ಗುರುಪ್ರಸಾದ್‌ಗೆ ರಾಷ್ಟ್ರಪತಿ ಪದಕ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿನ ಯುವಕನೊಬ್ಬ ನಕ್ಸಲ್- ಭಯೋ ತ್ಪಾದಕ ಸಂಘಟನೆಗಳ ನಡುವಿನ ನಂಟಿನ ಆರೋಪದಡಿ ಪೊಲೀಸರ ಬಂಧನಕ್ಕೆ ಒಳಗಾಗಿರುವ ಘಟನೆ ಮಧ್ಯೆಯೇ ನಕ್ಸಲ್ ವಿರುದ್ಧದ ಕಾದಾಟದಲ್ಲಿ ಬಲಿದಾನಗೈದ ಕೊಡಗಿನ ಪೊಲೀಸ್ ಕಾನ್ಸ್‌ಸ್ಟೇಬಲ್ ಕೊಡಗಿನ ಗುರು ಪ್ರಸಾದ್‌ಗೆ ರಾಷ್ಟ್ರಪತಿ ಪದಕ ಘೋಷಣೆ ಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಮಾವಿನ ಹೊಳೆಯಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆ ಸಂದರ್ಭ ಗುಂಡಿನ ಚಕಮಕಿಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ ಎಂ.ಎನ್. ಗುರುಪ್ರಸಾದ್ ಮಡಿಕೇರಿ ತಾಲೂಕು ಕುಂದಚೇರಿ ಗ್ರಾಮದ ಮುಕ್ಕಾಟಿ ಸಿ. ನಂಜಪ್ಪ- ಲೀಲಾವತಿ ದಂಪತಿಯ ಏಕೈಕ ಪುತ್ರ.
ವಯೋವೃದ್ಧ ಪೋಷಕರಿಗೆ ಪ್ರೀತಿಯ ಮಗ ಹಾಗೂ ಒಡಹುಟ್ಟಿದ ಐವರು ಸಹೋದರಿಯರಿಗೆ ಮುದ್ದಿನ ಸೋದರನ ಅಕಾಲಿಕ ಸಾವು ಇಂದಿಗೂ ಮರೆಯಲಾಗದ ನೋವು. ಚೇರಂಬಾಣೆ ಕೊಡವ ಸಮಾಜದಲ್ಲಿ ಇದ್ದ ಚಿಕ್ಕಪ್ಪ ರಾಜು ಅವರ ಪುತ್ರಿ ಕುಮುದಾ ಅವರ ವಿವಾಹ ದಿನದಂದೇ ಪಾರ್ಥಿವ ಶರೀರರವಾಗಿ ಬಂದಿದ್ದು ವಿಪರ‍್ಯಾಸ.
ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಐದನೇ ತುಕಡಿಗೆ ೧೯೯೯ ರಲ್ಲಿ ಪೇದೆಯಾಗಿ ಕರ್ತವ್ಯಕ್ಕೆ ಸೇರಿದ್ದ. ಕುಟುಂಬದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಎಸ್‌ಎಸ್‌ಎಲ್‌ಸಿಗೆ ಮೊಟಕುಗೊಳಿಸಿ, ಪೊಲೀಸ್ ಕರ್ತವ್ಯಕ್ಕೆ ಸೇರಿದ್ದರು. ಕಾನಕಂಡ ಪ್ರಾಥಮಿಕ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ,  ಚೆಟ್ಟಿಮಾನಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ಹಾಗೂ ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದರು.
ಕರ್ನಾಟಕ- ತಮಿಳುನಾಡು ರಾಜ್ಯಕ್ಕೆ ಸವಾಲಾಗಿದ್ದ ನರಹಂತಕ ವೀರಪ್ಪನ್ ವಿರುದ್ಧ ಚಾಮರಾಜನಗರ ಜಿಲ್ಲೆಯ ಮಲೆಮಹಾದೇಶ್ವರ ಬೆಟ್ಟದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ವರ್ಷ ಸಕ್ರಿಯವಾಗಿದ್ದ ಅವರಿಗೆ ವೀರಪ್ಪನ್ ಸತ್ತ ನಂತರ ಸರಕಾರ ೨ ಲಕ್ಷ ರೂ. ಇನಾಮು ನೀಡಿತ್ತು. ಸುಂದರ ಬದುಕಿನ ಕನಸಿನೊಂದಿಗೆ ಗುರುಪ್ರಸಾದ್, ಕುಶಾಲನಗರದಲ್ಲಿ ನಿವೇಶನ ಖರೀದಿಸಿದ್ದರು. ಮನೆ ಕಟ್ಟುವ ಆಸೆ ಈಡೇರುವ ಮುನ್ನವೇ ವಿಧಿಲೀಲೆಗೆ ಬಲಿಯಾಗಿದ್ದರು.
ನಂಜಪ್ಪ- ಲೀಲಾವತಿ ದಂಪತಿಗೆ ಪ್ರಾರಂಭದಲ್ಲಿ ಐವರು ಪುತ್ರಿಯರು ಜನಿಸಿದರು, ಪುತ್ರ ಸಂತಾನದ ಭಾಗ್ಯ ಇರಲಿಲ್ಲ. ದಂಪತಿ ಪುತ್ರ ಸಂತಾನಕ್ಕಾಗಿ ದೇವರ (ಗುರು) ಮೊರೆ ಹೋದರು. ಅಲ್ಲಿಂದ ಮಗ ಜನಿಸಿದಕ್ಕಾಗಿ ಆತನಿಗೆ ‘ಗುರುಪ್ರಸಾದ’ ಎಂದು ನಾಮಕರಣ ಮಾಡಿದರು. ದಂಪತಿಯ ಪ್ರಾರ್ಥನೆಯಂತೆ ಜನಿಸಿದ ಮಗನಿಂದ ಫಲ ದೊರೆಯುವ ಭಾಗ್ಯ ಮಾತ್ರ ಸಫಲವಾಗಿಲ್ಲ.
ಈಡೇರದ ಭರವಸೆ: ನಕ್ಸಲ್ ಗುಂಡಿಗೆ ಬಲಿಯಾದ ನಂತರ ಗುರುಪ್ರಸಾದ್ ಪ್ರಾರ್ಥಿವ ಶರೀರ ಹುಟ್ಟೂರಿಗೆ ತಂದ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ್ದ ಭರವಸೆ ಎರಡು ವರ್ಷದ ನಂತರವೂ ಈಡೇರಿಲ್ಲ. ಕುಗ್ರಾಮಕ್ಕೆ ಇನ್ನೂ ವಿದ್ಯುತ್ ವ್ಯವಸ್ಥೆ ಇಲ್ಲ. ದೇಶ ಕಾಯುವ ಕಾಯಕದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಊರಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗುವುದೆಂದು ನೀಡಿದ ಭರವಸೆ ಇಂದಿಗೂ ಈಡೇರಿಲ್ಲ.
ಗುರುಪ್ರಸಾದ್‌ಗೆ ಗೌರವ ಸಲ್ಲಿಸಲು ಚೆಟ್ಟಿಮಾನಿ ಯಲ್ಲಿ ಪ್ರತಿಮೆ ಸ್ಥಾಪಿಸುವ ಘೋಷಣೆಯನ್ನು ನೀಡಿದ್ದ ಜನಪ್ರತಿನಿಧಿಗಳು ಅತ್ತ ಮುಖ ಮಾಡಿಲ್ಲ. ಹೊಸ ದಿಲ್ಲಿಯ ಸಿಆರ್‌ಪಿಯಲ್ಲಿ ಕೆಲಸ ಮಾಡುತ್ತಿದ್ದ ಗುರು ಪ್ರಸಾದ್ ಸಹೋದರಿ ಕುಮುದಾ ಅವರನ್ನು ಕರ್ನಾಟಕ ಸೇವೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅದೂ ಈಡೇರಿಲ್ಲ. ಪ್ರಸ್ತುತ ಕುಮುದಾ ರಾಜಸ್ತಾನದಲ್ಲಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ