‘ವಿಕ ಫೋನ್ ಇನ್’ನಲ್ಲಿ ಗಣೇಶ್ ಉಲ್ಲಾಸ ಉತ್ಸಾಹ....

ವಿಕ ಸುದ್ದಿಲೋಕ ಮೈಸೂರು
ನೀವು ಅಳೋದೆ ಒಂದು ಚೆಂದ, ಎಮೋಷನಲ್ ಸೀನ್‌ನಲ್ಲಿ ತುಂಬಾನೇ ಚೆನ್ನಾಗಿ ಕಾಣ್ತೀರಿ.., ಅಯ್ಯೋ, ಬೇಡ ಕಣ್ರೀ, ಅಷ್ಟೊಂದ್ ಅಳ್ಬೇಡಿ. ನೀವು ಅಳ್ತಿದ್ರೆ ನನಗೂ ಅಳು ಬಂದ್ಬಿಡುತ್ತೆ !
‘ಇದೊಳ್ಳೇ ಕಷ್ಟಕ್ಕೆ ಬಂತಲ್ಲಪ್ಪ ,ಅತ್ರೂ ಕಷ್ಟ, ಅಳದೇ ಇದ್ರೂ ಕಷ್ಟ .ಯಾರಿಗೂ ಇಂಥ ಕಷ್ಟ ಬರದಿರಲಿ’ ಎಂದು ಹಾರೈಸುತ್ತಿದ್ದೀರಾ,‘ಯಾರಪ್ಪ ಇಂಥ ಸಂಕಷ್ಟಕ್ಕೆ ಸಿಲುಕಿದ ಮಾನವ ಜೀವಿ ’ಎಂಬ ಮರುಕ ಪೂರಿತ ಕುತೂಹಲವೇ?
-‘ಮುಂಗಾರು ಮಳೆ’ಯಲ್ಲಿ ತೊಯ್ದು, ‘ಗಾಳಿಪಟ’ ಹಾರಿಸಿ, ಅದೇ ‘ಮಳೆಯಲಿ ಜೊತೆ ಯಲಿ’ ನಡೆದು, ಅಭಿಮಾನಿಗಳ ಹೃದಯದಲ್ಲಿ ‘ಅರಮನೆ ’ ಕಟ್ಟಿ, ‘ಚೆಲ್ಲಾಟ’ ಆಡಿ,‘ಚೆಲುವಿನ ಚಿತ್ತಾರ ’ ಮೂಡಿಸಿ ಈಗ ‘ಉಲ್ಲಾಸ ಉತ್ಸಾಹದಲ್ಲಿ’ ತೇಲುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಅಭಿಮಾಗಳು ಹಾಕಿದ ಪ್ರೀತಿ ಪೂರ್ವಕ ‘ಧಮಕಿ’ಗಳಿವು.
ತಮ್ಮ ಹೊಸ ಸಿನಿಮಾ ‘ಉಲ್ಲಾಸ ಉತ್ಸಾಹ’ವನ್ನು ಅಭಿಮಾನಿಗಳ ಜತೆ ಕುಳಿತು ನೋಡಲು ಮೈಸೂರಿನ ಚಿತ್ರಮಂದಿರಗಳಿಗೆ ಭಾನು ವಾರ ಭೇಟಿ ನೀಡಿದ್ದ ಅವರು,‘ವಿಜಯ ಕರ್ನಾಟಕ ’ಆಯೋಜಿಸಿದ್ದ ಫೋನ್ -ಇನ್ ಕಾರ‍್ಯಕ್ರಮದಲ್ಲಿ ಒಂದು ತಾಸು ಪಾಲ್ಗೊಂಡು ಅಭಿ ಮಾನದ ಕರೆಗಳ ‘ಸುರಿ ಮಳೆ’ಯಲ್ಲಿ ಮಿಂದರು. ತಮ್ಮ ಎಂದಿನ ‘ಕಾಮಿಡಿ’ ಶೈಲಿಯಲ್ಲಿ ಉಲ್ಲಾಸ, ಉತ್ಸಾಹದಿಂದಲೇ ಮಾತನಾಡಿದರು.
೬೦ ನಿಮಿಷದಲ್ಲಿ ೪೫ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದರು. ‘ಫ್ಯಾಮಿಲಿ ಪ್ಯಾಕೇಜ್’ ಕರೆಗಳಿಗಂತೂ ದೀರ್ಘವಾಗಿಯೇ ಸ್ಪಂದಿಸಿ ದರು. ಅಭಿಮಾನಿಗಳೂ ಅಷ್ಟೆ, ತಮ್ಮ ಪ್ರೀತಿಯ ನಟ ಹೀಗೇ ಇರ ಬೇಕು, ಕೆಟ್ಟ ಸಿನಿಮಾಗಳಲ್ಲಿ ನಟಿಸಿ ವರ್ಚಸ್ಸಿಗೆ ಧಕ್ಕೆ ತಂದು ಕೊಳ್ಳ ಬಾರದು ಎನ್ನುವ ಕಳಕಳಿ, ಕಾಳಜಿ ಪೂರ್ಣ ಕಿವಿಮಾತು ಹೇಳಿದರು.
ಅಳಬೇಕು,ಅಳು ಬೇಡ: ಮೈಸೂರಿನ ಮಾನಸಾಗೆ ಗಣೇಶ್ ಅಳೋದು ಇಷ್ಟ. ‘ತುಂಬಾ ಚೆನ್ನಾಗಿ ಅಳ್ತೀರ ಕಂಡ್ರೀ’ ಎಂಬ ಕಾಂಪ್ಲಿಮೆಂಟು. ಆದರೆ, ಕುವೆಂಪು ನಗರದ ವೀಣಾಗೆ ಅಳೋದು ಇಷ್ಟವಿಲ್ಲ. ಫೋನ್ ಸಂಪರ್ಕ ಸಿಕ್ಕ ಖುಷಿಗೇ ಬಿಕ್ಕಳಿಸಿದ ಆಕೆ ‘ನೀವು ಅಳುವಂತ ಸೀನ್‌ನಲ್ಲಿ ನಟಿಸಲೇಬೇಡಿ. ಅಳೋದನ್ನು ನೋಡಿದ್ರೆ ನನಗೂ ಅಳುಬರುತ್ತೆ ’ಎಂದು ಮತ್ತೆ ಬಿಕ್ಕಿದರು. ಅವರನ್ನು ಸಮಾಧಾನಿಸಲು ಗಣೇಶ್ ದೊಡ್ಡ ‘ಸರ್ಕಸ್’ ಮಾಡಬೇಕಾಯಿತು.
ಫೇಲಾದೆ ಗೊತ್ತಾ?: ‘ನಿಮ್ಮ ಸಿನಿಮಾ ನೋಡಿ ನೋಡಿಯೇ ನಾನು ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದೀನಿ ಗೋತ್ತಾ’ ಎಂದು ಮತ್ತೊಂದು ‘ಶಾಕ್’ನೀಡಿದವಳು ಮೈಸೂರಿನ ಶ್ರುತಿ. ಮಾತಿಗೆ ಸಿಕ್ಕಿದ್ದರಿಂದ ಉದ್ವೇಗ ಕ್ಕೊಳಗಾಗಿ ಕಣ್ಣೀರಾದ ಆಕೆ ‘ನಾನು ನಿಮ್ಮ ತುಂಬಾ... ತುಂಬಾ ದೊಡ್ಡ ಅಭಿಮಾನಿ’ ಅಂತ ಮತ್ತೆ ಮತ್ತೆ ಹೇಳಿಕೊಂಡಳು. ಉಲ್ಲಾಸ ಉತ್ಸಾಹದ ‘ಚಲಿಸುವ ಚೆಲುವೆ ಒಲಿಸಲು ಬರವೆ...’ಹಾಡನ್ನು ಆಕೆಗಾಗಿ ಹಾಡಿದ ಗಣೇಶ್, ‘ಚೆನ್ನಾಗಿ ಓದು, ನನ್ ಸಿನಿಮಾ ನೋಡು. ನಿನ್ನ ಶ್ರುತಿ ಅಪಶ್ರುತಿ ಆಗದಿರಲಿ’ ಎಂದು ಮಾರ್ಮಿಕವಾಗಿ ಹಾರೈಸಿದರು.
ಪ್ರೀತಿಯ ತಾಕೀತು: ಸುಶ್ಮಿತಾ ಎಂಬಾಕೆ ಮಾಡಿದ ಕರೆ ಐದಾರು ನಿಮಿಷ ಲಂಬಿಸಿತು. ‘ಫ್ಯಾಮಿಲಿ ಪ್ಯಾಕೇಜ್’ ಥರ. ಅಣ್ಣ,ತಂಗಿ, ಅಮ್ಮ, ಅಪ್ಪ ಹೀಗೆ ಎಲ್ಲರೂ ಒಬ್ಬರ ನಂತರ ಒಬ್ಬರು ಗಣೇಶ್ ಜತೆ ಮಾತಿನ ಸುಖ ಅನುಭವಿಸಿದರು.‘ ಮುಂಗಾರು ಮಳೆ, ಮಳೆಯಲಿ ಜತೆಯಲಿ ಥರದ ಸಿನಿಮಾಗಳನ್ನೇ ಮಾಡಿ. ನಿಮ್ಮ ಟ್ರೆಂಡ್ ಉಳಿಸಿಕೊಳ್ಳಿ. ಅದೇ ರೀತಿ ಪಂಚಿಂಗ್ ಡೈಲಾಗ್ ಹೇಳಿ. ಮಾಮೂಲಿ ಥರದ ಸಿನಿಮಾಗಳನ್ನು ಒಪ್ಪಿಕೊಳ್ಳ ಬೇಡಿ’ ಎಂಬುದು ಕುಟುಂಬದ ತಾಕೀತು. ‘ನಿಮ್ಮ ನಂಬಿಕೆ, ನಿರೀಕ್ಷೆಯನ್ನು ಹುಸಿಗೊಳಿಸಲ್ಲ’ ಎಂದು ಅಭಯ ನೀಡಿದರು ಗಣೇಶ್.
ಮೆಟ್ಟಿಲು ಹತ್ತಿದ ಸುಖ: ಕಾಮಗೆರೆಯ ದೇವರಾಜ್ ಅದೇನೋ ಕಷ್ಟ ಹೇಳಿ ಕೊಂಡರು. ‘ಅಣ್ಣಾ, ನಿಮ್ಮ ಮೇಲೆ ನಿಮಗೆ ವಿಶ್ವಾಸ ವಿರಲಿ. ಕಷ್ಟಪಟ್ಟು ಮುಂದೆ ಬಂದರೇನೇ ಸುಖ. ೧೨ ಅಂತಸ್ತಿನ ಕಟ್ಟಡ ವನ್ನು ಮೆಟ್ಟಿಲು ಮೂಲಕ ಹತ್ತಿ, ತುತ್ತ ತುದಿಯಲ್ಲಿ ಕುಳಿತು ನೀರು ಕುಡಿಯುವಾಗ ಸಿಗುವ ತೃಪ್ತಿ, ಖುಷಿ ಲಿಫ್ಟ್‌ನಲ್ಲಿ ಹೋದರೆ ಸಿಕ್ಕಲ್ಲ’ ಎಂದು ಅನುಭಾವಿಕ ಉಪದೇಶ ನೀಡಿದರು.
ಮಾತನಾಡಿಸೋಣ ಅಂದ್ರೆ..: ಮೈಸೂರು ಪಾಲಿಕೆ ಉದ್ಯೋಗಿ ವೀಣಾ ಅವರದ್ದೂ ‘ಫ್ಯಾಮಿಲಿ ಪ್ಯಾಕೇಜ್’. ಭಾನುವಾರದ ಸ್ಪೆಷಲ್ ನಾನ್‌ವೆಜ್ ಊಟದ ವಿಷಯವೇ ಮಾತಿಗೆ ಆಹಾರ. ಲೈನಿಗೆ ಬಂದ ಆಕೆಯ ತಂಗಿ ಸೌಮ್ಯ ‘ನಿಮ್ಮನ್ನ ಅವತ್ತೊಂದಿನ ಹತ್ತಿರದಿಂದ ನೋಡಿದ್ದೆ. ಮಾತನಾಡಿಸೋಣ ಅಂದ್ರೆ, ಅದ್ಯಾರೋ ನಿಮ್ಮನ್ನು ಕಾರ‍್ನಲ್ಲಿ ಎಳ್ಕೊಂಡು ಹೋದ್ರು’ ಅಂತ ಶ್ಯಾನೆ ಬೇಜಾರು ವ್ಯಕ್ತಪಡಿಸಿದಳು. ಅದೇ ಪ್ಯಾಕೇಜ್‌ನಲ್ಲಿದ್ದ ಅಪ್ಪು ತನ್ನ ಮೆಕ್ಯಾನಿಕ್ ವೃತ್ತಿಯ ಬಗ್ಗೆ ಹೇಳಿಕೊಂಡ. ‘ಚೆಲುವಿನ ಚಿತ್ತಾರ’ದ ಥರಾನಾ ಅಂತ ಕಾಲೆಳೆದ ಗಣೇಶ್, ಕ್ಲೈಮ್ಯಾಕ್ಸ್ ರೀತಿ ಮಾಡ್ಕೋಬೇಡಿ ಅಂತ ‘ಸಲಹೆ ’  ನೀಡಿದರು.ಆ ಸೀಸನ್ ಬಂದಿಲ್ಲ ಎಂದ ೨೭ರ ಅಪ್ಪು ಮತ್ತೊಮ್ಮೆ ಕಾಲೆಳೆಸಿಕೊಂಡ.
ನಾನೇ ಅಭಿಮಾನಿ: ಅದಾಗಲೇ ೬೮ ಬಾರಿ ಮೊಬೈಲ್ ಸಂಪರ್ಕಕ್ಕೆ ಪ್ರಯತ್ನಿಸಿ, ೬೯ನೇ ಬಾರಿ ಲೈನ್ ಸಿಕ್ಕಿದ್ದಕ್ಕೆ ‘ಫುಲ್ ಥ್ರಿಲ್ಲಾಗಿ’ ಮಾತಿಗಿಳಿದ ಕಾವ್ಯ, ‘ನಾನು ನಿಮ್ಮ ಫ್ಯಾನ್’ಎಂದರು. ಅವರ ಅಭಿಮಾನದ ಉದ್ವೇಗಕ್ಕೆ ಶರಣಾದ ಗಣೇಶ್ ‘ನಾನೇ ನಿಮ್ಮ ಅಭಿಮಾನಿ’ ಎಂದು ಪ್ರತಿಕ್ರಿಯಿಸಿದರು. ಬೆನ್ನಿಗೇ ಚಾಮರಾಜ ನಗರದಿಂದ ಇನ್ನೊಂದು ‘ಕಾವ್ಯ’ ಧಾರೆ. ನಿಮ್ಮ ‘ಮಳೆ’ ಸಿನಿಮಾಗಳನ್ನು ಸಿಕ್ಕಾಪಟ್ಟೆ ಸಾರಿ ನೋಡಿ ದೀನಿ. ಆದ್ರೆ, ಸರ್ಕಸ್, ಬೊಂಬಾಟ್ ಇತ್ಯಾದಿ ಗಿಂತ ಮಳೆ ಫಿಲ್ಮೇ ಇಷ್ಟ. ಯಾವತ್ತೂ ‘ಮಳೆ’ಯಂಥ ಸಿನಿಮಾನೇ ಮಾಡಿ ಎಂದು ಹುಕುಂ ಚಲಾಯಿಸಿದರು.
ಹುಡುಗಿಯರೇ ಹೆಚ್ಚು: ಲೈನಿಗೆ ಬಂದವರಲ್ಲಿ ಹೆಚ್ಚಿನ ವರು ಕಾಲೇಜು ಹುಡುಗರು, ಅದರಲ್ಲೂ ಹೆಚ್ಚು ಹುಡುಗಿಯರು. ‘ನಿಮ್ಮ ಅಭಿಮಾನಿ ಸಾರ್. ತುಂಬಾ ತುಂಬಾ ಅಭಿಮಾನಿ. ಎಲ್ಲಾ ಸಿನಿಮಾನೂ ನೋಡಿದ್ದೇನೆ. ಆಕ್ಟಿಂಗು, ಡೈಲಾಗ್ ಡೆಲಿವರಿ ಎಲ್ಲಾ ಸೂಪರ್’ ಎಂದರು. ಕೆಲವರಂತೂ ಗಣೇಶ್ ಜತೆ ಮಾತನಾಡುವ ಭಾಗ್ಯ ಸಿಕ್ಕಿದ್ದಕ್ಕೆ ‘ಆಕಾಶಕ್ಕೆ ಮೂರೇ ಗೇಣು’ ಎನ್ನುವಷ್ಟು ಅಮಿತಾನಂದ ವ್ಯಕ್ತಪಡಿಸಿದರು.
‘ನಿಮ್ಮ ಪ್ರೀತಿ, ಎಕ್ಸೈಟ್‌ಮೆಂಟ್‌ಗೆ ಬೆಲೆ ಕಟ್ಟಲಾಗದು. ನಿಮ್ಮನ್ನು ಖುಷಿ ಪಡಿಸುವ ಸಿನಿಮಾ ಕೊಟ್ಟರಷ್ಟೆ ಸಾರ್ಥಕ್ಯ’ ಎಂದು ಗಣೇಶ್ ಮನದುಂಬಿ ಕೃತಜ್ಞತೆ ಸಲ್ಲಿಸಿ ದರು. ‘ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಳ್ಳಿ’ ಎಂಬ ಸದಾಶಯದ ಸಲಹೆಯನ್ನೂ ನೀಡಿದರು.
‘ಕರೆ ಮಳೆ’ನಿಂತ ಮೇಲೂ: ಫೋನ್ -ಇನ್ ಮುಗಿಸಿ ಹೊರಬಂದರೆ ಅಲ್ಲೊಬ್ಬ ‘ಹುಚ್ಚು ಅಭಿಮಾನಿ’ ಅಣ್ಣನ ಜತೆ ಹಾಜರಿದ್ದಳು. ಗಣೇಶ್ ಎದುರಾದೊಡನೆ ಏದುಸಿರು ಹೆಚ್ಚಿ, ಮಾತೇ ಆಡಲಾಗದವಳಂತೆ ನಿಂತಳು. ಯಾವತ್ತೋ ನೆಚ್ಚಿನ ನಟನ ಜತೆ ತೆಗೆಸಿಕೊಂಡಿದ್ದ ಫೋಟೋ ತೋರಿಸಿ ಪರಿಚಯ ಹೇಳಿದಳು. ಮೊಬೈಲ್ ಕ್ಯಾಮೆರಾದಲ್ಲಿ ಮತ್ತೊಂದು ಫೋಟೋಕ್ಕೆ ಫೋಸು ನೀಡಿದಳು.‘ಪರೀಕ್ಷೆ ಮುಗಿಯೋದನ್ನೇ ಕಾಯ್ತಿದ್ದೆ ಸಾರ್, ಕೂಡಲೆ ಹೋಗಿ ನಿಮ್ಮ ಸಿನಿಮಾ ನೋಡ್ದೆ  ಎಂದು ಸಂಭ್ರಮಿಸಿದಳು.
ಹೀಗೆ, ಅಭಿಮಾನದ ಮಳೆ, ಪೋನ್ ಕರೆಗಳ ಹೊಳೆ ಯಲ್ಲಿ ತೊಯ್ದು ತೊಪ್ಪೆಯಾಗಿದ್ದರು ಗಣೇಶ್. ‘ನನ್ನ ಇಂಥ ಯುವ ಅಭಿಮಾನಿಗಳು ದಾರಿ ತಪ್ಪ ಬಾರದು ಎನ್ನುವ ಕಾರಣಕ್ಕೇ ಸಿನಿಮಾಗಳಲ್ಲಿ ವಲ್ಗರ್ ಡೈಲಾಗ್ ಬಳಸಲ್ಲ’ ಎಂದರು. ಬೆಳಗ್ಗೆಯಿಂದ ಕಚೇರಿಯ ಸ್ಥಿರ ಮತ್ತು ಮೊಬೈಲ್ ದೂರವಾಣಿಗಳಿಗೆ ಹರಿದು ಬರುತ್ತಿದ್ದ ಕರೆಗಳ ಮಳೆ ಅವರು ಬಂದು ಹೋದ ನಂತರವೂ ಮುಂದುವರಿದಿತ್ತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ