ಪೊಲೀಸರನ್ನೇ ಸತಾಯಿಸುತ್ತಿರುವ ಮುಡಾ ಅಧಿಕಾರಿಗಳು

ವಿಕ ಸುದ್ದಿಲೋಕ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧಿಕಾರಿಗಳ ತಿಕ್ಕಾಟದಿಂದ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳ ಮಾರಾಟ ಹಗರಣದ ತನಿಖೆ ವಿಳಂಬವಾಗುತ್ತಿದೆ.
ಖೋಟಾ ದಾಖಲೆ ಸೃಷ್ಟಿಸಿ ಪ್ರತಿಷ್ಠಿತ ಬಡಾವಣೆಯಲ್ಲಿ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು, ತನಿಖೆ ನಡೆಸಿ ಎಂದು ದೂರು ನೀಡಿದ ಮುಡಾ ಅಧಿಕಾರಿಗಳೇ ಈಗ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಮುಡಾದಲ್ಲೇ ಇರುವ ಇಂಥ ತಿಮಿಂಗಿಲಗಳನ್ನು ರಕ್ಷಿಸುವ ಕೆಲಸದಲ್ಲಿ ಕೆಲ ಅಧಿಕಾರಿ ಗಳು ತೊಡಗಿದ್ದಾರೆ. ಇದರಿಂದ ತನಿಖೆ ನಡೆಸಬೇಕಾಗಿದ್ದ ಲಕ್ಷ್ಮಿಪುರಂ ಪೊಲೀಸರು ವರ್ಷದ ಅವಧಿಯಲ್ಲೇ  ಹಗರಣದಲ್ಲಿ ಭಾಗಿಯಾಗಿರುವ ಮುಡಾ ನೌಕರರ ಹೆಸರು ನೀಡಿ ಎನ್ನುವ ಒಕ್ಕಣೆಯೊಂದಿಗೆ ಎಂಟು ಪತ್ರ ಬರೆದರೂ ಏನೂ ಉಪಯೋಗ ವಾಗಿಲ್ಲ. ಹೆಸರು ನೀಡುವ ವಿಚಾರದಲ್ಲಿ ಅಧಿಕಾರಿಗಳ ನಡುವೆ ತಿಕ್ಕಾಟ ಏರ್ಪಟ್ಟಿದ್ದು, ಇದು ಮುಡಾದಲ್ಲಿ ಗೊಂದಲವನ್ನೂ ಹುಟ್ಟು ಹಾಕಿದೆ.
ಏನಿದು ಹಗರಣ: ಮುಡಾ ಆಯುಕ್ತ ಪಿ.ಸಿ.ಜಯಣ್ಣ ಅವರು ಲಕ್ಷ್ಮಿಪುರಂ ಪೊಲೀಸರಿಗೆ ೨೦೦೯ರ ಮಾರ್ಚ್‌ನಲ್ಲಿ ನೀಡಿರುವ ದೂರಿನ ವಿವರ ಹೀಗಿದೆ:
೧೯೯೫ರಿಂದ ೨೦೦೮ರವರೆಗೆ ಸುಮಾರು ೮ ನಿವೇಶನಗಳನ್ನು ಖೋಟಾ ದಾಖಲೆಗಳೊಂದಿಗೆ ಮಾರಾಟ ಮಾಡಲಾಗಿದೆ. ಎಲ್ಲಾ ಎಂಟು ನಿವೇಶನದ ಮೂಲ ದಾಖಲೆಗಳನ್ನು ನಾಶ ಮಾಡಿದ್ದಾರೆ. ಇದರಲ್ಲಿ ವಿಜಯನಗರ ೨ನೇ ಹಂತದ ಏಳು ನಿವೇಶನಗಳು, ಕೆಸರೆ ಮೂರನೇ ಹಂತದಲ್ಲಿ ಒಂದು ನಿವೇಶನದ ಮೂಲ ದಾಖಲೆ ನಾಶ ಮಾಡಿ ಖೋಟಾ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಈ ಎಲ್ಲಾ ನಿವೇಶನಗಳು ಮಾರಾಟ ಮಾಡಿದವರಿಗೆ ನೋಂದಣಿಯೂ ಆಗಿವೆ. ಈವರೆಗೂ ಈ ನಿವೇಶನಗಳು ಹಲವು ಕೈಗಳ ಬದಲಾವಣೆಯು ಆಗಿದೆ. ಇದರ ಮಾರುಕಟ್ಟೆ ಬೆಲೆಯೇ ಸುಮಾರು ೪ ಕೋಟಿ ರೂ.
ಮುಡಾಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದರಿಂದ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಕೋರಿದ್ದರು.
ಬರೀ ನೆನಪಿನೋಲೆ: ಮುಡಾ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಿದ ಲಕ್ಷ್ಮಿಪುರಂ ಪೊಲೀಸರು ಬಸವರಾಜು ಹಾಗೂ ಮಂಜು ಎಂಬ ಇಬ್ಬರು ಮಧ್ಯವರ್ತಿಗಳನ್ನು ಬಂಧಿಸಿದರು. ಅವರೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಇದಾದ ನಂತರ ನಿವೇಶನ ಅಕ್ರಮ ಮಾರಾಟಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಲು ಅಗತ್ಯ ದಾಖಲೆಗಳನ್ನು ಆದಷ್ಟು ಬೇಗನೇ ಒದಗಿಸಿ. ಮುಡಾದ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಾರ‍್ಯಾರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿವರಗಳನ್ನು ನೀಡಿ. ಇಂಥ ಒಕ್ಕಣೆಯೊಂದಿಗೆ ಲಕ್ಷ್ಮಿಪುರಂ ಪೊಲೀಸ್ ಠಾಣೆಯಿಂದ ಮುಡಾಕ್ಕೆ ಎಂಟು ಪತ್ರಗಳು ಹೋಗಿವೆ. ಸರಿ ಸುಮಾರು ಒಂದೂವರೆ ತಿಂಗಳಿಗೆ ಒಂದರಂತೆ ಪತ್ರಗಳನ್ನು ಠಾಣೆಯ ಇನ್ಸ್‌ಪೆಕ್ಟರ್ ಬರೆದಿದ್ದರೂ ಅಲ್ಲಿಂದ ಬರುವ ಉತ್ತರ ಮಾತ್ರ ಅಸಹಕಾರ ರೂಪದಲ್ಲೇ. ಏಪ್ರಿಲ್ ಮೊದಲ ವಾರದಲ್ಲಿ ಪತ್ರವೊಂದನ್ನು ಬರೆದಿದ್ದರೂ ಇನ್ನೂ ಮಾಹಿತಿ ಕಲೆ ಹಾಕುತ್ತಿದ್ದೇವೆ ಎನ್ನುವ ಉತ್ತರವೇ ಬರುತ್ತಿರುವುದು  ಪೊಲೀಸರನ್ನು ಅಸಹಾಯಕ ಸ್ಥಿತಿಗೆ ತಳ್ಳಿದೆ.
ಅಧಿಕಾರಿಗಳಲ್ಲೇ ತಿಕ್ಕಾಟ: ಪೊಲೀಸರ ಒತ್ತಡ ಜೋರಾಗುತ್ತಿರುವ ನಡುವೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮುಡಾದ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ರಕ್ಷಿಸುವ ಕೆಲಸ ಆರಂಭವಾಗಿದೆ.
ದಾಖಲೆಗಳನ್ನು ಒದಗಿಸುವ ವಿಚಾರದಲ್ಲಿ ಸಹಾಯಕ ಕಾರ‍್ಯದರ್ಶಿ ರಂಗಸ್ವಾಮಿ ಅವರು ಆಸಕ್ತರಾಗಿದ್ದರೆ, ಕಾರ‍್ಯದರ್ಶಿ ರವಿಕುಮಾರ್ ಅಸಹಕಾರ ತೋರುತ್ತಿದ್ದಾರೆ ಎನ್ನುವ ಮಾತುಗಳು ಮುಡಾ ಅಧಿಕಾರಿಗಳ ವಲಯದಲ್ಲಿ ಕೇಳಿ ಬಂದಿದೆ. ಈ ವಿಚಾರದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈವರೆಗೂ ಶಿಕ್ಷೆಯಾಗೇ ಇಲ್ಲ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗುವ ಮುನ್ನ  ಇದನ್ನು ಕರೆಯುತ್ತಿದ್ದುದು ಸಿಐಟಿಬಿಯಾಗಿ. ೧೯೭೪ರಲ್ಲಿ ನಡೆದಿದ್ದ ನಿವೇಶನ ಮಾರಾಟ ಹಗರಣವೊಂದರ ಕುರಿತು ತನಿಖೆ ನಡೆದಿದ್ದು ಬರೋಬ್ಬರಿ ೨೨ ವರ್ಷ. ೧೯೯೬ರಲ್ಲಿ ಕೆಲವು ಆರೋಪಿಗಳು ದೋಷಮುಕ್ತರಾಗಿದ್ದರೆ, ಇನ್ನೂ ಕೆಲವರು ಮೃತಪಟ್ಟಿದ್ದಾರೆ. ಹೀಗೆ ವಿವಿಧ ಮೊಕದ್ದಮೆಗಳು ದಾಖಲಾದರೂ ಯಾರೊಬ್ಬರಿಗೂ ಶಿಕ್ಷೆಯಾದ ದಾಖಲೆಗಳಿಲ್ಲ. ಸದ್ಯ ಮುಡಾದಲ್ಲಿ ನಡೆದ ಹಗರಣಗಳ ಕುರಿತು ೧೧ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಸಚಿವರೇ ಇತ್ತ ನೋಡಿ: ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಅವರಿಗೆ ಮುಡಾದಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳ ವಿವರ ಗೊತ್ತೇ ಇದೆ. ಆದರೆ ಅವರಿಂದ ಕಠಿಣವಾದ ಕ್ರಮಗಳು ಈವರೆಗೂ ಆಗಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಮುಡಾದಲ್ಲಿ ಪಾರದರ್ಶಕತೆ ತರುವುದು, ಹಗರಣ ನಡೆಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವರೇ?.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ