ಅರಣ್ಯದಲ್ಲಿ ಸಫಾರಿ ನಿಯಮಾವಳಿ ಜಾರಿಯಾಗುತ್ತಿಲ್ಲ

ಕುಂದೂರು ಉಮೇಶಭಟ್ಟ, ಮೈಸೂರು
ಕರ್ನಾಟಕದ ವನ್ಯಜೀವಿಗಳ ಪಾಲಿಗೆ ಉರುಳಾಗುತ್ತಿದೆ  ‘ಸಾಹೇಬ್ರ ಸಫಾರಿ ’.
ಇದೇನು ಸಾಹೇಬ್ರ ಸಫಾರಿ ಎಂದು ಅಚ್ಚರಿ ಪಡಬೇಡಿ. ಪ್ರಭಾವಿಗಳ ಒತ್ತಡ ಬಳಸಿ ಮೇಲಧಿಕಾರಿಗಳ ಶಿಫಾರಸಿನೊಂದಿಗೆ ನಡೆಯುತ್ತಿರುವ ಸಫಾರಿ. ನಾಗರಹೊಳೆ, ಬಂಡೀಪುರ, ಚಾಮ ರಾಜನಗರ, ದಾಂಡೇಲಿ, ಭದ್ರಾ ಸೇರಿದಂತೆ ರಾಜ್ಯದ ವನ್ಯಜೀವಿಗಳ ತಾಣವಾಗಿರುವ ಅರಣ್ಯ ಪ್ರದೇಶದಲ್ಲಿ ಸಫಾರಿ ಎಗ್ಗಿಲ್ಲದೇ ನಡೆಯುತ್ತಲೇ ಇದೆ. ಅದೂ ರೆಸಾರ್ಟ್ ಸಂಸ್ಕೃತಿ ಅರಣ್ಯಕ್ಕೆ ಸೋಕಿದ ನಂತರವಂತೂ ಇದು ಮಿತಿ ಮೀರಿದೆ.
ಸಫಾರಿ ನೆಪದಲ್ಲಿ ಚಾಮರಾಜನಗರ ಅರಣ್ಯದಲ್ಲಿ  ಜಿಂಕೆ ಬೇಟೆಯಾಡುತ್ತಿದ್ದ ಮೂವರು ಸಿಕ್ಕಿಬಿದ್ದು, ಮತ್ತೊಬ್ಬ ದೇಶದಿಂದಲೇ ಪರಾರಿ ಯಾದ ನಂತರ ಸಾಹೇಬ್ರ ಸಫಾರಿ ಹೆಸರಿನಲ್ಲಿ ನಡೆಯುತ್ತಿರುವ ದಂಧ ಮುಖಗಳು ಬಹಿರಂಗ ವಾಗತೊಡಗಿವೆ.
ಸಫಾರಿ ನೆಪದಲ್ಲಿ ಕೆಲವರಿಗೆ ಇದು ಸಾವಿರಾರು ಹಣವಾದರೆ, ದೊಡ್ಡ ಕುಳಗಳಿಗೆ ಕೋಟಿ ಕೋಟಿ ಹಣದ ಲೆಕ್ಕಾಚಾರ. ಸಫಾರಿಗೆ ಸಂಬಂಧಿಸಿ ನಿಯಮಾವಳಿಗಳ ಮಾಹಿತಿ ಅರಣ್ಯ ಅತಿಥಿ ಗೃಹ ಗಳ ಫಲಕಗಳಲ್ಲಿ ಕಾಣಸಿಗುತ್ತವೆ. ಫಲಕಗಳಿಗೆ ಮಾತ್ರ ಅದು ಸೀಮಿತ.
ಸಾಮಾನ್ಯರಿಗೆ ಸುಲಭವಲ್ಲ: ರಾಜ್ಯದ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ನೇರ ದರ್ಶನ ಹಾಗೂ ಕಾಡನ್ನು ಅನುಭವಿಸಲೆಂದೇ ರೂಪಿಸಿದ್ದು ಸಫಾರಿ. ವನ್ಯಜೀವಿಗಳನ್ನು ಕಣ್ಣಾರೆ ಕಾಣುವ ಹಾಗೂ ನಿತ್ಯ ಬದುಕಿನ ಜಂಜಡಗಳಿಂದ ಕೊಂಚ ರಿಲ್ಯಾಕ್ಸ್ ಪಡೆಯಲು ಈ ಸಫಾರಿ ಸಹಕಾರಿ. ದೇಶ ವಿದೇಶಗಳಲ್ಲೂ ಇದು ಜನಪ್ರಿಯ. ಕರ್ನಾಟಕದ ಅರಣ್ಯಗಳಲ್ಲೂ ಸಫಾರಿ ವ್ಯವಸ್ಥೆಯಿದೆ. ಇದು ಅರಣ್ಯ ಇಲಾಖೆ ಧ್ಯೇಯವೂ ಹೌದು. ಸಾಕಷ್ಟು ಪ್ರಾಣಿಪ್ರಿಯರು ಈಗಲೂ ಸಫಾರಿಯ ಉಪಯೋಗ ಪಡೆಯುತ್ತಲೇ ಇದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹಣದ ಕಾರಣಕ್ಕೆ ಅರಣ್ಯದಲ್ಲೂ ಬದಲಾವಣೆಗಳೂ ಆಗಿವೆ. ಕೆಲವರಿಗೆ ವನ್ಯಜೀವಿಗಳನ್ನು ಕಾಣುವ ತವಕ. ಅದಕ್ಕೆ ಎಷ್ಟಾದರೂ ಹಣ ಖರ್ಚಾದರೂ ತೊಂದರೆಯಿಲ್ಲ. ಇದಕ್ಕಾಗಿಯೇ ಹುಟ್ಟಿ ಕೊಂಡಿದ್ದು ಸಾಹೇಬ್ರ ಸಫಾರಿ. ಯಾರದೋ ಒಬ್ಬರ ಹೆಸರನ್ನು ಹೇಳಿಕೊಂಡು ಸಫಾರಿ ನೆಪದಲ್ಲಿ ಅರಣ್ಯ ಪ್ರವೇಶ ಮಾಡಿ ಅಲ್ಲಿ ನಡೆಸುವುದು ಮೋಜು ಮೇಜುವಾನಿ. ಮೇಲಧಿಕಾರಿಗಳ ಶಿಫಾರಸು ಇರುವುದರಿಂದ ಕೆಳ ಹಂತದ ಸಿಬ್ಬಂದಿಗೂ ನಿಯಂತ್ರಣ ಕಷ್ಟ. ಆದರೆ ಸಾಮಾನ್ಯರು ಇಂಥ ಸಫಾರಿಗೆ ಹೋಗ ಬೇಕೆಂಬುದು ಕರ ಕಷ್ಟ.
ನಿಲ್ಲದ ತಿಕ್ಕಾಟ: ಸಫಾರಿ ವಿಚಾರದಲ್ಲಿ ಕರ್ನಾಟಕ ಸ್ವಾಮ್ಯದ ಜಂಗಲ್ ರೆಸಾರ್ಟ್ ಲಿ. ಹಾಗೂ ಅರಣ್ಯ ಇಲಾಖೆ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಅದೂ ಸಫಾರಿ ಕಾರಣಕ್ಕೆ. ನಾಗರಹೊಳೆ, ಬಂಡೀಪುರ, ಚಾಮರಾಜನಗರ ವನ್ಯಜೀವಿ ವಿಭಾಗಗಳಲ್ಲಿ ವರ್ಷ ಗಳಿಂದ ಇಂಥ ತಿಕ್ಕಾಟ ಇದ್ದೇ ಇದೆ.
ಯಾವುದೇ ರೆಸಾರ್ಟ್ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಬರಬೇಕೆಂದರೆ ಇಂತಿಷ್ಟು ಹಣವನ್ನು ಅರಣ್ಯ ಇಲಾಖೆಗೆ ಪಾವತಿಸಬೇಕು. ನಿತ್ಯ ಇಷ್ಟೇ ಪ್ರಯಾಣಿಕರೊಂದಿಗೆ ನಿಗದಿತ ಸಫಾರಿ ಮಾತ್ರ ಮಾಡಬೇಕು ಎನ್ನುವ ಸೂಚನೆ ಇದೆ. ಆದರೆ ಇವ್ಯಾವುವೂ ಸರಿಯಾಗಿ ಪಾಲನೆ ಯಾಗುತ್ತಲೇ ಇಲ್ಲ.
ಅರಣ್ಯದಂಚಿನಲ್ಲಿ ಬರುವ ರೆಸಾರ್ಟ್‌ಗಳು ಹಾಗೂ ಸ್ಥಳೀಯ ಅಧಿಕಾರಿಗಳ ನಡುವೆ ಸಮರಕ್ಕೂ ಸಫಾರಿ ಕಾರಣವಾಗಿದೆ. ಕೆಲ ವೊಬ್ಬರು ರೆಸಾರ್ಟ್‌ಗಳೊಂದಿಗೆ ಸೇರಿಕೊಂಡು ಹೋಗಿ ಸಫಾರಿಗೆ ಮುಕ್ತ ಅವಕಾಶ ಮಾಡಿ ಕೊಟ್ಟಿದ್ದರೆ ಕೆಲವು ಅಧಿಕಾರಿಗಳು ಹೀಗೆ ಸಂಘರ್ಷ ನಡೆಸುತ್ತಲೇ ಇದ್ದಾರೆ.
ಸಫಾರಿ ಎಂದರೆ ಅದು ವನ್ಯಜೀವಿಗಳ ವೀಕ್ಷಣೆ ಹಾಗೂ ಪರಿಸರ ಪ್ರೀತಿ. ಆದರೆ ಇತ್ತೀಚಿನ ವರ್ಷ ಗಳಲ್ಲಿ ರೆಸಾರ್ಟ್ ಸಂಸ್ಕೃತಿ ಬಂದ ಮೇಲಂತೂ ಹಿಂದೆ ಇರುವುದು ಹಣ ಮಾಡುವ ಮನೋಭಾವ. ಖಾಸಗಿ ರೆಸಾರ್ಟ್‌ಗಳು ಪ್ರವಾಸಿಗರಿಗೆ ಸಫಾರಿಗೆಂದು ಸಾವಿರಾರು ರೂ. ಹಣ ಪಡೆಯುತ್ತವೆ. ಅದು ಅರಣ್ಯ ಇಲಾಖೆಗೆ ಆದಾಯವಾಗದೇ ಕೆಲವರ ಜೇಬು ಸೇರುತ್ತಿದೆ. ಇದರ ಹಿಂದೆ ಕೆಲಸ ಮಾಡುವುದು ಸಾಹೇಬ್ರ ಸಫಾರಿ.
ಕೆಲವೊಮ್ಮೆ ಅನಾಹುತಗಳು ಆದಾಗ ಇಂಥ ಸಫಾರಿಯ ಮೇಲೆ ನಿಯಂತ್ರಣ ಹೇರಲಾಗುತ್ತದೆ ಯಾದರೂ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅರಣ್ಯ ಇಲಾಖೆಗೂ ಸಾಧ್ಯವಾಗುತ್ತಿಲ್ಲ.  ಸಫಾರಿ ಹೆಸರಿನಲ್ಲಿ ರಾಜಸ್ತಾನ, ಮಧ್ಯ ಪ್ರದೇಶದಲ್ಲಿ ನಡೆದಿರುವ ಅನಾಹುತಗಳ ಫಲ ವನ್ಯಜೀವಿಗಳ ಮಾರಣ ಹೋಮ. ಕರ್ನಾಟಕದಲ್ಲಿ ಎಚ್ಚೆತ್ತು ಕೊಳ್ಳುವುದು ಯಾವಾಗ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ