೨ ಲಕ್ಷ ಕಲಿಕಾರ್ಥಿಗಳನ್ನು ಸೆಳೆಯಲು ಗುರಿ

ಚೀ. ಜ. ರಾಜೀವ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹೊಸ ಹೆಜ್ಜೆಯೆಂದರೆ ರಾಜ್ಯದ ೧೦ ಕಡೆ  ಮಿನಿ ಮುಕ್ತ  ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದು.
‘ಮುಕ್ತ ವಿವಿ  ಈಗಾಗಲೇ ಆರು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದ್ದು, ಬಹಳ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಈ ವರ್ಷ ಹೊಸದಾಗಿ ಇನ್ನೂ ನಾಲ್ಕು ಪ್ರದೇಶಿಕ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಒಂದೊಂದು ಪ್ರಾದೇಶಿಕ ಕೇಂದ್ರವೂ ಒಂದೊಂದು ಮಿನಿ ವಿವಿ ಮಾದರಿಯಲ್ಲಿ ಕಾರ‍್ಯ ನಿರ್ವಹಿಸಬೇಕು’ ಎನ್ನು ತ್ತಾರೆ ವಿವಿ ಕುಲಪತಿ ಪ್ರೊ. ಕೆ. ಎಸ್. ರಂಗಪ್ಪ .
ಹಾಗೆ ನೋಡಿದರೆ, ಪ್ರಾದೇಶಿಕ ಕೇಂದ್ರಗಳ  ಕಲ್ಪನೆ ಹೊಸದೇನಲ್ಲ. ಆದರೆ,  ಅವುಗಳ ಕಾರ್ಯವೈಖರಿ ಮಾತ್ರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಒಬ್ಬ ಬೋಧಕೇತರ ವರ್ಗದ ಸಿಬ್ಬಂದಿಯನ್ನು ಇಂಥ ಕೇಂದ್ರಗಳ ಉಸ್ತುವಾರಿಗೆ ನೇಮಿಸಲಾಗಿತ್ತು. ಮೂಲ ಸೌಕರ್ಯಗಳ ಕೊರತೆಯೂ ಇತ್ತು. ಹಾಗಾಗಿ ವಿವಿ ಆಡಳಿತ ಎಲ್ಲ ಹಳೆ ಕೇಂದ್ರಗಳಿಗೆ ಕಾಯಕಲ್ಪ ನೀಡಲು ನಿರ್ಧರಿಸಿದೆ. ಒಂದು ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಸೇವಾ ಶಿಸ್ತನ್ನು ನಿಗದಿ ಪಡಿಸಿ, ಹೊಸ ನಾಲ್ಕು ಹೊಸ  ಕೇಂದ್ರಗಳನ್ನು ಆರಂಭಿಸುತ್ತಿದೆ. ಈ ಎಲ್ಲವೂಮಿನಿ ಮುಕ್ತ ವಿಶ್ವವಿದ್ಯಾನಿಲಯಗಳಂತಾಗಲಿವೆ. ಅದಕ್ಕಾಗಿ ಎಲ್ಲ ಅಗತ್ಯ ಮೂಲ ಸೌಕರ‍್ಯ ಕಲ್ಪಿಸಿಕೊಡಲು ವಿವಿ ನಿರ್ಧರಿಸಿದೆ. 
ನಾಲ್ಕು ಹೊಸ ಕೇಂದ್ರಗಳು: ಮೊದಲ ಹೆಜ್ಜೆಯಾಗಿ ಬೆಂಗಳೂರು, ಶಿವಮೊಗ್ಗ, ಧಾರವಾಡ, ದಾವಣಗೆರೆ, ಗುಲ್ಬರ್ಗಾ, ಮಂಗಳೂರು ಕೇಂದ್ರಗಳನ್ನು ಶಕ್ತಿಯುತ ಗೊಳಿಸಬೇಕು. ಈ ವರ್ಷದಿಂದ ಹಾಸನ, ಚಾಮರಾಜ ನಗರ, ಬಳ್ಳಾರಿ ಮತ್ತು ತುಮಕೂರಿನಲ್ಲಿ ಕೇಂದ್ರ ಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಿಗೂ ಪೂರ್ಣಾವಧಿ ನಿರ್ದೇಶಕ ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಈ ಪೈಕಿ  ೯ ಜನ  ಪಿಎಚ್.ಡಿ ಪೂರ್ಣಗೊಳಿಸಿ ರುವ ಪ್ರಾಧ್ಯಾಪಕರು.
‘ಪ್ರಾದೇಶಿಕ ನಿರ್ದೇಶಕರ  ಸ್ಥಾನಗಳಿಗೆ ಒಂದು ಶೈಕ್ಷಣಿಕ ಘನತೆಯನ್ನು ತುಂಬಲು ಹಾಗೂ ಕೇಂದ್ರಗಳನ್ನು ಮಿನಿ ವಿವಿಗಳನ್ನಾಗಿ ರೂಪಿಸಲು ಇಂಥ ಶಕ್ತಿಯುತ ಅಭ್ಯರ್ಥಿಗಳನ್ನು  ನೇಮಿಸಲಾಗಿದೆ. ಇನ್ಮುಂದೆ, ಇಲ್ಲಿಯೇ ವಿವಿಯ ವಿವರಣಾ ಪುಸ್ತಕ, ಬೋಧನಾ ಸಾಮಗ್ರಿಯನ್ನು ನೀಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣ ವಿದ್ಯಾರ್ಥಿಗಳು ಮೈಸೂರಿಗೆ ಬರುವುದು ತಪ್ಪುತ್ತದೆ’ ಎನ್ನುತ್ತಾರೆ ರಂಗಪ್ಪ.
ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವವರ ಸಂಖ್ಯೆ ಬಹಳ ಕಡಿಮೆ. ಈಗಿರುವ ಶೇ. ೧೨ರಷ್ಟು ಪ್ರಮಾಣವನ್ನು ೨೦೨೦ರ ವೇಳೆಗಾದರೂ ಶೇ.೩೦ಕ್ಕೆ ತರಬೇಕು ಎಂಬುದು ಕೇಂದ್ರ ಸರಕಾರದ ಕನಸು. ನಮ್ಮ ದೇಶದ ಸಾಂಪ್ರದಾಯಿಕ ವಿವಿಗಳಿಂದ ಈ ಕನಸು ನನಸು ಅಸಾಧ್ಯ. ಮುಕ್ತ ವಿವಿಗಳು ಚಟುವಟಿಕೆ ವಿಸ್ತರಿಸಬೇಕು. ೨೦೦೯-೧೦ನೇ ಸಾಲಿನಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ ೧ ಲಕ್ಷಕ್ಕೂ ಹೆಚ್ಚಿತ್ತು. ಈ ವರ್ಷ ೨ ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕೆಂಬುದು ವಿವಿ ಗುರಿ. ೧೮ ರಿಂದ ೮೦ರ ವಯೋಮಾನದವರನ್ನು ಸೆಳೆಯಲು ವಿವಿ ಸನ್ನದ್ಧವಾಗಿದೆ ಎಂದು ವಿವಿ ಈ ವರ್ಷದ ವಿವರಣಾ ಪುಸ್ತಕದಲ್ಲಿ ಹೇಳಿಕೊಂಡಿದೆ.
ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರಕಾರ ಬಯಸುವಷ್ಟು  ವಿದ್ಯಾರ್ಥಿಗಳನ್ನು ಸೆಳೆಯಲು ಜಿಲ್ಲೆಗೊಂದು ಮುಕ್ತ ವಿವಿ ಬೇಕು ಎಂದು  ಇದೇ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಸುಧಾರಾವ್ ತಮ್ಮ ಅಧಿಕಾರವಧಿಯ  ಕಡೆ ದಿನಗಳಲ್ಲಿ ಸಲಹೆ ನೀಡಿದ್ದರು.  ಅದು ಸಾಧ್ಯವಾಗದ ಮಾತು ಎಂದು ಅಂದಿನ ಉನ್ನತ ಶಿಕ್ಷಣ ಸಚಿವ ನಕ್ಕು ಸುಮ್ಮನಾಗಿದ್ದರು. ಆದರೆ, ಈಗ  ಪ್ರಾದೇಶಿಕ ಕೇಂದ್ರಗಳನ್ನೇ ಮಿನಿ ಮುಕ್ತ ವಿವಿ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ