ಕಳ್ಳರ ಮೇಲೆ ಜಾಗೃತದಳ ಕಣ್ಣು, ಕೋಟಿಗಟ್ಟಲೆ ದಂಡ ವಸೂಲಿ



ವಿಕ ಸುದ್ದಿಲೋಕ ಮೈಸೂರು

ಮೈಸೂರು ಭಾಗದಲ್ಲಿ ಹೆಚ್ಚುತ್ತಿದ್ದಾರೆ ವಿದ್ಯುತ್ ಕಳ್ಳರು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿ(ಸೆಸ್ಕ್) ಜಾಗೃತ ದಳದ ದಂಡ ವಸೂಲಿಯಲ್ಲೂ ಗಣನೀಯ ಏರಿಕೆ...
ದೊಡ್ಡ ದೊಡ್ಡ ಕೈಗಾರಿಕೆಯಿಂದ ಹಿಡಿದು ಮನೆ, ಲಾಡ್ಜ್ ನಿಂದ ಆರಂಭಗೊಂಡು ಬ್ಯೂಟಿಪಾರ್ಲರ್, ಉದ್ಯಮಿಯಿಂದ ಹಿಡಿದು ರೈತರವರೆಗೂ ವಿದ್ಯುತ್ ಕದಿಯುತ್ತಿರುವವರ ಮೇಲೆ ಸೆಸ್ಕ್ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸುವರು. ಸರಕಾರಿ ಸಂಸ್ಥೆಗಳ ವಿದ್ಯುತ್ ಕಳ್ಳತನವನ್ನೂ ಬಿಟ್ಟಿಲ್ಲ.
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯ ಈ ಜಾಗೃತದಳ ನಾಲ್ಕೇ ತಿಂಗಳಲ್ಲಿ ವಿಧಿಸಿದ ದಂಡ ಪ್ರಮಾಣ ೨ ಕೋಟಿ ರೂ. ದಾಟಿದೆ. ವಿದ್ಯುತ್ ಕದ್ದು ಶಿಕ್ಷೆಗೆ ಗುರಿಯಾದವರ ಸಂಖ್ಯೆಯೂ ಹತ್ತನ್ನು ದಾಟಿದೆ.
ದಂಡದಲ್ಲಿ ಏರಿಕೆ: ಐದು ವರ್ಷದ ಹಿಂದೆ ಆರಂಭಗೊಂಡ ಸೆಸ್ಕ್ ಜಾಗೃತದಳದ ದಂಡ ವಸೂಲಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ವಿದ್ಯುತ್ ಕಳ್ಳತನ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಪತ್ತೆ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.
೨೦೦೭-೦೮ರ ಆರ್ಥಿಕ ವರ್ಷದಲ್ಲಿ ೧೪,೬೦೨ ಕಡೆ ದಾಳಿ ನಡೆಸಿ ೧೩೭೨ ಮೊಕದ್ದಮೆ ದಾಖಲಿಸಲಾಗಿತ್ತು. ೧.೬೭ ಕೋಟಿ ರೂ.ಗಳ ದಂಡದಲ್ಲಿ ವಸೂಲಿ ಯಾಗಿದ್ದು ೧.೪೭ ಕೋಟಿ ರೂ. ಅದೇ ೨೦೦೮-೦೯ರಲ್ಲಿ ೯೮೨೮ ಕಡೆ ದಾಳಿ ಮಾಡಿ ೧೬೬೨ ಮೊಕದ್ದಮೆ ದಾಖಲಿಸಲಾಯಿತು. ೩.೯೯ ಕೋಟಿ ರೂ.ಗಳ ದಂಡದಲ್ಲಿ ವಸೂಲಿ ಮಾಡಿದ್ದು ೨.೫೨ ಕೋಟಿ ರೂ. ಇನ್ನು ೨೦೦೯-೧೦ರಲ್ಲಿ ೭೦೯೪ ಕಡೆ ದಾಳಿ ನಡೆಸಿ ೧೫೩೨ ಮೊಕದ್ದಮೆ ದಾಖಲೆ ಮಾಡಲಾಯಿತು. ಈ ಅವಧಿಯಲ್ಲಿ ೬.೩೮ ಕೋಟಿ ರೂ. ದಂಡದಲ್ಲಿ ೩.೦೮ ಕೋಟಿ ರೂ. ವಸೂಲಿ ಮಾಡಲಾಯಿತು.
೨೦೧೦-೧೧ರ ನಾಲ್ಕು ತಿಂಗಳ ಅವಧಿಯಲ್ಲಿಯೇ ೩೮೧ ಮೊಕದ್ದಮೆ ದಾಖಲಿಸಿ ೨.೧೩ ಕೋಟಿ ರೂ. ದಂಡದಲ್ಲಿ ೧ ಕೋಟಿಯಷ್ಟು ವಸೂಲಿ ಮಾಡಲಾಗಿದೆ. ದಂಡ ವಸೂಲಿ ಯಲ್ಲಿ ವಿಭಾಗಕ್ಕೆ ಪ್ರಶಸ್ತಿಯೂ ಬಂದಿದೆ.
ಕಳ್ಳತನದ ಈ ಪರಿ: ಹೇಳಿ ಕೇಳಿ ಅದು ವಿದ್ಯುತ್. ಅದನ್ನು ಮುಟ್ಟುವುದೇ ಸಾಹಸ. ಇನ್ನು ಕಳ್ಳತನ ಮಾಡಬೇಕು ಎಂದರೆ ಎಂಟೆದೆಯೇ ಬೇಕು. ಅದಕ್ಕೂ ಚಾಣಾಕ್ಷ ಮಾರ್ಗಗಳನ್ನು ನಮ್ಮವರು ಕಂಡುಕೊಂಡಿದ್ದಾರೆ.
ಅದೊಂದು ಪ್ರಮುಖ ಕಂಪೆನಿ. ಸೋಲಾರ್ ಸಂಪರ್ಕ ಮೇಲ್ನೋಟಕ್ಕೆ ಮಾತ್ರ. ಮಾಡೋದು ವಿದ್ಯುತ್ ಕಳ್ಳತನ. ಸೆಸ್ಕ್ ಜಾಗೃತ ದಳದವರು ಇದನ್ನು ಪತ್ತೆ ಹಚ್ಚಲು ದೊಡ್ಡ ಸಾಹಸವನ್ನೇ ಮಾಡಬೇಕಾಯಿತು.
ಇನ್ನೊಂದು ಕಡೆ ವಿದ್ಯುತ್ ನಿಯಂತ್ರಣಕ್ಕೂ ಅಳವಡಿಸಿ ಕೊಂಡಿದ್ದರು ರಿಮೋಟ್ ಕಂಟ್ರೋಲ್. ಇದೇ ರೀತಿ ಮೈಸೂರಿನಲ್ಲಿ ಬ್ಯೂಟಿ ಪಾರ್ಲರ್, ಹಾಸನದಲ್ಲಿ ಕಾಫಿ ಕ್ಯೂರಿಂಗ್, ಚನ್ನರಾಯಪಟ್ಟಣದಲ್ಲಿ ಲಾಡ್ಜ್, ಕೊಡಗಿನಲ್ಲಿ ಹಿಟ್ಟಿನ ಗಿರಣಿ, ಗುಂಡ್ಲುಪೇಟೆಯಲ್ಲಿ ರೆಸಾರ್ಟ್ ಮೇಲೂ ವಿದ್ಯುತ್ ಕಳ್ಳತನದ ದಾಳಿ ಮಾಡಿ ಲಕ್ಷಾಂತರ ರೂ. ದಂಡ ವಸೂಲಿ ಮಾಡ ಲಾಗಿದೆ.
ಅದೊಂದು ಸರಕಾರಿ ಕಟ್ಟಡ. ಅಲ್ಲಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು ನೇರವಾಗಿ ಕಂಬದಿಂದಲೇ. ತಿಂಗಳುಗಳ ಕಾಲ ಹಾಗೆ ವಿದ್ಯುತ್ ಹರಿಯಿತು. ಸೆಸ್ಕ್ ಜಾಗೃತಕ್ಕೆ ಗೊತ್ತಾಗಿದ್ದೇ ತಡ ಆಯ್ತು ದಾಳಿ. ಈಗ ಅಕ್ರಮ ಬಂದ್ ಆಗಿದೆ. ಸುಮಾರು ೫ಲಕ್ಷ ರೂ. ದಂಡವನ್ನು ಮುಜರಾಯಿ ಇಲಾಖೆ ಪಾವತಿಸಿದೆ.
ಕೊಡಗಿಗೂ ಠಾಣೆ: ಸದ್ಯ ಸೆಸ್ಕ್ ಜಾಗೃತ ದಳಕ್ಕೆ ಎಸ್ಪಿ ದರ್ಜೆ ಅಧಿಕಾರಿ ಮುಖ್ಯಸ್ಥರು. ಡಿವೈಎಸ್ಪಿ, ಇಇ ನಂತರದ ಉಸ್ತುವಾರಿಗಳು. ಮೈಸೂರು, ಮಂಡ್ಯ, ಚಾಮರಾಜ ನಗರ ಹಾಗೂ ಹಾಸನದಲ್ಲಿ ಸೆಸ್ಕ್ ಜಾಗೃತದಳದ ಪೊಲೀಸ್ ಠಾಣೆಯಿದೆ. ಅಲ್ಲಿ ಒಬ್ಬ ಇನ್ಸ್‌ಪೆಕ್ಟರ್, ಒಬ್ಬರು ಎಸ್‌ಐ, ಇಬ್ಬರು ಎಎಸ್‌ಐ ಹಾಗೂ ಹೆಡ್ ಕಾನ್ಸ್‌ಟೆಬಲ್, ೮ ಮಂದಿ ಕಾನ್ಸ್‌ಟೆಬಲ್‌ಗಳು ಇದ್ದಾರೆ.
ತಾಂತ್ರಿಕ ವಿಭಾಗದಿಂದ ಒಬ್ಬೊಬ್ಬ ಎಇಇ ಹಾಗೂ ಎಇ, ಲೈನ್‌ಮ್ಯಾನ್‌ಗಳಿದ್ದಾರೆ. ಆದರೆ ಮೆಸ್ಕಾಂನಿಂದ ಬೇರ್ಪಟ್ಟು ಸೆಸ್ಕ್‌ಗೆ ಸೇರಿದ ನಂತರ ಕೊಡಗು ಜಿಲ್ಲೆಯಲ್ಲಿ ಸೆಸ್ಕ್ ಪೊಲೀಸ್ ಠಾಣೆ ಬೇಕೆನ್ನುವ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಸದ್ಯ ಮೈಸೂರು ಕಚೇರಿಯಿಂದಲೇ ಕೊಡಗಿನ ಉಸ್ತುವಾರಿ ವಹಿಸಲಾಗುತ್ತಿದೆ. ಇದಕ್ಕೆ ಒಪ್ಪಿಗೆಯೂ ದೊರೆತಿದ್ದು ಕೊಡಗಿ ನಲ್ಲೂ ಸೆಸ್ಕ್ ಠಾಣೆ ಸದ್ಯವೇ ಬರಲಿದೆ.
ಹೊಸ ಕಚೇರಿ: ಐದು ವರ್ಷದಿಂದ ಶ್ರೀಹರ್ಷ ರಸ್ತೆಯ ಸೆಸ್ಕ್ ಕಚೇರಿಯಲ್ಲಿಯೇ ಜಾಗೃತದಳ ಕಾರ‍್ಯನಿರ್ವಹಿಸು ತ್ತಿತ್ತು. ಈಗ ಕಾರ್ಪೊರೇಟ್ ಮಾದರಿಯ ಕಚೇರಿಗೆ ಕಟ್ಟಡ ಸ್ಥಳಾಂತರಗೊಂಡಿದೆ.
ಸರಸ್ವತಿಪುರಂ ಅಗ್ನಿಶಾಮಕದಳದ ಪಕ್ಕದ ಖಾಸಗಿ ಕಟ್ಟಡದಲ್ಲಿ ಜಾಗೃತ ದಳದ ಕಚೇರಿಯಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ