುರುತು ಚೀಟಿ ನೀಡ್ತೀನಿ ಎಂದರೂ ಕೊಡಲ್ಲ ಎಂದರು. ಹಬ್ಬ ದಲ್ಲೇ ಹೀಗೆ ಮಾಡಿದರೆ ಹೇಗೆ’ ಎನ್ನುವುದು ಬಿಪಿಎಲ್ ಫಲಾನುಭವಿಯೊಬ್ಬರ ಪ್ರಶ್ನೆ. ಒಬ್ಬರದ್ದಷ್ಟೇ ಅಲ್ಲ,ಇಂಥದೇ ನೂರಾರು ದೂರುಗಳನ್ನು ಇಲಾಖೆ ಅಧಿಕಾರಿಗಳೇ ಎದುರಿಸುತ್ತಿದ್ದಾರೆ.
ಉದ್ದೇಶವೇನು: ‘ಕೆಲವರು ಎರಡು,ಮೂರು ಕಾರ್ಡ್ ಹೊಂದಿದ್ದು, ಪಡಿತರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸುಳ್ಳು ವಿಳಾಸ ನೀಡಿ ಕಾರ್ಡ್ ಪಡೆದವರ ಸಂಖ್ಯೆಯೂ ದೊಡ್ಡದಿದೆ. ವಿಳಾಸ ಪತ್ತೆ ಹಚ್ಚಿ ದುರುಪಯೋಗ ತಪ್ಪಿಸುವುದು ಆದೇಶದ ಉದ್ದೇಶ ’ ಎನ್ನುವುದು ಅಧಿಕಾರಿಗಳ ಸಮಜಾಯಿಷಿ.
ಉದ್ದೇಶವೇನೋ  ಒಳ್ಳೆಯದೇ. ಆದರೆ, ಆಯ್ದುಕೊಂಡ ‘ವಿಧಾನ ’ ದಡ್ಡತನದ್ದು ಎನ್ನುವುದು ಈಗಿನ ವಿದ್ಯಮಾನದಿಂದ ವೇದ್ಯ. ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ವಾಸಿಸುವ ಎಲ್ಲರೂ ವಿದ್ಯುತ್ ಸಂಪರ್ಕ ಪಡೆದಿರುತ್ತಾರೆ ಎಂದು ಉನ್ನತಾಧಿಕಾರಿಗಳು ತಪ್ಪಾಗಿ ಭಾವಿಸಿದಂತಿದೆ.
ಕರೆಂಟಿಲ್ಲದವರು: ಪುರಸಭೆ,ಪಟ್ಟಣ ಪಂಚಾಯಿತಿಯಷ್ಟೇ ಅಲ್ಲ,ವಿದ್ಯುತ್ ದೀಪ ‘ಬೆಳಗದ’ ಅದೆಷ್ಟೋ ಕೊಳಚೆ ಪ್ರದೇಶದ ಮನೆಗಳು ಮಹಾನಗರದಲ್ಲೇ ಇವೆ. ದೀಪ ಇದ್ದರೂ ತಮ್ಮ ಹೆಸರಿನಲ್ಲಿ ಮೀಟರ್ ಹೊಂದದ ‘ವಠಾರ ’ ನಿವಾಸಿ ಕುಟುಂಬ ಗಳ ಸಂಖ್ಯೆಯೂ ದೊಡ್ಡದಿದೆ. ಅವರೆಲ್ಲ ‘ಎಲ್ಲಿಂದ ಬಿಲ್ ತಂದು ನೀಡುತ್ತಾರೆ ’ಎನ್ನುವ ಪ್ರಶ್ನೆಗೆ ಅಧಿಕಾರಿಗಳ ಬಳಿಯೇ ಉತ್ತರವಿಲ್ಲ.ಹಲವೆಡೆಯಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈಗ  ‘ಪ್ಲೇಟ್’ ಬದಲಾಯಿಸುತ್ತಿದ್ದಾರೆ. ಇಷ್ಟರಲ್ಲೇ ಬೇರೊಂದು ಆದೇಶ ಬರುತ್ತೆ ಎಂದೂ ಹೇಳುತ್ತಾರೆ. ಅಷ್ಟರಲ್ಲಿ ಹಬ್ಬ ಮುಗಿದಿರುತ್ತೆ ಎನ್ನುವುದು ಫಲಾನುಭವಿಗಳ ಆತಂಕ.
ಸೂಕ್ತ ಕ್ರಮದ ಭರವಸೆ: ‘ವಿದ್ಯುತ್ ಬಿಲ್ ನೀಡುವುದು ಕಡ್ಡಾಯ ಎಂದು ಆದೇಶಿಸಲಾಗಿದೆಯಷ್ಟೆ. ಪಡಿತರ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ.ನ್ಯಾಯಬೆಲೆ ಅಂಗಡಿಯವರು ಹಾಗೇ ನಾದರೂ ಮಾಡುತ್ತಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ’ ಎನ್ನುತ್ತಾರೆ  ಇಲಾಖೆ ಮೈಸೂರು ಸಹಾಯಕ ನಿರ್ದೇಶಕ (ಉಪ ನಿರ್ದೇಶಕ ಪ್ರಭಾರ)ಮಂಜುನಾಥ್. ಆದರೆ,‘ಇಲಾಖೆ ಆದೇಶದಂತೆ ಕರೆಂಟ್ ಬಿಲ್ ನೀಡುವವರೆಗೆ ಪಡಿತರ ನೀಡಲ್ಲ’ ಎಂಬುದು ಹಲವು ನ್ಯಾಯಬೆಲೆ ಅಂಗಡಿ ಮಾಲೀಕರ ಪಟ್ಟು. ಆದೇಶವನ್ನು ತಮ್ಮ ‘ಲಾಭ’ಕ್ಕೆ ಆದಷ್ಟು ಬಳಸಿಕೊಳ್ಳುವ ಹುನ್ನಾರ ಅವರದ್ದು.
ವಿದ್ಯುತ್ ಬಿಲ್ ಹೊಂದಿರದ ನೂರಾರು ಬಡವರಿಗೆ ‘ಶಾಕ್’ ನೀಡುತ್ತಿರುವ ಆದೇಶವನ್ನು ಕೂಡಲೇ ಪರಿಷ್ಕರಿಸಿ, ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸೂಕ್ತ ನಿರ್ದೇಶನ  ನೀಡದಿದ್ದರೆ,‘ಹಬ್ಬಕ್ಕೆ ಹೆಚ್ಚುವರಿ ಪಡಿತರ’ ಎಂಬ ಇಲಾಖೆಯ ಇನ್ನೊಂದು ಭರವಸೆ ಅರ್ಥ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ