ಅಧಿಕಾರಸ್ಥರ ದರ್ಬಾರು ತಪ್ಪಲಿ


ವಿಕ ಸುದ್ದಿಲೋಕ ಮೈಸೂರು
ಅಚ್ಚುಕಟ್ಟುತನಕ್ಕೆ ಆದ್ಯತೆ ನೀಡಿ
೧. ನವರಾತ್ರಿಯ ಸಂಜೆಗಳಲ್ಲಿ ಅರಮನೆ ಅಂಗಳದಲ್ಲಿ ನಡೆಯುವ ಸಾಂಸ್ಕೃತಿಕ ಕಾರ‍್ಯಕ್ರಮಗಳಿಗೆ ಹೆಚ್ಚು ಮರ‍್ಯಾದೆ ಇದೆ.ಅಲ್ಲಿ ಕಾರ‍್ಯಕ್ರಮ ನೀಡುವುದೆಂದರೆ ಕಲಾವಿದರಿಗೂ ಪ್ರತಿಷ್ಠೆಯ ಸಂಗತಿ. ಆದ್ದರಿಂದ ಕಲಾವಿದರ  ಪುನರಾವರ್ತನೆಯಾಗದಂತೆ, ಎಲ್ಲರಿಗೂ ಅವಕಾಶ ದೊರೆ ಯುವಂತೆ ಗಮನಹರಿಸಬೇಕು. ಅದೇ ರೀತಿ ಬೇರೆ ಬೇರೆ ಕಲಾ ಪ್ರಕಾರ ಗಳಿಗೂ ಅಲ್ಲಿ ವೇದಿಕೆ ಕಲ್ಪಿಸಬೇಕು. ಸ್ಥಳೀಯ ಕಲಾವಿದರಿಗೂ ಅರ್ಹ ಗೌರವ ದೊರೆಯಬೇಕು.
೨. ಪಾಸ್ ಸಮಸ್ಯೆ ಪ್ರಮುಖ. ಸಂಘಟಕರೇ ನೀಡಿದ ಪಾಸ್ ಹೊಂದಿದ್ದರೂ ಹಲವರಿಗೆ ಕಾರ‍್ಯಕ್ರಮ ನೋಡಲಾಗದ ಸ್ಥಿತಿ. ಬನ್ನಿಮಂಟಪದಲ್ಲಂತೂ, ಆಸನಕ್ಕಿಂತ ಹೆಚ್ಚು ವಿತರಿಸಿ ನೂಕುನುಗ್ಗಲು ಸೃಷ್ಟಿಸಲಾಗುತ್ತಿದೆ. ಈ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ವಹಿಸಬೇಕು. ಪಾಸು ವಿತರಿಸುವುದೇ ಆದರೆ ಅಗತ್ಯ ಶಿಸ್ತು ತರಬೇಕು.
೩. ವಿಶಾಲವಾಗಿ ಬೆಳೆಯುತ್ತಿರುವ ನಗರದಲ್ಲಿ,ಕೆಲವು ಬಡಾವಣೆಗಳು ಆರೇಳು ಕಿ.ಮೀ. ದೂರದಲ್ಲಿವೆ. ಇಲ್ಲಿ ಜನಸಂಖ್ಯೆಯೂ ಹೆಚ್ಚಿದೆ. ದಸರಾ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಅಲ್ಲಿಗೂ ವಿಸ್ತರಿಸಬೇಕು.
೪. ಉತ್ಸವದ ವೇಳೆ,ನಗರ ಹೃದಯ ಭಾಗದಿಂದ ಬಡಾವಣೆಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು. ನಗರ ನಿಲ್ದಾಣದಲ್ಲಿ ಬಸ್ ವೇಳಾಪಟ್ಟಿ ಯನ್ನು  ಪ್ರದರ್ಶಿಸಿ, ಅದಕ್ಕೆ ತಕ್ಕಂತೆ ಬಸ್‌ಗಳು ಸಂಚರಿಸುವಂತೆ ಮಾಡಬೇಕು.
೫. ವಿಜ್ಞಾನದ ಹೊಸ ಶೋಧಗಳನ್ನು ಜನರಿಗೆ, ಆಸಕ್ತರಿಗೆ ಪರಿಚಯಿ ಸಲು ಕಾಲೇಜು ಮಟ್ಟದಲ್ಲಿ ಶೈಕ್ಷಣಿಕ ವಿಜ್ಞಾನ ವಸ್ತುಪ್ರದರ್ಶನವನ್ನು ಸಂಘಟಿಸ ಬೇಕು. ಇದರಿಂದ ವಿದ್ಯಾರ್ಥಿಗಳ ಅಭಿವ್ಯಕ್ತಿಗೂ ಅವಕಾಶ ನೀಡಿದಂತಾಗುತ್ತದೆ.  ಸಂಘಟನೆ ಅರ್ಹರ ಸಮಿತಿಯನ್ನು ರಚಿಸಬೇಕು. ಇದು ಈ ಬಾರಿ ಸಾಧ್ಯವಿಲ್ಲವಾದರೆ, ಮುಂದಿನ ವರ್ಷದಿಂದಲಾ ದರೂ ಮಾಡಬೇಕು.
೬. ಎಲ್ಲಾ ವಿಷಯದಲ್ಲಿ ಅಚ್ಚುಕಟ್ಟುತನ  ಇರಬೇಕು.ಸಂಘಟನೆಯನ್ನು ಸರಿಯಾಗಿ ಮಾಡಿದರೆ  ದಸರೆಗೆ ಹೊಸ ಆಕರ್ಷಣೆ ತುಂಬಬಹುದು.
-ಅಡ್ಯನಡ್ಕ ಕೃಷ್ಣಭಟ್, ವಿಜ್ಞಾನ ಲೇಖಕರು
ಹಸ್ತಕ್ಷೇಪ ತಪ್ಪಲಿ
ಚಿಕ್ಕವಳಾಗಿದ್ದಾಗ  ಮಹಾರಾಜರ ನೇತೃತ್ವದ ದಸರೆಯನ್ನು ನೋಡಿದ್ದೆ.ಆ ವೈಭವವನ್ನು ಈಗಿನ ಉತ್ಸವಕ್ಕೆ ಹೋಲಿಸುವಂತೆಯೇ ಇಲ್ಲ.ಜನರ ಉತ್ಸವ ಎಂದು ಹೇಳಲಾಗುತ್ತಿದೆಯಾದರೂ  ಸರಕಾರಿ ಯೋಜನೆ ಥರ  ‘ಅನುಷ್ಠಾನ’ ಗೊಳ್ಳುತ್ತಿದೆಯಷ್ಟೆ. ಎಲ್ಲಾ ವರ್ಗ ದವರಿಗೆ ಭಾಗವಹಿಸಲು ಮುಕ್ತ ಅವಕಾಶವಿಲ್ಲ. ಪರಿಣಾಮ, ಜನರಲ್ಲಿ ಉತ್ಸಾಹ, ಸಂಭ್ರಮ ಕಾಣು ತ್ತಿಲ್ಲ. ಅಧಿಕಾರಿಗಳು,ರಾಜಕಾರಣಿಗಳಷ್ಟೆ ಉತ್ಸವವನ್ನು ಅನುಭವಿಸುತ್ತಿದ್ದಾರೆ.
ಪಾಸು ಹೊಂದಿದವರ ಹಾವಳಿಯಿಂದ  ಟಿಕೆಟ್ ಖರೀದಿಸಿ ದವರೂ ನೆಮ್ಮದಿಯಿಂದ  ಜಂಬೂಸವಾರಿ ನೋಡುವುದು ಸಾಧ್ಯವಾಗುತ್ತಿಲ್ಲ. ಟಿವಿಯಲ್ಲಿ ಕುಳಿತು ನೋಡುವುದೇ ಚೆನ್ನ  ಎನ್ನುವ ಅಭಿಪ್ರಾಯ ಸಾಮಾನ್ಯವಾಗುತ್ತಿದೆ. ಬನ್ನಿಮಂಟಪದ ಪಂಜಿನ ಕವಾಯಿತಿನಲ್ಲೂ ಇದೇ ಕತೆ. ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ‍್ಯಕ್ರಮ, ಲೇಸರ್ ಶೋ ಖುಷಿ, ಅನುಭೂತಿ ನೀಡುವುದಿಲ್ಲ. ಅಧಿಕಾರಿಗಳು, ರಾಜಕಾರಣಿಗಳ  ಹಸ್ತಕ್ಷೇಪ, ಹಾವಳಿ ತಪ್ಪಬೇಕು. ಜನರ ಉತ್ಸವವಾಗಿ ರೂಪಿಸಲು ಜನರದ್ದೇ ಸಮಿತಿಗಳನ್ನು ರಚಿಸಬೇಕು. ಜಂಬೂ ಸವಾರಿ ಮೆರವಣಿಗೆಯಲ್ಲಿ ಹೋಂಗಾರ್ಡ್, ಎನ್‌ಸಿಸಿ, ಶಾಲಾ ಮಕ್ಕಳ  ತಂಡಗಳು ಹೆಚ್ಚು ಸಾಗುವಂತೆ ಮಾಡಬೇಕು.ಬನ್ನಿಮಂಟಪದ ವಿಶಾಲ ಆವರಣದಲ್ಲಿ ಎದ್ದು ಕಾಣುವಂತೆ  ದೊಡ್ಡ ತಂಡಗಳಿಂದ ನೃತ್ಯ ಮತ್ತಿತರ  ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಆಯೋಜಿಸಬೇಕು.
ದಸರಾ ಮೆರವಣಿಗೆಯಲ್ಲಿ ವಿಂಟೇಜ್ ಕಾರ್‌ಗಳ ರ‍್ಯಾಲಿಗೆ  ಅವಕಾಶ ನೀಡ ಬೇಕು. ವೆಬ್ ಸೈಟ್‌ಅನ್ನು ವ್ಯವಸ್ಥಿತವಾಗಿ ರೂಪಿಸಿ, ಅಪ್‌ಡೇಟ್ ಮಾಡಬೇಕು.
 -ಪ್ರೊ.ಉಷಾರಾಣಿ, ಮೈಸೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕಿ
ನೆಲೆಯಲ್ಲೇ ಕಲೆಗೆ ಬೆಲೆ ಇಲ್ಲ
ಹಿಂದೆಲ್ಲ ಮೂರು ತಿಂಗಳ ಮುಂಚೆಯೇ ‘ಉತ್ತಮ ಕಲಾಕೃತಿಗಳನ್ನು ಪ್ರದರ್ಶನಕ್ಕೆ ನೀಡಿ’ ಎಂದು ಕಲಾವಿದರಿಗೆ ಪತ್ರ ಬರುತ್ತಿತ್ತು.ಹಿರಿಯ ಕಲಾವಿದ ದಿ.ಪಿ.ಆರ್.ತಿಪ್ಪೇಸ್ವಾಮಿ ನೇತೃತ್ವ ವಹಿಸುತ್ತಿ ದ್ದಾಗಲಂತೂ ಕಲಾವಿದರಿಗೆ ಉತ್ತಮ ಮನ್ನಣೆ ಸಿಗುತ್ತಿತ್ತು.ಪ್ರದರ್ಶನದ ಕೊನೆಯಲ್ಲಿ ಪ್ರಶಸ್ತಿ,ಪ್ರಮಾಣ ಪತ್ರವೂ ದೊರೆಯುತ್ತಿತ್ತು. ಆದರೆ,ಇತ್ತೀಚಿನ ವರ್ಷ ಗಳಲ್ಲಿ ಕಲಾವಿದರಿಗೆ ಬೆಲೆಯೇ ಇಲ್ಲ.ಯಾರನ್ನು ಕೇಳೋದೋ ಗೊತ್ತಿಲ್ಲ. ‘ಈ ಬಾರಿ ಬಜೆಟ್ ಇಲ್ಲ. ಮುಂದಿನ ಸಾರಿ ಚೆನ್ನಾಗಿ ಮಾಡೋಣ’ ಎಂಬುದು ಪ್ರತಿವರ್ಷದ ಭರವಸೆ.
‘ಇನ್ಲೆ ’ಕಲೆಯಲ್ಲಿ ಮೈಸೂರು ಪ್ರಪಂಚದಲ್ಲೇ ಪ್ರಸಿದ್ಧ. ಆದರೆ, ದಸರೆಯಲ್ಲೇ ತಕ್ಕ ಮಾನ್ಯತೆ ಸಿಗುತ್ತಿಲ್ಲ. ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ,ಹೊರಗಿನಿಂದ ಕರೆಸುವ ಕಲಾವಿದರಿಗೆ ಲಕ್ಷಾಂತರ  ಹಣ ನೀಡಲಾಗುತ್ತದೆ. ಆ ಬಗ್ಗೆ ಬೇಸರವೇನಿಲ್ಲ. ಆದರೆ, ಸ್ಥಳೀಯ ಕಲೆ, ಕಲಾವಿದರಿಗೆ  ತಕ್ಕ ಗೌರವವನ್ನಾದರೂ ನೀಡಬೇಕಲ್ಲವೇ? ಅದಾಗಬೇಕು.
-ಪಿ.ಗೌರಯ್ಯ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಇನ್ಲೇ ಕಲಾವಿದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ