‘ಮೇವು’ ದಷ್ಟ ಪುಷ್ಟ

ಕುಂದೂರು ಉಮೇಶಭಟ್ಟ ಮೈಸೂರು
ರಾಸುಗಳಿಗೆ ನೀಡುವ ಮೇವನ್ನು ಪೌಷ್ಟಿಕಾಂಶವಾಗಿಸುವ ಜತೆಗೆ ಅದನ್ನು ವರ್ಷವಿಡೀ ಸಂಗ್ರಹಿಸಿಡುವ ವಿಶಿಷ್ಟ ಯೋಜನೆ ರೈತರ ಬಾಗಿಲಿಗೆ ಬಂದಿದೆ.
ಮೈಸೂರು ಹಾಗೂ ಧಾರವಾಡ ಹಾಲು ಒಕ್ಕೂಟಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮೇವು ಬಿಲ್ಲೆ  ಘಟಕ ಸ್ಥಾಪನೆಗೆ ತಲಾ ೨.೫೦ ಕೋಟಿ ರೂ.ಗಳನ್ನು  ಪಡೆದುಕೊಂಡಿವೆ. ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಯಲ್ಲಿ ಇಂಥ ಘಟಕಗಳು ಮೊದಲು ಸ್ಥಾಪನೆಗೊಳ್ಳಲಿವೆ. ರೈತರೂ ತಮ್ಮ ಊರಲ್ಲಿ ಮಿನಿ ಘಟಕ ಸ್ಥಾಪಿಸಿಕೊಳ್ಳಲು ಯೋಜನೆ ಅವಕಾಶ ನೀಡಿದೆ. ಇಲ್ಲಿನ ರೈತರ ಪ್ರತಿಕ್ರಿಯೆ ಆಧರಿಸಿ ಇತರೆ ಒಕ್ಕೂಟಗಳಿಗೂ ಈ ನೆರವು ದೊರೆಯಲಿದೆ.
ಏನಿದು ಯೋಜನೆ: ರಾಸುಗಳ ಆರೋಗ್ಯ ಸುಧಾರಣೆ ಹಾಲು ಉತ್ಪಾದನೆ ಸಂತಾನಾ ಭಿವೃದ್ಧಿ ಹಾಗೂ ವಿಶೇಷವಾಗಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ಮಾಡುವಲ್ಲಿ ಹಸಿರು ಹಾಗೂ ಒಣ ಮೇವಿನ ಪಾತ್ರವೇ ಪ್ರಮುಖ.
ಮಳೆಗಾಲದಲ್ಲಿ ಮಾತ್ರ ಹಸಿರು ಮೇವನ್ನು ರಾಸುಗಳಿಗೆ ನೀಡುತ್ತಿದ್ದು ಉಳಿದ ದಿನಗಳಲ್ಲಿ ಒಣ ಮೇವನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ರೈತರು ಧಾನ್ಯ ಬೆಳೆ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಒಣ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತಿದೆ. ಹಾಲು ಉತ್ಪಾದಕರು ಉತ್ಪಾದನೆ ಹೆಚ್ಚಿಸಲು ದುಬಾರಿ ಪಶು ಆಹಾರ ಅವಲಂಬಿಸಿದಾಗ ವೆಚ್ಚ ಅಧಿಕಗೊಂದು ರೈvರು ಹೈನೋದ್ಯಮದಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂಧರ್ಭ ಹೆಚ್ಚು.  ಇದಕ್ಕಾಗಿಯೇ ಹಸಿರು ಮೇವು ಲಭ್ಯತೆ ಕಡಿಮೆ ಇರುವ ಪ್ರದೇಶದ ರೈತರಿಗೆ ಹೆಚ್ಚು ಅನುಕೂಲ ಮಾಡಿ ಕೊಡಲು ಒಣಮೇವನ್ನು ಒತ್ತಡೀಕರಣ ತಂತ್ರಜ್ಞಾನ ದಿಂದ ಸಂಸ್ಕರಿಸಿ ಒಣ ಮೇವಿನಲ್ಲಿ ಇರುವ ಅತ್ಯಲ್ಪ ಪೌಷ್ಠಿಕಾಂಶ ವೃದ್ಧಿಸುವ ಘಟಕಗಳಿಗೆ ಕೇಂದ್ರ ಸರಕಾರ ನೆರವು ನೀಡುತ್ತಿದೆ. ವಾರ್ಷಿಕವಾಗಿ ಕೋಟ್ಯಾಂತರ ರೂ.ಗಳನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದ್ದು.ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಜಾರ್ಖಂಡ್ ರಾಜ್ಯಗಳು ಇದರ ಲಾಭ ಪಡೆಯುತ್ತಿವೆ.ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಇಂಥ ಘಟಕ  ಸ್ಥಾಪನೆಗೆ ಕರ್ನಾಟಕಕಕ್ಕೆ ಅನುಮತಿ ನೀಡಿದೆ.
ಎರಡು ವಿಧಾನಗಳು: ಲಾಭದಾಯಕ ಹೈನುಗಾರಿಕೆಯಲ್ಲಿ ಮೇವಿನ ಪಾತ್ರ ಮಹತ್ವದ್ದು. ಹಸಿರು ಮೇವಿನ ಬೆಳೆಗಳಾದ ಹೈಬ್ರಿಡ್ ನೇಪಿಯರ್, ಗಿನಿ, ಮುಸುಕಿ ನ ಜೋಳ, ಹೈಬ್ರಿಡ್ ಜೋಳ ಹಾಗೂ ಒಣಮೇವನ್ನು ಹಾಗೆಯೇ ಸಹಜವಾಗಿ ನೀಡಿದಾಗ ಮೃದುವಾದ ಭಾಗ ತಿಂದು ಗಡಸಾಗಿರುವ ಭಾಗ ತಿನ್ನದೇ ಇರಬಹುದು. ಇದರಿಂದ ಮೇವು ಪೋಲಾಗಿ ರೈತರಿಗೆ ನಷ್ಟ ಸಂಭವಿಸುವ ಸಾಧ್ಯತೆ ಹೆಚ್ಚು. ಇದಕ್ಕಾಗಿಯೇ ಮೇವು ಸಂಸ್ಕೃರಣೆಯ ೨ ವಿಧಾನ ಬಳಸಬಹುದು.
ಕತ್ತರಿಸುವ ಯಂತ್ರ-ಇದಕ್ಕಾಗಿಯೇ ಮೇವು ತುಂಡರಿಸುವ ಯಂತ್ರ ಬಳಸಿ ಮೇವನ್ನು ಸಣ್ಣದಾಗಿ ಕತ್ತರಿಸಿ ನೀಡಿದಾಗ ನಷ್ಟ ತಗ್ಗಲಿದೆ.ಯಂತ್ರ ಬಳಕೆಗೆಂದೇ ಶೇ ೭೫ ರ ಅನುದಾನದಲ್ಲಿ  ಕೇಂದ್ರ ಸರಕಾರ ನೆರವು ನೀಡಲಿದೆ. ಕೇಂದ್ರ ಸರಕಾರದ ಮೇವು ಮತ್ತು ಪಶು ಆಹಾರ ಯೋಜನೆ ಅಡಿಯಲ್ಲಿ ದೊರೆಯುವ ಅನುದಾನಕ್ಕಾಗಿ ೫೦೫ ಮೇವು ತುಂಡರಿಸುವ ಯಂತ್ರಗಳ ಪ್ರಸ್ತಾವನೆಗೆ ಅನುಮೋದನೆ ದೊರೆತಿದೆ. ರಸಮೇವು ತಯಾರಿಕಾ ಘಟಕ  ಸ್ಥಾಪನೆಗೂ ಸಹ ಶೇ ೧೦೦ ಅನುದಾನದಲ್ಲಿ ೮೦ ಘಟಕ ಸ್ಥಾಪನೆಗೂ ಅನುಮೋದನೆ ದೊರೆತಿದೆ. ಇದಕ್ಕಾಗಿ ಕೇಂದ್ರ ಸರಕಾರ ೧.೬೦ ಕೋಟಿ ರೂ.ಗಳನ್ನು ಮೈಮುಲ್‌ಗೆ ಒದಗಿಸಿದೆ.
ರಸಮೇವು ಘಟಕ ಸ್ಥಾಪನೆ-ಹೆಚ್ಚು ರಾಸುಗಳನ್ನು ಹೊಂದಿರುವ ರೈತರು ಮಳೆಗಾಲದಲ್ಲಿ ಹೆಚ್ಚಿನ ಹಸಿರು ಮೇವು ಬೆಳೆಸಿ ವೈಜ್ಞಾನಿಕವಾಗಿ ಸಂಗ್ರಹಿಸಿ ವರ್ಷವಿಡಿ ಉಪಯೋಗಿಸುವ ವಿಧಾನವೇ ರಸ ಮೇವು. ಇದರಲ್ಲಿ ಭೂಮಿ ಮೇಲೆ ಅಥವಾ ಒಳಗಡೆ ವೃತ್ತಾಕರ ಅಥವ ಚೌಕಾಕರದಲ್ಲಿ ಗುಂಡಿ ತೆಗೆದು ಸಿಮೆಂಟ್ ತೊಟ್ಟಿ ನಿರ್ಮಿಸ ಬೇಕು. ಬೆಳೆದ ಹಸಿರು ಮೇವನ್ನು ತುಂಡರಿಸಿ ಕಾಕಂಬಿ, ಉಪ್ಪು, ಖನಿಜದೊಂದಿಗೆ ಮಿಶ್ರಣ ಮಾಡಬೇಕು. ಜೈವಿಕ ಕಲ್ಚರನ್ನು ಸಿಂಪಡಿಸಿ, ತೊಟ್ಟಿಯಲ್ಲಿ ಮೇವನ್ನು ತುಂಬಿಸಿ ಗಾಳಿ ಹೋಗದ ಹಾಗೆ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಭಾರ ಹೇರಬೇಕು, ೧೫ ದಿನಗಳ ನಂತರ ಮೇವು ರಸಮೇವಾಗಿ ಪರಿವರ್ತನೆ ಗೊಂಡು ಉತ್ತಮ ಸುವಾಸನೆ ಹಾಗೂ ಮೆದುವಿನಿಂದ ರಸಮೇವಾಗಿ ಪರಿವರ್ತನೆ ಗೊಳ್ಳುತ್ತದೆ.
ಪ್ರತಿ ನಿತ್ಯ ೨೦-೨೫ ಕೆ.ಜಿ. ರಸ ಮೇವಿನ ಜತೆ ಕಡ್ಡಾಯವಾಗಿ ೫ ಕೆ.ಜಿ.ದ್ವಿದಳ ಮೇವಾದ ಕುದುರೆ ಮಸಾಲೆ ಸೊಪ್ಪು ನೀಡಿದಲ್ಲಿ ರಾಸುಗಳಿಗೆ ಅವಶ್ಯವಿರುವ ಪೌಷ್ಠಿಕಾಂಶವೂ ಸಿಕ್ಕಂತಾಗುತ್ತದೆ. ಇಂಥ ಮೇವು ಹಾಲು ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿ. ಪಶು ಆಹಾರ ಬಳಕೆ ಶೇ ೬೦-೮೦ರಷ್ಟು ತಗ್ಗಲಿದೆ.
ಘಟಕದ ಸುತ್ತ ಮುತ್ತ: ಘಟಕ ದಿನ ಒಂದಕ್ಕೆ ೧೦-೧೨ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು ಪ್ರತಿ ಬ್ಲಾಕ್ ಗಳು ಅಂದಾಜು ೧೦ ಕೆ.ಜಿ. ತೂಕದ್ದು.
ದಿನವೊಂದಕ್ಕೆ ಒಂದು ಬ್ಲಾಕ್ ಅನ್ನು ರಾಸಿಗೆ ನೀಡಿ ಮೇವಿನ ಅವಶ್ಯಕತೆ ನೀಗಿಸಬಹುದು. ಈ ತಾಂತ್ರಿಕತೆ ಬರ ಜಿಲ್ಲೆಯಲ್ಲಿ ನಷ್ಟವಾಗುತ್ತಿರುವ ವಿವಿಧ ಬೆಳೆಗಳ ಒಣಮೇವನ್ನು ಸಮರ್ಪಕ ಬಳಕೆ ಮಾಡಿ ಹೈನೋದ್ಯಮದಲ್ಲಿ ಹಾಲು ಉತ್ಪಾದನಾ ವೆಚ್ಚ ಕಡಿಮೆ ತಗ್ಗಿಸಿ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಿಸಲಿದೆ. ಪಶು ಆಹಾರಕ್ಕೆ ಉಪಯೋಗಿಸುವ ಹಾಗೂ ಸ್ಥಳೀಯವಾಗಿ ಸಿಗುವ ಕಚ್ಚಾ ಪದಾರ್ಥಗಳಾದ ಹಿಂಡಿ, ತೌಡು, ಕಾಕಂಬಿ, ಉಪ್ಪು, ಲವಣಾಂಶಗಳನ್ನು ನಿಗದಿತ ಪ್ರಮಾಣಗಳಲ್ಲಿ ಮಿಶ್ರಣ ಮಾಡಬೇಕು.  ಒಣ ಮೇವನ್ನು ಅರ್ಧ ಇಂಚಿಗಿಂತ ಕಡಿಮೆ ಅಳತೆಯಲ್ಲಿ ತುಂಡರಿಸಿ ಕಚ್ಚಾ ಪದಾರ್ಥಗಳನ್ನು ಸೇರಿಸಿ ಒತ್ತಡೀಕರಣ, ಯಂತ್ರಗಳ ಸಹಾಯದಿಂದ ಮೇವಿನ ಬಿಲ್ಲೆಗಳನ್ನು ತಯಾರಿಸಬಹುದು. ಘಟಕಗಳ ಸಾiರ್ಥ ದಿನ ಒಂದಕ್ಕೆ ೧೦-೩೦ ಟನ್ ವರೆಗೆ ವಿವಿಧ ಮಾಡಲ್‌ಗಳಲ್ಲಿ ಯಂತ್ರಗಳು ಲಭ್ಯವಿದ್ದು, ಒಣ ಮೇವು ಹೆಚ್ಚಾಗಿ ಸಿಗುವ ಪ್ರದೇಶಗಳಲ್ಲಿ ಅಳವಡಿಸಿ,  ಹಸಿರು ಮೇವು ಲಭ್ಯವಿಲ್ಲದಿರುವ ಪ್ರದೇಶಗಳಿಗೆ ಸರಬರಾಜು ಮಾಡಬಹುದು. ಇದರ ಬಗ್ಗೆ ಮಾಹಿತಿ ಬೇಕೆಂದರೆ  ಕರೆ ಮಾಡಿ
ದೂ: ೯೭೪೧೧೨೮೨೭೭, ೦೮೨೧-೨೪೭೩೮೩೭

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ