ಭಾನುವಾರ ಯುವಜನರ ಸ್ಪರ್ಧೋತ್ಸಾಹ

ವರುಣ/ಚಾಮುಂಡಿಬೆಟ್ಟ
ಕೆಸರು ಗದ್ದೆಯಲ್ಲಿ ಓಡಿದರು, ಬಿದ್ದರು, ಎದ್ದರು, ಕೊನೆಗೂ ಗುರಿ ಮುಟ್ಟಿದರು. ಇಡೀ ಶರೀರ ಕೆಸರುಮಯ. ಆದರೆ ಗೆದ್ದ ಸಂಭ್ರಮದಲ್ಲಿ ಮೈಗೆ ಮೆತ್ತಿದ ಕೆಸರು ಮರೆತು ಹರ್ಷದಲ್ಲಿ ತೇಲಾಡಿದರು.
ಕೆಸರಿನ ಕೊಳದಲ್ಲಿ ಉದ್ದನೆಯ ಹಗ್ಗದ ಹಿಡಿದು ಶಕ್ತಿ ಪ್ರದರ್ಶನಕ್ಕೆ ನಿಂತರು. ಹಗ್ಗದ ಎರಡೂ ತುದಿಯಲ್ಲಿ ನಿಂತ ಹತ್ತಾರು ಮಂದಿ ಬಲವನ್ನೆಲ್ಲಾ ಸೇರಿಸಿ ಜಗ್ಗಿದರು. ಅದೇನು ತುಂಡಾಗಲಿಲ್ಲ, ಬದಲಿಗೆ ಒಂದೆಡೆಯವರು ನಿಂತರೆ, ಮತ್ತೊಂದೆಡೆಯವರು ಬಿದ್ದರು. ಮೈಯಿಗೆ ಕೆಸರಿನ ಸ್ನಾನ. ಆದರೂ ಉತ್ಸಾಹ ಹಿಂಗಲಿಲ್ಲ. ಸ್ಪರ್ಧೆ ವೀಕ್ಷಿಸಲು ನೆರೆದಿದ್ದ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಸ್ಪರ್ಧಿಗಳನ್ನು ಹುರಿದುಂಬಿಸಿದರು.
ಇವು ವರುಣ ಗ್ರಾಮದ ಮಾಜಿ ಚೇರ್‍ಮನ್ ಸಿ.ನಂಜಪ್ಪ ಅವರ ಗದ್ದೆಯಲ್ಲಿ ಭಾನುವಾರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಯುವಕ, ಯುವತಿಯರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೆಸರು ಗದ್ದೆ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಂಡು ಬಂದ ಪೈಪೋಟಿಯ ಕ್ಷಣಗಳು. ಪುರುಷ, ಮಹಿಳಾ ಮತ್ತು ಬಾಲಕಿಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದಲ್ಲಿ ಬೆಟ್ಟ ಏರುವ ಸ್ಪರ್ಧೆಯೂ ನಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ