ಆನೆ ಮೇಲಿಂದ ಅಂ‘ಬಾರಿ’ ಇಳಿಸಿ

ವಿಕ ಸುದ್ದಿಲೋಕ ಮೈಸೂರು
ಹಿಂದೆ, ಈಗಲೂ ಕೆಲವೆಡೆ ಗ್ರಾಮೀಣ ಪ್ರದೇಶದಿಂದ ಮೈಸೂರು ದಸರೆಗೆ ಬರುವ  ಜನ ‘ಫೌಜು’ನೋಡಲು ಹೋಗ್ತೀವಿ ಎಂದೇ ಹೇಳುತ್ತಾರೆ. ಅಂದರೆ, ಅವರ ತಿಳುವಳಿಕೆ ಪ್ರಕಾರ ಅದು ಸೈನ್ಯದ ಪ್ರದರ್ಶನ. ಶಕ್ತಿ ದೇವತೆಯ ಪೂಜೆ, ಬನ್ನಿ ಕಡಿದು-ಮುಡಿಯುವುದು,ಆನೆಯ ಮೇಲೆ ರಾಜನ (ಈಗ ಶಕ್ತಿ ದೇವತೆ) ಮೆರವಣಿಗೆ ಎಲ್ಲವೂ ಸೈನ್ಯಕ್ಕೆ ಸಂಬಂಧಿಸಿದ ವಿಚಾರವೇ. ನಂತರ ಸರಕಾರ ಪ್ರಭುತ್ವದ ಪ್ರದರ್ಶನ  ನಿಲ್ಲಿಸಿ,ಪ್ರಜಾಪ್ರಭುತ್ವದ ಆಶಯಕ್ಕೆ ಬದ್ಧವಾಗಿ ಆರಾಧನೆ- ಉತ್ಸವದ ಸ್ವರೂಪ ನೀಡಿದ್ದು ಇತಿಹಾಸ.
ಗ್ರಾಮೀಣ ಭಾಗಗಳಲ್ಲಿ ಇಂಥದೇ ದೇವತೆಗಳ ಮೆರವಣಿಗೆ ನಡೆಯುತ್ತದೆ. ಉತ್ಸವ ಸಣ್ಣದಾದರೆ ದೇವರನ್ನು ಜನರೇ ಹೊತ್ತು ಸಾಗುತ್ತಾರೆ. ದೊಡ್ಡ ಜಾತ್ರೆ ಯಾದರೆ ಅಲಂಕೃತ ತೇರಿನಲ್ಲಿ ಕೂರಿಸಿ ಎಳೆಯುತ್ತಾರೆ. ಪ್ರಾಣಿ ಪಕ್ಷಿಗಳು ಪ್ರತಿಮೆಗೆ ಸೀಮಿತ. ಆದರೆ, ದಸರೆಯಲ್ಲಿ ಆನೆಯ ಮೇಲೆ ೭೫೦ ಕೆಜಿ ಭಾರದ ಅಂಬಾರಿ ಇಟ್ಟು, ಶಕ್ತಿ ದೇವತೆಯ ಮೆರವಣಿಗೆ ಮಾಡಲಾಗುತ್ತಿದೆ. ಇದು ಸೂಕ್ತವಲ್ಲ .
ಕಳೆದ ೧೧ವರ್ಷ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿದ  ‘ಬಲರಾಮ’, ಅದಕ್ಕೆ ಹಿಂದಿದ್ದ ದ್ರೋಣ ಮತ್ತಿತರ ಆನೆಗಳು ಜನ ಜಾತ್ರೆಯಲ್ಲಿ ಸಹನೆಯಿಂದ ವರ್ತಿಸಿ ಸರಕಾರದ ಘನತೆಯನ್ನು, ಜನರ ಘನತೆಯನ್ನು ಉಳಿಸಿವೆ. ತಪ್ಪು ಹೆಜ್ಜೆ ಹಾಕಿ ಅವಾಂತರ ಸೃಷ್ಟಿಸದೆ  ತಮ್ಮ ಘನತೆಯನ್ನೂ ಉಳಿಸಿಕೊಂಡಿವೆ. ಈಗ, ನಾವು ಅವುಗಳ ಮೇಲೆ ‘ಭಾರ ’ ಹೊರಿಸುವುದನ್ನು ನಿಲ್ಲಿಸುವ ಮೂಲಕ ನಮ್ಮ ‘ಮನುಷ್ಯ ಘನತೆ’ಯನ್ನು ಉಳಿಸಿಕೊಳ್ಳಬೇಕು.
ಈ ಸಂಬಂಧ ಪ್ರಾಣಿದಯಾ ಸಂಘಟನೆಗಳ ಆಕ್ಷೇಪವನ್ನು ಲಘವಾಗಿ ಪರಿಗಣಿಸಬಾರದು. ಬಲರಾಮನಿಗೆ ವಯಸ್ಸಾಗು ತ್ತಿದೆ, ಅದೇ ಸ್ವಭಾವದ ಉತ್ತರಾಧಿಕಾರಿ ಹುಡುಕಾಟವೂ ಕಷ್ಟವಾಗುತ್ತಿದೆ, ಎಷ್ಟೇ ಆದೇಶ ಪಾಲಿಸಿದರೂ ಪ್ರಾಣಿಗಳ ವರ್ತನೆ  ಯಾವತ್ತೂ ಒಂದೇ ಥರ ಇರುವುದಿಲ್ಲ ಎನ್ನುವ  ಸತ್ಯವೂ ಅನೇಕ ಪ್ರಕರಣಗಳಲ್ಲಿ ವೇದ್ಯವಾಗಿದೆ. ಆದ್ದರಿಂದ, ಆನೆ ಮೇಲಿನ ಅಂಬಾರಿ ಭಾರ ಇಳಿಸುವ ಕುರಿತು ಗಂಭೀರವಾಗಿ ಯೋಚಿಸಬೇಕು. ಐತಿಹಾಸಿಕ ಮೆರವಣಿಗೆಯ ಆಕರ್ಷಣೆಗೆ ಆನೆ ಅಗತ್ಯ ಎಂದಾದರೆ, ಅವುಗಳನ್ನು ಸರ್ವಾಲಂಕೃತವಾಗಿ ಸಾಗುವಂತೆ ಮಾಡಿ, ಅಂಬಾರಿ ಮತ್ತು ಅದರೊಳಗಿನ ಶಕ್ತಿದೇವತೆ ಯನ್ನು ವಿಶಿಷ್ಟ ತೇರಿನಲ್ಲಿ ಇಟ್ಟು ಎಳೆಯಬಹುದು. ಸೂಕ್ತ, ಬೇರೆ ಪರ‍್ಯಾಯ ವಾದರೆ ಇನ್ನೂ ಒಳ್ಳೆ ಯದು. ಈ ವಿಷಯದಲ್ಲಿ ಗ್ರಾಮೀಣ ಜನರ ಆಚರಣೆ ಸ್ವರೂಪ  ನಮಗೆ ಮಾದರಿಯಾಗಬೇಕು.
ಉಳಿದಂತೆ, ದಸರೆಯ ಸಮಯಕ್ಕೆ ಕಾಮಗಾರಿ ನಡೆಸುವುದು ಸಮ್ಮತವಲ್ಲ. ಕಾಟಾಚಾರಕ್ಕೆ ರಸ್ತೆಗಳಿಗೆ ತೇಪೆ ಹಾಕಿ ಕೈತೊಳೆದುಕೊಳ್ಳುವ ಬದಲು ಅಗತ್ಯಕ್ಕೆ ಅನುಗುಣವಾಗಿ ನಿರಂತರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಬೇಕು. ಇತ್ತೀಚಿನ ವರ್ಷಗಳಲ್ಲಿ ದಸರೆ ವ್ಯಾವಹಾರಿಕವಾಗುತ್ತಿದೆ. ಕೋಟಿಗಳ ಲೆಕ್ಕದಲ್ಲಿ ಹಣದ ವಹಿವಾಟು ನಡೆದರೂ  ಸಾಮೂಹಿಕ ಆರಾಧನೆಯ ಸ್ವರೂಪ ಉಳಿದಿಲ್ಲ. ಪ್ರತ್ಯೇಕತೆ ವಿಜೃಂಭಿಸುತ್ತಿದೆ. ಸಾಮೂಹಿಕ ಸಂಭ್ರಮ ತುಂಬುವ  ನಿಟ್ಟಿನಲ್ಲಿ ತಜ್ಞರು ಚರ್ಚೆ ನಡೆಸಬೇಕು.
-ಪ್ರೊ.ಕೃಷ್ಣಮೂರ್ತಿ ಹನೂರು ಜಾನಪದ ವಿದ್ವಾಂಸ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ