ಬಾರದ ನೀರು: ನೀಗದ ರೈತರ ಸಮಸ್ಯೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ತಾಲೂಕಿನ ಸೌತನಹಳ್ಳಿ, ಸಾತಿ ಗ್ರಾಮ ಸೇರಿದಂತೆ ಈ ಭಾಗದ ನೂರಾರು ಎಕರೆ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನಾಲಾ ನೀರು ಹರಿಯದೆ ರೈತರು ಭತ್ತ ಬೆಳೆಯಲು ಕಾಲುವೆ ಎದುರು ನೋಡುವಂತಾಗಿದೆ.
ಈ ಭಾಗಕ್ಕೆ ಚಾಮರಾಜ ಮತ್ತು ರಾಮಸಮುದ್ರ ನಾಲೆಯ ನೀರು ಹರಿಯುತ್ತಿದ್ದು ನಾಲೆಯ ಮೇಲ್ಭಾಗದ ಅಚ್ಚುಕಟ್ಟುದಾರರು ಈಗಾಗಲೆ ನಾಟಿ ಕಾರ್ಯ ಮುಗಿಸಿ ಕಳೆ ತೆಗೆಯುವ ಹಂತ ತಲುಪಿದೆ. ನಾಲೆಯ ಕೊನೆಭಾಗದ ಈ ಗ್ರಾಮದ ಸುತ್ತ ಮುತ್ತಲ ರೈತರು ಮಾತ್ರ ನೀರಿಗಾಗಿ ಕಾದು ಸುಸ್ತಾಗಿ ನೀರಾವರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿ ಹಿಡಿಶಾಪ ಹಾಕಿ, ಹಾಕಿರುವ ಪೈರು ಒಣಗದಂತೆ ನೀರು ಹಾಕುತ್ತಿದ್ದಾರೆ.
ಇಂಥ ಪರಿಸ್ಥಿತಿ ಈ ಭಾಗದಲ್ಲಿ ಪ್ರತಿವರ್ಷ ಮಾಮೂಲಾಗಿದ್ದು, ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸುತ್ತಿಲ್ಲ.
ಬರುವ ನೀರಿಗಾಗಿ ರೈತರು ಭತ್ತದ ಅಗೆ ಹಾಕಿಕೊಂಡು ಕಾದುಕುಳಿತಿದ್ದು, ನೀರು ಬಾರದ ಕಾರಣ ಈ ಮೊದಲು ಹಾಕಿದ್ದ ಹುರಳಿ, ಅಲಸಂದೆ ಹಾಗೂ ಇತರ ಬೆಳೆಗಳನ್ನು ಉಳುಮೆ ಮಾಡದೆ ಹಾಗೆ ಬಿಟ್ಟುಕೊಂಡು ಬರುವ ನೀರಿಗಾಗಿ ಎದುರು ನೋಡುತ್ತಿದ್ದಾರೆ.
ಈ ಭಾಗದಲ್ಲಿ ಭತ್ತ ಬಿಟ್ಟು ಬೇರೆ ಬೆಳೆ ಇಲ್ಲದ ಕಾರಣ ಇಲ್ಲಿನ ಜನತೆಗೆ ಭತ್ತದ ಬೆಳೆಯು ವರ್ಷದ ಕೂಳಾಗಿದೆಯಲ್ಲದೆ ವಾಣಿಜ್ಯದ ದೃಷ್ಟಿಯಿಂದಲೂ ಈ ಭಾಗದ ಜನತೆಗೆ ಪ್ರಮುಖ ಬೆಳೆಯಾಗಿದೆ.
ನೀರುಬಾರದ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸುವ ರೈತರು, ನೀರಾವರಿ ಅಧಿಕಾರಿಗಳು ಕಾಲುವೆ ದುರಸ್ತಿಗೊಳಿಸಿ ನೀರು ಬಿಟ್ಟರೆ ಎಲ್ಲರ ಬೆಳೆಗೂ ದೊರೆಯುತ್ತದೆ. ಆದರೆ ಯಾರೂ  ಒಮ್ಮೆಯೂ ಕಾಲುವೆ ಏರಿ ಮೇಲೆ ಬಂದಿಲ್ಲ ಎಂದು ದೂರಿದ್ದಾರೆ.
ಸಾತಿಗ್ರಾಮದ ರೈತ ಶಾಂತರಾಜು ಪತ್ರಿಕೆಯೊಂದಿಗೆ ಮಾತನಾಡಿ, ಈ ಭಾಗದ ಸುಮಾರು ೮೦ ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದೆ ಪರದಾಡುವಂತಾಗಿದೆ. ಕಟ್ಟು ನೀರು ಕೊಟ್ಟರೆ ಎಲ್ಲರಿಗೂ ನೀಡಬಹುದು. ಆದರೆ ಯಾವ ಅಧಿಕಾರಿಯೂ ಈ ಬಗ್ಗೆ ಕ್ರಮಕ್ಕೆ ಮುಂದಾಗದ ಕಾರಣ ಸಮಸ್ಯೆ ಎದುರಾಗಿದೆ. ಸಮಸ್ಯೆ ಬಗೆಹರಿಸದಿದ್ದರೆ ರೈತರೊಡಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ರೈತ ರೇವಣ್ಣ ಮಾತನಾಡಿ, ರೈತರೆಲ್ಲರೂ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದಾಗ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದವರು ಮತ್ತೆ ಇತ್ತ ತಿರುಗಿ ನೋಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಮತ್ತೊಬ್ಬ ರೈತ ಶಿವರಾಮು ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ನಾಲೆ ಸ್ವಚ್ಛಗೊಳಿಸುವ ಕೆಲಸ ಮಾಡಿದರು. ಆದರೆ ಕೆಲಸ ಮಾತ್ರ ಸರಿಯಾಗಿ ಮಾಡದೆ ಬಿಲ್ ಪಡೆದರು. ಅದರ ಪರಿಣಾಮ ನಾವು ಎದುರಿಸಬೇಕಾಗಿದೆ ಎಂದು ದೂರಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ