ಶಿಕ್ಷೆಯಾಗಬೇಕಾದವರಿಗೆ ವರ್ಗಾವಣೆ ಭಕ್ಷೀಸು...

ವಿಕ ವಿಶೇಷ ಮಂಡ್ಯ
ಇದೇನಪ್ಪಾ ತೆಂಗಿನ ಗರಿ ಕಡ್ಡಿ ಪೊರಕೆಗೆ ೨೫೦ ರೂ. !
ಹೌದೇ ಎಂದು ಹುಬ್ಬೇರಿಸಬೇಡಿ. ಕಾರಣ, ಮಂಡ್ಯ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನಕ್ಕೆ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ೨೦ ಲಕ್ಷ ರೂ. ವೆಚ್ಚದಲ್ಲಿ ಸಾಮಗ್ರಿಗಳನ್ನು ಖರೀದಿಸಿದ ಅಧಿಕಾರಿಗಳ ರಾಮ-ಕೃಷ್ಣನ ಲೆಕ್ಕಕ್ಕೆ ಇದೊಂದು ಉದಾಹರಣೆ. ಇಂಥ ಹಗರಣದಲ್ಲಿ ಭಾಗಿಯಾದ ಅಧಿಕಾರಿಗೆ ರಾಜ್ಯ ಸರಕಾರವೇ ಬೇರೆಡೆಗೆ ವರ್ಗಾಯಿಸಿ ಭಕ್ಷೀಸು ನೀಡಿದೆ.   
ಪೊರಕೆ ಅಷ್ಟೇ ಅಲ್ಲ. ಇತರೆ ಸಾಮಗ್ರಿಗಳ ಖರೀದಿ ಯಲ್ಲೂ ಗೋಲ್-ಮಾಲ್. ಮೆಟಲ್ ಪ್ಲೇಟ್‌ಗೆ ೬೫೦ ರೂ., ಬಾಣಲಿಗೆ ೬೨೫ ರೂ., ಕಸ ಸಾಗಿಸುವ ಗಾಡಿಗೆ ೧೫,೬೫೦ ರೂ. ಪಾವತಿಸಲಾಗಿದೆ. ತಾಲೂಕಿನ ೪೫ ಗ್ರಾ.ಪಂ.ಗಳಿಗೆ ತಲಾ ೫೬ ಸಾವಿರ ರೂ. ವೆಚ್ಚದಲ್ಲಿ ಸೋಲಾರ್ ಯುಪಿಎಸ್ ಖರೀದಿಸಲಾಗಿದೆ. ಸೋಲಾರ್ ಬೆಲೆ ಹೆಚ್ಚೆಂದರೆ, ೨೫ ಸಾವಿರ ರೂ.. ಯಾವುದಕ್ಕೂ ಇರಲೆಂದು ಕೊಟೇಷನ್ ಪಡೆದು ಖರೀದಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದವರಿಗೆ ಆರು ತಿಂಗಳಿಂದ ಕೂಲಿ ಹಣ ಕೊಟ್ಟಿಲ್ಲ. ಆದರೆ, ಈ ಯೋಜನೆಯ ಹಣದಲ್ಲಿ ಕಮೀಷನ್ ಆಸೆಗೆ ಸೋಲಾರ್ ಯುಪಿಎಸ್ ಖರೀದಿಸಲಾಗಿದೆ.
ಇತರೆ ಖರೀದಿ ಅವ್ಯವಹಾರ: ವಿವಿಧ ಅನುದಾನ ಗಳಡಿ ೨ ಲಕ್ಷ ರೂ. ವೆಚ್ಚದಲ್ಲಿ ಶಾಲೆಗಳಿಗೆ ಪೀಠೋಪಕರಣ, ಕಂಪ್ಯೂಟರ್, ಯುಪಿಎಸ್ ಖರೀದಿ, ೧.೩೩ ಲಕ್ಷ ರೂ.ನಲ್ಲಿ ಹೊಲಿಗೆ ಯಂತ್ರ ಖರೀದಿ, ೩ ಲಕ್ಷ ರೂ.ನಲ್ಲಿ ಆರೋಗ್ಯ ಇಲಾಖೆಗೆ ಲಿನನ್ ಮತ್ತು ಸಲಕರಣೆ ಖರೀದಿ, ೩ ಲಕ್ಷ ರೂ. ವೆಚ್ಚದಲ್ಲಿ ರೇಷ್ಮೆ ಇಲಾಖೆಗೆ ನೈಲಾನ್ ಪರದೆ, ಸ್ಟ್ರೇಯರ್ ಖರೀದಿಸಲಾಗಿದೆ. ೬೯ ಸಾವಿರ ರೂ.ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಹೊಲಿಗೆ ಯಂತ್ರ ಸರಬರಾಜು, ೪ ಲಕ್ಷ ರೂ. ವೆಚ್ಚದಲ್ಲಿ ಬಿಸಿಎಂ ಇಲಾಖೆಗೆ ಬಯೋಮೆಟ್ರಿಕ್ ಸಿಸ್ಟಂ, ಕುಡಿಯುವ ನೀರು, ಪಾತ್ರೆ ಸಾಮಗ್ರಿ, ೭೫ ಸಾವಿರ ರೂ.ನಲ್ಲಿ ಆರೋಗ್ಯ ಇಲಾಖೆಗೆ ಸ್ಟೆತಾಸ್ಕೋಪ್, ಪ್ಲಾಸ್ಟಿಕ್ ಮತ್ತು ಹ್ಯಾಂಡ್ ಟವಲ್ ಖರೀದಿಯನ್ನು ದರ ಪಟ್ಟಿ ಮುಖಾಂತರ ಕೈಗೊಳ್ಳಲಾಗಿದೆ. ಆದರೆ ಈ ಯಾವ ಖರೀದಿಗೂ ಜಾಹೀರಾತು ನೀಡಿಲ್ಲ. ಸೂಚನಾ ಫಲಕದಲ್ಲಿ ಪ್ರಕಟಿಸಿರುವುದಾಗಿ ಹೇಳಿ ರಹಸ್ಯ ಟೆಂಡರ್ ನಡೆಸಲಾಗಿದೆ. ಆದರೆ, ೯.೨೩ ಲಕ್ಷ ರೂ.ನಲ್ಲಿ ಶಿಶು ಅಭಿವೃದ್ಧಿ ಇಲಾಖೆಗೆ ಪೀಠೋಪಕರಣಗಳ ಪೂರೈಕೆಗಷ್ಟೇ ಟೆಂಡರ್ ನಡೆದಿದೆ.
ಲಕ್ಷಾಂತರ ರೂ. ನಷ್ಟ: ತಾಲೂಕು ಪಂಚಾಯಿತಿಗೆ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ಚುನಾಯಿತ ಪ್ರತಿನಿಧಿಗಳು ಬೊಬ್ಬೆ ಹಾಕುತ್ತಲೇ ಇದ್ದಾರೆ.
ಆದರೆ, ಒಂದೇ ವರ್ಷದಲ್ಲಿ ಸರಿ ಸುಮಾರು ೩೫-೪೦ ಲಕ್ಷ ರೂ. ಅವ್ಯವಹಾರ ನಡೆದಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇನ್ಯಾವ ಅಧಿಕಾರ ನೀಡಬೇಕು ಎಂಬ ಪ್ರಶ್ನೆ ಸೃಷ್ಟಿಸಿದೆ.
ಕಮೀಷನ್ ಹಂಚಿಕೊಳ್ಳುವವರೆಗೆ ತಾ.ಪಂ. ವರಿಷ್ಠರು ಮತ್ತು ಅಧಿಕಾರಿಗಳು ಮುಗುಮ್ಮಾಗಿದ್ದರು. ಇತ್ತೀಚೆಗೆ ಸಭೆಯೊಂದರಲ್ಲಿ ಅನುಮೋದನೆಗೆ ಲೆಕ್ಕಪತ್ರ ಇಟ್ಟಾಗ ಕೆಲ ಸದಸ್ಯರು ಬಂಡವಾಳ ಬಿಚ್ಚಿಟ್ಟರು. ಮಾನ-ಮರ್ಯಾದೆ ಜತೆಗೆ ಹುದ್ದೆಗೆ ಕುತ್ತು ಬರುವುದನ್ನು ಮನಗಂಡ ಭ್ರಷ್ಟರು, ಹಗರಣ ಬಯಲಾದ ಬಳಿಕ ಪರಸ್ಪರ ಕಚ್ಚಾಟಕ್ಕೆ ಇಳಿದರು. ಯಾರಿಗೆ ಎಷ್ಟು ಕಮೀಷನ್ ಸಿಕ್ಕಿದೆ ಎನ್ನುವ ಲೆಕ್ಕ ಸಮೇತ ಸತ್ಯ ಬಯಲು ಮಾಡಿದರು.
ಸರಕಾರದ ಶ್ರೀರಕ್ಷೆ: ಸಂಪೂರ್ಣ ಸ್ವಚ್ಛತಾ ಆಂದೋಲನ ಸರಕಾರದ ಮಹತ್ವಾಕಾಂಕ್ಷೆ ಯೋಜನೆ ನಿಜ. ಆದರೆ, ಯೋಜನೆಯ ಹಣವನ್ನು ತಿಂದು ತೇಗಿ ಹಳ್ಳಹಿಡಿಸುತ್ತಿರುವ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸರಕಾರವೇ ಶ್ರೀ ರಕ್ಷೆಯಾಗಿದೆ. ಹಗರಣ ಬೆಳಕಿಗೆ ಬಂದ ಬಳಿಕ ಸಾಮಾನ್ಯ ಸಭೆಯಲ್ಲಿ ಆಗಿನ ಕಾರ್ಯ ನಿರ್ವಹಣಾಧಿಕಾರಿ ಷಡಕ್ಷರಮೂರ್ತಿ, ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ವರದಿ ಬರಲಿ. ಎಲ್ಲವನ್ನೂ ಎದುರಿಸುವೆ. ಆರೋಪಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬೇರೆಡೆ ಹೋಗಲಾರೆ ಎಂದಿದ್ದರು. ಆದರೆ, ಚಿಕಿತ್ಸೆಗೆಂದು ರಜೆ ಹಾಕಿ ಹೋದವರು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಭಾರಿ ಭ್ರಷ್ಟಾಚಾರದ ಆರೋಪವಿದ್ದರೂ  ಅವರನ್ನು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಗೆ ವರ್ಗಾಯಿಸಿರುವ ಸರಕಾರವೇ ಪೇಚಿಗೆ ಸಿಕ್ಕಿ ಹಾಕಿಕೊಂಡಿದೆ.
ವರಿಷ್ಠರ ತಲೆದಂಡ: ಮಂಡ್ಯ ತಾ.ಪಂ. ಜಾ.ದಳ ತೆಕ್ಕೆಯಲ್ಲಿದೆ. ಸರಕಾರದ ವಿರುದ್ಧ ದಿನ ಬೆಳಗಾದರೆ ಅಬ್ಬರಿಸುತ್ತಿರುವ ದಳಪತಿಗಳು, ಈಗ ಅಧ್ಯಕ್ಷೆ ನಾಗರತ್ನ ಮತ್ತು ಉಪಾಧ್ಯಕ್ಷೆ ಮಮತಾ ಅವರಿಂದ ರಾಜೀನಾಮೆ ಕೊಡಿಸಿ ಕೈತೊಳೆದುಕೊಂಡಿದ್ದಾರೆ. ಕಳಂಕಿತ ವರಿಷ್ಠರೂ ರಾಜೀನಾಮೆ ನೀಡಿ ತಣ್ಣಗಿ ದ್ದಾರೆ. ಹಗರಣದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಪಾತ್ರದ ಬಗ್ಗೆ ಆರೋಪವಿದ್ದರೂ ಆರಾಮಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ