ಸಂಚಾರ ಠಾಣೆ ಎಂಬ ‘ ಶಕ್ತಿ ’ ಕೇಂದ್ರಗಳು

ವಿಕ ಸುದ್ದಿಲೋಕ ಮೈಸೂರು
ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಹುದ್ದೆ ಅಲಂಕರಿ ಸಲು ಭಯ. ಇದಕ್ಕೆ ಕಾರಣ ಸಸ್ಪೆಂಡ್ ಮೇನಿಯಾ...
ಒಂದೂವರೆ ತಿಂಗಳ ಹಿಂದೆಯೇ ಇಲ್ಲಿನ ಇನ್ಸ್‌ಪೆಕ್ಟರ್ ರಾಮಚಂದ್ರ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಸಸ್ಪೆಂಡ್‌ಗೊಂಡರು. ಅನಂತರ ಈ ಠಾಣೆಯಲ್ಲಿನ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ. ಈಗ ಪ್ರಭಾರ ಇನ್ಸ್‌ಪೆಕ್ಟರ್ ಇದ್ದರೂ ಕಾಯಂ ಅಧಿಕಾರಿ ಬರಲು ಆಗುತ್ತಿಲ್ಲ.
ನಗರದ ಸಂಚಾರ ಠಾಣೆಗಳಿಗೆ ಬರಬೇಕೆಂದರೆ ಅಧಿಕಾರಿ ಯಿಂದ ಹಿಡಿದು ಕಾನ್ಸ್‌ಟೆಬಲ್‌ವರೆಗೂ ಭಾರಿ ಬೇಡಿಕೆ. ಇಲ್ಲಿಗೆ ಬರಲು ಭಾರಿ ಪ್ರಭಾವದ ಜತೆಗೆ ತಮ್ಮ ಆರ್ಥಿಕ ಶಕ್ತಿಯನ್ನೂ ಪ್ರದರ್ಶಿಸಲೇಬೇಕು. ಅಷ್ಟರಮಟ್ಟಿಗೆ ಸಂಚಾರ ಠಾಣೆಗಳು ಶಕ್ತಿಕೇಂದ್ರಗಳು.
ಸಸ್ಪೆಂಡ್ ಮೇನಿಯಾ: ಸಂಚಾರ ಠಾಣೆಗೆ ಕುರ್ಚಿ ಸಿಗಬೇಕೆಂದರೆ ಶಕ್ತಿ ಪ್ರದರ್ಶನದ ಜತೆಗೆ ಚಾಣಾಕ್ಷತೆಯೂ ಬೇಕು. ಕೊಂಚ ಎಚ್ಚರ ತಪ್ಪಿದರೆ ಹಣವೇ ಕುರ್ಚಿಯನ್ನೂ ಬಲಿ ತೆಗೆದುಕೊಂಡು ಬಿಡುತ್ತದೆ. ಇದು ಸಾಕಷ್ಟು ಬಾರಿ ಹೀಗೆಯೇ ಆಗಿದೆ.
ಅದರಲ್ಲೂ ದೇವರಾಜ ಸಂಚಾರ ಠಾಣೆಗಂತೂ ಸಸ್ಪೆಂಡ್ ಅಪಖ್ಯಾತಿಯಿದೆ. ಇಲ್ಲಿ ಎಸ್‌ಐ ಆಗಿದ್ದ ಅಂಕಯ್ಯ ಈ ರೀತಿಯ ಆರೋಪಗಳಿಗೆ ಸಿಲುಕಿದ್ದರು. ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸಸ್ಪೆಂಡ್ ಆದರು.
ಇದಾದ ಕೆಲವೇ ದಿನದಲ್ಲಿ ಇನ್ಸ್‌ಪೆಕ್ಟರ್ ಸರದಿ. ಒಳ್ಳೆಯ ಅಧಿಕಾರಿ ಎಂದು ಹೆಸರು ಪಡೆದಿದ್ದ ರಾಮಚಂದ್ರ, ಪ್ಲಾನೆಟೆಕ್ಸ್ ನಲ್ಲಿ ಒಂದು ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಬಳಿಕ ಅವರಿಗೂ ಸಸ್ಪೆಂಡ್ ಶಿಕ್ಷೆ.
ಠಾಣೆಯ ಪ್ರಮುಖರಿಬ್ಬರೂ ಸಸ್ಪೆಂಡ್ ಆಗಿದ್ದೇ ತಡ ಇಲ್ಲಿಗೆ ಬರಲು ಪ್ರಭಾವಿಗಳೂ ಹಿಂದೇಟು ಹಾಕಿದರು. ಇದರಿಂದ ತಿಂಗಳವರೆಗೆ ಇಲ್ಲಿನ ಹುದ್ದೆ ಖಾಲಿಯೇ ಉಳಿದಿತ್ತು. ಎಸ್‌ಐ ನೇಮಕವಾದರೂ ಇನ್ಸ್‌ಪೆಕ್ಟರ್ ಹುದ್ದೆ ಇನ್ನೂ ಖಾಲಿ ಇದೆ. ಸದ್ಯಕ್ಕೆ ಕಾಯಂ ಅಧಿಕಾರಿ ಬರುವ ಸೂಚನೆ ಇಲ್ಲ.
ಹೊಸ ಎಸ್‌ಐ-ಪ್ರಭಾರ ಪಿಐ: ದೇವರಾಜ ಸಂಚಾರ ಠಾಣೆಗೆ ಎಸ್‌ಐ ಆಗಿ ಬರಲು ನಗರದಲ್ಲೇ ಸಾಕಷ್ಟು ಶಕ್ತಿವಂತ ಎಸ್‌ಐ ಗಳಿದ್ದಾರೆ. ಆದರೆ ಅವರಿಗೂ ಸಸ್ಪೆಂಡ್ ಮೇನಿಯಾ ಆವರಿಸಿದ್ದ ರಿಂದ ಹಿಂದೆ ಸರಿದರು. ಇದರಿಂದ ಸರಕಾರವೇ ಹೊಸ ಎಸ್‌ಐ ಅವರನ್ನು ಇಲ್ಲಿಗೆ ನೇಮಿಸಿತು. ದೂರದ ಕೋಲಾರದಿಂದ ಈಗ ಬಾಲಕೃಷ್ಣ ಎಸ್‌ಐ ಆಗಿ ಇಲ್ಲಿಗೆ ಬಂದರು. ಇನ್ನೂ ಇನ್ಸ್‌ಪೆಕ್ಟರ್ ಹುದ್ದೆಯದ್ದೂ ಇದೇ ಕಥೆ. ಸದ್ಯ ನಗರದಲ್ಲಿರುವವರಿಗೆ ಈ ಹುದ್ದೆಗೆ ಬರಲು ಮನಸಿದ್ದರೂ ಹಿಂದೇಟು ಹಾಕುತ್ತಿದ್ದಾರೆ. ನೇಮಕಕ್ಕೆ ಡಿಜಿ ಅವರ ಬಿಗಿ ನಿಲುವುಗಳೂ ಅಡ್ಡಿಯಾಗಿದೆ. ಈಗ ಸಮಾವೇಶ ಗಳಲ್ಲದೇ ದಸರೆಗೂ ಬರುತ್ತಿರುವುದರಿಂದ ಭಾರ ಕಡಿಮೆ ಮಾಡಲು ಆಯುಕ್ತ ಸುನೀಲ್ ಅಗರವಾಲ್ ಮುಂದಾಗಿ ದ್ದಾರೆ. ಈಗ ಪ್ರಭಾರ ಇನ್ಸ್‌ಪೆಕ್ಟರ್ ಆಗಿ ಹಿರಿಯ ಇನ್ಸ್‌ಪೆಕ್ಟರ್ ಅಶೋಕ ಪುರಂ ಠಾಣೆಯ ನಂಜುಂಡ ಅವರನ್ನು ಆಯುಕ್ತರು ನೇಮಕ ಮಾಡಿದ್ದಾರೆ. ಮೂರು ದಿನದ ಹಿಂದೆಯೇ ನಂಜುಂಡ ಅಧಿಕಾರ ಸ್ವೀಕರಿಸಿ ಕೆಲಸ ಶುರು ಮಾಡಿದ್ದಾರೆ.
ಸಂಚಾರ ಠಾಣೆಯೆಂದರೆ..: ನಗರದಲ್ಲಿರುವ ಸಂಚಾರ ಪೊಲೀಸ್ ಠಾಣೆಗಳ ಸಂಖ್ಯೆ ಆರು. ಆರು ಮಂದಿ ಎಸ್‌ಐ ಅಲ್ಲದೇ, ಮೂವರು ಸರ್ಕಲ್ ಇನ್ಸ್‌ಪೆಕ್ಟರ್‌ಗಳು, ಒಬ್ಬರು ಎಸಿಪಿ ಸಂಚಾರಕ್ಕಾಗಿಯೇ ಇದ್ದಾರೆ.ಈ  ಸಂಚಾರಿ ಪೊಲೀಸ್ ಠಾಣೆ ಗಳಿಗೆ ಎಸ್‌ಐ ಆಗಿ ಬರಬೇಕೆಂದರೆ ಭಾರಿ ಬೇಡಿಕೆ. ಅಷ್ಟರ ಮಟ್ಟಿಗಿನ ‘ಶಕ್ತಿ’ ಕೇಂದ್ರಗಳಿವು. ದೇವರಾಜ ಠಾಣೆ ಸಂಚಾರಿ ಠಾಣೆ ಎಸ್‌ಐ ಸ್ಥಾನ ಅಲಂಕರಿಸಬೇಕೆಂದರೆ ಒಂದು ಕೈ ಮೇಲೆ ಎನ್ನುವಂತ ಸ್ಥಿತಿ.
ನಗರದ ವಾಹನ ಸಂಚಾರ, ಹೊರ ರಾಜ್ಯಗಳಿಂದ ಬರುವ ಪ್ರಮುಖ ವಾಹನಗಳ ನಿಯಂತ್ರಣ ಸಂಚಾರ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಬರಲು ಪೊಲೀಸರಿಗೂ ಬಲು ಇಷ್ಟ. ಬೇರೆ ಠಾಣೆಗಳಲ್ಲಿ ಪತ್ತೆಯ ತಲೆನೋವು ಇರುತ್ತದೆ. ಇಲ್ಲಿ ಅದಿಲ್ಲ.
ಪ್ರತಿ ವರ್ಷ ಸಂಚಾರ ಠಾಣೆಯ ಎಸ್‌ಐಗಳ ಬದಲಾವಣೆ ಆಗುತ್ತಲೇ ಇರುತ್ತದೆ. ಈ ವರ್ಷ ವಿವಿಪುರಂ ಸಂಚಾರ ಠಾಣೆ ಎಸ್‌ಐ ಪರಶುರಾಮ್ ಒಬ್ಬರೇ ಬದಲಾಗಿದ್ದು. ಅಲ್ಲಿಗೆ ಬಂದ ಪ್ರಕಾಶ್ ದೊಡ್ಡ ಮಟ್ಟದ ಪ್ರಭಾವವನ್ನೇ ಬಳಸಿದ್ದಾರೆ ಎನ್ನುತ್ತವೆ ಇಲಾಖೆ ಮೂಲಗಳು.
ದೇವರಾಜ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆದ ನಂತರ ಹಿಂದೆ ಸಂಚಾರದಲ್ಲಿ ಕೆಲಸ ಮಾಡಿ ಅನುಭವ ಇರುವ ನಂಜುಂಡ ಅವರನ್ನು ನೇಮಿಸಲಾಗಿದೆ. ಅವರನ್ನೇ ಕಾಯಂ ಆಗಿ ನೇಮಿಸಿ ಅಶೋಕಪುರಂ ಠಾಣೆಗೆ ಬೇರೆ   ಅಧಿಕಾರಿ ನೇಮಿಸುವಂತೆ ಡಿಜಿಗೆ ಪತ್ರ ಬರೆದಿದ್ದೇನೆ.
-ಸುನೀಲ್ ಅಗರವಾಲ್, ನಗರ ಪೊಲೀಸ್ ಆಯುಕ್ತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ