ಉನ್ನತಾಧಿಕಾರ ಸಮಿತಿಗೆ ಜನರ ಧ್ವನಿ ‘ಕೇಳಲಿ’

ಪಿ. ಓಂಕಾರ್ ಮೈಸೂರು
ದಸರೆ ಹತ್ತು ಹಲವು ವೈಶಿಷ್ಟ್ಯಗಳ ಸಂಗಮ.ಲಕ್ಷಾಂತರ ಜನ ಸಂಧಿಸುವ ಸಂಭ್ರಮ.ಕಾಲಕ್ಕೆ ತಕ್ಕಂತೆ ಬದಲಾಗುವ,ಹೊಸಕಾಲದ ಬಣ್ಣ ತೊಟ್ಟು ಬೆಡಗು ಮೂಡಿಸುವ ವೈಭವ. ಇಷ್ಟೊಂದು ದೊಡ್ಡ ಹಬ್ಬದಲ್ಲಿ ಲೋಪಗಳು ಸಹಜ.ಸರ್ವ ಸಂತೃಪ್ತಿ ಅಸಾಧ್ಯ...
ಉತ್ಸವದ ಅಪಸವ್ಯಗಳನ್ನು ಪಟ್ಟಿ ಮಾಡಿದರೆ ಸಂಘಟಕರು ಇಂಥ ‘ಸಹಜ ಲೋಪ ’ದ ಸೂರಿನಡಿ ನಿಂತು, ಟೀಕೆಗಳ ಮಳೆಯಿಂದ ಬಚಾವಾಗಲು ಪ್ರಯತ್ನಿಸುತ್ತಾರೆ. ಲೋಪ ಮೊದಲನೆಯ ಸಲವಾದರೆ, ‘ಸಹಜ’ದ ವಾದವನ್ನು ನಿಜ ಎಂದು ಒಪ್ಪಬಹುದು.ಆದರೆ,ಹಿಂದಿನ  ದಸರೆಗಳ ಸಂಗತಿ ಹಾಗಲ್ಲ.ಪುನರಾವರ್ತಿತ, ನಿರಂತರ ಲೋಪಗಳೇ ಹೆಚ್ಚು !
ಯಾವುದೇ ಸಲಹೆ ನೀಡಿದರೂ ಅಧಿಕಾರಸ್ಥ  ಜನ ಈ ಕಿವಿಯಲ್ಲಿ ಕೇಳಿ, ಇನ್ನೊಂದರಲ್ಲಿ ಬಿಡುತ್ತಾರೆ ಎನ್ನುವುದು ಇತಿಹಾಸ. ಒಂದಿಲ್ಲೊಂದು ಮಾಧ್ಯಮದ ಮೂಲಕ ಸಾರ್ವಜನಿಕ ಚರ್ಚೆ ನಡೆಯುವುದು,ಸಲಹೆ-ಸೂಚನೆಗಳನ್ನು ನೀಡುವುದು,ದಸರೆಯಲ್ಲಿ ಅವು ಅವೇ ತಪ್ಪುಗಳು ರಾರಾಜಿಸುವುದು,ಸಂಭ್ರಮದ ಸಾಗರ ಬಹುಪಾಲು ‘ಉಪ್ಪು ಉಪ್ಪೇನಿಸುವುದು’ ಪ್ರತಿ ಬಾರಿಯ ವಿದ್ಯಮಾನ.
ಗೊತ್ತಿದ್ದೂ ಸಂಭವಿಸುವ,‘ಲಾಭ’ ಪ್ರೇರಕ  ತಪ್ಪುಗಳೇ ಹೆಚ್ಚು. ದೀಪ ವೈಭವ, ಸಾಂಸ್ಕೃತಿಕ ಸಂಭ್ರಮದಲ್ಲಿ ಎಲ್ಲವೂ ಮುಚ್ಚಿಹೋಗುತ್ತದೆ ಎಂದು ಅಧಿಕಾರಸ್ಥರು ಭ್ರಮಿಸುತ್ತಾರೆ. ಆದರೆ, ಎಲ್ಲವನ್ನೂ ಜನ ಸೂಕ್ಷ್ಮವಾಗಿ ಅವಲೋಕಿಸುತ್ತಾರೆ ಎನ್ನುವುದು ವಿಜಯ ಕರ್ನಾಟಕ ನಡೆಸಿದ ‘ದಸರೆ ಹೇಗಿದ್ದರೆ ಸುಂದರ’ ಅಭಿಯಾನದಲ್ಲಿ ವೇದ್ಯ.
‘ನಾಡ ಹಬ್ಬ ದಸರೆ ಹೇಗಿರಬೇಕು,ಹೇಗಿದ್ದರೆ ಸುಂದರ’ ಎಂದು ಪತ್ರಿಕೆ ಕೇಳಿದ್ದಕ್ಕೆ ಕ್ಲುಪ್ತ ಸಮಯದಲ್ಲಿಯೇ ಹಿಂದಿನ ಲೋಪಗಳ ಸಮೇತ ಸಲಹೆಗಳ ಮಹಾಪೂರ ಹರಿಸಿದ್ದಾರೆ. ಜನಪ್ರತಿನಿಧಿಗಳು ದಸರೆಯನ್ನು ಜನರ ಉತ್ಸವವನ್ನಾಗಿ ಅರಳಿಸುತ್ತಾರೆ,ಸಂಭ್ರಮವನ್ನು ತುಂಬುತ್ತಾರೆ ಎಂದು ಮತ್ತೊಮ್ಮೆ ‘ನಂಬಿ’ದ್ದಾರೆ. ದಸರೆ ನಿಜಕ್ಕೂ ಹೇಗಿರಬೇಕು ಎನ್ನುವ ಕುರಿತು ತಮ್ಮದೇ ಕಲ್ಪನೆಗಳನ್ನು ಹಂಚಿಕೊಂಡಿದ್ದಾರೆ. ಜನರ ನಂಬಿಕೆಯನ್ನು ದಸರೆಯಾ ಸಂಘಟಕರು ಉಳಿಸಿಕೊಳ್ಳುತ್ತಾರಾ? ಹಿಂದಿನ ವರ್ಷಗಳಂತೆ ಒಂದು ಕಿವಿಯಲ್ಲಿ ಕೇಳಿ,ಇನ್ನೊಂದರಲ್ಲಿ ಬಿಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ