ಮೈಸೂರಿನಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಪಣ

ಆರ್.ಕೃಷ್ಣ, ಮೈಸೂರು
ಅತ್ತ ಬೆಂಗಳೂರಿನ ನಿರ್ಗತಿಕರ ಕೇಂದ್ರದಲ್ಲಿ ಸರಣಿ ಸಾವು ಸಂಭವಿಸಿದ್ದರೆ, ಇತ್ತ ಸಾಂಸ್ಕೃತಿಕ ರಾಜಧಾನಿ ಮೈಸೂರನ್ನು ‘ಭಿಕ್ಷುಕ ಮುಕ್ತ ನಗರ’ವನ್ನಾಗಿಸುವ ಕಾರ‍್ಯಕ್ಕೆ ಚಾಲನೆ ನೀಡಲಾಗಿದೆ.
‘ಭಿಕ್ಷೆ ಮುಕ್ತ ನಗರ’ ಎಂದು ಘೋಷಣೆಯಾಗಿರುವ ರಾಜ್ಯದ ಹೆರಿಟೇಜ್ ಸಿಟಿ, ‘ಜ್ಯೂವೆಲ್ ಅಫ್ ಕರ್ನಾಟಕ’ ಮೈಸೂರಿನಲ್ಲಿ ಇನ್ನು ಮುಂದೆ ಭಿಕ್ಷೆ ಬೇಡಿದರೆ ಸಜೆ ಕಾಯ್ದಿದೆ. ಭಿಕ್ಷಾಟನೆ ನಿಷೇಧಿಸಿರುವ ರಾಜ್ಯ ಸರಕಾರ ೧೯೭೫ರಲ್ಲಿ ಕರ್ನಾಟಕ ಭಿಕ್ಷಾಟನೆ ಅಧಿನಿಯಮವನ್ನು ಜಾರಿಗೊಳಿಸಿ ಇಡೀ ರಾಜ್ಯಕ್ಕೆ ವಿಸ್ತರಿಸಿತ್ತು. ಆದರೆ ನಾನಾ ಕಾರಣದಿಂದ ಈ ಕಾಯಿದೆ ಸಮರ್ಪಕವಾಗಿ ಜಾರಿಗೊಳ್ಳದಿದ್ದರೂ ರಾಜ್ಯದಲ್ಲಿ ಪ್ರಥಮವಾಗಿ ನಗರದ ಪ್ರವಾಸಿ ತಾಣಗಳನ್ನು ಭಿಕ್ಷೆ ಮುಕ್ತ ವಲಯವನ್ನಾಗಿ ಮಾಡಲು ನಗರಪಾಲಿಕೆ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿವೆ.
ಇನ್ನು ಮುಂದೆ ಭಿಕ್ಷೆ ಬೇಡುವ ೧೬ ವರ್ಷ ತುಂಬಿದ ಬಾಲಕ, ೧೮ ವರ್ಷ ತುಂಬಿದ ಬಾಲಕಿಯರನ್ನು ಅಧಿನಿಯಮ ಸೆಕ್ಷನ್ ೩ರ ಅನ್ವಯ ಬಂಧಿಸಿ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗುವುದು. ನಿಯಮದ ಪ್ರಕಾರ ವಿಚಾರಣೆ ನಡೆಸಿ ಭಿಕ್ಷೆ ಬೇಡುವವರಿಗೆ ಒಂದರಿಂದ ಮೂರು ವರ್ಷದವರೆಗೆ ಸಜೆ ವಿಧಿಸುವುದರ ಜತೆಗೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಬಂಧನದಲ್ಲಿ ಇರಿಸಲಾಗುವುದು.
ನಗರದ ಅರಮನೆ, ಮೃಗಾಲಯ, ಸಂತ ಫಿಲೋವಿನಾ ಚರ್ಚ್, ಚಾಮುಂಡಿಬೆಟ್ಟ ಸೇರಿದಂತೆ ಇತರೆ ಪ್ರೇಕ್ಷಣಿಯ ಸ್ಥಳದ ಜತೆಗೆ ನಗರದ ಸುತ್ತಮುತ್ತಲ ಪ್ರದೇಶಗಳಾದ ಕೃಷ್ಣರಾಜಸಾಗರದ ಬೃಂದಾವನದಲ್ಲೂ ಭಿಕ್ಷೆ ಬೇಡುವಂತಿಲ್ಲ. ಪೊಲೀಸ್‌ಠಾಣೆಗಳು ತಮ್ಮ ವ್ಯಾಪ್ತಿಯ ಭಿಕ್ಷುಕರನ್ನು ಬಂಧಿಸಿ ಪರಿಹಾರ ಕೇಂದ್ರಗಳ ವಶಕ್ಕೆ ನೀಡಬೇಕು. ಈ ಮೂಲಕ ನಗರವನ್ನು ಭಿಕ್ಷೆ ರಹಿತ ವಲಯವನ್ನಾಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ.
ಸಮೀಕ್ಷೆಗೆ ಚಾಲನೆ: ಭಿಕ್ಷುಕರು, ನಿರ್ಗತಿಕರಿಗೆ ಪುನರ್ವಸತಿ ಕಲ್ಪಿಸಲು ಸುಪ್ರೀಂಕೋರ್ಟ್‌ನ ನಿರ್ದೇಶನ ಪಾಲನೆಗೆ ನಗರ ಪಾಲಿಕೆ ಮುಂದಾಗಿದೆ. ಸರಕಾರದ ವಿವಿಧ ಯೋಜನೆ ಜತೆಗೆ ನರ್ಮ್‌ನಡಿ ನಗರದಲ್ಲಿ ನಿರ್ಗತಿಕರ ಪುನರ್ ವಸತಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಇವರಿಗಾಗಿ ದೊಡ್ಡ ಶೆಲ್ಟರ್ ನಿರ್ಮಿಸಿ ಅಲ್ಲಿ ವಿವಿಧ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಉದ್ದೇಶ ಈ ಯೋಜನೆಯದ್ದು.
ಸಮೀಕ್ಷೆ ಕಾಲಕ್ಕೆ ರಸ್ತೆ ಬದಿ, ಮಾರುಕಟ್ಟೆ ಹೊರಗೆ, ಮಳಿಗೆಗಳ ಮುಂದೆ, ಬಸ್ ನಿಲ್ದಾಣ, ಸೇತುವೆ ಕೆಳ ಭಾಗ, ಸಬ್‌ವೇ ಸೇರಿದಂತೆ ವಿವಿಧೆಡೆ ರಾತ್ರಿ ಕಳೆಯುವ ಜನ ಸಮೂಹದ ಪ್ರಮಾಣ ಎಷ್ಟಿದೆ ಎಂಬುದನ್ನು ಅರಿಯಲು ಸಮೀಕ್ಷೆ ನಡೆಯುತ್ತಿದ್ದು, ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಈ ಕಾರ‍್ಯಕ್ಕೆ ಚಾಲನೆ ನೀಡಿದ್ದಾರೆ.
ಒಂದು ವಾರ ರಾತ್ರಿ ೧೦ರಿಂದ ಬೆಳಗಿನ ಜಾವ ದವರೆಗೂ ನಗರದಲ್ಲಿ ಸಮೀಕ್ಷೆ ಕಾರ‍್ಯ ನಡೆಯುತ್ತಿದ್ದು, ಮೊದಲ ಮೂರು ದಿನ ನಿರ್ಗತಿಕರ ಬೆರಳಿಗೆ ಅಳಿಸಲಾಗದ ಶಾಯಿ (ಚುನಾವಣೆ ಸಮಯದಲ್ಲಿ ಬಳಸುವ ಇಂಕು)ಯನ್ನು ಹಚ್ಚಿ ಗುರುತಿಸಲಾಗುವುದು. ಬಳಿಕ ಇಂಥವರನ್ನು ಕೌನ್ಸೆಲಿಂಗ್ ಮೂಲಕ ಮನೆಗೆ ಕಳುಹಿಸುವ ಅಥವಾ ನಿಜವಾಗಲೂ ನಿರ್ಗತಿಕರಾಗಿದ್ದರೆ ಅಂಥವರಿಗೆ ಇನ್ನಾರು ತಿಂಗಳಲ್ಲಿ ಸೂರು ನೀಡುವ ಕಾರ‍್ಯ ನಡೆಯಲಿದೆ.
ಪಾಲಿಕೆ, ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವ ದಲ್ಲಿ ೧೩೫ ಮಂದಿಯನ್ನು ಒಳಗೊಂಡ ೧೩ ತಂಡವನ್ನು ರಚಿಸಲಾಗಿದೆ. ಈ ಕಾರ‍್ಯಕ್ಕೆ ಮೈರಾಡ, ಆರ್‌ಎಲ್‌ಎಚ್‌ಪಿ ಹಾಗೂ ಸ್ವಾಮಿ ವಿವೇಕಾ ನಂದ ಯೂತ್ ಮೂವ್‌ಮೆಂಟ್ ಕೈ ಜೋಡಿಸಿವೆ. ಹೀಗೆ ಸಂಗ್ರಹಿಸಿದ ಸಮಗ್ರ ವರದಿಯನ್ನು ರಾಜ್ಯ ಸರಕಾರದ ಮೂಲಕ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ