ಬದುಕೇ ದುಸ್ಸಾಹಸ, ರಜೆ ಎಂಬುದೊಂದೇ ಸಂತಸ



ನವೀನ್ ಮಂಡ್ಯ
ಕಾರ್ಮಿಕರ ದಿನಾಚರಣೆ ಅರ್ಥಾತ್ ‘ಮೇ ಡೇ’ ಮತ್ತೆ ಬಂದಿದೆ. ಇಂಥ ಅದೆಷ್ಟೋ ದಿನಾಚರಣೆಗಳನ್ನು ನೋಡಿರುವ ದುಡಿಯುವ ವರ್ಗದ ಜನರ ಬದುಕಿನಲ್ಲಿ ಬದಲಾವಣೆ ಮರೀಚಿಕೆಯಾಗಿದೆ.
ಕಾರ್ಮಿಕರ ಪರವಾಗಿ ಸರಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗಿಲ್ಲ. ಜತೆಗೆ, ಭ್ರಷ್ಟಾಚಾರ, ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದ ಪರಿಣಾಮ ಯೋಜನೆಗಳು ಹಳ್ಳ ಹಿಡಿದಿವೆ.
ಕಾರ್ಮಿಕರ ಕಲ್ಯಾಣ ಕೇವಲ ಸರಕಾರಿ ಕಡತಗಳಲ್ಲಿ ಆಗಿದೆಯೇ ಹೊರತು ಸಮರ್ಪಕ ಅನುಷ್ಠಾನ ಈವರೆಗೆ ಸಾಧ್ಯವಾಗಿಲ್ಲ. ಆದರೆ, ಈ ವರ್ಷ ಸರಕಾರದ ಕೆಲವೊಂದು ನಿರ್ಧಾರಗಳು ಹಾಗೂ ಪರಿಸ್ಥಿತಿಗಳು ಕಾರ್ಮಿಕರ ಪರವಾಗಿವೆ ಎಂಬುದಷ್ಟೇ ಸಮಾಧಾನ.
ಹಣದುಬ್ಬರದ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರೆಲ್ಲರಿಗೂ ಪಿಎಫ್ ಸೌಲಭ್ಯ ವಿಸ್ತರಿಸಲಾಗಿದೆ. ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಟ್ಟ ಕಾರ್ಮಿಕರು ಮೃತಪಟ್ಟಾಗ ನೀಡುತ್ತಿದ್ದ ವಿಮೆ ಮೊತ್ತವನ್ನು ೬೦ ಸಾವಿರ ರೂ.ಗಳಿಂದ ೧ ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಕಾರ್ಮಿಕರ ಆರೋಗ್ಯ ವಿಮೆಗೆ ನಿಗದಿಯಾಗಿದ್ದ ವೇತನ ಮಿತಿಯನ್ನು ೧೦ರಿಂದ ೧೫ ಸಾವಿರ ರೂ.ಗೆ ಹೆಚ್ಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಕಾರ್ಮಿಕ ದಿನ ಆಚರಿಸಲು ಮೇ ೧ರಂದು ವೇತನ ಸಹಿತ ರಜೆ ನೀಡುವಂತೆ ಸರಕಾರ ಆದೇಶ ಹೊರಡಿಸಿರುವುದು ಖುಷಿ ನೀಡಿದೆ.
ಕಳೆದ ವರ್ಷ ಹಣದುಬ್ಬರ, ಆರ್ಥಿಕ ಕುಸಿತ ಮತ್ತು ಹಿಂಜರಿತ ಪರಿಣಾಮ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡಿದ್ದರು. ಈ ನಡುವೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿರುವುದರಿಂದ ಕಂಪನಿಗಳಲ್ಲಿ ಕಾರ್ಮಿಕರಿಗೆ ಉದ್ಯೋಗದ ಬಾಗಿಲು ತೆರೆದಿರುವುದು ಹರ್ಷ ತಂದಿದೆ.
ಇಷ್ಟಾದರೂ ಉತ್ತಮ ಬದುಕು ರೂಪಿಸಿಕೊಳ್ಳುವ ಹೋರಾಟದಲ್ಲಿ ಕಾರ್ಮಿಕರು ನಿತ್ರಾಣಗೊಂಡಿದ್ದಾರೆ. ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಕಾರ್ಮಿಕ ಸಮುದಾಯ ಸಮಸ್ಯೆಗಳ ಸಂಕೋಲೆಯಲ್ಲಿ ಬಂಧಿಯಾಗಿದೆ. ಅವರ ಜೀವನ ದುಸ್ತರವಾಗಿದೆ.
ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸುವಲ್ಲಿ ಸರಕಾರಗಳೂ ನಿರ್ಲಕ್ಷ್ಯ ತಳೆದಿವೆ. ಗೆಜ್ಜಲಗೆರೆ ಬಳಿ ಆಹಾರ ಸಂಸ್ಕರಣಾ ಘಟಕ ಹಾಗೂ ಮಂಡ್ಯ, ನಾಗಮಂಗಲ ಬಳಿ ಗಾರ್ಮೆಂಟ್ಸ್ ಇಂಡಸ್ಟ್ರೀಸ್ ಘಟಕ ತೆರೆಯುವ ಯೋಜನೆಗಳು ನನೆಗುದಿಗೆ ಬಿದ್ದಿವೆ.
ಸತ್ಯಾಗ್ರಹ: ಜಿಲ್ಲಾಸ್ಪತ್ರೆಯ ನಾನ್ ಕ್ಲಿನಿಕಲ್ ವಿಭಾಗದ ನೌಕರರು ಐದು ದಿನಗಳಿಂದ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಕಾರ್ಮಿಕರ ದಿನಾಚರಣೆಗೆ ಮುನ್ನಾ ದಿನ ಮುಗಿದಿದೆ ಎಂಬುದು ಸಮಾಧಾನದ ಸಂಗತಿ.
ಮಂಡ್ಯ ಎಂದರೆ ಒರಟು ಜನ ;ಬರೀ ಸ್ಟ್ರೈಕು, ಸ್ಟ್ರೈಕು ಎಂಬ ಭಾವನೆ ಇತರ ಜಿಲ್ಲೆಗಳ ಜನರು ಮತ್ತು ಬಂಡವಾಳಶಾಹಿಗಳ ಮನದಲ್ಲಿ ಮನೆ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ ಕೈಗಾರಿಕೆ ಆರಂಭಿಸಲು ಉದ್ದಿಮೆದಾರರು ಹಿಂದೇಟು ಹಾಕುತ್ತಿದ್ದಾರೆ. ಇದು ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ.
ಏಷ್ಯಾದಲ್ಲೇ ಹೆಸರಾಗಿದ್ದ ಮೈಸೂರು ಅಸಿಟೇಟ್ ಅಂಡ್ ಕೆಮಿಕಲ್ಸ್ ಕಾರ್ಖಾನೆ, ಬೆಳಗೊಳದ ಮಂಡ್ಯ ನ್ಯಾಷನಲ್ ಪೇಪರ್ ಮಿಲ್, ಸೋಮನಹಳ್ಳಿಯ ಸ್ಕೂಟರ್ ಕಾರ್ಖಾನೆ, ತೂಬಿನಕೆರೆಯ ಕೈಗಾರಿಕಾ ಪ್ರದೇಶದಲ್ಲಿನ ಹಲವು ಕಾರ್ಖಾನೆಗಳು ಕದ ಮುಚ್ಚಿದ ಪರಿಣಾಮ ಕಾರ್ಮಿಕರು ಬೀದಿ ಪಾಲಾಗಿ ಹಲವು ವರ್ಷಗಳೇ ಸಂದಿವೆ.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ(ಪಿಎಸ್‌ಎಸ್‌ಕೆ) ಶವ ಪಟ್ಟಿಗೆ ಸೇರಿದೆ. ಅದಕ್ಕೆ ಅಂತಿಮ ಮೊಳೆ ಹೊಡೆಯುವುದೊಂದೇ ಬಾಕಿ. ಇನ್ನು ಮೈಷುಗರ‍್ಸ್‌ನ ಸ್ಥಿತಿಯಂತೂ ಕೋಮಾವಸ್ಥೆ ತಲುಪಿದೆ. ಈ ಎರಡೂ ಕಾರ್ಖಾನೆಗಳನ್ನು ನಂಬಿದ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಸರಕಾರ ಮಾತ್ರ ಭರವಸೆ ನೀಡುವುದರಲ್ಲೇ ಕಾಲ ದೂಡುತ್ತಿದೆ.
ಮೈಷುಗರ‍್ಸ್‌ನಲ್ಲಿ ಡಿಸ್ಟಿಲರಿ ಘಟಕವನ್ನು ಪುನಾರಂಭಿಸಿ, ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಕಾರ್ಖಾನೆಯಲ್ಲಿನ ಸಹ ವಿದ್ಯುತ್ ಘಟಕ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದೆ.
ಪಿಎಸ್‌ಎಸ್‌ಕೆಯನ್ನು ಗುತ್ತಿಗೆ ಪಡೆದಿದ್ದ ಚೆನ್ನೈ ಮೂಲದ ಕೊಠಾರಿ ಶುಗರ‍್ಸ್ ಸಂಸ್ಥೆಯು ಕಾರ್ಖಾನೆಯನ್ನು ಅಕ್ಷರಶಃ ಕೊಳ್ಳೆ ಹೊಡೆದಿದೆ. ವಿದ್ಯುತ್, ಕಚ್ಚಾವಸ್ತು ಸೇರಿದಂತೆ ಮೂಲ ಸೌಲಭ್ಯಗಳ ಕೊರತೆಯಿಂದ ಅದೆಷ್ಟೋ ಸಣ್ಣ ಪುಟ್ಟ ಕಾರ್ಖಾನೆಗಳು ಬಂದ್ ಆಗಿವೆ.
ಬಿಎನ್‌ಎನ್‌ಎಲ್, ಅಂಚೆ ಇಲಾಖೆ ನೌಕರರು ಹಾಗೂ ನೀರಾವರಿ ಇಲಾಖೆಯ ಟಾಸ್ಕ್‌ವರ್ಕ್ ದಿನಗೂಲಿ ನೌಕರರ ಬೇಡಿಕೆಗಳು ಹಾಗೆಯೇ ಉಳಿದಿವೆ. ಮೈಷುಗರ‍್ಸ್‌ನಲ್ಲಿ ಮೃತಪಟ್ಟ ನೌಕರರ ಅವಲಂಬಿತರು ಅನುಕಂಪ ಆಧರಿತ ಉದ್ಯೋಗಕ್ಕಾಗಿ ಒತ್ತಾಯಿಸಿ ೨ ವರ್ಷ ನಿರಂತರ ಹೋರಾಟ ನಡೆಸಿ, ಈಗ ಅವರೂ ಸುಸ್ತಾಗಿದ್ದಾರೆ.
ಮೂರು ಸಾವಿರಕ್ಕೂ ಹೆಚ್ಚು ಆಲೆಮನೆಗಳಿದ್ದ ಜಿಲ್ಲೆಯಲ್ಲಿ ಈಗ ಅವುಗಳ ಸಂಖ್ಯೆ ೧೨೦೦ಕ್ಕೆ ಕುಸಿದಿದೆ. ಕಾರ್ಮಿಕರ ಸಮಸ್ಯೆ ಮತ್ತು ಬೆಲ್ಲದ ಬೆಲೆಯಲ್ಲಿನ ವ್ಯತ್ಯಾಸದಿಂದ ಎಷ್ಟೋ ಆಲೆಮನೆಗಳು ಮುಚ್ಚಿವೆ. ಕಳೆದೊಂದು ವರ್ಷದಿಂದ ಬೆಲ್ಲಕ್ಕೆ ಬಂಪರ್ ಬೆಲೆ ಬಂದಿದ್ದು, ಮತ್ತೆ ಒಂದಷ್ಟು ಆಲೆಮನೆಗಳು ಹೊಸದಾಗಿ ನಿರ್ಮಾಣಗೊಂಡಿವೆ. ಹಳೆಯ ಆಲೆಮನೆಗಳು ಪುನಶ್ಚೇತನ ಕಂಡಿವೆ.
ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಪಿಡುಗೂ ಇದೆ. ತಿಂಗಳಿಗೊಮ್ಮೆ ದಾಳಿ ನಡೆಸುವ ಕಾರ್ಮಿಕ ಇಲಾಖೆ ನಿರೀಕ್ಷಕರು, ಬಾಲ ಕಾರ್ಮಿಕರು ಕಂಡು ಬಂದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಬಾಲ ಕಾರ್ಮಿಕ ಕಾಯ್ದೆ ಸೆಕ್ಷನ್ ೧೭ರಡಿ ಇತರ ಇಲಾಖೆಗಳ ಅಧಿಕಾರಿಗಳು ಸಹ ಬಾಲ ಕಾರ್ಮಿಕರ ಸಮಸ್ಯೆ ನಿರ್ಮೂಲನೆಗಾಗಿ ನಿರೀಕ್ಷಕರಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ.
ಕೈಗಾರಿಕಾಭಿವೃದ್ಧಿ ಮತ್ತು ಕಾರ್ಮಿಕರ ಕಲ್ಯಾಣ ಕುರಿತ ಘೋಷಣೆಗಳು ಮುಂದಿನ ಮೇ ದಿನಾಚರಣೆ ವೇಳೆಗಾದರೂ ಅನುಷ್ಠಾನಗೊಳ್ಳಲಿವೆಯೇ ಹಾಗೂ ಆ ನಿಟ್ಟಿನಲ್ಲಿ ರಾಜಕಾರಣಿಗಳು ಜವಾಬ್ದಾರಿಗೆ ಬದ್ಧರಾಗುವರೇ ಕಾದು ನೋಡಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ