ಈ ಶ್ರಾವಣಕ್ಕೂ ಸ್ವರ ಹೊರಡಿಸಲಿಲ್ಲ !

ಚೀ. ಜ. ರಾಜೀವ ಮೈಸೂರು
ಶ್ರಾವಣ ಬಂದರೂ ಸ್ವರ ಮಾತ್ರ ಹೊರಡಲಿಲ್ಲ !
ಹೀಗೆ ಮಾತು ಆರಂಭಿಸಬೇಕಾದದ್ದು ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಬಗ್ಗೆ. ಈಗಾಗಲೇ ಘೋಷಣೆ ಯಾಗಿ, ಚಿಕ್ಕ ರೂಪದಲ್ಲಿ ಅಸ್ತಿತ್ವಕ್ಕೆ ಬಂದು ಎರಡು ವರ್ಷವೇ ಕಳೆದರೂ ಇನ್ನೂ ಚಟುವಟಿಕೆ ಆರಂಭವಾ ಗಿಲ್ಲ. ಮುಂದಿನ ತಿಂಗಳಿಂದ ವಿಶ್ವ ವಿದ್ಯಾಲಯ ಕಾರ‍್ಯಾರಂಭ ಮಾಡಲಿದೆ ಎಂಬ ಕುಲಪತಿಯ ವಚನ ಮತ್ತೆ ಸುಳ್ಳಾ ಗಿದೆ.
ಕುಲಪತಿ ಡಾ.ಹನುಮಣ್ಣ ನಾಯಕ ದೊರೆ  ಅವರು ಈ ಮೊದಲು ಘೋಷಿಸಿದ ಪ್ರಕಾರ  ಈ ಸೆಪ್ಟಂಬರ್‌ನಿಂದ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕಿತ್ತು. ಆದರೆ, ಇನ್ನೂ ಶಾಶ್ವತ ನೆಲೆಯೇ ಸಿಕ್ಕಿಲ್ಲ. ಜತೆಗೆ ಅನುದಾನದ ಕೊರತೆ, ವಿವಿ ಅಧಿನಿಯಗಳಿಗೆ ಸಮ್ಮತಿ ಸಿಗದಿರುವುದು -ನಾನಾ ಕಾರಣಗಳಿಗೆ ಸ್ವರ ಹೊರಡಲು ಮತ್ತೊಂದು ಶ್ರಾವಣ ಕಾಯಬೇಕು.
‘ವಿವಿ ಅಧಿನಿಯಮಗಳಿಗೆ ರಾಜ್ಯಪಾಲರ ಅಂಕಿತ ಬೀಳಬೇಕಿದೆ. ಜಿಲ್ಲಾಡಳಿತ ಸದ್ಯಕ್ಕೆ ತೋರಿಸಿರುವ ತಾತ್ಕಾಲಿಕ ನೆಲೆಯಲ್ಲಿ ಚಟುವಟಿಕೆ ಆರಂಭಿಸಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಇನ್ನೂ ಮುಗಿದಿಲ್ಲ. ಹಾಗಾಗಿ ಇನ್ನೂ ಸ್ವಲ್ಪ ತಡ’ ಎನ್ನುತ್ತಾರೆ ಡಾ. ದೊರೆ.
ಮೈಸೂರಿನಲ್ಲಿ  ಸಂಗೀತ ವಿವಿ ಆರಂಭ ಘೋಷಣೆ ಹೊರಬಿದ್ದಿದ್ದು ೨೦೦೭ರ ಬಜೆಟ್‌ನಲ್ಲಿ. ರೂಪ ಸಿಕ್ಕಿದ್ದು ೨೦೦೮ರ ಜುಲೈನಲ್ಲಿ. ಈ ಲೆಕ್ಕ ಹಿಡಿದರೂ ವಿವಿ ಗೆ ಎರಡು ವರ್ಷ ತುಂಬಿದೆ. ೨೦೦೯ರ ಅಂತ್ಯ ದಲ್ಲಿ ಕುಲಪತಿಯಾಗಿ ಅಧಿಕಾರ ವಹಿಸಿ ಕೊಂಡ ಡಾ. ದೊರೆಯವರು ನೆಲೆ ಹುಡುಕುವುದರಲ್ಲೇ ಸುಸ್ತಾಗಿದ್ದಾರೆ.
ವರ್ಷದಾರಂಭದಲ್ಲಿ  ವಿವಿ ಕ್ಯಾಂಪಸ್‌ಗೆ ತಾಲೂಕಿನ ವರಕೋಡು ಬಳಿ ೧೦೦ ಎಕರೆ ಭೂಮಿಯನ್ನು ಗುರುತಿ ಸಿತ್ತು. ಇನ್ನೇನು  ಭೂಮಿ ಕೈಗೆ ಬಂತು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆ ತಕರಾರು ತೆಗೆಯಿತು. ಪರಿಣಾಮ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಮಧ್ಯೆ ವ್ಯಾಜ್ಯ ಹುಟ್ಟಿತೇ ಹೊರತು ವಿವಿಗೆ ಭೂಮಿ ಸಿಗಲಿಲ್ಲ. ಕ್ಯಾಂಪಸ್ ನಿರ್ಮಾಣಕ್ಕೆ  ೧೦೦ ಎಕರೆ  ಭೂಮಿ ಸಿಗುತ್ತದೆಂಬ ನಿರೀಕ್ಷೆ ಹೊಂದಿದ್ದ ಕುಲಪತಿ, ಸೆಪ್ಟಂಬರ್‌ನಿಂದ ಚಟುವಟಿಕೆ ಆರಂಭಿಸುವುದಾಗಿ ಹೇಳಿದ್ದರು.
ಆಧುನಿಕ ಶಿಕ್ಷಣ ಮಾದರಿಯಲ್ಲೇ ಸಂಗೀತ ಹಾಗೂ ಪ್ರದರ್ಶಕ ಕಲೆಗಳಿಗೆ ಸಂಬಂಧಿಸಿದಂತೆ  ಬಿಎ, ಎಂಎ, ಡಿಪ್ಲೊಮಾ ಕೋರ್ಸ್‌ಗಳನ್ನು ಸಾಂಪ್ರದಾಯಿಕ ಹಾಗೂ ದೂರ ಶಿಕ್ಷಣ ಪದ್ಧತಿಯಲ್ಲಿ ನಡೆಸುವುದು, ಗುರುಕುಲ ಮಾದರಿಯಲ್ಲಿ ಕಲಾವಿದರ ತಯಾರಿ ಸೇರಿದಂತೆ ಎಲ್ಲವೂ ಆರಂಭವಾಗ ಲಿದೆ ಎಂದಿದ್ದರು. ಈ ಮಧ್ಯೆ ತನ್ನ ಅಸ್ತಿತ್ವದ ಸಾಬೀತಿಗೆ ಒಂದಿಷ್ಟು ಶಿಕ್ಷಣೇತರ ಕಾರ‍್ಯಕ್ರಮಗಳನ್ನು ನಡೆಸಲೂ ತೀರ್ಮಾನಿಸಲಾಗಿತ್ತು. ಆದರೆ ಭೂಮಿ ಪಡೆಯುವುದೇ ಬಹು ದೊಡ್ಡ ಸವಾಲಾಗಿದೆ. ಮೈಸೂರಿನ ಸಂಗೀತ ದಿಗ್ಗಜರು, ರಾಜಕಾರಣಿಗಳು, ಅಧಿಕಾರಿ ಗಳು ಸೇರಿದಂತೆ ಎಲ್ಲರ ಸಹಕಾರದಿಂದ ಹರ ಸಾಹಸ ಪಟ್ಟರೂ ಸಂಪಾದನೆ ಶೂನ್ಯ.
ಲಕ್ಷ್ಮೀಪುರಂ ಶಾಲೆ ತಾತ್ಕಾಲಿಕ ನೆಲೆ: ವರಕೋಡು ಜಮೀನು ಸಿಗಲಾರದು ಎಂದೆನಿಸಿದಾಗ ಸಂಗೀತ ವಿವಿ, ಇಲವಾಲ ಬಳಿ ಇರುವ ಅಲೋಕದ ಮೇಲೆ ಕಣ್ಣು ಹಾಕಿತು. ಅರಣ್ಯ ಇಲಾಖೆಗೆ ಸೇರಿದ ಅಲ್ಲಿ ಒಂದಿಷ್ಟು ಪಾರಂಪರಿಕ ಕಟ್ಟಡಗಳಿದ್ದು, ಆ ಸ್ಥಳ ಸೂಕ್ತವೆನಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಆದರೆ, ಅಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ ಎಂದು ಅರಣ್ಯ ಇಲಾಖೆ ಆಕ್ಷೇಪ ಸಲ್ಲಿಸಿತು. ಹಾಗಾಗಿ ಆ ಜಾಗವೂ ಸಿಗಲಿಲ್ಲ.
ಈ ನಡುವೆ ನಗರದ ಹೃದಯ ಭಾಗದ ಲಕ್ಷ್ಮೀಪುರಂ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ತಾತ್ಕಾಲಿಕವಾಗಿ ಬಳಸಲು ಜಿಲ್ಲಾಡಳಿತ ಸಂಗೀತ ವಿವಿಗೆ ಸೂಚಿಸಿದೆ. ಮಕ್ಕಳ ಕೊರತೆಯಿಂದ ತಾತ್ಕಾಲಿಕವಾಗಿ ಮುಚ್ಚಿರುವ ಶಾಲೆಯ ಕಟ್ಟಡದಲ್ಲೇ, ವಿವಿ ಆರಂಭವಾಗಲಿ. ಬಳಿಕ ಜಾಗ ಹುಡುಕಿದ ರಾಯಿತು ಎಂಬುದು ಜಿಲ್ಲಾಡಳಿತದ ನಿಲುವು. ಈ ಸಲಹೆ ಕುಲಪತಿಗೆ ಸಂಪೂರ್ಣ ರುಚಿಸಿದಂತಿಲ್ಲ.
೨೦ ಕೊಠಡಿಗಳ ಈ ಶಾಲೆಯಲ್ಲಿ ತನ್ನ  ಚಟುವಟಿಕೆ ಆರಂಭಿಸಲು ವಿವಿ ಒಪ್ಪಿಕೊಂಡರೂ, ಇಲ್ಲಿಗೆ ಬರಲು ಇನ್ನೂ ೨-೩ ತಿಂಗಳು ಬೇಕು. ಕಾರಣ, ಇಲ್ಲಿನ ಎಲ್ಲ ಕಟ್ಟಡಗಳನ್ನು ದುರಸ್ತಿಗೊಳಿಸಿ ವ್ಯವಸ್ಥಿತ ರೂಪ ನೀಡಬೇಕಾದದ್ದು ಸದ್ಯದ ತುರ್ತು. ಅಲ್ಲಿಗೆ ಸಂಗೀತ ವಿವಿ ಶರದೃತುವಿನಲ್ಲಿ ಹಾಡಬಹುದೇನೋ ಕಾದು ನೋಡಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ