ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್

ಚೀ. ಜ. ರಾಜೀವ ಮೈಸೂರು
ಈ ಕ್ಯಾಂಪಸ್‌ಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ, ರೂಪಿತವಾದ, ಅಲಂಕೃತವಾದ ಯಾವುದೇ ರೀತಿಯ ಪಠ್ಯ-ಪಠ್ಯೇತರ  ಸಾಮಗ್ರಿಗಳನ್ನು ತರುವಂತಿಲ್ಲ !
ಜೆಎಸ್‌ಎಸ್ ಕಾನೂನು ಕಾಲೇಜಿಗೆ ಪ್ರವೇಶಿಸಿದ ತಕ್ಷಣ, ಇಂಥದ್ದೊಂದು ‘ಕಾನೂನ’ನನ್ನು ಹೊತ್ತ ಭಿತ್ತಿಬರಹಗಳು ಗಮನಸೆಳೆಯುತ್ತವೆ. ಇದರಲ್ಲೇನಾದರೂ ತಿರುಳು ಇರಬಹುದೇ ಎಂದು ಕ್ಯಾಂಪಸ್ ಸುತ್ತು ಹಾಕಿದರೆ, ಎಲ್ಲಿಯೂ ಪ್ಲಾಸ್ಟಿಕ್‌ನ ಸುಳಿವು ಸಿಗದು !
‘ಪ್ಲಾಸ್ಟಿಕ್  ಪ್ರವೇಶ’ ನಿರ್ಬಂಧಿಸಿದ ಈ ನಿಯಮವನ್ನು- ಕಾಲೇಜಿನ ಆಡಳಿತ ಮಂಡಳಿಯಾಗಲೀ, ಪ್ರಾಂಶುಪಾಲರಾಗಲಿ, ಆಡಳಿತಾಧಿಕಾರಿಯಾಗಲಿ ವಿಧಿಸಿಲ್ಲ. ಬಣ್ಣ-ಬಣ್ಣದ ಕಾಗದ ಪೇಪರ್‌ನಲ್ಲಿ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರೇ ‘ಪ್ಲಾಸ್ಟಿಕ್ ವಿರೋಧಿ’ ಹೇಳಿಕೆಗಳನ್ನು ಬರೆದು, ಕಂಬ-ಕಂಬಗಳಿಗೆ ಅಂಟಿಸಿದ್ದಾರೆ.
ನೋ ಟು ಪ್ಲಾಸ್ಟಿಕ್, ಯಸ್ ಟು ಪೇಪರ್, ಸೇ ಟಾಟಾ, ಬೈ  ಟು ಪ್ಲಾಸ್ಟಿಕ್... ಎಂದು ಸರಳವಾಗಿಯೇ ಪ್ಲಾಸ್ಟಿಕ್‌ನ ದುರ್ಗಣಗಳನ್ನು ಸಾರುವ ಹತ್ತಾರು ಬರಹ ಕಾಣಬಹುದು. ಒಂದರ್ಥದಲ್ಲಿ ಇದು ವಿದ್ಯಾರ್ಥಿ ಸಮುದಾಯ ವಿಧಿಸಿಕೊಂಡಿರುವ ಸ್ವಯಂ ‘ಶಾಸನ’. 
ಈ ಕಾಲೇಜಿನಲ್ಲಿ  ಈಗ ‘ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ನಿರ್ಮಾಣ’ ಸಪ್ತಾಹ ಶುರುವಾಗಿದೆ. ಕಾಲೇಜಿನ  ಪ್ರಾಂಶುಪಾಲ ಪ್ರೊ. ಕೆ. ಎಸ್. ಸುರೇಶ್, ಪ್ರಾಧ್ಯಾಪಕ ಪ್ರೊ. ವೇಣುಗೋಪಾಲ್, ಉಪನ್ಯಾಸಕ ಜಗದೀಶ್ ಅವರ ಮಾರ್ಗದರ್ಶನದಲ್ಲಿ  ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಪಾಲ್ಗೊಳ್ಳುತ್ತಿದ್ದಾರೆ.
ಭಾವನೆಗಳನ್ನು ಕೆರಳಿಸುವ ಇಲ್ಲವೇ ಪ್ರಚೋದಿಸುವ  ವಸ್ತ್ರ  ಧರಿಸುವಂತಿಲ್ಲ, ಸೆಲ್ ತರುವಂತಿಲ್ಲ, ಬೈಕ್ ತರುವಂತಿಲ್ಲ, ರ‍್ಯಾಗಿಂಗ್ ಮಾಡುವಂತಿಲ್ಲ, ತಂಬಾಕು ಉತ್ಪನ್ನಗಳಿಗೆ ಅವಕಾಶವಿಲ್ಲ ... ಎಂಬಂಥ ನಾನಾ ‘ಇಲ್ಲಗಳ ಕ್ಯಾಂಪಸ್’ ನಿರ್ಮಾಣ ಮಾಲಿಕೆಯ ಮುಂದುವರಿದ  ಭಾಗವಿದು.
ಲಂಚ್ ಬಾಕ್ಸ್ ಇಲ್ಲವೇ ಬೇರೆ ಯಾವುದಾದರೂ ಪರಿಕರಕ್ಕೆ  ಹೊದಿಸಿದ ಕವರ್ ಆಗಿ, ಚಾಕೋಲೇಟ್ ರ‍್ಯಾಪರ್ ರೂಪದಲ್ಲಿ, ಪ್ಲಾಸ್ಟಿಕ್ ಶೀಟ್ಸ್, ಫೈಲ್ಸ್  ಆಕಾರ ಸೇರಿದಂತೆ ವಿವಿಧ ರೂಪದಲ್ಲಿ ಪ್ಲಾಸ್ಟಿಕ್  ಕ್ಯಾಂಪಸ್‌ಗಳನ್ನು ಪ್ರವೇಶಿಸುತ್ತದೆ. ಬಳಸುವ ಪೆನ್-ಪೆನ್ಸಿಲ್, ಧರಿಸುವ ಕನ್ನಡಕಗಳು ಪ್ಲಾಸ್ಟಿಕ್‌ನಿಂದಲೇ ರೂಪಿತ. ಈ ಎಲ್ಲವನ್ನೂ ಸಾಧ್ಯವಾದಷ್ಟು ಮಟ್ಟಿಗೆ ಒಳ ತರುವುದನ್ನು, ಬಳಸುವುದನ್ನು ಕಡಿಮೆ ಮಾಡಬೇಕೆಂಬುದು ಸಪ್ತಾಹದ  ವಾಸ್ತವ ನೀತಿ.
‘ಆ. ೧೬ ರಿಂದ ೨೧ರವರೆಗೆ  ನಮ್ಮ ವಿದ್ಯಾರ್ಥಿಗಳು  ಪ್ಲಾಸ್ಟಿಕ್ ಫ್ರೀ ಕ್ಯಾಂಪಸ್  ಸಪ್ತಾಹ ಕೈಗೊಂಡಿದ್ದಾರೆ. ಈ ದಿನಗಳಲ್ಲಿ ಪ್ಲಾಸ್ಟಿಕ್‌ನಿಂದ ರೂಪಿತವಾದ ಯಾವುದೇ ಸಾಮಗ್ರಿಯನ್ನು ವಿದ್ಯಾರ್ಥಿಗಳು ಕ್ಯಾಂಪಸ್ ಒಳಗೆ ತರುವುದಿಲ್ಲ’ ಎನ್ನುತ್ತಾರೆ ಕಾಲೇಜಿನ ರೀಸರ್ಚ್ ಗ್ರೂಪ್‌ನ ಸಂಚಾಲಕ, ಉಪನ್ಯಾಸಕ ಎ.ಟಿ. ಜಗದೀಶ್.
‘ಸಾಂಕೇತಿಕವಾಗಿ ಆರಂಭವಾದ  ಈ ಸಪ್ತಾಹ, ತನ್ನ ಅವಧಿಯ ಬಳಿಕ ವಿದ್ಯಾರ್ಥಿಗಳ ದೈನಂದಿನ ಚಟುವಟಿಕೆಯ ಭಾಗವಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಪ್ಲಾಸ್ಟಿಕ್ ವಿರೋಧಿ ಮನೋಭಾವಕ್ಕೆ ಇದೂ ಒಂದು ಹೆಜ್ಜೆಯಾಗಲಿ’ ಎನ್ನುತ್ತಾರೆ ಪ್ರಾಂಶುಪಾಲ ಪ್ರೊ. ಸುರೇಶ್.
‘ನಿತ್ಯದ ಬದುಕಿನಿಂದ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ದೂರವಿಡುತ್ತೇವೆ ಎಂದರೆ, ಯಾರೂ ಅದನ್ನು ನಂಬುವುದಿಲ್ಲ. ಅಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಎಂಬುದು ಅನಿವಾರ್ಯ. ಈ  ಸಪ್ತಾಹದಿಂದ ನಾಳೆಯೇ, ನಮ್ಮ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತೊರೆಯುತ್ತಾರೆ ಎಂದೇನಲ್ಲ. ಆದರೆ, ಯಾವುದೇ ಸಮಸ್ಯೆಯ ಸೃಷ್ಟಿಯ ಹಿಂದೆ, ಪರಿಹಾರವೂ ಇರುತ್ತದೆ. ಇಂಥ ಸಪ್ತಾಹಗಳು ಪರ‍್ಯಾಯ ಗಳನ್ನು ಹುಡುಕಲು ಪ್ರೇರಕವಾದೀತು’ ಎನ್ನುತ್ತಾರೆ ಪ್ರೊ. ವೇಣು ಗೋಪಾಲ್.
ತಾವೇ ಜಾರಿಗೆ ತಂದಿರುವ ಶಾಸನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಂತಸವಿದೆ. ‘ಈ ಬಗ್ಗೆ ನಾವು  ಕಾಲೇಜಿನ ಸುತ್ತ ಮುತ್ತಲಿನ ಪ್ರದೇಶಗಳಿಗೆ  ತೆರಳಿ, ಜಾಥಾದ ಮೂಲಕ ಅರಿವು ಮೂಡಿಸು ತ್ತೇವೆ. ಇಲ್ಲಿಯೇ ಪೇಪರ್ ಬ್ಯಾಗ್‌ಗಳನ್ನು ತಯಾರಿಸುತ್ತೇವೆ’ ಎಂದು ಅತ್ಯುತ್ಸಾಹದಲ್ಲಿ ಮಾತನಾಡುತ್ತಾರೆ. ಒಟ್ಟಾರೆ -ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ಯನ್ನು ಕಡಿಮೆ ಮಾಡಲು ಪಣ ತೊಟ್ಟಿದ್ದಾರೆ. ಇದು ಇತರ ಕಾಲೇಜಿನ ವಿದ್ಯಾರ್ಥಿಗಳಿಗೂ ಮಾದರಿಯಾಗಬೇಕಷ್ಟೇ.
ಮಹಿಳಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಆರಂಭ
ವಿಜಯನಗರದಲ್ಲಿರುವ ಸರಕಾರಿ ಮಹಿಳಾ ಕಾಲೇಜಿನಲ್ಲಿ ೨೦೧೦-೧೧ನೇ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ವಿಜ್ಞಾನ ಪದವಿ ಆರಂಭವಾಗಿದೆ.
ವಿವಿ  ಸಿಂಡಿಕೇಟ್ ಸದಸ್ಯ ಪ್ರೊ. ಎ. ನಾಗೇಂದ್ರರಾವ್  ಅವರು ಬಿಎಸ್ಸಿ ಪದವಿ ಪ್ರಯೋಗಾಲಯವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಇತರೆ ವಿಷಯಗಳಿಗಿಂತ ವಿಜ್ಞಾನದ ಕಲಿಕೆ ಅವಶ್ಯಕತೆ ಹೆಚ್ಚಿದೆ. ವಿದ್ಯಾರ್ಥಿನಿಯರು ವಿಜ್ಞಾನ ಪದವಿ ಕಲಿಯುವ ಮೂಲಕ, ಮೂಲ ವಿಜ್ಞಾನಕ್ಕೆ  ಒತ್ತು ನೀಡಬೇಕಿದೆ ಎಂದರು. ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ. ಶ್ರೀಹರಿ, ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯು ವಂತಾಗಬೇಕು ಎಂದರು. ಪ್ರಾಂಶು ಪಾಲ ಪ್ರೊ. ಕೆ. ಎಸ್. ಲಕ್ಷ್ಮಣ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ