ದೇಜಗೌ ಧೃತರಾಷ್ಟ್ರ


ವಿಕ ಸುದ್ದಿಲೋಕ ಮೈಸೂರು
ತಮ್ಮ ಪುತ್ರ ಶಶಿಧರ ಪ್ರಸಾದ್ ಅವರಿಗೆ ಬೆಂಬಲವಾಗಿ ಉಪವಾಸ ಸತ್ಯಾಗ್ರಹ ಕುಳಿತ ಡಾ.ದೇಜಗೌ ಅವರ ನಡೆಯನ್ನು ಕಟುವಾಗಿ ಟೀಕಿಸಿರುವ ಪ್ರಗತಿಪರ ಸಂಘಟನೆಗಳು, ಆ ಮೂಲಕ ಮಹಾತ್ಮ ಗಾಂಧಿ ಕೊಟ್ಟ ಉಪವಾಸ ಸತ್ಯಾಗ್ರಹದ ಮೌಲ್ಯವನ್ನು ಕಳೆದಿದ್ದಾರೆಂದು ಜರಿದಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಭ್ರಷ್ಟಾಚಾರ ನಡೆಸಿರುವುದು ಸ್ಪಷ್ಟ. ರಂಗವಿಠಲಾ ಚಾರ್ ಆಯೋಗದ ವರದಿಯಲ್ಲಿ ಬೋಧಕರ ನೇಮಕದಲ್ಲಿ ನಡೆದ ಅಕ್ರಮಗಳನ್ನು ದಾಖಲಿಸಿದ್ದು, ಸ್ವತಃ ಶಶಿಧರಪ್ರಸಾದ್ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದರು. ರೋಸ್ಟರ್ ಅನುಸರಿಸದಿರುವುದನ್ನು ಕುಲಸಚಿವರು, ಕ್ಲರ್ಕ್ ಸಹ ಒಪ್ಪಿದ್ದಾರೆ. ಹೀಗಿದ್ದರೂ ಪುತ್ರನಿಗೆ ಬೆಂಬಲವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಸರಿಯಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ.ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಟೀಕಿಸಿದರು.
ಸತ್ಯದ ಅರ್ಥ ಅವರಿಗೆ ಗೊತ್ತಿದೆ ಎಂದುಕೊಂಡಿದ್ದೇವೆ. ಗಾಂಧೀಜಿ ನಮಗೆ ನೀಡಿದ ಸತ್ಯಾಗ್ರಹದ ಮಹತ್ವವನ್ನು ಮರೆತು ಭ್ರಷ್ಟತೆಗೆ ಬಳಸುತ್ತಿರುವುದು ಒಪ್ಪುವಂತದ್ದಲ್ಲ. ದೇಜಗೌ ಅವರಿಗೆ ಧೃತರಾಷ್ಟ್ರ ವ್ಯಾಮೋಹ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ಉನ್ನತ ಸ್ಥಾನದ ಕುಲಪತಿ ವಿರುದ್ಧ ಕ್ರಮ ಕೈಗೊಳ್ಳಬಾರದು. ಶೈಕ್ಷಣಿಕ ವಲಯದಲ್ಲಿ ಗೌರವ ಪಡೆದವರು ಜೈಲಿಗೆ ಹೋಗಬಾರದು ಎಂದೂ ಸಹ ರಾಜ್ಯಪಾಲರು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕುಲಪತಿಗಳಿಗೊಂದು ಕಾನೂನು, ಸಾಮಾನ್ಯರಿಗೊಂದು ಕಾನೂನಿದೆಯೇ? ಶಶಿಧರಪ್ರಸಾದ್ ಮಾತ್ರವಲ್ಲ. ತಪ್ಪಿತಸ್ಥರೆಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪ್ರೊ.ಎನ್.ಎಸ್.ರಘುನಾಥ್ ಹೇಳಿದರು.
ಸಂವಿಧಾನಬದ್ಧವಾಗಿ ರಾಜ್ಯಪಾಲರು ಮಾತನಾಡಬೇಕು, ಅವರೇನು ರಾಜಕಾರಣಿ ಅಲ್ಲ. ರಾಜ್ಯಪಾಲರ ದ್ವಂದ್ವ ನಿಲುವು. ಹೀಗೆ ಮಾನಸಿಕ ಸ್ಥಿರತೆ ಇರದವರನ್ನು ಜವಾಬ್ದಾರಿಯುತ ಸ್ಥಾನದಿಂದ ಪದಚ್ಯುತಗೊಳಿಸುವುದು ಸೂಕ್ತ ಎಂದರು ಕಿಕ್ಕೇರಿ ನಾರಾಯಣ.
ಪಿಐಎಲ್
ನಿಯಮಬಾಹಿರ ನೇಮಕದಲ್ಲಿ ಅಪಾರ ಹಣ ಹರಿದಾಡಿದ ಸಂಶಯವಿದ್ದು, ಲೋಕಾಯುಕ್ತ ತನಿಖೆಯಾಗಬೇಕಿದೆ. ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು. ಈಗಾಗಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿ ಮಾಡಿ, ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಎಲ್ಲಾ ಶಾಸಕರು, ಸಂಸದರು ಒಗ್ಗಟ್ಟಿನಿಂದ ಸರಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಲಾಗಿದೆ. ಇದನ್ನು ಗಮನಿಸಿ ಪಿಐಎಲ್ ಹೂಡಲು ತೀರ್ಮಾನಿಸಲಾಗುವುದು ಎಂದರು. ಒಕ್ಕೂಟದ ಸಂಚಾಲಕ ಕೆ.ಮುದ್ದುಕೃಷ್ಣ ಜಿ.ಪಿ.ಬಸವರಾಜು ಗೋಷ್ಠಿಯಲ್ಲಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ