ಎದ್ದು ಕುಳಿತಿದ್ದಾರೆ ರೇಷ್ಮೆ ಇಲಾಖೆ ಮಂದಿ

ಕುಂದೂರು ಉಮೇಶಭಟ್ಟ ಮೈಸೂರು
ವರ್ಷಗಳಿಂದ ಮಲಗಿದ್ದ ರಾಜ್ಯ ರೇಷ್ಮೆ ಇಲಾಖೆಗೆ ಈಗ ಎದ್ದು ಕುಳಿತುಕೊಳ್ಳುವ ಕಾಲ.
ರೇಷ್ಮೆ ಇಲಾಖೆ ಆಯುಕ್ತರಾಗಿ ಬಂದಿರುವ ಪಿ.ಮಣಿವಣ್ಣನ್ ಅವರೀಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬಡಿದೆಬ್ಬಿಸುವ ಕಾರ‍್ಯದಲ್ಲಿ ನಿರತ.
ಕೆಲಸವನ್ನೇ ಮರೆತಿದ್ದ ಹಲವರಿಗೆ ಆಯುಕ್ತರಿಂದ ಬರುತ್ತಿರುವ ಎಸ್‌ಎಂಎಸ್, ಇ-ಮೇಲ್‌ಗಳು ಎದ್ದು ಕುಳಿತುಕೊಳ್ಳುವಂತೆ ಮಾಡಿವೆ,
ಮಣಿವಣ್ಣನ್ ಇನ್ನು ನಮ್ಮನ್ನು ಮಲಗಲು ಬಿಡೋಲ್ಲ ಎನ್ನುವ ಹೆದರಿಕೆ ಸಿಬ್ಬಂದಿಯಲ್ಲಿ ನಿಧಾನವಾಗಿ ಬರತೊಡಗಿದೆ. ಇದನ್ನೇ ಬಳಸಿಕೊಂಡು ಇಲಾಖೆ ಅಧಿಕಾರಿಗಳಿಗೆ ಸೆಪ್ಟೆಂಬರ್ ೨೮ರಿಂದ ಮೂರು ದಿನ ಮೈಸೂರಿನಲ್ಲಿ ಪ್ರೇರಣಾ ಕಾರ‍್ಯಕ್ರಮವನ್ನು ನಡೆಸಲಾಗುತ್ತಿದೆ. ೨ನೇ ಹಂತದಲ್ಲಿ ಸಿಬ್ಬಂದಿಗಳ ಮೇಲೆ ಈ ಪ್ರಯೋಗ. ಆ ಮೂಲಕ ರೇಷ್ಮೆ ಇಲಾಖೆಗೆ ಗುರಿ ನಿಗದಿಪಡಿಸುವ ಕಾರ‍್ಯವೂ ಸದ್ದಿಲ್ಲದೇ ನಡೆಯುತ್ತಿದೆ.
ರೇಷ್ಮೆಕೃಷಿ ಏರಿಳಿತ
ಕರ್ನಾಟಕದಲ್ಲಿ ರೇಷ್ಮೆಯನ್ನು ಪರ‍್ಯಾಯ ಕೃಷಿಯಾಗಿ ರೂಪಿಸಬೇಕು. ಆ ಮೂಲಕ ಕರ್ನಾಟಕದ ಅತ್ಯುತ್ತಮ ದರ್ಜೆಯ ರೇಷ್ಮೆಯನ್ನು ದೇಶವಲ್ಲದೇ ಹೊರದೇಶಗಳಿಗೂ ಸರಬರಾಜು ಮಾಡುವಷ್ಟು ನಮ್ಮವರು ಸ್ವಾವಲಂಬಿಗಳಾಗಬೇಕು ಎನ್ನುವ ಕನಸಿನೊಂದಿಗೆ ಹಲವಾರು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಯಿತು. ಪ್ರತ್ಯೇಕ ಇಲಾಖೆಯನ್ನೇ ಹುಟ್ಟು ಹಾಕಿ ಅಧಿಕಾರಿಗಳು, ಸಿಬ್ಬಂದಿಗಳ ನಿಯೋಜನೆಯಾಯಿತು. ದಕ್ಷಿಣ ಕರ್ನಾಟಕದಲ್ಲಿ ರೇಷ್ಮೆ ಕೃಷಿ ಯಶಸ್ಸಿಯ ಹಾದಿ ಹಿಡಿಯಿತಾದರೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ರೇಷ್ಮೆ ಜನರ ಭಾಗವಾಗಲೇ ಇಲ್ಲ.
೧೯೮೦ರ ದಶಕದಲ್ಲಿ ವಿಶ್ವ ಬ್ಯಾಂಕ್‌ನಿಂದ ರೇಷ್ಮೆಗೆ ಉತ್ತೇಜನ ನೀಡುವ ಕಾರ‍್ಯಕ್ರಮ ವಾಯಿತು. ಆಗ ೧೦೦ ಕೋಟಿ ರೂ.ಗಳ ಆರ್ಥಿಕ ನೆರವು ವಿಶ್ವಬ್ಯಾಂಕ್‌ನಿಂದ ದೊರೆತಾಗ ಸಾಕಷ್ಟು ಕಾರ‍್ಯಕ್ರಮಗಳು ಜಾರಿಯಾದವು. ಸಾಕಷ್ಟು ರೇಷ್ಮೆ ಕೇಂದ್ರಗಳು ತಲೆ ಎತ್ತಿದವು. ರೈತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡು ಬಂದು ಉತ್ಪಾದನೆಯಲ್ಲೂ ಏರಿಕೆಯಾಯಿತು. ಆನಂತರ ಜಪಾನ್ ಸೇರಿದಂತೆ ಹಲವು ದೇಶಗಳ ತಂತ್ರಜ್ಞಾನವನ್ನು ನಮ್ಮಲ್ಲಿ ಅಳವಡಿಸುವ ಕಾರ‍್ಯಕ್ರಮ ಗಳು ನಡೆದವು.
ಇಷ್ಟರ ನಡುವೆ ದೇಶದ ಮುಕ್ತ ಆರ್ಥಿಕ ನೀತಿಯಿಂದಾಗಿ ರೇಷ್ಮೆಯ ಆಮದು ಪ್ರಮಾಣದಲ್ಲಿ ಏರಿಕೆ, ಘಟಾನುಘಟಿಗಳ ಲಾಬಿ, ನಿರೀಕ್ಷಿತ ಬೆಲೆ ಸಿಗದೇ ಸಾಕಷ್ಟು ಮಂದಿ ರೇಷ್ಮೆ ಕೃಷಿಯಿಂದ ದೂರ ಸರಿಯತೊಡಗಿದರು. ಚಾಮರಾಜನಗರ ಜಿಲ್ಲೆ ಯೊಂದರಲ್ಲೇ ರೇಷ್ಮೆಯನ್ನು ನೆಚ್ಚಿಕೊಂಡಿದ್ದ ಸಾವಿರಾರು ಕುಟುಂಬಗಳು ಪರ‍್ಯಾಯ ಬೆಳೆಯತ್ತ ಮುಖ ಮಾಡಿವೆ. ಬಹಳಷ್ಟು ಕಡೆ ರೇಷ್ಮೆ ಕೇಂದ್ರಗಳೆಲ್ಲಾ ಹಾಳು ಕೊಂಪೆಗಳಾಗಿವೆ.
ಮಲಗಿದ್ದ ರೇಷ್ಮೆ ಇಲಾಖೆಗೆ
ಇಂಥ ಸ್ಥಿತಿಯಲ್ಲಿ ಸಕ್ರಿಯವಾಗಿಯೇ ಕೆಲಸ ಮಾಡುತ್ತಿದ್ದ ರೇಷ್ಮೆ ಇಲಾಖೆಯೂ ನಿಧಾನವಾಗಿ ತನ್ನ ಮಹತ್ವ ಕಳೆದುಕೊಳ್ಳತೊಡಗಿತು. ಸ್ಪಷ್ಟವಾದ ನೀತಿ ಇಲ್ಲದಿರುವುದು, ನಿರಂತರವಾಗಿ ಆಯುಕ್ತರ ಬದಲಾವಣೆ ಫಲವಾಗಿ ಇಲಾಖೆ ಮಲಗಿಯೇ ಹೋಯಿತು.
ರೇಷ್ಮೆ ಇಲಾಖೆಯ ಕಚೇರಿಯೊಳಗೆ ಕಾಲಿಟ್ಟು ನೋಡಿ, ಅಲ್ಲಿನ ಸಂಭಾಷಣೆ ಹೀಗೆ ಇರುತ್ತದೆ.
ಆಯ್ಯೋ ಕೆಲಸ ಏನಿಲ್ಲಾ ಕಣಯ್ಯಾ, ಒಂದು ಚಹಾ ಕುಡಿದು ಬರೋಣ ಬಾ ಎಂದು ಒಬ್ಬರು ಹೇಳಿದರೆ, ಇಲ್ಲಿಯೇ ಸ್ವಲ್ಪ ಹೊತ್ತು ನಿದ್ದೆ ಮಾಡಿ ಮುಗಿಸುತ್ತೇನೆ ಇರು, ಬರೀ ಸಹಿ ಮಾಡಿ ದಿನದೂಡುವುದೇ ನಮ್ಮ ಕೆಲಸವಾಗಿ ಹೋಗಿದೆ ಎಂದು ಹೇಳುವವರನ್ನು ಕಾಣಬಹುದು. ಕೆಲವರಂತೂ ಕ್ಷೇತ್ರ ಕಾರ‍್ಯದ ನೆಪದಲ್ಲಿ ಕಚೇರಿಗಳಿಗೆ ಅತಿಥಿಗಳಾಗಿದ್ದಾರೆ. ಕೆಲವರು ಮಾತ್ರ ನಿಷ್ಠೆಯಿಂದ ಕೆಲಸ ಮಾಡುತ್ತಲೇ ಇದ್ದಾರೆ.
ಬಾಲಸುಬ್ರಹ್ಮಣ್ಯರಿಂದ ಮಣಿವಣ್ಣನ್‌ವರೆಗೆ..
ಇಂಥ ಸ್ಥಿತಿಯಲ್ಲಿ ರೇಷ್ಮೆ ಇಲಾಖೆಯನ್ನು ಯಾರು ಕಾಪಾಡಬೇಕು ಎಂದು ಕೆಲವರು ಹೇಳುತ್ತಲೇ ಇರುತ್ತಾರೆ. ಹಿಂದೆ ಬಾಲಸುಬ್ರಹ್ಮಣ್ಯಂ ಅವರು ಇಲಾಖೆ ನಿರ್ದೇಶಕರಾಗಿದ್ದಾಗ ಸಾಕಷ್ಟು ಚಟುವಟಿಕೆ ನಡೆದವು. ಆನಂತರ ವಿ.ಮಧು, ಆರ್.ಜಿ.ನಡದೂರ್ ಅವರು ಆಯುಕ್ತರಾಗಿದ್ದಲೂ ಇಲಾಖೆ ಜೀವಂತವಾಗಿಯೇ ಇತ್ತು. ಕಳೆದ ವರ್ಷ ಶಂಭುದಯಾಳ್ ಮೀನಾ ಅವರನ್ನು ಇಲಾಖೆಗೆ ನೇಮಿಸಲಾಯಿತು. ಬದಲಾವಣೆ ಗಾಳಿ ಬೀಸುತ್ತಿದೆ ಎನ್ನುವ ಹೊತ್ತಿಗೆ ಮೀನಾ ಎತ್ತಂಗಡಿಯಾದರು. ಪೆರುಮಾಳ್ ಅವರು ಗಣಿ ಗದ್ದಲದಲ್ಲಿ ಯಾರದ್ದೋ ಮೇಲಿನ ಸಿಟ್ಟಿಗೆ ಇಲ್ಲಿಗೆ ಬಂದರು. ಈಗ ಮಣಿವಣ್ಣನ್ ಅವರನ್ನು ನೇಮಿಸಲಾಗಿದೆ. ಮೂರು ತಿಂಗಳಲ್ಲಿ ಅವರು ಇಲಾಖೆ ತಿಳಿಯುವ ಪ್ರಯತ್ನ ಮಾಡಿದ್ದಾರೆ. ಒಳ್ಳೆಯದನ್ನು ಮಾಡಬಹುದು ಎನ್ನುವ ನಿರೀಕ್ಷೆಯೊಂದಿಗೆ ಈಗ ಅಧಿಕಾರಿಗಳು, ಸಿಬ್ಬಂದಿಗಳನ್ನು ಸರಿ ದಾರಿಗೆ ತರಲು ಮುಂದಾಗಿದ್ದಾರೆ. ಈಗಾಗಲೇ ಅವರ ಇ-ಮೇಲ್, ಎಸ್‌ಎಂಎಸ್‌ಗಳು ಸಾಕಷ್ಟು ಕೆಲಸ ಮಾಡುತ್ತಿವೆ. ಮಣಿವಣ್ಣನ್ ಅವರದ್ದು ಆರಂಭಿಕ ಉತ್ಸಾಹವಾಗದೆ ಕನಿಷ್ಠ ಎರಡು ವರ್ಷ ಇಲ್ಲೇ ಇದ್ದು ಇಲಾಖೆ ಸುಧಾರಿಸಲಿ ಎಂಬುದು ಹಲವರ ನಿರೀಕ್ಷೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ