ಗಜಪಯಣಕ್ಕೆ ಸಂಭ್ರಮದ ಚಾಲನೆ

ಹನಗೋಡು ನಟರಾಜ್ ಹುಣಸೂರು
ನಾಡಹಬ್ಬದ ಚಟುವಟಿಕೆಗಳಿಗೆ ಚಾಲನೆ ನೀಡುವ ಗಜಪಯಣ -೨೦೧೦ಕ್ಕೆ ಶುಕ್ರವಾರ ಅದ್ದೂರಿ ಚಾಲನೆ..
ಮಳೆಯಿಂದಾಗಿ ಹಸಿರು ಹೊದ್ದ ಭೂರಮೆಯ ಸ್ವರ್ಗ ವಾಗಿರುವ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯಕ್ಕೆ ಸೇರಿದ ವೀರನಹೊಸಳ್ಳಿಯಲ್ಲಿ ಬಲರಾಮ ನೇತೃತ್ವದ ಗಜಪಡೆ ಕಾಡಿನಿಂದ ನಾಡಿನತ್ತ ಹೆಜ್ಜೆ ಹಾಕಿದವು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ಇತರೆ ಜನಪ್ರತಿನಿಧಿಗಳು, ಅಧಿಕಾರಿ ಸಮೂಹ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಉತ್ಸಾಹದ ನಡುವೆ ಗಜಪಡೆಗೆ ಪುಷ್ಪ ಎರಚಿ ಪಯಣಕ್ಕೆ ಶುಭ ಕೋರಿದರು.
ಗಜಪಯಣದ ನಾಯಕ ಬಲರಾಮ ರಾಜಗಾಂಭೀರ್ಯ ದಿಂದ ಹೊರ ನಡೆದಾಗ ಅಕ್ಕಪಕ್ಕದಲ್ಲಿ ಸಾಥ್ ನೀಡಿದ್ದು ಸರಳ, ವರಲಕ್ಷ್ಮಿ. ಜತೆಗೆ ಅಭಿಮನ್ಯು, ಅರ್ಜುನ ಹಾಗೂ ಗಜೇಂದ್ರನೂ ಗಜಪಯಣಕ್ಕೆ ಮೆರಗು ನೀಡಿದವು. ಒಂದಿನಿತು ಅಳುಕು ಆತಂಕವಿಲ್ಲದೇ  ಎಂದಿನಂತೆ ಶಾಂತವದನನಾಗಿಯೇ ಬಲರಾಮ ತನ್ನ ೧೨ನೇ ಜಂಬೂಸವಾರಿಗಾಗಿ ಮೈಸೂರಿನತ್ತ ಹೆಜ್ಜೆ ಹಾಕಿದ. ಅಲ್ಲಿಂದ ಲಾರಿ ಮೂಲಕ ಆರು ಆನೆಗಳು  ಸಂಜೆಯೇ ಮೈಸೂರು ತಲುಪಿ ಅರಣ್ಯ ಭವನದಲ್ಲಿ ಆಶ್ರಯ ಪಡೆದವು.
ನಾಡಿನ ಉತ್ಸವವಾಗಲಿ: ಗಜಪಯಣಕ್ಕೆ ಮೊದಲ ಬಾರಿ ಚಾಲನೆ ನೀಡಿದ ಸಚಿವ ಸುರೇಶ್‌ಕುಮಾರ್, ದಸರೆ ನಾಡಹಬ್ಬ ವಾಗಲಿ ಎಂದು ಆಶಿಸಿದರು. ಗಜಪಯಣಕ್ಕೆ ಹಿನ್ನೆಲೆ ಇದೆ. ಪ್ರಪಂಚದಲ್ಲೆ ಪ್ರಸಿದ್ಧಿಯಾದ ದಸರಾ ಉತ್ಸವದಲ್ಲಿ ಭಾಗವಹಿ ಸುವ ಗಜಗಳಿಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಎಲ್ಲರ ಸಹಕಾರದಿಂದ ದಸರೆ ನಾಡಿನ ಉತ್ಸವವಾಗಬೇಕು. ದಸರಾದಿಂದ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಇದು ನಮ್ಮ ನಾಡಿನ ಹೆಗ್ಗಳಿಕೆಯಾಗಿದೆ. ಎಲ್ಲ ಸಿದ್ಧತೆಗಳು ಭರದಿಂದ ನಡೆದಿದ್ದು , ಇದು ನಾಡಿನ ಉತ್ಸವವೆಂದು ತಿಳಿದು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಾಂಸ್ಕೃತಿಕ ಮೆರುಗು: ಕಳೆದ ಬಾರಿಯಷ್ಟು ಅದ್ಧೂರಿ ಕಾರ‍್ಯಕ್ರಮ ವಿಲ್ಲದಿದ್ದರೂ ನಿಗದಿತ ಸಮಯ ಬೆಳಗ್ಗೆ ೧೦ಕ್ಕೆ ಆರಂಭಗೊಂಡು ೧೧-೩೦ಕ್ಕೆ ಮುಕ್ತಾಯಗೊಂಡಿತು.
ಗಜಪಯಣ ಸಮಾರಂಭದಲ್ಲಿ ಗಿರಿಜನರ ಕೋಲಾಟ, ಮೈಲಾಂಬೂರಿನ ವೀರ ಕುಣಿತ, ವಾದ್ಯ ವೃಂದ, ನಂದಿಕಂಬ, ಹುಣಸೂರಿನ ಬಾಲಕರ ಸರಕಾರಿ ಶಾಲೆ ಮಕ್ಕಳ ಬ್ಯಾಂಡ್‌ಸೆಟ್, ನಾಗಾಪುರ ಹಾಡಿ ಆಶ್ರಯ ಶಾಲೆ, ಟೆಬೆಟ್ ಹಾಗೂ ಮೊರಾರ್ಜಿ ಶಾಲೆ ಮಕ್ಕಳ ಆಕರ್ಷಕ ನೃತ್ಯ ಕಾರ‍್ಯಕ್ರಮಗಳು ಸಮಾರಂಭಕ್ಕೆ ಮೆರುಗು ನೀಡಿದವು. ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಹಾಡಿ ಮತ್ತು ಗ್ರಾಮಗಳಿಂದ ಎರಡು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಿಕ್ಷಕ ಮಹೇಶ್ ನೇತೃತ್ವದ ತಂಡ ನಾಡಗೀತೆ, ರೈತಗೀತೆ ಹಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ