ವೈಶಾಖದ ಶಾಖವನ್ನೂ ಮೆಟ್ಟಿ ನಿಂತ ಮತದಾನೋತ್ಸಾಹ !

ಚೀ. ಜ. ರಾಜೀವ ಮೈಸೂರು
ನೆತ್ತಿ ಸುಡುವ ಬಿಸಿಲನ್ನೂ ಮಣಿಸಿದ ಮತದಾರರ ಅತ್ಯುತ್ಸಾಹ...  ಅಭ್ಯರ್ಥಿಗಳ ಮನೆಯಲ್ಲಿ   ಬಾತು- ಮೊಸರನ್ನದ ಸಮಾರಾಧನೆ... ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾಯಿಸಲು  ‘ಸಾಹಸ’ ಪಟ್ಟ ಮತದಾರರು....!
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೦೮೦ ಸ್ಥಾನಗಳಿಗೆ ಬುಧವಾರ ನಡೆದ ಮತದಾನ ಹೆಚ್ಚು-ಕಡಿಮೆ ಸಾಗಿದ್ದೇ ಹೀಗೆ.
ಮೂರು ಸ್ತರದ ಪಂಚಾಯತ್ ರಾಜ್ ವ್ಯವಸ್ಥೆಯ ಮುಖ್ಯ ಬುನಾದಿ ಎನ್ನಬಹುದಾದ ಗ್ರಾಮ ಪಂಚಾಯಿತಿ  ‘ಮೆಂಬರ್‌ಗಳ’ ಆಯ್ಕೆ ಪ್ರಕ್ರಿಯೆ  ಒಂದರ್ಥದಲ್ಲಿ  ಜನರ ರಣೋತ್ಸಾಹ ವರ‍್ಸಸ್ ರಣಬಿಸಿಲು ಎಂಬಂತಿತ್ತು. ಮತದಾನ ಪ್ರಕ್ರಿಯೆ ವೀಕ್ಷಣೆಗೆಂದು ಮೈಸೂರು, ಕೆ.ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಮತ್ತು  ಎಚ್.ಡಿ.ಕೋಟೆ ತಾಲೂಕಿನ ಕೆಲವು  ಗ್ರಾಮಗಳಿಗೆ ತೆರಳಿದ್ದ  ಮೈಸೂರು  ಪತ್ರಕರ್ತರ ತಂಡ ಸಾಮಾನ್ಯವಾಗಿ ಗಮನಿಸಿದ ಅಂಶ- ರೈತಾಪಿ ಜನರ ಮಿತಿ ಮೀರಿದ ಉತ್ಸಾಹ !
ಹೇಳಿ-ಕೇಳಿ ಚುನಾವಣೆ ನಡೆಯುತ್ತಿರುವುದೇ ಅಧಿಕ ವೈಶಾಖ ಮಾಸದಲ್ಲಿ. ಹಾಗಾಗಿ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೂ  ಎಲ್ಲ ಕಡೆಯೂ ಬಿಸಿಲೋ ಬಿಸಿಲು. ಮತದಾನ ಆರಂಭವಾದ ಮೊದಲ ಮೂರು  ಗಂಟೆ ಹೊರತು ಪಡಿಸಿ, ಉಳಿದ ೭ ಗಂಟೆ ಕಾಲ ಬಿಸಿಲಿನದ್ದೇ ಆಟ. ಹೀಗಿದ್ದರೂ ಮತದಾನ ಮಾಡುವವರ ಉತ್ಸಾಹಕ್ಕೆ ಕೊನೆ ಇರಲಿಲ್ಲ. ಬಹಳಷ್ಟು ಕಡೆ  ಹೊಲ-ಗದ್ದೆಯ ಕೆಲಸಕ್ಕೆ ರಜೆ ನೀಡಿ,  ಚುನಾವಣೆ ಊರ ಹಬ್ಬವೇನೋ ಎಂಬಂತೆ ಸಂಭ್ರಮಿಸುತ್ತಿದ್ದರು.
ಹುಣಸೂರು ತಾಲೂಕು ಗೋವಿಂದನಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಆಜಾದ್ ನಗರದಲ್ಲಿ  ಮಟಮಟ ಮಧ್ಯಾಹ್ನ ಮತದಾನ ಕೇಂದ್ರದ ಬಳಿಗೆ ನಡೆದು ಕೊಂಡು ಬರುತ್ತಿದ್ದ  ೭೫ರ ವೃದ್ಧೆಗೆ, ಬಿಸಿಲಿನಲ್ಲೂ  ಓಟ್ ಮಾಡಲು ಬಂದಿರುವೆಯಾ ಅಜ್ಜಿ  ಎಂದು ಪ್ರಶ್ನಿಸಿದರೆ- ‘ಅಯ್ಯೋ, ಯಾವ ಬಿಸಿಲು ಮಗ. ನಮ್ಮ ಮೊಮ್ಮಗನೇ ಮೆಂಬರ್ ಆಗೋಕೆ ನಿಂತಿದ್ದಾನೆ. ನಾನು ಓಟ್ ಕೇಳದಿದ್ರೆ ಹೇಗೆ ?, ಮನೆಯ ಎಲ್ಲರೂ ಇಲ್ಲಿ ನಿಂತಿದ್ದೇವೆ...!’ ಎಂದು ನಮಗೆ ದಂಡು ಬಡಿಸಿದರು. ಬಹಳಷ್ಟು ಜನ ತಲೆಗೆ ಕರ್ಚಿಫ್ ಇಲ್ಲವೇ ಟವೆಲ್ ಸುತ್ತಿಕೊಂಡು ಕಡೆ ಕ್ಷಣದ ರಾಜಕೀಯದಲ್ಲಿ ನಿರತರಾಗಿ ದ್ದರು. ಕೆಲವರನ್ನು ಛತ್ರಿಯ ಆಸರೆಯಲ್ಲಿ ಕರೆತರುತ್ತಿದ್ದರು.
ಮತಕೇಂದ್ರದಿಂದ ೧೦೦ ಮೀಟರ್ ವ್ಯಾಪ್ತಿಯಲ್ಲಿ ಮತಯಾಚಿಸುವಂತಿಲ್ಲ, ಗುಂಪು-ಗುಂಪಾಗಿ ನಿಲ್ಲುವಂತಿಲ್ಲ ಎಂಬ ಸೂಚನೆಯನ್ನು ಎಲ್ಲ ಕಡೆಯೂ ಅಂಟಿಸಲಾಗಿತ್ತು. ಆದರೆ ಬಹುತೇಕ ಕಡೆ  ಅಂಟಿಸಿದ ನೋಟಿಸಿನ ಕೆಳಗೆ ನೂರಾರು ಜನ ಕುಳಿತುಕೊಂಡೇ ಇದ್ದರು. ಬಿಸಿಲಿನಿಂದ ತಪ್ಪಿಸಿಕೊಳ್ಳಲು ಶಾಲಾ ಆವರಣದೊಳಗಿನ ಮರಗಳನ್ನು ಜನ ಅಶ್ರಯಿಸಿದ್ದೇ - ೧೦೦ ಮೀಟರ್ ನಿಯಮದ ಉಲ್ಲಂಘನೆಗೆ ಕಾರಣವಾಗಿತ್ತು. ಹಾಗಾಗಿ ಪೊಲೀಸರು ಕೂಡ  ಪ್ರಜ್ಞಾಪೂರ್ವಕವಾಗಿ ನಿಯಮವನ್ನು ಮರೆತು ಕರ್ತವ್ಯದಲ್ಲಿದ್ದರು.
ಪತ್ರಕರ್ತರ ತಂಡ ಪ್ರವಾಸ ನಡೆಸಿದ ಇಲವಾಲ, ಹಿನಕಲ್, ಬಿಳಿಕೆರೆ, ಬೋಳನಹಳ್ಳಿ, ಗಾವಡಗೆರೆ, ಕಟ್ಟೆಮಳಲವಾಡಿ, ಉಮ್ಮತ್ತೂರು, ಚಿಲ್ಕುಂದ, ಗೋವಿಂದನಹಳ್ಳಿ, ಜಯಪುರ, ಡಿ. ಸಾಲುಂಡಿ ಸೇರಿದಂತೆ ಎಲ್ಲ  ಕಡೆಯೂ  ಮತಕೇಂದ್ರಗಳ ಬಳಿ ಸಾಲು-ಸಾಲು ಜನರೇ ಕಂಡು ಬಂದರು.
ಬಾತು-ಮೊಸರನ್ನದ ಸಮಾರಾಧನೆ: ಅಭ್ಯರ್ಥಿಗಳು ಮತದಾರರಿಗೆ ಯಾವುದೇ ರೀತಿಯ ಆಸೆ- ಆಮಿಷವನ್ನು ಒಡ್ಡುವಂತಿಲ್ಲ ಎನ್ನುತ್ತದೆ ಸದಾಚಾರ ಸಂಹಿತೆ.  ಹಾಗಾಗಿ ಆಯೋಗದ ಮಂದಿ ಚುನಾವಣೆಗಳ ಸಂದರ್ಭದಲ್ಲಿ  ಈ ಬಗ್ಗೆ  ಕಣ್ಗಾವಲು ಹಾಕಿರು ತ್ತದೆ. ಆದರೆ, ಗ್ರಾಮ ಪಂಚಾಯಿತಿ  ಮತದಾನ ದಿನದಂದು  ಅಭ್ಯರ್ಥಿಗಳ ಮನೆಗಳಲ್ಲಿ  ನಡೆಯುವ ಅನ್ನ ಸಂತಾರ್ಪಣೆಯನ್ನು ಏನೂ ಮಾಡಿದರೂ ತಪ್ಪಿಸಲು ಆಗುವುದಿಲ್ಲ.  ಬಹುತೇಕ ಎಲ್ಲ ಕಡೆಯೂ ಅಭ್ಯರ್ಥಿಗಳ ಮನೆಯವರೇ ‘ತಮ್ಮ ಕಡೆಯವರಿಗೆ’ ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ವ್ಯವಸ್ಥೆ  ಮಾಡಿದ್ದರು. ಕೆಲವು ಕಡೆ ಇಂಥ ಮನೆಗಳಿಂದಲೇ ಚುನಾವಣೆ ಸಿಬ್ಬಂದಿಗೆ ಊಟೋಪಾಚರದ ವ್ಯವಸ್ಥೆ ಆಗಿತ್ತು.
‘ಇದನ್ನು ತಪ್ಪಿಸುವುದು ಬಹಳ ಕಷ್ಟ ಸಾರ್. ಹಳ್ಳಿಯ ಜನರ ದೃಷ್ಟಿಯಲ್ಲಿ  ಇದು ಆಮಿಷವಲ್ಲ. ಚುನಾವಣೆಗೆ ನಿಂತವನು ಮತದಾರರಿಗೆ  ಮಾಡ ಬಹುದಾದ, ಮಾಡಲೇ ಬೇಕಾದ ಕನಿಷ್ಠ ಕರ್ತವ್ಯ’ ಎಂದು ಕಟ್ಟೆಮಳಲವಾಡಿಯಲ್ಲಿ  ಚುನಾವಣಾ ಸಿಬ್ಬಂದಿಯೊಬ್ಬರು ಪತ್ರಿಕೆಗೆ ಪ್ರತಿಕ್ರಿಯಿಸಿದರು. 
ಕಷ್ಟ ಕೊಟ್ಟ ಬ್ಯಾಲೆಟ್ ಪೇಪರ್: ಸತತ ಮೂರನೇ ವರ್ಷ ಮೇನಲ್ಲಿ  ಚುನಾವಣೆ ಕಾಣುತ್ತಿರುವ ಜಿಲ್ಲೆಯ ಮತದಾರರು, ೨೦೦೮ರಲ್ಲಿ ವಿಧಾನ ಸಭೆ, ೨೦೦೯ನೇ ಇಸ್ವಿಯಲ್ಲಿ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದ್ದಾರೆ. ಆ ಎರಡೂ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿ  ಗುಂಡಿ ಒತ್ತಿದ್ದರು.  ಆದರೆ ಈ ಬಾರಿ ಮತ್ತದೇ ಬ್ಯಾಲೆಟ್ ಪೇಪರ್ ಬಂದು ಕುಳಿತಿದೆ. ಹಾಗಾಗಿ ಹೊಸ ತಲೆಮಾರಿನ ಮತದಾರರಿಗೆ ಬ್ಯಾಲೆಟ್ ಪೇಪರ್ ತೀರಾ ಹೊಸತು. ಹಳಬರಿಗಷ್ಟೇ ಪರಿಚಿತ. ಇದರ ನಡುವೆ ಇದು ಊರಿನ ಎಲೆಕ್ಷನ್ ಆದ್ದರಿಂದ ಕಣದಲ್ಲಿ  ವಿಪರೀತ  ಮಂದಿ.  ಕಟ್ಟೆಮಳಲವಾಡಿಯಲ್ಲಿ ನಾಲ್ಕು ಸ್ಥಾನಕ್ಕೆ ೩೦ ಮಂದಿ ಸ್ಪರ್ಧಿ ಸಿದ್ದರು. ಅಷ್ಟೂ ಜನರ ಹೆಸರನ್ನು ಒಂದೇ ಬ್ಯಾಲೆಟ್‌ನಲ್ಲಿ ಮುದ್ರಿಸಲಾಗಿತ್ತು. ಇಂಥ ಬ್ಯಾಲೆಟ್‌ನಲ್ಲಿರುವ ಅಭ್ಯರ್ಥಿಗಳನ್ನು ಹುಡುಕುವುದೇ  ಒಂದು ದೊಡ್ಡ ಕೆಲಸವಾಗಿತ್ತು. ‘೩೦ ಜನರ ಬ್ಯಾಲೆಟ್ ಪೇಪರ್ ನ್ಯೂಸ್ ಪೇಪರ್ ತರ ಇದೆ.  ಅದನ್ನು ಮಡುಚುವುದೇ ಮತದಾರರಿಗೆ ದೊಡ್ಡ ಕೆಲಸ. ಒಬ್ಬ ಮತದಾರನಿಗೆ ಕನಿಷ್ಠ ೧೦ ನಿಮಿಷ ಬೇಕು’ ಎಂದು ಮತಗಟ್ಟೆಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.  ಯಾವ ಊರಲ್ಲೂ ಫ್ಲಕ್ಸ್, ಬ್ಯಾನರ್‌ಗಳ ಸುಳಿವೇ ಇರಲಿಲ್ಲ.  ಅಭ್ಯರ್ಥಿಗಳು ಕರಪತ್ರವೊಂದನ್ನೇ ಪ್ರಚಾರಕ್ಕೆ ಬಳಸುತ್ತಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ