ಆನೆ ಮೇಲೆ ಅಂಭಾರಿ: ಪರ್ಯಾಯ ಚಿಂತನೆ ಅಗತ್ಯ

ಪಿ.ಓಂಕಾರ್ ಮೈಸೂರು
ದಸರೆಯ ಪ್ರಮುಖ ಆಕರ್ಷಣೆ ಜಂಬೂ ಸವಾರಿ.ಆನೆ ಮೇಲೆ ‘ಅಂಬಾರಿ’ಯನ್ನು ನೋಡಲೆಂದೇ ಲಕ್ಷಾಂತರ  ಜನ ಬರುತ್ತಾರೆ. ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯೂ ಆನೆ-ಅಂಬಾರಿಯೇ.
ಇಂಥ ಜನಾಕರ್ಷಣೆಯ  ಅಂಬಾರಿಯ ‘ಭಾರ’ವನ್ನು ಆನೆ ಮೇಲಿಂದ ಇಳಿಸ ಬೇಕು ಎನ್ನುವ ಬೇಡಿಕೆ  ಬಹು ಹಿಂದಿನಿಂದ ಚಾಲ್ತಿಯಲ್ಲಿದ್ದರೂ,ಗಟ್ಟಿ ಧ್ವನಿ ಬಂದದ್ದು ಪರಿಸರವಾದಿ ಮನೇಕಾ ಗಾಂಧಿ ಆಕ್ಷೇಪ  ಎತ್ತಿದ ನಂತರವೇ. ಆಗ ಜೆ.ಎಚ್.ಪಟೇಲ್ ರಾಜ್ಯದ ಮುಖ್ಯಮಂತ್ರಿ. ‘ಭಾರವಾದ ಅಂಬಾರಿಯನ್ನು ಆನೆ ಮೇಲೆ ಹೊರಿಸುವುದು ಪ್ರಾಣಿ ಹಿಂಸೆ. ಸರಕಾರವೇ ಇದಕ್ಕೆ ಕಾರಣವಾಗುವುದು ಸರಿಯಲ್ಲ ’ಎಂದರು ಮನೇಕಾ. ಆಗ, ಪಟೇಲ್ ‘ಆನೆ ಮೇಲಲ್ಲದೆ, ಅಂಬಾರಿಯನ್ನು ಆಕೆಯ ಮೇಲೆ ಹೊರಿಸಲು ಸಾಧ್ಯವಾಗುತ್ತ’ ಎಂದು ಲೇವಡಿ ಮಾಡುವ ಮೂಲಕ ಬೇಡಿಕೆಯನ್ನು ತಳ್ಳಿಹಾಕಿದರು.
ಆನಂತರವೂ ಮನೇಕಾ ತಂಡ ‘ಪ್ರಾಣಿ ದಯಾ’ ಒತ್ತಾಯವನ್ನು ಜಾರಿಯಲ್ಲಿಟ್ಟಿತ್ತಾ ದರೂ ಗಂಭೀರವಾಗಿ ಪರಿಗಣಿಸಿದವರು ಕಡಿಮೆ. ಎರಡು ವರ್ಷದ ಹಿಂದೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರೇ ಆನೆ ಪರ ವಕಾಲತ್ತು ವಹಿಸುವ ಮೂಲಕ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿತು. ಮನೇಕಾ ಅಭಿಪ್ರಾಯವನ್ನೇ ಒಡೆಯರ್ ಇನ್ನೊಂದು ರೀತಿ ಯಲ್ಲಿ ವ್ಯಾಖ್ಯಾನಿಸಿದರು. ಆನೆ ಅಂಬಾರಿಯನ್ನು ದೀರ್ಘಾವಧಿ ಹೊತ್ತು ನಿಲ್ಲುವಂತೆ ಮಾಡುವುದು ಸರಿಯಲ್ಲ. ಹೊರೆ ತಪ್ಪಿಸಲು ಮೆರವಣಿಗೆಯ ಮುಂಚೂಣಿ ಯಲ್ಲೇ ಸರ್ವಾಲಂಕೃತ ಗಜಪಡೆ ತೆರಳ ಬೇಕು. ಇಲ್ಲವೇ, ಅರಮನೆ ಆವರಣಕ್ಕಷ್ಟೇ ‘ಜಂಬೂ ಸವಾರಿ’ಯನ್ನು ಸೀಮಿತಗೊಳಿಸಬೇಕು ಎನ್ನುವುದು ಅವರ ಸಲಹೆ. ಅದಕ್ಕೂ ಪರ ವಿರೋಧ ವ್ಯಕ್ತವಾಗಿ, ಸಾಕಷ್ಟು ಚರ್ಚೆ ನಡೆಯಿತು.ಆಗಲೂ ಸರಕಾರ ಸೊಲ್ಲೆತ್ತಲಿಲ್ಲ.
ಇದು ಭಾವನಾತ್ಮಕ ವಿಷಯ. ಅಷ್ಟು ಸುಲಭದಲ್ಲಿ ಪರಿಹರಿಸಲಾಗದು ಎನ್ನುವುದು ನಿಜವೇ. ೭೫೦ ಕೆ.ಜಿ. ಆನೆಯಂತ ಆನೆಗೆ ಅದ್ಯಾವ ಲೆಕ್ಕವೂ ಅಲ್ಲ ಎನ್ನುವುದೂ ಅಷ್ಟೇ ನಿಜ.ಆದರೆ,ಅಷ್ಟೊಂದು ಭಾರವನ್ನು ಆರೇಳು ತಾಸು ಹೊತ್ತು ನಿಂತು,ಸಾಗಬೇಕು ಎನ್ನುವ ಕಠಿಣ ಕಾಯಕದ ಬಗ್ಗೆ ಮಾನವೀಯ ಸ್ಪಂದನ ಅಗತ್ಯ.ನಂಬಿಕೆ, ಪ್ರಾಣಿದಯೆ ಎಲ್ಲದರಾಚೆಗಿನ ಸಂಗತಿಗಳತ್ತಲೂ ಗಮನ ಹರಿಸಬೇಕು.
ಇತ್ತೀಚಿನ ವರ್ಷಗಳಲ್ಲಿ ಆನೆಗಳು, ಅದರಲ್ಲೂ ಸಾಕಿದ ‘ಮಠ ’ದ ಆನೆಗಳು ಮದವೇರಿ ವರ್ತಿಸಿದ್ದು, ಅಂಕುಶ ಹಾಕಿ ನಿಯಂತ್ರಿಸುತ್ತಿದ್ದ ಮಾವುತರು ಸೇರಿ ಹಲವು ಜೀವಗಳನ್ನು ಬಲಿ ತೆಗೆದುಕೊಂಡದ್ದು ಸರ್ವ ವಿಧಿತ. ಆನೆಯೂ  ಸೇರಿ ಯಾವುದೇ ಪ್ರಾಣಿಗಳ  ಸ್ವಭಾವವೇ ಅಂಥದ್ದು. ಎಷ್ಟೇ  ನಿಯಂತ್ರಿಸಿದರೂ ಒಮ್ಮೊಮ್ಮೆ   ತಿರುಗಿ ಬಿದ್ದು, ಅವಾಂತರ ಸೃಷ್ಟಿಸುತ್ತವೆ ಎನ್ನು ವುದು ಹಲವು ಘಟನೆಗಳಲ್ಲಿ ವ್ಯಕ್ತ.
ಹಾಗಂತ, ದಸರೆಯಲ್ಲಿ ಹಾಗಾಗುತ್ತದೆ ಎಂದಲ್ಲ.ಹಿಂದೆ ಯಾವತ್ತೂ ಯಾವುದೇ ಅನಾಹುತ ಆಗಿಲ್ಲ. ಆದರೆ, ಯಾವತ್ತೂ ಗಜ ಸಹನೆ ಹೀಗೆ ಇರುತ್ತದೆ ಎನ್ನಲಾ ಗದು. ‘ಬಲರಾಮ’ನೇ ನಿರಂತರ ಅಂಬಾರಿಯನ್ನು ಹೊರಲಾರ. ಭವಿಷ್ಯ ದಲ್ಲಿ  ಹೊರುವ ಹೊಣೆಗೆ ಬೆನ್ನು ಕೊಡುವ  ಆನೆಯ ಸ್ವಭಾವವೂ ಹೀಗೇ ಇರುತ್ತದೆ ಎಂದು ಊಹಿಸಲಾಗದು. ಎಷ್ಟೇ ತರಬೇತಿ ನೀಡಿ, ಅಂಕುಶ ಹಾಕಿದರೂ ತಿರುಗಿ ಬೀಳುವುದಿಲ್ಲ ಎನ್ನಲು ಗ್ಯಾರಂಟಿ ಇಲ್ಲ.
ವಾಸ್ತವ ಹೀಗಿದ್ದಾಗ, ‘ಪರ‍್ಯಾಯ’ ಯದ ಆಲೋಚನೆಯನ್ನು ಸಾರಾಸಗಟು ತಳ್ಳಿ ಹಾಕಿ, ಇಂದಿನ  ಸಂಭ್ರಮಕ್ಕಷ್ಟೇ ತೃಪ್ತಿ ಪಡುವುದು ಸರಿಯಲ್ಲ. ಜನ ಸಮೂಹದ ಮನಸ್ಸಿನಲ್ಲಿ ನೆಲೆ ನಿಂತ ನಂಬಿಕೆ, ವೈಭವದ ಆಕಾಂಕ್ಷೆ, ಆರಾಧನಾ ಭಾವವನ್ನು ಒಂದೇ ಸಾರಿಗೆ ಕಿತ್ತು, ಪರ‍್ಯಾಯ ಸೃಷ್ಟಿಸುವುದು ಸರಿಯಲ್ಲ. ಆದರೆ, ಮುಂದೆಂದಾದರೂ ಇದು ಅನಿವಾರ‍್ಯವಾಗಬಹುದು.
ಭಾರ ಹೊತ್ತು ನಿಲ್ಲುವ ಅವಧಿಯನ್ನು ಕಡಿತಗೊಳಿ ಸುವುದು, ಸರ್ವಾಲಂಕೃತ ಆನೆಗಳ ಆಕರ್ಷಣೆಯನ್ನು ಉಳಿಸಿಕೊಂಡು,ಅಂಬಾರಿಯನ್ನು ಬೇರೆ ವಿಧಾನದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯುವುದು ಮತ್ತಿತರ  ಸಲಹೆ ಗಳನ್ನು  ಸಂಘಟಕರು ಗಂಭೀರವಾಗಿ ಪರಿಗಣಿಸಬೇಕು. ಪರ‍್ಯಾಯಕ್ಕೆ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ಕೆಲಸ ಇಂಥ ಚರ್ಚೆಗಳ ಮೂಲಕವೇ ನಡೆಯಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ