ಕಳಪೆ ಸಾಧನೆ ಜಿಲ್ಲೆಗಳ ಪಟ್ಟಿಗೆ ಸೇರಿದ್ದೇ ದೊಡ್ಡ ಸಾಧನೆ

ವಿಕ ತಂಡ ಮಂಡ್ಯ
ದುಡಿಯುವ ಕೈಗೆ ಕೆಲಸದ ಜತೆ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆಯೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಮಂಡ್ಯ ಜಿಲ್ಲೆಯಲ್ಲಿ ಲೂಟಿಕೋರರಿಗೆ ಹಬ್ಬದೂಟವಾಗಿದೆ.
ಯೋಜನೆ ಮೂಲ ಉದ್ದೇಶ ಮತ್ತು ಆಶಯಗಳು ಈಡೇರಿಲ್ಲ. ಭ್ರಷ್ಟ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಗುತ್ತಿಗೆದಾರರು, ಯಂತ್ರೋಪಕರಣಗಳ ಮಾಲೀಕರು ಇಲಿ-ಹೆಗ್ಗಣಗಳಂತೆ ಯೋಜನೆಯ ಹಣವನ್ನು ತಿಂದು ತೇಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ ಬಿಡುಗಡೆಯಾಗಿರುವ ೪೧.೮೦ ಕೋಟಿ ರೂ. ಪೈಕಿ ೧೬.೬೪ ಕೋಟಿ ರೂ. ಇನ್ನೂ ಬಳಕೆಯಾಗಿಲ್ಲ. ೨೫.೧೬ ಕೋಟಿ ರೂ.ನಲ್ಲಿ ನಡೆದಿರುವುದೆಲ್ಲವೂ ಕಾಟಾಚಾರದ ಕೆಲಸವೇ ಹೊರತು ಶಾಶ್ವತವಾಗಿ ಉಳಿಯುವ ಕೆಲಸಗಳು ಬೆರಳೆಣಿಕೆಯಷ್ಟು ಮಾತ್ರ.
೧,೭೫,೬೯೨ ಕುಟುಂಬಗಳ ೪,೪೪,೧೩೨ ಮಂದಿ ಯೋಜನೆಯಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿವರೆಗೆ ೧,೬೯,೯೬೪ ಮಂದಿಗೆ ಜಾಬ್ ಕಾರ್ಡ್ ವಿತರಣೆಯಾಗಿದೆ. ಕಡತದಲ್ಲಿರುವ ಪ್ರಕಾರ ೧,೫೮,೪೪೬ ಮಂದಿ ಕೆಲಸ ನಿರ್ವಹಿಸಿದ್ದಾರೆ.
೨೪,೫೯೦ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ  ೭೬೧೦ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಯೋಜನೆಯಲ್ಲಿ ಕಳಪೆ ಸಾಧನೆ ಮಾಡಿರುವ ರಾಜ್ಯದ ಕೆಲವೇ ಜಿಲ್ಲೆಗಳ ಪೈಕಿ ಮಂಡ್ಯ ಕೂಡಾ ಒಂದಾಗಿದೆ.
ಕೂಲಿ ಕಮ್ಮಿಯಾಯ್ತು: ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ವರ್ಷ ಪೂರ್ತಿ ಕೈತುಂಬಾ ಕೆಲಸ ಇದ್ದೇ ಇದೆ. ರಾಜ್ಯದ ಬೇರೆಡೆಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಕೂಲಿಕಾರರಿಗೆ ಹೆಚ್ಚಿನ ಕೂಲಿ ಹಣವೂ ದೊರೆಯುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ದಿನ ೧೦೦ ರೂ. ಕೂಲಿ ನಿಗದಿಯಾಗಿದೆ.  ಆದರೆ, ಮಂಡ್ಯದಲ್ಲಿ ಕೃಷಿ ಕೂಲಿಕಾರರಿಗೆ ಒಪ್ಪೊತ್ತಿಗಾದರೆ ೧೦೦, ದಿನಕ್ಕೆ ೧೫೦ ರೂ. ಕೂಲಿಯ ಜತೆ ಒಂದೊತ್ತಿನ ಊಟ, ಬೀಡಿ-ಬೆಂಕಿ ಪೊಟ್ಟಣ ಕೊಡುತ್ತಾರೆ. ಕೆಲವರು ಬಾಟಲಿ ಕೊಡುವುದೂ ಉಂಟು. ಹೀಗಾಗಿ ಕೃಷಿ ಕೂಲಿಕಾರರು ಉದ್ಯೋಗ ಖಾತ್ರಿ ಯೋಜನೆ ಕಡೆ ಅಷ್ಟಾಗಿ ಆಕರ್ಷಿತರಾಗಿಲ್ಲ. ಬಹುಪಾಲು ನೀರಾವರಿ ಹೊಂದಿರುವ ಶ್ರೀರಂಗಪಟ್ಟಣ ಮತ್ತು ಪಾಂಡವಪುರದಂಥ ತಾಲೂಕುಗಳಲ್ಲಿ ಯೋಜನೆಯನ್ನು ಕೇಳುವವರೇ ಇಲ್ಲ.
ಮೇಕೆ ಮೂತಿಗೆ: ಕೋತಿ ತಾ ತಿಂದು, ಮೇಕೆ ಮೂತಿಗೆ ಒರೆಸಿತು ಎನ್ನುವ ನಾಣ್ಣುಡಿಯಂತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಡ ಕೃಷಿ ಕೂಲಿಕಾರರ ಹೆಸರಿನಲ್ಲಿ ಭ್ರಷ್ಟರು ಬೂರಿ ಭೋಜನ ಸವಿದಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನ ಬಹುಪಾಲು ಗ್ರಾ.ಪಂ. ಹೆಗಲಿಗೆ ಬಿದ್ದಿದೆ. ಹಣಕ್ಕಾಗಿ ಹಪಾಹಪಿಸುತ್ತಿದ್ದ ಸದಸ್ಯರು ಮತ್ತು ಕಾರ್ಯದರ್ಶಿಗಳು ಯೋಜನೆ ಯನ್ನು ಹಳ್ಳ ಹಿಡಿಸಿದ್ದಾರೆ. ಲಕ್ಷಗಟ್ಟಲೆ ಹಣ ಜೇಬಿಗೆ ಇಳಿಸಿಕೊಂಡಿದ್ದೂ ಆಗಿದೆ.
ಕೃಷಿ ಕೂಲಿಕಾರರ ಹೆಸರಿನಲ್ಲಿ ತಮ್ಮ ಆಪ್ತೇಷ್ಟರು, ಹಿಂಬಾಲಕರು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನೆಲ್ಲಾ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಕೆಲವೆಡೆ ಅರೆ ಸರಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳೂ ಯೋಜನೆಯ ಜಾಬ್ ಕಾರ್ಡ್ ಗಿಟ್ಟಿಸಿದ್ದಾರೆ.
ಜಾಬ್ ಕಾರ್ಡ್ ಹೊಂದಿದವರಿಗೆ ಬ್ಯಾಂಕ್ ಖಾತೆ ಮೂಲಕ ಕೂಲಿ ಹಣ ಪಾವತಿಸಲಾಗುತ್ತಿದೆ. ಕಾರ್ಡ್‌ದಾರರಿಗೆ ಕೊಸರಿನಷ್ಟು ಕೊಟ್ಟು, ಕಾರ್ಡ್ ಮಾಡಿಸಿಕೊಟ್ಟ ವರು ಕೊಳ್ಳೆ ಹೊಡೆಯುತ್ತಿರುವುದು ಮಾಮೂಲಾಗಿದೆ. ಯಂತ್ರೋಪಕರಣಗಳನ್ನು ಬಳಸಿ ಕಾಮಗಾರಿ ನಿರ್ವಹಿಸಿರುವ ಸ್ಥಳಗಳಲ್ಲಿ ಗುದ್ದಲಿ, ಹಾರೆ, ಮಂಕರಿ ಹಿಡಿದ ಹತ್ತಿಪ್ಪತ್ತು ಕೂಲಿಕಾರರನ್ನು ನಿಲ್ಲಿಸಿ ತೆಗೆಸಿದ ಫೋಟೋಗಳನ್ನು ಗ್ರಾ.ಪಂ.ಗೆ ಸಲ್ಲಿಸಿ ಬಿಲ್ ಮಾಡಿಸಿಕೊಳ್ಳಲಾಗಿದೆ. ಫೋಟೋ ತೆಗೆಸಿಕೊಂಡವರಿಗೆ ೫೦-೧೦೦ ರೂ. ತಲುಪಿದೆ.
ಯಂತ್ರಗಳ ಬಳಕೆ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇಂತಿಷ್ಟೇ ಪ್ರಮಾಣದಲ್ಲಿ ಯಂತ್ರೋಪಕರಣ ಗಳನ್ನು ಬಳಸಬೇಕೆನ್ನುವ ನಿಯಮವಿದೆ. ಆದರೆ, ಬಹುಪಾಲು ಕಾಮಗಾರಿಗಳು ಯಂತ್ರೋಪಕರಣಗಳಿಂದಲೇ ನಡೆದಿವೆ. ಯೋಜನೆಯು ಜೆಸಿಬಿ, ಹಿಟಾಚಿ ಮತ್ತು ಡೋಸರ್‌ಗಳ ಮಾಲೀಕರಿಗೆ ಸುಗ್ಗಿಯಾಗಿದೆ. ಕೆರೆ ಹೂಳೆತ್ತುವುದಕ್ಕೊಂದು ಬಿಲ್. ಹೂಳು ತೆಗೆದ ಮಣ್ಣನ್ನು ಕೆರೆ ಏರಿ ಮೇಲೆ ಹಾಕುವುದಕ್ಕೆ ಮತ್ತೊಂದು ಬಿಲ್. ಹೀಗೆ ನಡೆದಿದೆ ಯೋಜನೆ ಅನುಷ್ಠಾನ. ಕೃಷಿ ಮತ್ತು ಜಲಾನಯನ ಅಭಿವೃದ್ಧಿಗೆ ಮೀಸಲಾದ ಅನುದಾನದಲ್ಲಿ ಜಮೀನುಗಳ ಬದು ನಿರ್ಮಾಣ, ಬಾಳೆ, ಮಾವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳನ್ನು ಹಾಕಲಾಗಿದೆ. ಈ ವಿಷಯದಲ್ಲಷ್ಟೇ ಯೋಜನೆ ಒಂದಿಷ್ಟು ಪ್ರಗತಿ ಸಾಧಿಸಿರುವುದೇ ಸಂತೃಪ್ತಿ.
ಯೋಜನೆ ಮಾತ್ರ ಖಾತ್ರಿ:  ಮಂಡ್ಯ ತಾಲೂಕಿನ ಮಟ್ಟಿಗೆ ಹೇಳುವುದಾದರೆ ಯೋಜನೆಯಷ್ಟೇ ಖಾತ್ರಿ. ಕೆಲಸ ಮತ್ತು ಕೂಲಿಗೆ ಬಿದ್ದಿರುವುದು ಕತ್ತರಿ ಎನ್ನುವಂತಾಗಿದೆ. ಯೋಜನೆ ಅನುಷ್ಠಾನದ ಬಗ್ಗೆ ಹೇಳೋರು ಕೇಳೇರೋ ಇಲ್ಲ.
ತಾಲೂಕಿನಲ್ಲಿ ೧೯೭೫೭ ಕುಟುಂಬಗಳನ್ನು ನೋಂದಣಿ ಮಾಡಲಾಗಿದೆ. ೧೮೧೯೦ ಮಂದಿಗೆ ಜಾಬ್ ಕಾರ್ಡ್ ವಿತರಣೆಯಾಗಿದೆ. ಬಸರಾಳು ಹೋಬಳಿಯಲ್ಲಿ ಒಂದಿಷ್ಟು ಸಾಧನೆ ಆಗಿದೆ. ಉಳಿದೆಲ್ಲೆಡೆ ಯೋಜನೆ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತಾಗಿದೆ. ಮಂಡ್ಯ ತಾಲೂಕಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ ೧೦.೫೦ ಕೋಟಿ ರೂ. ಬಿಡುಗಡೆಯಾಗಿದೆ. ಶಾಸಕರು, ಸಂಸದರ ಬಾಲಂಗೋಚಿಗಳೆಲ್ಲಾ ಪ್ರಭಾವ ಬೀರಿ ಕೆಲಸ ಮಾಡಿಸಿದ್ದಾರೆ. ಅವರಲ್ಲಿ ಬಹುತೇಕರು ಗುತ್ತಿಗೆದಾರರೇ. ಇನ್ನು ಕೆಲವರು ಪುಢಾರಿಗಳು.
ಪೇಟೆಯಲ್ಲೇ ಹೆಚ್ಚು ಲೂಟಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅತಿ ಹೆಚ್ಚು ಲೂಟಿ ನಡೆದಿರುವುದು ಕೆ.ಆರ್.ಪೇಟೆ ತಾಲೂಕಿನಲ್ಲಿ. ಈ ಬಗ್ಗೆ ವಿಧಾನಸಭೆ ಮಾಜಿ ಸ್ಪೀಕರ್ ಕೃಷ್ಣ ಅವರು ಪ್ರತಿ ಗ್ರಾ.ಪಂ. ಮಟ್ಟಕ್ಕೆ ಇಳಿದು ಪರಿಶೀಲಿಸಿ, ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ.
ಉದ್ಯೋಗ ಖಾತ್ರಿಯಲ್ಲಿ  ೬.೯೩ ಕೋಟಿ ರೂ. ವ್ಯಯ ಆಗಿದ್ದು, ೧೧೭೮ ಕಾಮಗಾರಿಗಳು ನಡೆದಿವೆ. ಮಂದಗೆರೆ ಮತ್ತು ಮಾದಾಪುರ ಗ್ರಾ.ಪಂ.ಗಳಲ್ಲಿ ಅವ್ಯವಹಾರದ ಬಗ್ಗೆ ತಾ.ಪಂ. ಸದಸ್ಯರೇ ಗಲಾಟೆ ನಡೆಸಿದ್ದಾರೆ. ಅಮಾನತುಗೊಂಡಿದ್ದ ಇಬ್ಬರು ಗ್ರಾ.ಪಂ. ಕಾರ್ಯದರ್ಶಿಗಳು ಬೇರೆಡೆ ವರ್ಗ ಮಾಡಿಸಿಕೊಂಡು ಕೆಲಸಕ್ಕೆ ಹಾಜರಾಗಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ