ಹೇಮಾವತಿ ಹಿನ್ನೀರು ಸೃಷ್ಟಿಸಿದ ಸಂಕಷ್ಟ

ಚೆರಿಯಮನೆ ಸುರೇಶ್ ಶನಿವಾರಸಂತೆ
ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರು ಜಲಾಶಯ ನಿರ್ಮಿಸಿ ಹಾಸನದ ಲಕ್ಷಾಂತರ ಮಂದಿ ರೈತರನ್ನು ಹೇಮಪಟ್ಟಕದಲ್ಲಿ ಕೂರಿಸಿದ ಸರಕಾರ ಇದೇ ವೇಳೆ ಹಿನ್ನೀರಿನಿಂದ ಬದುಕು ಕಳೆದುಕೊಂಡ ಜನಾರ್ದನಹಳ್ಳಿ ರೈತರ ಬದುಕನ್ನು ಹೇಮಾವತಿ ಹಿನ್ನೀರಿಗೆ ದೂಡಿದ ಕಣ್ಣೀರಿನ ಕಥೆ ಇದು.
ಹೇಮಾವತಿ ಹಿನ್ನೀರಿನಿಂದ ಹೊನ್ನಿನಂಥ ಭೂಮಿ ಕಳೆದುಕೊಂಡ ರೈತರ ಕಣ್ಣೀರಿಗೆ ಕೊನೆಯೇ ಇಲ್ಲ. ಬೀದಿಗೆ ಬಿದ್ದ ರೈತರು ೪೫ ವರ್ಷಗಳ ಹಿಂದೆ ಕಣ್ಣೀರಿನ ನದಿಯನ್ನೇ ಹರಿಸಿದರು. ಇದಕ್ಕೆ ಪ್ರತಿಯಾಗಿ ಸರಕಾರ ಭರವಸೆಯ ನದಿಯನ್ನಷ್ಟೇ ಹರಿಸಿದೆ.
ಹಾಸನ ತಾಲೂಕಿನ ಗೊರೂರಿನಲ್ಲಿ ಸಕಲೇಶಪುರದಲ್ಲಿ ಹುಟ್ಟಿ ಹರಿಯುವ ಹೇಮಾವತಿ ನದಿಗೆ ಅಡ್ಡಲಾಗಿ ಗೊರೂರು ಡ್ಯಾಂ ೧೯೬೫ ರಲ್ಲಿ ತಲೆ ಎತ್ತಿ ನಿಂತಿತು. ಹೇಮಾ ವತಿಯು ಡ್ಯಾಂನಲ್ಲಿ ತುಂಬಿಕೊಳ್ಳುತ್ತಿದ್ದಂತೆಯೇ ಇತ್ತ ಕೊಡಗಿನ ಜನಾರ್ದನಹಳ್ಳಿ ಮುಳುಗಲು ಪ್ರಾರಂಭ ವಾಯಿತು. ನೋಡ ನೋಡುತ್ತಿದ್ದಂತೆ ಜನಾರ್ದನಹಳ್ಳಿಯ ಸಂಪದ್ಭರಿತ ಭೂಮಿ ಹೇಮಾವತಿ ಒಡಲಿನಲ್ಲಿ ಲೀನವಾಯಿತು.
ಹೇಮಾವತಿಯ ಹಿನ್ನೀರಿನಿಂದ ಭೂಮಿ ಕಳೆದು ಕೊಂಡ ರೈತರು ಗ್ರಾಮದ ಮತ್ತೊಂದು ಬದಿಯಲ್ಲಿ ನೆಲೆ ಕಂಡು ಕೊಳ್ಳಲು ಪ್ರಾರಂಭಿಸಿದರು. ಸುಮಾರು ೪೭ ಕುಟುಂಬಗಳು ಬೀದಿಗೆ ಬಿದ್ದವು. ಆ ಸಂದರ್ಭ ೧೦ ಕುಟುಂಬಗಳಿಗೆ ತಲಾ ೩ ಸಾವಿರ ರೂ. ಪರಿಹಾರ ದೊರೆಯಿತು. ಉಳಿದವರಿಗೆ ನಯಾಪೈಸೆ ದೊರೆಯಲಿಲ್ಲ. ಸರಕಾರ ಭೂಮಿ ಕಳೆದು ಕೊಂಡ ರೈತರಿಗೆ ಕನಿಷ್ಠ ಪುನರ್ವಸತಿ ಕಲ್ಪಿಸಲು ಕೂಡ ಮುಂದಾಗಲಿಲ್ಲ. ಭೂಮಿ ಕಳೆದುಕೊಂಡ ರೈತರು ಅಳಿದು ಳಿದ ಹಣದಲ್ಲಿ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ಇಂದಿಗೂ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪರಿಹಾರಕ್ಕಾಗಿ ನಾಲ್ಕು ದಶಕಗಳಿಂದ ರೈತರು ನಡೆಸಿದ ಹೋರಾಟಕ್ಕೆ ಸರಕಾರ ನಯಾಪೈಸೆಯ ಬೆಲೆ ನೀಡಲಿಲ್ಲ. ಪ್ರಸ್ತುತ ಹೇಮಾವತಿ ಹಿನ್ನೀರು ಆವರಿಸಿ ಕೊಂಡಿರುವ ಜಾಗದಲ್ಲಿ ಈ ಹಿಂದೆ ೪೭ ಕುಟುಂಬಗಳು ಉತ್ತಮ ಬದುಕು ನಡೆಸುತ್ತಿದ್ದವು. ಎಲ್ಲರೂ ಕನಿಷ್ಠ  ೧೦ ರಿಂದ ಗರಿಷ್ಠ ೪೫ ಎಕರೆ ವರೆಗೆ ಜಮೀನು ಹೊಂದಿದ್ದರು. ಈಗ ಯಾರ ಬಳಿಯೂ ಎರಡು ಎಕರೆಗಿಂತ ಹೆಚ್ಚಿನ ಭೂಮಿ ಇಲ್ಲ. ಹಲವರ ಬಳಿ ಮನೆಯೊಂದನ್ನು ಹೊರತುಪಡಿಸಿ ಯಾವುದೇ ಆಸ್ತಿಗಳಿಲ್ಲ. ಒಂದು ಕಾಲದಲ್ಲಿ ಹಲವು ಮಂದಿಗೆ ತಮ್ಮ ಹೊಲಗಳಲ್ಲಿ ಉದ್ಯೋಗ ನೀಡುತ್ತಿದ್ದ ಜಮೀನ್ದಾರ ಕುಟುಂಬಗಳು ಇಂದು ಬೇರೆಯವರ ಬಳಿ ಕೂಲಿ ಮಾಡಿ ಜೀವಿಸುತ್ತಿ ದ್ದಾರೆ.
ಅಳಿದುಳಿದ ಜನಾದನಹಳ್ಳಿಯಲ್ಲಿ ಪ್ರಸ್ತುತ ೭೨ ಕುಟುಂಬಗಳು (ಸುಮಾರು ೪೦೦ ಮಂದಿ) ವಾಸ ಮಾಡು ತ್ತಿವೆ. ಇವರಲ್ಲಿ ಬಡ ಹಾಗೂ  ಮಧ್ಯಮವರ್ಗದವರೇ ಹೆಚ್ಚಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಹಿನ್ನೀರು ಇರುವುದ ರಿಂದ ಇಡೀ ಗ್ರಾಮ ಶೀತಪ್ರದೇಶವಾಗಿ ಮಾರ್ಪಾಡುಗೊಂಡಿದೆ. ಮಳೆಗಾಲದಲ್ಲಂತೂ ಸಮಸ್ಯೆ ದ್ವಿಗುಣಗೊಳ್ಳುತ್ತದೆ. ದಿನವಿಡೀ ಹೊಲದಲ್ಲಿ ದುಡಿದು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮನೆಯಲ್ಲಿ  ಶೇಖರಿಸಿಟ್ಟುಕೊಳ್ಳಲಾಗುತ್ತಿಲ್ಲ.ಶೀತದ ವಾತಾವರಣ ಇರುವುದರಿಂದ ಆಹಾರಧಾನ್ಯಗಳು ಕೆಡುತ್ತಿವೆ. ನೀರು ಮಡುಗಟ್ಟಿ ನಿಲ್ಲುವುದರಿಂದ ಗ್ರಾಮದಲ್ಲಿ ಬೀಸುವ ಗಾಳಿಯಲ್ಲಿ ದುರ್ನಾತ ಸೇರಿಕೊಂಡು ಇಡೀ ಗ್ರಾಮವನ್ನು ಕಲುಷಿತಗೊಳಿಸುತ್ತಿದೆ. ಅಲ್ಪಸ್ವಲ್ಪ ಇರುವ ಭೂಮಿಯಲ್ಲಿ ಬೆಳೆ ತೆಗೆದು ನೆಮ್ಮದಿಯ ಬದುಕು ನಡೆಸೋಣವೆಂದರೆ ಕಾಡಾನೆಗಳ ಕಾಟ.
ಜನಾರ್ದನಹಳ್ಳಿ ಶೀತಪೀಡಿತ ಗ್ರಾಮವಾಗಿರು ವುದರಿಂದ ಕಾಯಿಲೆಯಿಂದ ಬಳಲುತ್ತಿರುವವರು, ಸಣ್ಣ ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ಶೀತ ಪ್ರದೇಶ, ಮತ್ತೊಂದೆಡೆ ಮಡುಗಟ್ಟಿರುವ ಹಿನ್ನೀರಿನಿಂದ ಸೊಳ್ಳೆಗಳು ಸೃಷ್ಟಿಯಾಗಿ ಕಾಯಿಲೆ ಹರಡುತ್ತಿವೆ. ‘ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಸರಕಾರ ನಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ’ ಎಂದು ಇಲ್ಲಿನ ಜನರು ದುಃಖದಿಂದ ಹೇಳುತ್ತಾರೆ.
ಗ್ರಾಮಕ್ಕೆ ಗ್ರಾ.ಪಂ.ಸದಸ್ಯರಿಂದ ಹಿಡಿದು ಶಾಸಕರವರೆಗಿನ ಎಲ್ಲಾ ಜನಪ್ರತಿನಿಧಿಗಳು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸಚಿವರು ಭೇಟಿ ಕೊಟ್ಟಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವ ಮಾತುಗಳನ್ನು ಆಡಿದ್ದಾರೆ. ಆದರೆ ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಎಂ.ಸಿ.ನಾಣಯ್ಯ ಕಾನೂನು ಸಚಿವರಾಗಿದ್ದಾಗ ಗ್ರಾಮಕ್ಕೆ ಭೇಟಿ ನೀಡಿ, ‘ಜನಾರ್ದನಹಳ್ಳಿಯನ್ನು ಶೀತಪೀಡಿತ ಪ್ರದೇಶವೆಂದು ಘೋಷಿಸಿ, ಗ್ರಾಮದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿ’ ಎಂದು ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದರು.
ಎಂ.ಸಿ. ನಾಣಯ್ಯ ಅವರ ಪ್ರಯತ್ನದಿಂದ ಗ್ರಾಮಕ್ಕೆ ಅಧಿಕಾರಿಗಳ ದಂಡು ಭೇಟಿ ನೀಡಿ ಪರಿಶೀಲಿಸಿತು. ಆಗಿನ ಜಿಲ್ಲಾ ಉಪ ವಿಭಾಗಾಧಿಕಾರಿ ‘ಜನಾರ್ದನಹಳ್ಳಿಯ ಕೆಲವು ಮನೆಗಳು ಮಾತ್ರ ಶೀತಪೀಡಿತ ಪ್ರದೇಶದಲ್ಲಿದ್ದು, ಗ್ರಾಮವನ್ನು ಸ್ಥಳಾಂತರಿಸುವ ಅವಶ್ಯ ಇಲ್ಲ’ ಎಂದು ಸರಕಾರಕ್ಕೆ ವರದಿ ನೀಡಿದರು. ಹೀಗಾಗಿ ಜನಾರ್ದನಹಳ್ಳಿ ಜನರ ಪುನರ್ವಸತಿ ಕನಸು ನನಸಾಗಲೇ ಇಲ್ಲ.
ಇಷ್ಟೆಲ್ಲ ನಡೆದರೂ ಗ್ರಾಮಸ್ಥರು ಹೋರಾಟವನ್ನು ಕೈ ಬಿಡಲಿಲ್ಲ. ನಿರಂತರ ಹೋರಾಟದ ಫಲವಾಗಿ ಸರಕಾರ ಪುನರ್ವಸತಿಗಾಗಿ ಪಕ್ಕದ ನೀರುಗುಂದ ಗ್ರಾಮದಲ್ಲಿ ಐದೂವರೆ ಎಕರೆ ಜಾಗವನ್ನು ಕಾಯ್ದಿರಿಸಿತು. ಕಂದಾಯ ಇಲಾಖೆಯು ಜನಾದನಹಳ್ಳಿಯನ್ನು ಶೀತಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸ್ಥಳಾಂತರ ಪ್ರಕ್ರಿಯೆ ಸುಗಮಗೊಳ್ಳಲಿದೆ.
ಇದೇ ಗ್ರಾಮದಲ್ಲಿ ಕೆಲವು ಬೆಸ್ತರ ಕುಟುಂಬಗಳು ವಾಸ ಮಾಡುತ್ತಿವೆ. ಇವರಿಗೆ ಸರಕಾರ ಐದು ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಹಿನ್ನೀರಿನಲ್ಲಿ ಮುಳುಗಿ ಬದುಕು ಕಳೆದುಕೊಂಡ ರೈತರ ತಲೆಮೇಲೊಂದು ಸೂರು ಕಟ್ಟಿಕೊಡಲು ಸರಕಾರ ಇದುವರೆಗೂ ಚಿಂತನೆ ನಡೆಸದೇ ಇರುವುದು ದುರಂತವೇ ಸರಿ.
ಸರಕಾರ ನಮ್ಮನ್ನು ಹೇಮಪಟ್ಟಕದಲ್ಲಿ ಕೂರಿಸುವುದು ಬೇಡ. ಕನಿಷ್ಠಪಕ್ಷ ಪುನರ್ವಸತಿ ಕಲ್ಪಿಸಿಕೊಟ್ಟರೆ ಸಾಕು ಎಂಬುದು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಬದುಕನ್ನು ಕಳೆದುಕೊಂಡ ಜನಾರ್ದನಹಳ್ಳಿಯ ಜನರ ಬೇಡಿಕೆಯಾಗಿದೆ. ಇವರ ಕನಿಷ್ಠ ಆಸೆಯನ್ನು ಸರಕಾರ ಈಡೇರಿಸುವ ಸೌಜನ್ಯ ತೋರಬೇಕಾಗಿದೆ. ಆ ಮೂಲಕ ನೊಂದವರ ಕಣ್ಣೀರು ಒರೆಸುವ ಕೆಲಸ ತುರ್ತಾಗಿ ನಡೆಯಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ